ಜಾಗತಿಕ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಐತಿಹಾಸಿಕ ಸಾಧನೆ ಹಿಂದೆ ಬಿಸಿಸಿಐ ಮತ್ತು ಭಾರತದ ಪಾತ್ರ
Jun 25, 2024 06:55 PM IST
ಜಾಗತಿಕ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಐತಿಹಾಸಿಕ ಸಾಧನೆ ಹಿಂದೆ ಬಿಸಿಸಿಐ ಮತ್ತು ಭಾರತದ ಪಾತ್ರ
- Afghanistan Cricket team: ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿದೆ. ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಅಫ್ಘನ್ನರ ಯಶಸ್ಸಿನಲ್ಲಿ ಭಾರತದ ಪಾತ್ರವೂ ಇದೆ.
ಜಾಗತಿಕ ಕ್ರಿಕೆಟ್‌ನಲ್ಲಿ ಇಂದು ಅಫ್ಘಾನಿಸ್ತಾನದ್ದೇ ಸುದ್ದಿ. ಮೊಟ್ಟಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್ ಹಂತಕ್ಕೇರಿದ ಅಫ್ಘನ್ ಕ್ರಿಕೆಟ್ ತಂಡ, ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಎಂಟು ರನ್‌ಗಳ ರೋಚಕ ಜಯ ಸಾಧಿಸಿದ ತಂಡವು, ಸದ್ಯ ಚುಟುಕು ಸ್ವರೂಪದ ಕ್ರಿಕೆಟ್‌ನಲ್ಲಿ ವಿಶ್ವದ ನಾಲ್ಕನೇ ಅಗ್ರ ತಂಡವಾಗಿದೆ. ಈಗಾಗಲೇ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದಂತ ಬಲಿಷ್ಠ ತಂಡಗಳಿಗೆ ನೀರು ಕುಡಿಸಿದ ಅಫ್ಘಾನಿಸ್ತಾನ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭಿಸಿದೆ. ತಾಲಿಬಾನ್ ಆಡಳಿತಕ್ಕೊಳಗಾಗಿ ತಮ್ಮದೇ ದೇಶದಲ್ಲಿ ಕ್ರೀಡೆಗೆ ಅಷ್ಟೊಂದು ಬೆಂಬಲ ಸಿಗದಿದ್ದರೂ, ಅಫ್ಘನ್ ಆಟಗಾರರು ಸಾಧಿಸಿರುವ ಪ್ರಗತಿಗೆ ವಿಶ್ವ ಕ್ರಿಕೆಟ್ ಶಹಬ್ಬಾಷ್ ಅಂದಿದೆ.
ಇಂದು ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಮಹತ್ ಸಾಧನೆ ಮಾಡುತ್ತಿದ್ದಂತೆಯೇ, ಭಾರತದ ದಿಗ್ಗಜ ಆಟಗಾರರು ಅಫ್ಘನ್ ಆಟಗಾರರನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಂಡದ ಪ್ರಗತಿಗೆ ಅಭಿನಂದಿಸುತ್ತಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತದಿಂದ ಅಪಾರ ಬೆಂಬಲ ವ್ಯಕ್ತವಾಗುತ್ತಿರುವುದು ಹೊಸ ವಿಚಾರವೇನಲ್ಲ. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯ ವೇಳೆಯೂ, ಅಫ್ಘನ್ ತಂಡದ ಪಂದ್ಯಗಳಿಗೆ ಮೈದಾನ ತುಂಬುತ್ತಿದ್ದವು. ತಂಡಕ್ಕೆ ಭಾರತದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇಷ್ಟೇ ಅಲ್ಲ, ಇಂದು ಅಫ್ಘಾನಿಸ್ತಾನ ತಂಡದ ಪ್ರಗತಿಯಲ್ಲಿ ಬಿಸಿಸಿಐ ಹಾಗೂ ಭಾರತದ ಕೊಡುಗೆ ಬಹಳಷ್ಟಿದೆ.
ಈ ಬಾರಿಯು ಚುಟುಕು ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆದ್ದು ತಂಡ ಮತ್ತೊಂದು ಇತಿಹಾಸ ಬರೆಯಿತು. ಅಫ್ಘಾನಿಸ್ತಾನ ಕ್ರಿಕೆಟ್ ಈ ಮಟ್ಟಕ್ಕೆ ಬೆಳೆಯಲು ಆಟಗಾರರ ಶ್ರದ್ಧೆ, ಪ್ರಯತ್ನ, ಕಠಿಣ ಪರಿಶ್ರಮ ಒಂದೆಡೆಯಾದರೆ; ಭಾರತ ಮತ್ತು ಬಿಸಿಸಿಐ ಕೂಡಾ ಅಫ್ಘನ್ನರ ಯಶಸ್ಸಿನ ಪ್ರಯಾಣದಲ್ಲಿ ಪಾಲು ಪಡೆದಿದೆ.
