logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಭ್ಯಾಸ ಅವಧಿಯಲ್ಲಿ ಅಶ್ವಿನ್‌ ಬೌಲಿಂಗ್, ಸಿರಾಜ್ ಗೈರು; ಮಹತ್ವದ ಫೈನಲ್‌ಗೆ ಇವರೇ ಭಾರತದ ಟ್ರಂಪ್‌ ಕಾರ್ಡ್

ಅಭ್ಯಾಸ ಅವಧಿಯಲ್ಲಿ ಅಶ್ವಿನ್‌ ಬೌಲಿಂಗ್, ಸಿರಾಜ್ ಗೈರು; ಮಹತ್ವದ ಫೈನಲ್‌ಗೆ ಇವರೇ ಭಾರತದ ಟ್ರಂಪ್‌ ಕಾರ್ಡ್

Jayaraj HT Kannada

Nov 18, 2023 09:23 AM IST

google News

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ಅವಧಿಯಲ್ಲಿ ರವಿಚಂದ್ರನ್ ಅಶ್ವಿನ್ ಕಾಣಿಸಿಕೊಂಡರು.

    • India playing XI vs Australia: ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ ಪಂದ್ಯಕ್ಕೆ ಆರ್‌ ಅಶ್ವಿನ್‌ ಅವರನ್ನು ಟ್ರಂಪ್ ಕಾರ್ಡ್ ಆಗಿ ಬಳಸುವ ಯೋಚನೆಯಲ್ಲಿ ಟೀಮ್‌ ಇಂಡಿಯಾ ಇರುವಂತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅಭ್ಯಾಸ ಅವಧಿಯಲ್ಲಿ ಸಿರಾಜ್‌ ಕಾಣಿಸಿಕೊಂಡಿಲ್ಲ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ಅವಧಿಯಲ್ಲಿ ರವಿಚಂದ್ರನ್ ಅಶ್ವಿನ್ ಕಾಣಿಸಿಕೊಂಡರು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ಅವಧಿಯಲ್ಲಿ ರವಿಚಂದ್ರನ್ ಅಶ್ವಿನ್ ಕಾಣಿಸಿಕೊಂಡರು. (ICC Twitter)

ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್‌ 2023ರ (ICC ODI World Cup 2023) ಮೆಗಾ ಫೈನಲ್‌ ಪಂದ್ಯಕ್ಕೂ ಮುನ್ನ ಭಾರತ ತಂಡದ ಆಟಗಾರರು ಅಭ್ಯಾಸ ನಡೆಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರದ ಅಭ್ಯಾಸ ನಡೆದಿದ್ದು, ಶನಿವಾರ ಎರಡನೇ ದಿನದ ಅಭ್ಯಾಸ ನಡೆಯಲಿದೆ. ಆದರೆ, ಮಹತ್ವದ ಪಂದ್ಯಕ್ಕೂ ಮುನ್ನ ಅಭ್ಯಾಸ ಅವಧಿಯಲ್ಲಿ ಕುಲ್ದೀಪ್ ಯಾದವ್, ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಜೊತೆಗೆ ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಗೈರಾಗಿದ್ದರು.

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಸಹಾಯಕ ಸಿಬ್ಬಂದಿ ಪಿಚ್‌ನಲ್ಲಿ ಸುದೀರ್ಘ ಅವಧಿಗೆ ಚರ್ಚಿಸಿದರು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಮೈದಾನದಲ್ಲಿದ್ದರು. ಈ ನಡುವೆ, ಆಸೀಸ್‌ ವಿರುದ್ಧ ಭಾರತದ ಸಂಭಾವ್ಯ ಆಡುವ ಬಳಗದ ಕುರಿತು ಒಂದಷ್ಟು ಪ್ರಶ್ನೆಗಳು ಎದ್ದಿವೆ.

