ಪಂಜಾಬ್ ಕಿಂಗ್ಸ್ ಬದಲಿಗೆ ಮಿನಿ ಆಸ್ಟ್ರೇಲಿಯಾ ಎಂದು ಹೆಸರಿಡಬೇಕಂತೆ! ರಿಕಿ ಪಾಂಟಿಂಗ್ಗೆ ಮನವಿ, ಕಾರಣವೇ ಅಚ್ಚರಿ
Nov 27, 2024 06:20 PM IST
ಪಂಜಾಬ್ ಕಿಂಗ್ಸ್ ಬದಲಿಗೆ ಮಿನಿ ಆಸ್ಟ್ರೇಲಿಯಾ ಎಂದು ಹೆಸರು ಇಡಬೇಕಂತೆ! ರಿಕಿ ಪಾಂಟಿಂಗ್ಗೆ ಮನವಿ, ಕಾರಣವೇ ಅಚ್ಚರಿ
- Punjab Kings Name: ಐಪಿಎಲ್ ಕ್ರಿಕೆಟ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಬದಲಿಗೆ ಮಿನಿ ಆಸ್ಟ್ರೇಲಿಯಾ ಎಂದು ಹೆಸರು ಬದಲಿಸಲು ತಂಡದ ಕೋಚ್ ರಿಕಿ ಪಾಂಟಿಂಗ್ ಅವರಿಗೆ ಆಸ್ಟ್ರೇಲಿಯಾ ಮಾಧ್ಯಮಗಳು ಮನವಿ ಮಾಡಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜು (IPL auction 2025) ಮುಕ್ತಾಯಗೊಂಡ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ (Punjab Kings) ಫ್ರಾಂಚೈಸಿ ಹೆಸರು ಬದಲಾವಣೆಗೆ ಆಗ್ರಹ ಕೇಳಿಬಂದಿದೆ. ಪಂಜಾಬ್ ಕಿಂಗ್ಸ್ ಬದಲಿಗೆ ಮಿನಿ ಆಸ್ಟ್ರೇಲಿಯಾ (Mini-Australia) ಎಂದು ಬದಲಿಸಲು ಮನವಿ ಮಾಡಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ. ಅದಕ್ಕೆ ವಿಶೇಷ ಕಾರಣ ಇದೆ. ಫ್ರಾಂಚೈಸಿ ಕೋಚ್ ಆಗಿರುವ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ (Ricky Ponting) ಅವರು ವಿದೇಶಿ ಆಟಗಾರರ ಕೋಟಾದಲ್ಲಿ ಬಹುಪಾಲು ತಮ್ಮದೇ ದೇಶದವರಿಗೆ ಅವಕಾಶ ನೀಡಿದ್ದು, ಈ ಟ್ರೆಂಡ್ ಆಗಲು ಕಾರಣವಾಗಿದೆ.
ಪಂಜಾಬ್ ಕಿಂಗ್ಸ್ ಮೆಗಾ ಹರಾಜಿನಲ್ಲಿ ಉತ್ತಮ ತಂಡವನ್ನು ರಚಿಸಿದೆ. ಟ್ರೋಫಿ ಗೆದ್ದು ಕೊಡಬಲ್ಲ ಆಟಗಾರರಿಗೆ ಮಣೆ ಹಾಕಿದೆ. ರಿಟೈನ್ ಮಾಡಿಕೊಂಡಿದ್ದ ಇಬ್ಬರು ಆಟಗಾರರ ಹೊರತುಪಡಿಸಿ ಉಳಿದಿದ್ದ 110.5 ಕೋಟಿ ಪರ್ಸ್ ಮೊತ್ತದಲ್ಲಿ 8 ವಿದೇಶಿಗರು ಸೇರಿ 23 ಆಟಗಾರರನ್ನು ಖರೀದಿಸಿದೆ. ತಂಡದ ನಾಯಕತ್ವಕ್ಕಾಗಿ ಶ್ರೇಯಸ್ ಅಯ್ಯರ್ ಅವರಿಗೆ 26.5 ಕೋಟಿ ರೂಪಾಯಿ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅದೇ ರೀತಿ ಅರ್ಷದೀಪ್, ಯುಜ್ವೇಂದ್ರ ಚಹಲ್ ಇಬ್ಬರಿಗೂ ತಲಾ 18 ಕೋಟಿ ನೀಡುವ ಮೂಲಕ ಪ್ರಮುಖ ಭಾರತೀಯ ಆಟಗಾರರಿಗೆ ಮಣೆ ಹಾಕಿತು. ಆದರೆ ವಿದೇಶಿ ಆಟಗಾರರ ಕೋಟಾಗೆ ಬಂದಾಗ ಆಸೀಸ್ ಆಟಗಾರರನ್ನೇ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದೆ.
