ನನಗೆ ಹಾರ್ಟ್ ಅಟ್ಯಾಕ್ ಆಗದಿದ್ರೆ ಸಾಕು, ಎಲ್ಲಾ ಅಲ್ಲಾಹುವಿನ ದಯೆ; ಪಾಕಿಸ್ತಾನ ವೇಗಿ ಹೀಗಂದಿದ್ದು ಯಾಕೆ
Aug 26, 2023 02:42 PM IST
ಪಾಕಿಸ್ತಾನ ವೇಗಿ ನಸೀಮ್ ಶಾ
- Naseem Shah: ಹತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮೈದಾನಕ್ಕಿಳಿದು ಪಾಕಿಸ್ತಾನಕ್ಕೆ ಪಂದ್ಯ ಗೆಲ್ಲಿಸಿಕೊಟ್ಟ ನಸೀಮ್ ಶಾ, ಈ ಕುರಿತು ಮಾತನಾಡಿದ್ದಾರೆ.
ಎಷ್ಯಾಕಪ್‌ಗೂ ಮುಂಚಿತವಾಗಿ ಶ್ರೀಲಂಕಾ ನೆಲದಲ್ಲಿ ನಡೆದ ಅಫ್ಘಾನಿಸ್ತಾನ (Afghanistan vs Pakistan) ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಪಾಕ್ ತಂಡ ರೋಚಕ ಜಯ ಸಾಧಿಸಿತು. ಕೈಯಲ್ಲಿ ಕೇವಲ ಒಂದು ವಿಕೆಟ್ ಇಟ್ಟುಕೊಂಡು ಅಫ್ಘಾನಿಸ್ತಾನವನ್ನು ಅತ್ಯಂತ ಕಡಿಮೆ ಅಂತರದಿಂದ ಸೋಲಿಸಿದ ಪಾಕಿಸ್ತಾನ, ಸೋಲುವ ಪಂದ್ಯವನ್ನು ವಶಪಡಿಸಿಕೊಂಡಿತು. ಈ ಬಾರಿಯೂ ತಂಡದ ಗೆಲುವಿಗೆ ಕಾರಣರಾದವರು ಯುವ ವೇಗಿ ನಸೀಮ್ ಶಾ (Naseem Shah).
ಹತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮೈದಾನಕ್ಕಿಳಿಯುವ ಶಾ, ಅಂತಿಮ ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಜಯ ಒಲಿಸಿಕೊಟ್ಟರು. ಅತ್ತ ಅಫ್ಘಾನಿಸ್ತಾನ ತಂಡವು ಕೇವಲ ಒಂದು ವಿಕೆಟ್‌ನಿಂದ ಕೊನೆಯ ಎಸೆತದಲ್ಲಿ ಪಂದ್ಯ ಕೈಚೆಲ್ಲಿತು.
ಕಳೆದ ವರ್ಷ ನಡೆದ ಏಷ್ಯಾಕಪ್ ವೇಳೆಯೂ, ಅಫ್ಘಾನಿಸ್ತಾನ ತಂಡದಿಂದ ಗೆಲುವನ್ನು ಕಸಿದವರು ಇದೇ ನಸೀಮ್ ಶಾ. ಈ ಬಾರಿಯೂ ಅಫ್ಘನ್ನರಿಗೆ ಯುವ ವೇಗಿ ಕಂಟಕರಾದರು. ಅಫ್ಘಾನ್ ನೀಡಿದ್ದ 301 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಿಂದಲೇ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡಿತು. ಬ್ಯಾಟರ್‌ಗಳೆಲ್ಲಾ ಪೆವಿಲಿಯನ್ ಸೇರಿಕೊಂಡ ಮೇಲೆ ಕೆಳಕ್ರಮಾಂಕದ ಬೌಲರ್‌ಗಳ ಮೇಲೆ ಜವಾಬ್ದಾರಿ ಹೆಚ್ಚಿತು. ಬಾಬರ್ ಅಜಾಮ್ ಪಡೆಯ ಸೋಲು ಬಹುತೇಕ ಖಚಿತವಾಗಿತ್ತು. ಆದರೆ ಪಾಕಿಸ್ತಾನವು ಅಂತಿಮ ಓವರ್‌ನಲ್ಲಿ 11 ರನ್ ಗಳಿಸುವುದರೊಂದಿಗೆ 49.5 ಓವರ್‌ಗಳಲ್ಲಿ 302 ರನ್ ಗಳಿಸಿ ಜಯ ಸಾಧಿಸಿತು. 20 ವರ್ಷ ವಯಸ್ಸಿನ ವೇಗದ ಬೌಲರ್ ನಸೀಮ್ ಶಾ, ಅಫ್ಘಾನ್ ತಂಡದ ಬೌಲರ್ ಫಜಲ್ಹಾಕ್ ಫಾರೂಕಿ ಅವರ ಎಸೆತದಲ್ಲಿ ಬೌಂಡರಿ ಸಿಡಿಸಿ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದರು.
