ಫೋಟೋಶೂಟ್‌ಗಾಗಿ ಧರ್ಮಶಾಲಾಗೆ ರಿಂಕು ಸಿಂಗ್ ಕರೆಸಿದ ಟೀಮ್ ಇಂಡಿಯಾ; ಟಿ20 ವಿಶ್ವಕಪ್ ಆಡುವುದು ಬಹುತೇಕ ಖಚಿತ
Mar 05, 2024 05:52 PM IST
ಫೋಟೋಶೂಟ್‌ಗಾಗಿ ಧರ್ಮಶಾಲಾಗೆ ರಿಂಕು ಸಿಂಗ್ ಕರೆಸಿದ ಟೀಮ್ ಇಂಡಿಯಾ
- Rinku Singh: ಟಿ20 ವಿಶ್ವಕಪ್‌ಗಾಗಿ ಫೋಟೋಶೂಟ್‌ನಲ್ಲಿ ಭಾಗವಹಿಸಲು ಭಾರತದ ಟಿ20 ಸ್ಪೆಷಲಿಸ್ಟ್ ಹಾಗೂ ಫಿನಿಶರ್ ರಿಂಕು ಸಿಂಗ್ ಅವರನ್ನು ಭಾರತ ತಂಡದ ಮ್ಯಾನೇಜ್ಮೆಂಟ್ ಧರ್ಮಶಾಲಾಗೆ ಕರೆಸಿಕೊಂಡಿದೆ. ಹೀಗಾಗಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಕೆಕೆಆರ್ ಆಟಗಾರ ಆಡುವುದು ಖಚಿತವಾಗಿದೆ.
ಐಪಿಎಲ್ 2024ರ ಆವೃತ್ತಿ ಇನ್ನೇನು ಆರಂಭವಾಗಲಿದೆ. ಮಿಲಿಯನ್ ಡಾಲರ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ಟಿ20 ವಿಶ್ವಕಪ್ ಪಂದ್ಯಾವಳಿ ಕೂಡಾ ಪ್ರಾರಂಭವಾಗಲಿದೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ, ಭಾರತ ಟಿ20 ವಿಶ್ವಕಪ್ ತಂಡದಲ್ಲಿ, ಟೀಮ್ ಇಂಡಿಯಾದ ಸ್ಫೋಟಕ ಆಟಗಾರ ರಿಂಕು ಸಿಂಗ್ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿರುವಂತಿದೆ. ರಿಂಕು ಸಿಂಗ್ ವಿಶ್ವಕಪ್ ಆಡುವ ಸಾಧ್ಯತೆಗೆ ಪುಷ್ಠಿ ನೀಡುವಂಥಾ ಅಂಶ ಬಹಿರಂಗವಾಗಿದೆ. ಪ್ರಸ್ತುತ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು, ಸರಣಿಯ 5ನೇ ಪಂದ್ಯವು ಧರ್ಮಶಾಲಾದಲ್ಲಿ ನಡೆಯಲಿದೆ. ಈ ನಡುವೆ ಟಿ20 ವಿಶ್ವಕಪ್‌ಗಾಗಿ ಫೋಟೋಶೂಟ್‌ನಲ್ಲಿ ಭಾಗವಹಿಸಲು ಎಡಗೈ ಬ್ಯಾಟರ್ ಅನ್ನು ಭಾರತ ತಂಡದ ಮ್ಯಾನೇಜ್ಮೆಂಟ್ ಧರ್ಮಶಾಲಾಗೆ ಕರೆಸಿಕೊಂಡಿದೆ.
ಭಾರತದಲ್ಲಿ ಐಪಿಎಲ್ ಪಂದ್ಯಾವಳಿ ಮುಕ್ತಾಯಗೊಳ್ಳುತ್ತಿದ್ದಂತೆಯೇ, ಜೂನ್ ತಿಂಗಳಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ತಂಡಕ್ಕೆ ಯಾವೆಲ್ಲಾ ಆಟಗಾರರು ಆಯ್ಕೆಯಾಗಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಈ ನಡುವೆ ಟಿ20 ಸ್ವರೂಪದಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ರಿಂಕು, ಭಾರತ ತಂಡದಲ್ಲಿ ಫಿನಿಶರ್ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ವಿಶ್ವಕಪ್ ಪಂದ್ಯಾವಳಿಗಿಂತ ಮುನ್ನ ಸದ್ಯ ಭಾರತ ತಂಡವು ಯಾವುದೇ ಟಿ20 ಪಂದ್ಯಗಳಲ್ಲಿ ಆಡುತ್ತಿಲ್ಲ. ಹೀಗಾಗಿ ಐಪಿಎಲ್ ಆವೃತ್ತಿಯಲ್ಲಿ ನೀಡುವ ಪ್ರದರ್ಶನವೇ ಟಿ20 ವಿಶ್ವಕಪ್‌ಗೆ ಭಾರತದ ತಂಡವನ್ನು ಅಂತಿಮಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಟೀಮ್ ಇಂಡಿಯಾದಲ್ಲಿ ಈಗಾಗಲೇ ತಮ್ಮ ಸ್ಥಾನವನ್ನು ಕೆಲವು ಆಟಗಾರರು ಕಾಯಂಗೊಳಿಸಿದ್ದಾರೆ. ಅವರನ್ನು ಹೊರತುಪಡಿಸಿ, ಇತರರ ಆಯ್ಕೆಗೆ ಐಪಿಎಲ್ ಪಂದ್ಯಾವಳಿಯೇ ಪ್ರಮುಖ ಪಾತ್ರ ವಹಿಸಲಿದೆ.