8 ಆಟಗಾರರ ಪೈಕಿ ಐವರು ಆಸೀಸ್ ಕ್ರಿಕೆಟಿಗರು
ಇದಕ್ಕೆ ಕಾರಣ ರಿಕಿ ಪಾಂಟಿಂಗ್. ತಮಗೆ ಸರಿ ಎನಿಸಿದಂತೆ ಆಟಗಾರರನ್ನು ಖರೀದಿಸುವ ಸಂಪೂರ್ಣ ವಿವೇಚನೆಯೊಂದಿಗೆ ಬೇರೆ ದೇಶದ ಆಟಗಾರರಿಗಿಂತ ಬಹುಪಾಲು ಆಸೀಸ್ ಬಳಗವನ್ನೇ ಪಂಜಾಬ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಒಟ್ಟು 8 ವಿದೇಶಿ ಆಟಗಾರರ ಖರೀದಿಗೆ ಅವಕಾಶ ಇದೆ. ಆದರೆ, ಈ ಪೈಕಿ ಐವರು ಆಸೀಸ್ ಆಟಗಾರರೇ ಇದ್ದಾರೆ. ಆಲ್ರೌಂಡರ್ಗಳಾದ ಮಾರ್ಕಸ್ ಸ್ಟೊಯ್ನಿಸ್ (11 ಕೋಟಿ), ಗ್ಲೆನ್ ಮ್ಯಾಕ್ಸ್ವೆಲ್ (4.20 ಕೋಟಿ), ವಿಕೆಟ್ ಕೀಪರ್ ಜೋಸ್ ಇಂಗ್ಲಿಸ್ (2.60 ಕೋಟಿ), ಬೌಲರ್ಗಳಾದ ಆರನ್ ಹಾರ್ಡಿ (1.25 ಕೋಟಿ), ಕ್ಸೇವಿಯರ್ ಬಾರ್ಟ್ಲೆಟ್ (80 ಲಕ್ಷ) ಖರೀದಿಸಿದೆ.
ಖರೀದಿಸಿದ್ದು ಐವರನ್ನು ಮಾತ್ರ. ಆದರೆ, ಹರಾಜಿನಲ್ಲಿ ಆಸೀಸ್ ಆಟಗಾರರ ಮೇಲೆಯೇ ಹೆಚ್ಚು ಬಿಡ್ ಸಲ್ಲಿಸಿದ್ದು ಕಂಡು ಬಂತು. ಪಂಜಾಬ್ ಕಿಂಗ್ಸ್ ತಂಡದ ನೂತನ ಕೋಚ್ ಆಗಿ ರಿಕಿ ಪಾಂಟಿಂಗ್ ಅವರನ್ನು ಸೆಪ್ಟೆಂಬರ್ನಲ್ಲಿ ನೇಮಕವಾದರು. ಪಂಜಾಬ್ ತಮ್ಮ ಒಟ್ಟು ಪರ್ಸ್ನಲ್ಲಿ 19.85 ಕೋಟಿ ರೂಪಾಯಿಗಳನ್ನು ಆಸ್ಟ್ರೇಲಿಯಾದ ಆಟಗಾರರಿಗೆ ಖರ್ಚು ಮಾಡಿದೆ. ಉಳಿದ ಮೂವರು ವಿದೇಶಿ ಆಟಗಾರರೆಂದರೆ ಮಾರ್ಕೊ ಜಾನ್ಸೆನ್, ಅಮರ್ತುಲ್ಲಾ ಒಮರ್ಜಾಯ್ ಮತ್ತು ಲಾಕಿ ಫರ್ಗುಸನ್. ಅಲ್ಲದೆ, ಈ ಬಾರಿ ಹರಾಜಿನಲ್ಲಿ ವೇಗಿಗಳಾದ ಸ್ಪೆನ್ಸರ್ ಜಾನ್ಸನ್, ನಾಥನ್ ಎಲ್ಲಿಸ್ ಅವರನ್ನು ಹರಾಜಿನಲ್ಲಿ ಖರೀದಿಸಲು ಯತ್ನಿಸಿದರು. ಪಾಂಟಿಂಗ್ ಅವರು ತನಗೆ ಪರಿಚಿತ ಆಟಗಾರರೊಂದಿಗೆ ಹೋಗಲು ಆಯ್ಕೆ ಮಾಡಿದ್ದಾರೆ.
ಡೆಲ್ಲಿಯಲ್ಲಿದ್ದಾಗಲೂ ಇದೇ ಫಜೀತಿ
ಐಪಿಎಲ್ ಹರಾಜಿನಲ್ಲಿ ಪಾಂಟಿಂಗ್ ಸಾಮೂಹಿಕವಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರನ್ನೇ ಆಯ್ಕೆ ಮಾಡಿದ್ದು ಇದೇ ಮೊದಲಲ್ಲ. ಡೆಲ್ಲಿ ಕ್ಯಾಪಿಟಲ್ಸ್ನೊಂದಿಗೆ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಬೇರೆ ದೇಶದ ಆಟಗಾರರ ನಂಬಿಕೆ ಇಡದೆ ಆಸೀಸ್ ಆಟಗಾರರನ್ನೇ ಖರೀದಿ ಮಾಡುತ್ತಿದ್ದರು. ತನಗೆ ಬೇಕಾದ ಆಟಗಾರರೇ ಖರೀದಿಸಬೇಕೆಂಬ ಒತ್ತಾಯಿಸುತ್ತಿದ್ದ ರಿಕಿ ಪಾಂಟಿಂಗ್ ಅವರನ್ನು ಡಿಸಿ ತಂಡದಿಂದ ಕೈಬಿಡಲಾಗಿದೆ ಎಂದು ಆರೋಪ ಇದೆ. ಈ ಹಿಂದೆ ಏಳು ಆವೃತ್ತಿಗಳಲ್ಲಿ ಡೆಲ್ಲಿ ಪರ ಪಾಂಟಿಂಗ್ ಅವರು ಸ್ಟೋಯ್ನಿಸ್, ಮ್ಯಾಕ್ಸ್ವೆಲ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಡೇನಿಯಲ್ ಸ್ಯಾಮ್ಸ್ ಮತ್ತು ಜೇಕ್ ಫ್ರೇಸರ್-ಮೆಕ್ಗುರ್ಕ್, ಸ್ಟೀವ್ ಸ್ಮಿತ್ ಮತ್ತು ಅಲೆಕ್ಸ್ ಕ್ಯಾರಿ ಅವರನ್ನು ಖರೀದಿಸಿದ್ದರು.