logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಿಂಕು ಸಿಂಗ್ ಸ್ಥಿರ ಪ್ರದರ್ಶನಕ್ಕೆ ಮನ್ನಣೆ; ಭಾರತ ಎ ತಂಡಕ್ಕೆ ಕರೆಸಿಕೊಂಡ ಬಿಸಿಸಿಐ

ರಿಂಕು ಸಿಂಗ್ ಸ್ಥಿರ ಪ್ರದರ್ಶನಕ್ಕೆ ಮನ್ನಣೆ; ಭಾರತ ಎ ತಂಡಕ್ಕೆ ಕರೆಸಿಕೊಂಡ ಬಿಸಿಸಿಐ

Jayaraj HT Kannada

Jan 23, 2024 11:27 AM IST

google News

ರಿಂಕು ಸಿಂಗ್

    • Rinku Singh: ಭಾರತ ಎ ತಂಡದಲ್ಲಿ ರಿಂಕು ಸಿಂಗ್ ಸ್ಥಾನ ಪಡೆದಿದ್ದಾರೆ. ಆ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ರೇಸ್‌ನಲ್ಲಿರುವುದು ಸ್ಪಷ್ಟವಾಗಿದೆ.
ರಿಂಕು ಸಿಂಗ್
ರಿಂಕು ಸಿಂಗ್ (PTI)

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ವೈಯಕ್ತಿಕ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದಾರೆ. ಇದಾದ ಒಂದು ದಿನದಲ್ಲೇ ಬಿಸಿಸಿಐ ಪ್ರಕಟಣೆಯೊಂದನ್ನು ನೀಡಿದೆ. ರಿಂಕು ಸಿಂಗ್ ಅವರನ್ನು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ಎ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಈ ಎರಡು ಬೆಳವಣಿಗೆಗಳನ್ನು ಒಂದಕ್ಕೊಂದು ಪೋಣಿಸುವುದು ಮೇಲ್ನೋಟಕ್ಕೆ ಅಸಂಬದ್ಧ ಎನಿಸಬಹುದು. ಆದರೆ ಆಯ್ಕೆ ಸಮಿತಿಯ ಈ ನಿರ್ಧಾರದ ಹಿಂದೆ ಸ್ಪಷ್ಟ ಉದ್ದೇಶ ಇರುವುದಂದೂ ಖಚಿತ.

“ಜನವರಿ 24ರಿಂದ ಅಹಮದಾಬಾದ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯಕ್ಕೆ ಪುರುಷರ ಆಯ್ಕೆ ಸಮಿತಿಯು ರಿಂಕು ಸಿಂಗ್ ಅವರನ್ನು ಭಾರತ 'ಎ' ತಂಡಕ್ಕೆ ಸೇರಿಸಿದೆ” ಎಂದು ಬಿಸಿಸಿಐ ಜನವರಿ 23ರ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಶೀಘ್ರದಲ್ಲೇ ಬದಲಿ ಆಟಗಾರನ ಘೋಷಣೆ

ಇಂಗ್ಲೆಂಡ್‌ ವಿರುದ್ಧ ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ನಡೆಯಲಿರುವ ಮೊದಲ ಎರಡು ಟೆಸ್ಟ್‌ಗಳಿಂದ ಕೊಹ್ಲಿ ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಬದಲಿ ಆಟಗಾರನನ್ನು ಮಾಜಿ ವೇಗಿ ಅಜಿತ್ ಅಗರ್ಕರ್ ನೇತೃತ್ವದ ಪುರುಷರ ಆಯ್ಕೆ ಸಮಿತಿಯು ಶೀಘ್ರದಲ್ಲೇ ಘೋಷಿಸಲಿದೆ ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್‌​ಗಳಿಗೆ ಕೊಹ್ಲಿ ಸ್ಥಾನ ತುಂಬಬಲ್ಲ ಮೂವರು ಸಮರ್ಥ ಆಟಗಾರರು ಇವರು

ಕೊಹ್ಲಿ ಸ್ಥಾನಕ್ಕೆ ರಿಂಕು ಸಿಂಗ್ ಈಗ ಪ್ರಮುಖ ಸ್ಪರ್ಧಿ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಜನವರಿ 19ರಂದು ಎರಡನೇ ಮತ್ತು ಮೂರನೇ ನಾಲ್ಕು ದಿನಗಳ ಪಂದ್ಯಗಳಿಗೆ ಭಾರತ ಎ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಕೆಎಸ್ ಭರತ್ ಮತ್ತು ಧ್ರುವ್ ಜುರೆಲ್ ಅವರು ಹಿರಿಯ ಭಾರತೀಯ ತಂಡವನ್ನು ಸೇರಿಕೊಳ್ಳಲಿದ್ದು, ವಿಕೆಟ್ ಕೀಪರ್ ಕುಮಾರ್ ಕುಶಾಗ್ರ ಅವರನ್ನು ಎ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ವಾಷಿಂಗ್ಟನ್ ಸುಂದರ್ ರೆಡ್ ಬಾಲ್ ತಂಡಕ್ಕೆ ಮರಳಿದ್ದಾರೆ. ಅತ್ತ ವೇಗಿ ಅರ್ಷದೀಪ್ ಸಿಂಗ್ ಮತ್ತು ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ ಅವರನ್ನು ಮೂರನೇ ಪಂದ್ಯಕ್ಕೆ ಹೆಸರಿಸಲಾಗಿದೆ.