ಭಾರತ ತಂಡ ನಾಯಕ ರೋಹಿತ್ ಶರ್ಮಾ, ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಅವರೊಂದಿಗೆ; ರಿಂಕು ಸಿಂಗ್ ಕೂಡಾ ತಂಡದಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಖಚಿತಪಡಿಸಿದ್ದಾರೆ. ಟಿ20 ವಿಶ್ವಕಪ್‌ಗಾಗಿ ನಡೆದ ವಿಶೇಷ ಫೋಟೋಶೂಟ್‌ನಲ್ಲಿ ಎಡಗೈ ಬ್ಯಾಟರ್ ಭಾಗಿಯಾಗಿದ್ದು ಮಹತ್ವದ ಸುಳಿವನ್ನು ಬಿಟ್ಟುಕೊಟ್ಟಿದೆ.
ಇದನ್ನೂ ಓದಿ | ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ; ರೋಹಿತ್ ಶರ್ಮಾ ನಾಯಕ, ವಿರಾಟ್ ಕೊಹ್ಲಿ ರಿಟರ್ನ್
ಟಿ20 ತಂಡದಲ್ಲಿ ರಿಂಕು ನಿರ್ಣಾಯಕ ಆಟಗಾರ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತದ ಪರ ಈಗಾಗಲೇ ಅವರು ಆಡಿರುವ 11 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 176.23ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಅವರು, 356 ರನ್ ಗಳಿಸಿದ್ದಾರೆ. 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡುವಾಗ ಈ ಮೊತ್ತ ಬಂದಿದೆ ಎಂಬದು ವೀಶೇಷ. ತಂಡದಲ್ಲಿ ಫಿನಿಶರ್ ಆಗಿ ರಿಂಕು ಭಾರಿ ಪ್ರಭಾವ ಬೀರಿದ್ದಾರೆ.
ಟೀಮ್ ಇಂಡಿಯಾದಲ್ಲಿ ಫಿನಿಶರ್ ಪಾತ್ರಕ್ಕೆ ಭಾರಿ ಬೇಡಿಕೆ ಇದೆ. ಹಲವು ಸಮಯದಿಂದ ಈ ಕ್ರಮಾಂಕದಲ್ಲಿ ಭಾರತ ಆಟಗಾರರ ಕೊರತೆ ಅನುಭವಿಸಿತ್ತು. ಆದರೆ ರಿಂಕು ಆಗಮನದ ನಂತರ ಆ ಸಮಸ್ಯೆ ಬಗೆಹರಿದಿದೆ. ಒತ್ತಡದಲ್ಲಿಯೂ ಸಮರ್ಥವಾಗಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ಇರುವ ಆಟಗಾರ ಈಗಾಗಲೇ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ, 2023-24ರ ಋತುವಿನಲ್ಲಿ ಮೊದಲ ಬಾರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿಯೂ ರಿಂಕು ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರು ನಿಯಮಿತವಾಗಿ ತಂಡಕ್ಕೆ ಆಯ್ಕೆ ಆಗುವುದರಲ್ಲಿ ಅನುಮಾನವಿಲ್ಲ.
ಅತ್ತ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ಭೇಟಿಯಾದ ಫೋಟೋವನ್ನು ರಿಂಕು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮೆಕಲಮ್ ಕೆಕೆಆರ್ ತಂಡದ ಮುಖ್ಯ ತರಬೇತುದಾರರಾಗಿದ್ದರು. ಧರ್ಮಶಾಲಾದಲ್ಲಿ ನಡೆದ ಫೋಟೋಶೂಟ್ ನಂತರ, ರಿಂಕು ಕೆಕೆಆರ್ ತಂಡದ ಶಿಬಿರಕ್ಕೆ ಮುಂಬೈಗೆ ಮರಳಿದ್ದಾರೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)