ಆರು ಪಂದ್ಯಗಳಲ್ಲಿ ಬದಲಾಗಿಲ್ಲ ಆಡುವ ಬಳಗ

ಕಳೆದ ಆರು ಪಂದ್ಯಗಳಲ್ಲಿ ಟೀಮ್‌ ಇಂಡಿಯಾದ ಆಡುವ ಬಳಗ ಬದಲಾಗಿಲ್ಲ. ಪಂದ್ಯಾವಳಿಯ ಮಧ್ಯದಲ್ಲಿ ಗಾಯದ ಕಾರಣದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಟೂರ್ನಿಯಿಂದ ಹೊರಗಿಡಲಾಯ್ತು. ಆದರೆ, ಭಾರತದ ಪ್ಲಾನ್ ಬಿ ಸಂಪೂರ್ಣವಾಗಿ ಜಾರಿಯಲ್ಲಿತ್ತು. ಶಾರ್ದುಲ್‌ ಠಾಕೂರ್‌ ಅವರನ್ನು ತಂಡದಿಂದ ಹೊರಗಿಟ್ಟು, ಸೂರ್ಯಕುಮಾರ್‌ ಯಾದವ್‌ ಹಾಗೂ ಮೊಹಮ್ಮದ್ ಶಮಿ ಅವರನ್ನು ಆಡುವ ಬಳಗಕ್ಕೆ ಕರೆಸಲಾಯ್ತು. ಆ ಬಳಿಕ ಅದೇ ತಂಡ ಎಲ್ಲಾ ಪಂದ್ಯಗಳಲ್ಲಿ ಆಡುತ್ತಿದೆ. ಆರು ಪಂದ್ಯಗಳಲ್ಲಿ ಮೊಹಮ್ಮದ್‌ ಶಮಿ ಮೂರು ಬಾರಿ ಐದು ವಿಕೆಟ್‌ ಗೊಂಚಲನ್ನು ಪಡೆದಿದ್ದಾರೆ. ಸದ್ಯ ತಂಡ ಭಾರಿ ಬಲಿಷ್ಠವಾಗಿದ್ದು, ಫೈನಲ್‌ ಪಂದ್ಯಕ್ಕೆ ಈ ತಂಡವನ್ನು ಬದಲಾಯಿಸುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ.

ಆದರೆ, ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆದ ಐಚ್ಛಿಕ ತರಬೇತಿ ಅವಧಿಯಲ್ಲಿ ಅಚ್ಚರಿ ಕಾದಿತ್ತು. ಭಾರತವು ಒಂದು ಬದಲಾವಣೆಯಾಗಿ ಫೈನಲ್ ಪಂದ್ಯಕ್ಕೆ ತನ್ನ ಟ್ರಂಪ್ ಕಾರ್ಡ್ ಅನ್ನು ಮರಳಿ ಕರೆತರಬಹುದೇ ಎಂದು ಯೋಚಿಸುವಂತೆ ಮಾಡಿದೆ. ಅದಕ್ಕೆ ಕಾರಣ, ನೆಟ್ಸ್‌ನಲ್ಲಿ ಹಾಜರಿದ್ದ ತಂಡದ ಆರು ಆಟಗಾರರಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್. ಉಳಿದಂತೆ ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಇಶಾನ್ ಕಿಶನ್ ಮತ್ತು ಪ್ರಸಿದ್ಧ್ ಕೃಷ್ಣ ಅಭ್ಯಾಸ ಮಾಡಿದ್ದಾರೆ.