ವೈಟ್‌ ಬಾಲ್‌ ಬಳಿಕ ರೆಡ್‌ ಬಾಲ್‌ ಕ್ರಿಕೆಟ್‌ನತ್ತ ರಿಂಕು

ಸದ್ಯ ಆಯ್ಕೆದಾರರು ರಿಂಕು ಪ್ರದರ್ಶನವನ್ನು ಮೆಚ್ಚಿದ್ದಾರೆ. ಹೀಗಾಗಿ ಅವರ ಪ್ರತಿಭೆಯನ್ನು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ವೀಕ್ಷಿಸಲು ಆಸಕ್ತಿ ಹೊಂದಿದ್ದಾರೆ.

ಟಿ20 ತಂಡದಲ್ಲಿ ರಿಂಕು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಉತ್ತಮ ಆರಂಭ ಪಡೆದಿದ್ದಾರೆ. ಆಡಿದ 15 ಪಂದ್ಯಗಳಲ್ಲಿ 176ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 89ರ ಅದ್ಭುತ ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದಾರೆ. ಮುಖ್ಯವಾಗಿ ಕಠಿಣ ಸನ್ನಿವೇಶದಲ್ಲಿ ತಂಡಕ್ಕಾಗಿ ಕೆಚ್ಚೆದೆಯ ಹೋರಾಟ ಮಾಡಿದ್ದಾರೆ. 26 ವರ್ಷದ ಆಟಗಾರ ಸಾಕಷ್ಟು ಉತ್ತಮ ಪ್ರಥಮ ದರ್ಜೆ ಕ್ರಿಕೆಟಿಗನೂ ಹೌದು. 44 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಅವರು 57.57ರ ಸರಾಸರಿಯಲ್ಲಿ 3109 ರನ್ ಗಳಿಸಿದ್ದಾರೆ.

ಇದನ್ನೂ ಓದಿ | ಭಾರತ ತಂಡಕ್ಕೆ ದೊಡ್ಡ ಹೊಡೆತ; ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್​ಗಳಿಂದ ವಿರಾಟ್ ಕೊಹ್ಲಿ ಔಟ್

ಟೆಸ್ಟ್ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಬದಲಿ ಆಟಗಾರನನ್ನು ಹೆಸರಿಸುವ ಸಾಧ್ಯತೆ ಕಡಿಮೆ ಇದೆ. ಭಾರತದ ಆಡುವ ಬಳಗದಲ್ಲಿ ಕೆಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಮತ್ತು ಶ್ರೇಯಸ್ ಅಯ್ಯರ್ 5 ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಕೆಎಸ್ ಭರತ್ ವಿಕೆಟ್‌ ಕೀಪಿಂಗ್‌ ಮಾಡಬಹುದು. ಇಬ್ಬರು ಸ್ಪಿನ್-ಬೌಲಿಂಗ್ ಆಲ್‌ರೌಂಡರ್‌ಗಳು ನಂತರದ ಸ್ಥಾನದಲ್ಲಿದ್ದಾರೆ. ಸದ್ಯ ಮೊದಲ ಟೆಸ್ಟ್ ಪಂದ್ಯದ ಬಳಿಕ ಬದಲಿ ಆಟಗಾರನನ್ನು ಘೋಷಿಸುವ ಸಾಧ್ಯತೆ ಇದೆ. ಭಾರತ-ಇಂಗ್ಲೆಂಡ್ ಟೆಸ್ಟ್‌ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ನಾಲ್ಕು ದಿನಗಳ ಪಂದ್ಯವು, ಇಂಡೋ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ದಿಸೆಯಲ್ಲಿ ಖಂಡಿತವಾಗಿಯೂ ನಿರ್ಣಾಯಕ ಪಾತ್ರ ವಹಿಸುತ್ತದೆ.

2ನೇ ಮಲ್ಟಿ ಡೇ ಪಂದ್ಯಕ್ಕೆ ಭಾರತ ‘ಎ’ ತಂಡ

ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕುಮಾರ್ ಕುಶಾಗ್ರ, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್, ಅರ್ಷದೀಪ್ ಸಿಂಗ್, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಉಪೇಂದ್ರ ಯಾದವ್, ಆಕಾಶ್ ದೀಪ್, ಯಶ್ ದಯಾಳ್, ರಿಂಕು ಸಿಂಗ್.

3ನೇ ಪಂದ್ಯಕ್ಕೆ ಭಾರತ ‘ಎ’ ತಂಡ

ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ತಿಲಕ್ ವರ್ಮಾ, ರಿಂಕು ಸಿಂಗ್, ಕುಮಾರ್ ಕುಶಾಗ್ರ, ವಾಷಿಂಗ್ಟನ್ ಸುಂದರ್, ಶಮ್ಸ್ ಮುಲಾನಿ, ಅರ್ಷದೀಪ್ ಸಿಂಗ್, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಉಪೇಂದ್ರ ಯಾದವ್, ಆಕಾಶ್ ದೀಪ್, ಯಶ್ ದಯಾಳ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