RCB Playing XI: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಈ ಬಲಿಷ್ಠ ಪ್ಲೇಯಿಂಗ್ 11 ಆಡಿಸಿದರೆ ಆರ್ಸಿಬಿ ಗೆಲ್ಲೋದು ಪಕ್ಕಾ!
Nov 26, 2024 11:15 AM IST
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಈ ಬಲಿಷ್ಠ ಪ್ಲೇಯಿಂಗ್ 11 ಆಡಿಸಿದರೆ ಆರ್ಸಿಬಿ ಗೆಲ್ಲೋದು ಪಕ್ಕಾ!
- RCB Predicted Playing XI: ಐಪಿಎಲ್ 2025 ಮೆಗಾ ಹರಾಜು ಮುಕ್ತಾಯಗೊಂಡಿದೆ. ಆರ್ಸಿಬಿ ಸಮತೋಲಿತ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ. ಹಾಗಾದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಬಿಸಿ ಬಲಿಷ್ಠ ಪ್ಲೇಯಿಂಗ್ 11 ಹೇಗಿರಲಿದೆ? ಇಲ್ಲಿದೆ ಉತ್ತರ.
ಸೌದಿ ಅರೇಬಿಯಾದ ಜೆದ್ದಾದಲ್ಲಿ 2 ದಿನಗಳ ಕಾಲ ನಡೆದ ಐಪಿಎಲ್ 2025 ಮೆಗಾ ಹರಾಜು ಮುಕ್ತಾಯಗೊಂಡಿದೆ. ಅದೃಷ್ಟ ಪರೀಕ್ಷೆಯಲ್ಲಿದ್ದ 574 ಆಟಗಾರರ ಪೈಕಿ 182 ಮಂದಿಗಷ್ಟೆ ಲಕ್ ಹೊಡೆದಿದೆ. ಎಲ್ಲಾ 10 ಫ್ರಾಂಚೈಸಿಗಳು ವಿಭಿನ್ನ, ವಿನೂತನ ತಂಡ ಕಟ್ಟುವ ಮೂಲಕ 18ನೇ ಐಪಿಎಲ್ ಟೂರ್ನಿಗೆ ಸಿದ್ಧಗೊಂಡಿವೆ. ಸದ್ಯ ಎಲ್ಲರ ಕಣ್ಣು ನೆಟ್ಟಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ. ಹರಾಜಿಗೂ ಮುನ್ನ ಪರ್ಸ್ನಲ್ಲಿ 83 ಕೋಟಿ ರೂ, ಹೊಂದಿದ್ದ ಆರ್ಸಿಬಿ 8 ವಿದೇಶಿಗರು ಸೇರಿ 19 ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸದ್ಯ ಉಳಿಸಿಕೊಂಡಿದ್ದ ಮೂವರು ಸೇರಿ ಒಟ್ಟು 22 ಆಟಗಾರರು ರೆಡ್ ಆರ್ಮಿ ಭಾಗವಾಗಿದ್ದಾರೆ. ಹಾಗಾದರೆ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ? ಯಾರಿಗೆಲ್ಲಾ ಅವಕಾಶ ಸಿಗಬಹುದು? ಇಲ್ಲಿದೆ ವಿವರ.
ಆರ್ಸಿಬಿ ಕೆಎಲ್ ರಾಹುಲ್ ಖರೀದಿ ಮಾಡುತ್ತೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಅಚ್ಚರಿ ಎನ್ನುವಂತೆ 10.75 ಕೋಟಿ ರೂಪಾಯಿ ತನಕ ಬಿಡ್ ಸಲ್ಲಿಸಿ ನಂತರ ನಿಲ್ಲಿಸಿತು. ಯಾರ್ಕರ್ ಸ್ಪೆಷಲಿಸ್ಟ್ ಮಿಚೆಲ್ ಸ್ಟಾರ್ಕ್, ಫಿನಿಷರ್ ಡೇವಿಡ್ ಮಿಲ್ಲರ್, ವಿಲ್ ಜಾಕ್ಸ್ ಸೇರಿ ಹಲವರು ತಾವು ಅಂದುಕೊಂಡ ದರಕ್ಕೆ ಸಿಕ್ಕರೂ ಖರೀದಿಸದೆ ಕೈಬಿಟ್ಟಿದ್ದು ಆರ್ಸಿಬಿಗೆ ದೊಡ್ಡ ನಷ್ಟವಾಗಿದೆ. ಹಾಗಂತ, ಕೆಟ್ಟ ತಂಡವನ್ನೇನು ಕಟ್ಟಿಲ್ಲ. ಜೋಶ್ ಹೇಜಲ್‌ವುಡ್ (12.5 ಕೋಟಿ), ಫಿಲ್ ಸಾಲ್ಟ್ (11.5 ಕೋಟಿ), ಮತ್ತು ಜಿತೇಶ್ ಶರ್ಮಾ (ರೂ 11 ಕೋಟಿ) ರೂಪದಲ್ಲಿ ಕೆಲವು ಉತ್ತಮ ಖರೀದಿಗಳನ್ನೂ ಮಾಡಿದ್ದಾರೆ.