ಭಾರತದಲ್ಲಿ ಅಪಾರ ಅಭಿಮಾನ
2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪೂರ್ಣ ಸದಸ್ಯತ್ವ ಪಡೆದ ಅಫ್ಘಾನಿಸ್ತಾನ, ಆ ನಂತರ ಹಲವು ಪಂದ್ಯಗಳಲ್ಲಿ ರೋಚಕ ಫಲಿತಾಂಶಕ್ಕೆ ಕಾರಣವಾಗಿದೆ. ಕಳೆದ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ್ದ ತಂಡವು, ಬಲಿಷ್ಠ ತಂಡಕ್ಕೆ ಶಾಕ್ ಕೊಟ್ಟಿತ್ತು. ಆಗ ಅಫ್ಘಾನಿಸ್ತಾನದ ಗೆಲುವನ್ನು ತನ್ನ ಗೆಲುವಿನಂತೆಯೇ ಭಾರತೀಯರು ಸಂಭ್ರಮಿಸಿದ್ದರು.
ಅಫ್ಘಾನಿಸ್ತಾನಕ್ಕೆ ಭಾರತದಲ್ಲಿ ಹೋಮ್ ಗ್ರೌಂಡ್
ತಮ್ಮ ದೇಶದಲ್ಲಿ ಕ್ರಿಕೆಟ್ ಅಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ, ಭಾರತದಲ್ಲಿ ಅಫ್ಘಾನಿಸ್ತಾನಕ್ಕೆ ಪಂದ್ಯವಾಡಲು ಅವಕಾಶ ಮಾಡಿಕೊಡಲಾಯ್ತು. ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿರುವ ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, 2015ರಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ತಾತ್ಕಾಲಿಕ ಹೋಮ್ ಗ್ರೌಂಡ್ ಆಯಿತು. ಆವರೆಗೆ ಶಾರ್ಜಾದಲ್ಲಿ ಪಂದ್ಯಗಳನ್ನಾಡುತ್ತಿದ್ದ ಅಫ್ಘಾನಿಸ್ತಾನ, ತನ್ನ ನೆಲೆಯನ್ನು ನೋಯ್ಡಾಕ್ಕೆ ವರ್ಗಾಯಿಸಿತು. 2017ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ಐರ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿತು. ಇದರ ಹೊರತಾಗಿ ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿಗೂ ಅಫ್ಘಾನ್ ಆತಿಥ್ಯ ವಹಿಸಿತು.
ಭಾರತೀಯ ಕೋಚ್‌ಗಳ ಮಾರ್ಗದರ್ಶನ
ಭಾರತದ ಮಾಜಿ ಆಟಗಾರರಾದ ಲಾಲ್‌ಚಂದ್ ರಜಪೂತ್, ಮನೋಜ್ ಪ್ರಭಾಕರ್ ಮತ್ತು ಅಜಯ್ ಜಡೇಜಾ ಅವರು ಹಿಂದೆ ಅಫ್ಘಾನಿಸ್ತಾನ ತಂಡಕ್ಕೆ ತರಬೇತುದಾರರಾಗಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಜಡೇಜಾ ಮಾರ್ಗದರ್ಶನದಲ್ಲಿ ತಂಡವು ಅಮೋಘ ಪ್ರದರ್ಶನ ನೀಡಿತ್ತು.
ಐಪಿಎಲ್‌ನಲ್ಲಿ ಅಫ್ಘನ್ ಆಟಗಾರರಿಗೆ ಅವಕಾಶ
ವಿಶ್ವದ ಹಲವಾರು ಪ್ರತಿಭೆಗಳಿಗೆ ಐಪಿಎಲ್ ಅವಕಾಶ ಕೊಟ್ಟಿದೆ. ಅಫ್ಘಾನಿಸ್ತಾನದ ಹಲವು ಆಟಗಾರರ ಯಶಸ್ಸಿನಲ್ಲಿ ಈ ಟೂರ್ನಿಯ ಪಾತ್ರ ದೊಡ್ಡದು. ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್, ನವೀನ್ ಉಲ್ ಹಕ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ ಮತ್ತು ಗುಲ್ಬದಿನ್ ನೈಬ್ ಐಪಿಎಲ್‌ನಲ್ಲಿ ಆಡಿದ್ದಾರೆ. ಇವರೆಲ್ಲಾ ಅಂತಾರಾಷ್ಟ್ರೀಯ ತಂಡದಲ್ಲೂ ಮಿಂಚುತ್ತಿದ್ದಾರೆ. ಇದು ಆಟಗಾರರ ಪ್ರತಿಭೆಗೆ ನೆರವಾಗಿದ್ದು ಮಾತ್ರವಲ್ಲದೆ, ಆರ್ಥಿಕವಾಗಿಯೂ ಆಟಗಾರರಿಗೆ ನೆರವಾಗಿದೆ.
ಟಿ20 ವರ್ಲ್ಡ್ಕಪ್ 2024ರ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸಚಿನ್, ಸೆಹ್ವಾಗ್, ರೈನಾ, ಯುವರಾಜ್; ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಐತಿಹಾಸಿಕ ಸಾಧನೆಯನ್ನು ಹಾಡಿ ಹೊಗಳಿದ ದಿಗ್ಗಜರು