ಸೂರ್ಯ-ಕೊಹ್ಲಿಗೆ ಸ್ಥಾನ; ರಾಹುಲ್-ಗಿಲ್-ರಿಂಕು ಔಟ್; ಟಿ20 ವಿಶ್ವಕಪ್‌ಗೆ ಮೊಹಮ್ಮದ್ ಕೈಫ್ ಕಟ್ಟಿದ ಭಾರತದ ಪ್ಲೇಯಿಂಗ್ XI
Apr 14, 2024 06:27 AM IST
ಟಿ20 ವಿಶ್ವಕಪ್‌ಗೆ ಮೊಹಮ್ಮದ್ ಕೈಫ್ ಕಟ್ಟಿದ ಭಾರತದ ಪ್ಲೇಯಿಂಗ್ XI
- Mohammad Kaif : ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಆರಿಸಿದ್ದಾರೆ. ಕೈಫ್ ಕಟ್ಟಿದ ತಂಡದಲ್ಲಿ ಯಾರಿಗೆ ಅವಕಾಶ ಸಿಕ್ಕಿದೆ ಎಂಬುದನ್ನು ನೋಡೋಣ ಬನ್ನಿ.
ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಟಿಕೆಟ್ ಪಡೆಯಲು ಹಲವು ಆಟಗಾರರು ಸಜ್ಜಾಗಿದ್ದಾರೆ. ಅದಾಗಿಯೂ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಚುಟುಕು ಸಮರಕ್ಕೆ ಬಲಿಷ್ಠ ತಂಡವನ್ನು ಕಟ್ಟಿದ್ದಾರೆ. ಅಲ್ಲದೆ, ಇಲ್ಲಿ ಅಚ್ಚರಿಯ ಹೆಸರುಗಳೇ ಮಾಯವಾಗಿವೆ. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್ ಮತ್ತು ರಿಂಕು ಸಿಂಗ್ರನ್ನು ಟಿ20 ವಿಶ್ವಕಪ್‌ಗೆ ಬೇಡವೆಂದು ಹೊರಗಿಟ್ಟಿದ್ದಾರೆ.
ಐಪಿಎಲ್ ಮುಕ್ತಾಯಗೊಂಡ ಒಂದು ವಾರದಲ್ಲಿ ಅಂದರೆ ಜೂನ್ 1ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್ ಜರುಗಲಿದೆ. ಜೂನ್ ಐದರಿಂದ ಟೀಮ್ ಇಂಡಿಯಾ, ತನ್ನ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಆ ಬಳಿಕ ಪಾಕಿಸ್ತಾನ ವಿರುದ್ಧದ ಕದನಕ್ಕೆ ಸಜ್ಜಾಗಲಿದೆ. ಯುಎಸ್ಎ, ಕೆನಡಾ ತಂಡಗಳನ್ನೂ ಭಾರತ ಎದುರಿಸಲಿದೆ. ಈ ಐದು ತಂಡಗಳು ಎ ಗುಂಪಿನಲ್ಲಿವೆ. ನಂತರ ಸೂಪರ್-8 ಹಂತಕ್ಕೆ ಪ್ರವೇಶಿಬಹುದು.
