logo
ಕನ್ನಡ ಸುದ್ದಿ  /  ಕ್ರಿಕೆಟ್  /  ಹಿಟ್‌ಮ್ಯಾನ್ ಶತಕದಾಟಕ್ಕೆ ಹಳೆ ದಾಖಲೆಗಳು ನಿರ್ನಾಮ; ರೋಹಿತ್ ಶರ್ಮಾ ರೆಕಾರ್ಡ್ ಲಿಸ್ಟ್ ಹೀಗಿದೆ

ಹಿಟ್‌ಮ್ಯಾನ್ ಶತಕದಾಟಕ್ಕೆ ಹಳೆ ದಾಖಲೆಗಳು ನಿರ್ನಾಮ; ರೋಹಿತ್ ಶರ್ಮಾ ರೆಕಾರ್ಡ್ ಲಿಸ್ಟ್ ಹೀಗಿದೆ

Jayaraj HT Kannada

Jan 17, 2024 09:46 PM IST

google News

ಆಕರ್ಷಕ ಶತಕ ಸಿಡಿಸಿದ ರೋಹಿತ್‌ ಶರ್ಮಾ

    • Rohit Sharma Records: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಐದನೇ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಆಕರ್ಷಕ ಶತಕ ಸಿಡಿಸಿದ ರೋಹಿತ್‌ ಶರ್ಮಾ
ಆಕರ್ಷಕ ಶತಕ ಸಿಡಿಸಿದ ರೋಹಿತ್‌ ಶರ್ಮಾ (PTI)

ಅಫ್ಘಾನಿಸ್ತಾನ ವಿರುದ್ಧದ ಟಿ20 (India vs Afghanistan 3rd T20I) ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಡಕೌಟ್‌ ಆಗಿದ್ದ ನಾಯಕ ರೋಹಿತ್ ಶರ್ಮಾ (Rohit Sharma), ಇದೀಗ ಸರಣಿಯ ಮೂರನೇ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಎರಡು ಪಂದ್ಯಗಳಲ್ಲಿ ಗಳಿಸಲು ವಿಫಲರಾಗಿದ್ದ ರನ್‌ಗಳನ್ನು ಈ ಪಂದ್ಯದಲ್ಲಿ ಬಡ್ಡಿ-ಅಸಲು ಸಮೇತ ತೀರಿಸಿದ್ದಾರೆ. ತಂಡವು ಅಲ್ಪಮೊತ್ತ ಗಳಿಸುವ ಭೀತಿಯಲ್ಲಿದ್ದಾಗ ಸ್ಫೋಟಕ ಇನ್ನಿಂಗ್ಸ್‌ ಆಡಿದ ನಾಯಕ ವಿಶ್ವದಾಖಲೆಯ ಶತಕ ಸಿಡಿಸಿ ಮಿಂಚಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ ಹಿಟ್‌ಮ್ಯಾನ್ ದಾಖಲೆಯ ಐದನೇ ಟಿ20 ಶತಕ ಬಾರಿಸಿದರು. ಅಂತಿಮವಾಗಿ ಕೇವಲ 69 ಎಸೆತಗಳಲ್ಲಿ 121 ರನ್‌ ಗಳಿಸಿ ಅಜೇಯರಾಗಿ ಉಳಿದರು. ಆ ಮೂಲಕ ಚುಟುಕು ಸ್ವರೂಪದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಬರೆದರು. ಈ ವೇಳೆ ಅವರು ಸೂರ್ಯಕುಮಾರ್ ಯಾದವ್ ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆ ಮುರಿದರು. ಇವರಿಬ್ಬರೂ ತಲಾ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ.

ಇದನ್ನೂ ಓದಿ | ರೋಹಿತ್ ಶರ್ಮಾ ದಾಖಲೆಯ ಶತಕ; ರಿಂಕು ಬೊಂಬಾಟ್ ಫಿನಿಶಿಂಗ್;‌ ಅಫ್ಘಾನಿಸ್ತಾನಕ್ಕೆ ಬೃಹತ್‌ ಗುರಿ ನೀಡಿದ ಭಾರತ