ಹಾರ್ಟ್ ಅಟ್ಯಾಕ್ ಆಗದಿದ್ದರೆ ಸಾಕು
“ಈ ವರ್ಷ ಇನ್ನಿಂಗ್ಸ್‌ನ ಅಂತ್ಯದಲ್ಲಿ ಪಂದ್ಯ ಗೆಲ್ಲಿಸಲು ನನಗೆ ಸಿಕ್ಕಿರುವ ಅವಕಾಶಗಳಿಂದಾಗಿ ಒಂದು ದಿನ ನನಗೆ ಹೃದಯಾಘಾತವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ತಂಡಕ್ಕೆ ಅಗತ್ಯವಿರುವ ಸಂದರ್ಭದಲ್ಲಿ ನಾನು ಯಾವಾಗಲೂ ನನ್ನ ಪ್ರಯತ್ನವನ್ನು ನಂಬುತ್ತೇನೆ. ಅಲ್ಲಾಹುವಿನ ಅನುಗ್ರಹಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ,” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪೋಸ್ಟ್ ಮಾಡಿದ ವಿಡಿಯೋದಲ್ಲಿ ನಸೀಮ್ ಶಾ ಹೇಳಿದ್ದಾರೆ.
“ನಾನು ಮೈದಾನ ಪ್ರವೇಶಿದಾಗ ಶಾದಾಬ್ ಆಟ ಮುಗಿಸುತ್ತಾರೆ ಎಂದು ನಂಬಿದ್ದೆ. ಆದರೆ ಶಾದಾಬ್ ಔಟಾದಾಗ ಪಂದ್ಯ ಫಿನಿಶ್ ಮಾಡುವ ಜವಾಬ್ದಾರಿ ನನ್ನದು ಎಂದು ನನಗೆ ಅನಿಸಿತು. ಬೌಲರ್‌ಗಳು ಕೂಡಾ ಅದೇ ಒತ್ತಡದಲ್ಲಿದ್ದರು. ಆದರೆ, ತಂಡವನ್ನು ಗೆಲುವಿನ ದಡ ಸೇರಿಸುವ ನಂಬಿಕೆ ನನ್ನ ಮೇಲೆ ಇತ್ತು. ಇದು ತುಂಬಾ ಸಂತೋಷದ ವಿಷಯ ಎಂದು ನಾನು ಹೇಳುತ್ತೇನೆ. ನಮಗೆ ಈ ಗೆಲುವು ತುಂಬಾ ಅಗತ್ಯವಾಗಿತ್ತು. ನಾನು ಅದನ್ನು ಮಾಡಬಲ್ಲೆ ಎಂಬ ನಂಬಿಕೆ ಕೂಡಾ ನನಗಿದೆ,” ಎಂದು ಕೆಲವು ಸಂದರ್ಭಗಳಲ್ಲಿ ಪಾಕಿಸ್ತಾನ ತಂಡಕ್ಕೆ ಜಯ ತಂದು ಕೊಟ್ಟ ಸನ್ನಿವೇಶದ ಬಗ್ಗೆ ಶಾ ಅಭಿಪ್ರಾಯಪಟ್ಟಿದ್ದಾರೆ.
“ನಾನು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದರಿಂದ ನಾನು ಅಂತಹ ಸನ್ನಿವೇಶಗಳಿಗೆ ಸಿದ್ಧರಾಗಿರಲು ಪ್ರಯತ್ನಿಸುತ್ತೇನೆ. ಗೆಲ್ಲಿಸುವ ಅವಕಾಶ ಇರುವ ಎಲರೂ ಔಟಾದ ಬಳಿಕ ಮುಂದೆ ನನ್ನ ಸರದಿ ಬರುತ್ತದೆ ಎಂದು ನನಗೆ ತಿಳಿದಿದೆ. ಹಾಗಾಗಿ ನಾನು ತಂಡವನ್ನು ಗೆಲ್ಲಿಸಲು ಮತ್ತೆ ಪ್ರಯತ್ನಿಸಿದೆ. ನನ್ನ ಪ್ರಯತ್ನವನ್ನು ನಾನು ಮಾಡಿದೆ. ಯಶಸ್ವಿಯಾಗಿಸುವುದು ಪರಮಶಕ್ತನಿಗೆ ಬಿಟ್ಟಿದ್ದು” ಎಂದು ಪಾಕಿಸ್ತಾನದ ಯುವ ವೇಗಿ ಹೇಳಿದ್ದಾರೆ.
ಇಂದು (ಶನಿವಾರ, ಆಗಸ್ಟ್ 26) ಉಭಯ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯವು ಆರ್ ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿದೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