2025ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯೇ ನಾಯಕನಾಗುವುದು ಬಹುತೇಕ ಖಚಿತ. ಐಪಿಎಲ್ ಹರಾಜಿನಲ್ಲೂ ಇದೇ ಸುಳಿವು ಸಿಕ್ಕಿದೆ. ಹೌದು, ಆರ್ಸಿಬಿ ಹರಾಜಿನಲ್ಲಿ ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಸೇರಿ ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರ ಖರೀದಿಸಲು ಮುಂದಾಗದಿರುವುದು ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗುವ ಮುನ್ಸೂಚನೆ ನೀಡಿತ್ತು. ಪ್ರಸ್ತುತ ಆರ್ಸಿಬಿ ತಂಡ ಗಮನಿಸಿದರೂ ಅವರೇ ನಾಯಕ ಎಂಬುದನ್ನು ಸ್ಪಷ್ಟಪಡಿಸುತ್ತದೆ. ವಿರಾಟ್ ನಾಯಕನಾಗಿ ಮೈದಾನಕ್ಕಿಳಿಯುವ ಬಲಿಷ್ಠ ತಂಡವನ್ನು ಹೇಗೆ ಸಂಯೋಜಿಸಬಹುದು ಎಂಬ ಪ್ರಶ್ನೆ ಎದ್ದಿದೆ.
ಕೊಹ್ಲಿ ಜೊತೆ ಇನ್ನಿಂಗ್ಸ್ ಯಾರು ಆರಂಭಿಸಬಹುದು?
ವಿರಾಟ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ. ದಶಕದಿಂದಲೂ ಆರ್ಸಿಬಿ ಪರ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಈ ಸಲವೂ ಅವರೇ ಇನ್ನಿಂಗ್ಸ್ ತೆರೆಯಲಿದ್ದಾರೆ. ಅವರೊಂದಿಗೆ ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಇವರು ವಿಕೆಟ್ ಕೀಪರ್ ಜವಾಬ್ದಾರಿ ಕೂಡ ನಿಭಾಯಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ರಜತ್ ಪಾಟೀದಾರ್, ನಾಲ್ಕನೇ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಅಥವಾ ದೇವದತ್ ಪಡಿಕ್ಕಲ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಲಿಯಾಮ್ ವಿಲಿಂಗ್ಸ್ಟನ್, ಟಿಮ್ ಡೇವಿಡ್ ಫಿನಿಷರ್ಗಳಾಗಲಿದ್ದಾರೆ. ಕೃನಾಲ್ ಪಾಂಡ್ಯ ಸ್ಪಿನ್ ಆಲ್ರೌಂಡರ್ ಆಗಿದ್ದು, ರಸಿಖ್ ಸಲಾಂ ದಾರ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್ ವೇಗಿಗಳಾಗಲಿದ್ದಾರೆ. ಸುಯಾಶ್ ಶರ್ಮಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದು.
ಐಪಿಎಲ್ 2025ಕ್ಕೆ ಆರ್ಸಿಬಿ ಬಲಿಷ್ಠ ಆಟಗಾರರ XI
ವಿರಾಟ್ ಕೊಹ್ಲಿ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ರಜತ್ ಪಾಟೀದಾರ್, ಜಿತೇಶ್ ಶರ್ಮಾ/ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್‌ಸ್ಟನ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಖ್ ಸಲಾಂ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್.
ಇಂಪ್ಯಾಕ್ಟ್ ಪ್ಲೇಯರ್: ಸುಯಾಶ್ ಶರ್ಮಾ/ಸ್ವಪ್ನಿಲ್ ಸಿಂಗ್
ಹರಾಜಿನಲ್ಲಿ ಆರ್ಸಿಬಿ ಖರೀದಿಸಿದ ಆಟಗಾರರು
ಜೋಶ್ ಹೇಜಲ್‌ವುಡ್ (12.50 ಕೋಟಿ), ಫಿಲ್ ಸಾಲ್ಟ್ (11.50 ಕೋಟಿ), ಜಿತೇಶ್ ಶರ್ಮಾ (11 ಕೋಟಿ), ಲಿಯಾಮ್ ಲಿವಿಂಗ್‌ಸ್ಟನ್ (8.75 ಕೋಟಿ), ರಸಿಖ್ ಸಲಾಮ್ ದಾರ್ (6 ಕೋಟಿ), ಸುಯಾಶ್ ಶರ್ಮಾ (2.60 ಕೋಟಿ), ಭುವನೇಶ್ವರ್ ಕುಮಾರ್ (10.75 ಕೋಟಿ), ಕೃನಾಲ್ ಪಾಂಡ್ಯ (5.75 ಕೋಟಿ), ಸ್ವಪ್ನಿಲ್ ಸಿಂಗ್ (50 ಲಕ್ಷ), ಟಿಮ್ ಟೇವಿಡ್ (3ಕೋಟಿ), ರೊಮಾರಿಯೋ ಶೆಫರ್ಡ್ (1.50 ಕೋಟಿ), ನುವಾನ್ ತುಷಾರ (1.60 ಕೋಟಿ), ಮನೋಜ್ ಭಾಂಡಗೆ (30 ಲಕ್ಷ), ಜೇಕಬ್ ಬೆಥೆಲ್ (2.60 ಕೋಟಿ), ದೇವದತ್ ಪಡಿಕ್ಕಲ್ (2 ಕೋಟಿ), ಸ್ವಸ್ತಿಕ್ ಚಿಕಾರ್ (30 ಲಕ್ಷ), ಲುಂಗಿ ಗಿಡಿ (1 ಕೋಟಿ), ಅಭಿನಂದನ್ ಸಿಂಗ್ (30 ಲಕ್ಷ), ಮೋಹಿತ್ ರಾಠಿ (30 ಲಕ್ಷ).
ರಿಟೈನ್ ಮಾಡಿಕೊಂಡ ಆರ್ಸಿಬಿ ಆಟಗಾರರು
ವಿರಾಟ್ ಕೊಹ್ಲಿ (21 ಕೋಟಿ), ರಜತ್ ಪಾಟೀದಾರ್ (11 ಕೋಟಿ), ಯಶ್ ದಯಾಳ್ (5 ಕೋಟಿ)