ಪಂದ್ಯದಲ್ಲಿ ತಂಡದ ಘಟಾನುಘಟಿ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿ ವಿಕೆಟ್‌ ಒಪ್ಪಿಸುತ್ತಿದ್ದಾಗ, ಹಿಟ್‌ ಮ್ಯಾನ್‌ ಮಾತ್ರ ಅಬ್ಬರಿಸಿದರು. ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ ಸೇರಿದಂತೆ ಭಾರತವು ಬಲುಬೇಗನೇ ಕೇವಲ 24 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡಿತು. ಈ ವೇಳೆ ರಿಂಕು ಸಿಂಗ್ (69*) ಅವರೊಂದಿಗೆ ದಾಖಲೆಯ 190 ರನ್‌ಗಳ ಜೊತೆಯಾಟವಾಡಿದ ರೋಹಿತ್, ರೆಕಾರ್ಡ್‌ ಪಟ್ಟಿಯಲ್ಲಿ ಸೇರಿಕೊಂಡರು.

ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟ

  • ರೋಹಿತ್ ಶರ್ಮಾ - ರಿಂಕು ಸಿಂಗ್ -ಅಜೇಯ 190
  • ಸಂಜು ಸ್ಯಾಮ್ಸನ್ - ದೀಪಕ್ ಹೂಡಾ (ಡಬ್ಲಿನ್ 2022)‌ -176
  • ರೋಹಿತ್ ಶರ್ಮಾ - ಕೆಎಲ್ ರಾಹುಲ್ (ಇಂದೋರ್ 2017) -165
  • ಯಶಸ್ವಿ ಜೈಸ್ವಾಲ್ - ಶುಬ್ಮನ್ ಗಿಲ್ (ಲಾಡರ್‌ಹಿಲ್ 2023)‌ -165

175.36ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರೋಹಿತ್, ಇನ್ನಿಂಗ್ಸ್ ಉದ್ದಕ್ಕೂ 11 ಬೌಂಡರಿ ಮತ್ತು ಎಂಟು ಸಿಕ್ಸರ್‌ ಬಾರಿಸಿದರು. ಎರಡನೇ ಅರ್ಧಶತಕವನ್ನು ಕೇವಲ 22 ಎಸೆತಗಳಲ್ಲಿ ಪೂರೈಸಿದರು.ಇದೇ ವೇಳೆ ಟಿ20 ಪಂದ್ಯಗಳಲ್ಲಿ ಭಾರತೀಯ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದರು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿ (1570) ಅವರನ್ನು ಹಿಂದಿಕ್ಕಿದ್ದಾರೆ. ಹಿಟ್‌ಮ್ಯಾನ್‌ ಈಗ 1647 ರನ್ ಗಳಿಸಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯರು

  • ರೋಹಿತ್‌ ಶರ್ಮಾ - 1647 ರನ್
  • ವಿರಾಟ್ ಕೊಹ್ಲಿ - 1570 ರನ್
  • ಎಂಎಸ್ ಧೋನಿ - 1112 ರನ್

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರು

  • ರೋಹಿತ್ ಶರ್ಮಾ -5
  • ಸೂರ್ಯಕುಮಾರ್ ಯಾದವ್ -4
  • ಗ್ಲೆನ್ ಮ್ಯಾಕ್ಸ್‌ವೆಲ್ -4

ಟಿ20 ಸ್ವರೂಪದಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್

  • ಶುಭ್ಮನ್ ಗಿಲ್ -ಅಜೇಯ 126
  • ರುತುರಾಜ್ ಗಾಯಕ್ವಾಡ್ -ಅಜೇಯ 123
  • ವಿರಾಟ್ ಕೊಹ್ಲಿ -ಅಜೇಯ 122
  • ರೋಹಿತ್ ಶರ್ಮಾ -ಅಜೇಯ 12

ಟಿ20ಯಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್

  • ಯುವರಾಜ್ ಸಿಂಗ್ (ಸ್ಟುವರ್ಟ್ ಬ್ರಾಡ್ ಓವರ್‌, ಡರ್ಬನ್ 2007) -36 ರನ್
  • ಕೀರಾನ್ ಪೊಲಾರ್ಡ್ (ಅಕಿಲಾ ದನಂಜಯ‌ ಓವರ್‌, ಕೂಲಿಡ್ಜ್ 2021) -36 ರನ್
  • ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ (ಕರೀಂ ಜನತ್‌, ಬೆಂಗಳೂರು 2024) -36 ರನ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