ಟಿ20 ವಿಶ್ವಕಪ್‌ಗೆ ಸಂಬಂಧಿಸಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯಾರಿಗೆ ಮಣೆ ಹಾಕಬೇಕು, ಯಾರನ್ನು ಕೈಬಿಡಬೇಕು ಎನ್ನುವುದರ ಚರ್ಚೆಗಳು ನಡೆಯುತ್ತಿವೆ. ಆಯ್ಕೆದಾರರು ಉತ್ತಮ ಯುವ ಮತ್ತು ಅನುಭವಿಗಳ ಮಿಶ್ರಣವನ್ನು ಹೊಂದಿರುವ ತಂಡದ ಆಯ್ಕೆಗೆ ಒಲವು ತೋರಿದ್ದಾರೆ. ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನದ ಬಗ್ಗೆ ಚರ್ಚೆ ನಡೆದಿದೆ. ಕೊಹ್ಲಿ ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಅದ್ಭುತವಾಗಿದ್ದಾರೆ ಆದರೆ ಅವರ ಸ್ಟ್ರೈಕ್ ರೇಟ್ ಬಗ್ಗೆ ಕೆಲವರು ಟೀಕಿಸಿದ್ದಾರೆ. ಟಿ20 ವಿಶ್ವಕಪ್ ಇನ್ನೂ ಸಾಕಷ್ಟು ದೂರವಿದ್ದರೂ, ತಜ್ಞರು, ಭಾರತ ತಂಡದ ಬಗ್ಗೆ ಭವಿಷ್ಯ ನುಡಿಯಲು ಪ್ರಾರಂಭಿಸಿದ್ದಾರೆ.
ಟಿ20 ವಿಶ್ವಕಪ್‌ಗೆ ಭಾರತದ ಪ್ಲೇಯಿಂಗ್ XI ಆರಿಸಿದ ಕೈಫ್
ಈ ಬಗ್ಗೆ ಭವಿಷ್ಯ ನುಡಿಯುವವರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡವರು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್. ಅವರು ಬ್ಯಾಟಿಂಗ್ ಆಳ ಹೆಚ್ಚಿಸುವ ಸಲುವಾಗಿ ತಂಡದಲ್ಲಿ ಸಾಕಷ್ಟು ಆಲ್‌ರೌಂಡರ್‌ಗಳಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಓಪನರ್ಸ್ ಆಗಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಕಣಕ್ಕಿಳಿಯಬೇಕು. ರಿಷಭ್ ಪಂತ್ ವಿಕೆಟ್ ಕೀಪರ್ ಆಗಬೇಕು ಎಂದು ಕೈಫ್ ಸ್ಟಾರ್ ಸ್ಪೋರ್ಟ್ಸ್ 'ಫಾಲೋ ದಿ ಬ್ಲ್ಯೂಸ್' ಕಾರ್ಯಕ್ರಮದಲ್ಲಿ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ರೋಹಿತ್, ಜೈಸ್ವಾಲ್ ನಂತರ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಕ್ರಮವಾಗಿ 3 ಮತ್ತು 4ನೇ ಕ್ರಮಾಂಕದಲ್ಲಿ ಆಡಬೇಕು. ನಂತರ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಕಣಕ್ಕಿಳಿಯಬೇಕು ಎಂದು ತಿಳಿಸಿದ್ದಾರೆ. ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರು ಆಲ್ರೌಂಡರ್ಗಳಾಗಿ ಆಡುವ 11ರ ಬಳಗದಲ್ಲಿ ಕಣಕ್ಕಿಳಿಯಬೇಕು ಎಂದು ಕೈಫ್ ಸೂಚಿಸಿದ್ದಾರೆ. ಆದರೆ ಫಿನಿಶರ್ ರಿಂಕು ಸಿಂಗ್ ಅವರನ್ನು ಕಡೆಗಣಿಸಿದ್ದಾರೆ.
ಉಳಿದಂತೆ ಕುಲದೀಪ್ ಯಾದವ್ ಅವರನ್ನು ಭಾರತದ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಆಯ್ಕೆ ಮಾಡಿದ ಕೈಫ್, ನಂತರ ಇಬ್ಬರು ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ಗೆ ಅವಕಾಶ ಕೊಟ್ಟಿದ್ದಾರೆ. ಟಿ20 ವಿಶ್ವಕಪ್‌ಗೆ ಇದು ನನ್ನ ಪ್ಲೇಯಿಂಗ್ ಇಲೆವೆನ್ ಆಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಪ್ಲೇಯಿಂಗ್ 11 ಆರಿಸಿದ ಬಳಿಕ ಸಂಪೂರ್ಣ ತಂಡವನ್ನು ಕೂಡ ಆಯ್ಕೆ ಮಾಡಿದ್ದಾರೆ. ಇಲ್ಲೂ ಕೂಡ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಆರ್ ಅಶ್ವಿನ್ ಬದಲಿಗೆ ಚಹಲ್ಗೆ ಅವಕಾಶ ನೀಡಿದ್ದಾರೆ.