ಆಸೀಸ್‌ ಸ್ಪಿನ್ನರ್‌ ಆಡಮ್ ಜಂಪಾ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರನ್ನು ಎದುರಿಸಲು ಭಾರತ ಭರ್ಜರಿಯಾಗಿ ಸಜ್ಜಾಗುತ್ತಿದೆ. ಹೀಗಾಗಿ ಸ್ಪಿನ್ನರ್‌ ಅಶ್ವಿನ್‌ ಅವರ ಬೌಲಿಂಗ್‌ಗೆ ಟೀಮ್‌ ಇಂಡಿಯಾ ಅಭ್ಯಾಸಕ್ಕಿಳಿದಿದೆ. ಇದೇ ವೇಳೆ ಜಂಪಾಗೆ ಪ್ರತಿಯಾಗಿ ಭಾರತ ತಂಡದಲ್ಲಿ ಅಶ್ವಿನ್‌ ಅವರನ್ನು ಆಡಿಸುವ ಯೋಚನೆ ದ್ರಾವಿಡ್‌ ಅವರದ್ದು ಎನ್ನಾಗಿದೆ. ಅಭ್ಯಾಸದ ವೇಳೆ ಭಾರತದ ಬೌಲಿಂಗ್‌ ಹಾಗೂ ಬ್ಯಾಟಿಂಗ್ ಅವಧಿಯನ್ನು ದ್ರಾವಿಡ್ ಸೂಕ್ಷ್ಮವಾಗಿ ವೀಕ್ಷಿಸಿದ್ದಾರೆ. ಹೀಗಾಗಿ ತಂಡದ ಲೈನ್-ಅಪ್‌ನಲ್ಲಿ ಒಂದು ಬದಲಾವಣೆ ಮಾಡಿ ಅಶ್ವಿನ್‌ ಅವರನ್ನು ಕರೆತರುವ ಸಾಧ್ಯತೆ ಬಗ್ಗೆ ಯೋಚಿಸುವಂತಾಗಿದೆ.

ಸಿರಾಜ್ ಬದಲಿಗೆ ಅಶ್ವಿನ್?

ಪ್ರಸಕ್ತ ವಿಶ್ವಕಪ್‌ ಆವೃತ್ತಿಯಲ್ಲಿ ಅನುಭವಿ ಸ್ಪಿನ್ನರ್‌ ಅಶ್ವಿನ್ ಒಂದು ಪಂದ್ಯ ಮಾತ್ರ ಆಡಿದ್ದಾರೆ. ಸ್ಪಿನ್ ಸ್ನೇಹಿ ಚೆನ್ನೈ ಪಿಚ್‌ನಲ್ಲಿ ಆಸೀಸ್‌ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮಾತ್ರ ಅವರು ಕಣಕ್ಕಿಳಿದಿದ್ದರು. 8 ಓವರ್‌ಗಳಲ್ಲಿ 34 ರನ್‌ ಬಿಟ್ಟುಕೊಟ್ಟು ಅಶ್ವಿನ್ ಒಂದು ವಿಕೆಟ್ ಪಡೆದಿದ್ದರು ಸದ್ಯ, ಮತ್ತದೇ ಆಸೀಸ್‌ ತಂಡದ ವಿರುದ್ಧ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಅಶ್ವಿನ್ ಮತ್ತೆ ಆಡುವ ಸುಳಿವು ಸಿಕ್ಕಿದೆ. ಮೊಹಮ್ಮದ್ ಸಿರಾಜ್ ಬದಲಿಗೆ ಬಲಗೈ ಸ್ಪಿನ್ನರ್ ಆಡುವ ಸಾಧ್ಯತೆ ದಟ್ಟವಾಗಿದೆ. ಆಸ್ಟ್ರೇಲಿಯಾ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್‌ ಇಬ್ಬರೂ ಎಡಗೈ ಆರಂಭಿಕರು. ಅಲ್ಲದೆ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ವಿರುದ್ಧ ಅಶ್ವಿನ್‌ ಉತ್ತಮ ದಾಖಲೆ ಹೊಂದಿದ್ದಾರೆ.‌

ಭಾರತ ಸಂಭಾವ್ಯ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಸೂರ್ಯಕುಮಾರ್‌ ಯಾದವ್, ರವೀಂದ್ರ ಜಡೇಜಾ, ಆರ್‌ ಅಶ್ವಿನ್/ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್,.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