ಟಿ20 ವಿಶ್ವಕಪ್‌ಗೆ ಸಂಪೂರ್ಣ ತಂಡ
ಟಿ20 ವಿಶ್ವಕಪ್‌ಗೆ ಸಂಪೂರ್ಣ ಆಯ್ಕೆ ಮಾಡುವುದೇ ಆದರೆ, ನಾನು ಹೆಚ್ಚುವರಿಗೆ ಸ್ಪಿನ್ನರ್ಗೆ ಅವಕಾಶ ಕಲ್ಪಿಸುತ್ತೇನೆ. ಯುಜ್ವೇಂದ್ರ ಚಹಲ್ ಅವರಂತಹ ಸ್ಪಿನ್ನರ್ ತಂಡದಲ್ಲಿರುವುದು ಅಗತ್ಯ. 2022ರ ವಿಶ್ವಕಪ್ನಲ್ಲಿ ಅಶ್ವಿನ್ ಸ್ಥಾನ ಪಡೆದಿದ್ದರೂ ವಿಕೆಟ್ ಪಡೆಯಲು ವಿಫಲರಾದರು. ಕೆರಿಬಿಯನ್ನರು ಮತ್ತು ಯುಎಸ್ಎ ಪಿಚ್ಗಳಲ್ಲಿ ಚೆಂಡು ಟರ್ನ್ ಆಗುವ ಕಾರಣ ಚಹಲ್ ಆಯ್ಕೆ ಮಾಡುವುದು ಅಗತ್ಯ ಎಂದು ಮೊಹಮ್ಮದ್ ಕೈಫ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಹಲ್ ನಂತರ ಶಿವಂ ದುಬೆವೆ ಅವಕಾಶ ಕೊಡುತ್ತೇನೆ. ಅವರು ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡುತ್ತಾರೆ. ರಿಯಾನ್ ಪರಾಗ್ ಐಪಿಎಲ್‌ನಲ್ಲಿ ಉತ್ತಮ ಲಯದಲ್ಲಿದ್ದು, ಅವರಿಗೂ ಅವಕಾಶ ಕೊಡುತ್ತೇನೆ. ಉಳಿದಿರುವ ಒಂದು ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ಗೆ ಅವಕಾಶ ನೀಡುತ್ತೇನೆ. ಸದ್ಯ ಅವರು ಫಾರ್ಮ್ ಕಳೆದುಕೊಂಡರೂ ಅತ್ಯಂತ ಅನುಭವಿ ಬೌಲರ್ ಜೊತೆಗೆ ಅದ್ಭುತ ದಾಖಲೆ ಹೊಂದಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ. ಮೀಸಲು ಆಟಗಾರರ ಸ್ಥಾನಕ್ಕೆ ಕೆಎಲ್ ರಾಹುಲ್, ಜಿತೇಶ್ ಶರ್ಮಾ, ಆವೇಶ್ ಖಾನ್ಗೆ ಅವಕಾಶ ಕೊಟ್ಟಿದ್ದಾರೆ. ಇಲ್ಲೂ ರಿಂಕು ಸಿಂಗ್ರನ್ನು ಕಡೆಗಣಿಸಲಾಗಿದೆ.
ಟಿ20 ವಿಶ್ವಕಪ್‌ಗೆ ಕೈಫ್ ಕಟ್ಟಿದ ಭಾರತ ತಂಡ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್, ರಿಯಾನ್ ಪರಾಗ್, ಮೊಹಮ್ಮದ್ ಸಿರಾಜ್.