ಟಿ20 ವಿಶ್ವಕಪ್‌: ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಗೆಲುವು; ಆಸ್ಟ್ರೇಲಿಯಾ ಹೊರದಬ್ಬಿ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ ಅಫ್ಘಾನಿಸ್ತಾನ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌: ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಗೆಲುವು; ಆಸ್ಟ್ರೇಲಿಯಾ ಹೊರದಬ್ಬಿ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ ಅಫ್ಘಾನಿಸ್ತಾನ

ಟಿ20 ವಿಶ್ವಕಪ್‌: ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಗೆಲುವು; ಆಸ್ಟ್ರೇಲಿಯಾ ಹೊರದಬ್ಬಿ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾವನ್ನು ಟಿ20 ವಿಶ್ವಕಪ್‌ನಿಂದ ಹೊರಹಾಕಿದೆ. ಮೊನ್ನೆಯಷ್ಟೇ ಆಸೀಸ್‌ ಮಣಿಸಿದ್ದ ಅಫ್ಘನ್‌, ಇಂದು ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದೆ. ಇದರೊಂದಿಗೆ ಐಸಿಸಿ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಸೆಮಿಫೈನಲ್ ಲಗ್ಗೆ ಹಾಕಿದೆ.

ಆಸ್ಟ್ರೇಲಿಯಾ ಹೊರದಬ್ಬಿ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ ಅಫ್ಘಾನಿಸ್ತಾನ
ಆಸ್ಟ್ರೇಲಿಯಾ ಹೊರದಬ್ಬಿ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ ಅಫ್ಘಾನಿಸ್ತಾನ (AP)

ಟಿ20 ವಿಶ್ವಕಪ್‌ಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಸೆಮಿಫೈನಲ್ ಹಂತಕ್ಕೆ ಲಗ್ಗೆ ಹಾಕಿದೆ. ಬಾಂಗ್ಲಾದೇಶ ವಿರುದ್ಧದ ಸೂಪರ್‌ 8 ಹಂತದ ರೋಚಕ ಪಂದ್ಯದಲ್ಲಿ 8 ರನ್‌ಗಳಿಂದ ಅಮೋಘ ಜಯ ಸಾಧಿಸಿದ ಅಫ್ಘನ್‌, ಟಿ20 ವಿಶ್ವಕಪ್‌ 2024ರ ಆವೃತ್ತಿಯ ಸೆಮಿಕದನಕ್ಕೆ ಲಗ್ಗೆ ಹಾಕಿದೆ. ಇದರೊಂದಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡದ ಸೆಮೀಸ್‌ ಆಸೆಗೆ ತಣ್ಣೀರೆರಚಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದ ಅಫ್ಘನ್ನರು ಐತಿಹಾಸಿಕ ಸಾಧನೆಯೊಂದಿಗೆ ಕ್ರಿಕೆಟ್‌ ಇತಿಹಾಸದಲ್ಲಿ ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ. ವಿಶ್ವಕಪ್‌ ಇತಿಹಾಸದಲ್ಲೇ ತಂಡವು ಸೆಮೀಸ್‌ ಹಂತಕ್ಕೆ ಪ್ರವೇಶಿಸಿದ್ದು ಇದು ಮೊದಲ ಬಾರಿ.

ಸೈಂಟ್‌ ವಿನ್ಸೆಂಟ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿ ಅಫ್ಘಾನಿಸ್ತಾನ 5 ವಿಕೆಟ್‌ ಕಳೆದುಕೊಂಡು 115 ರನ್‌ಗಳ ಅಲ್ಪಮೊತ್ತ ದಾಖಲಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಬಾಂಗ್ಲಾದೇಶಕ್ಕೆ, ಮಳೆಯಿಂದಾಗಿ 19 ಓವರ್‌ಗಳಲ್ಲಿ 114 ರನ್‌ ಗುರಿ ನೀಡಲಾಯ್ತು. ಆದರೆ, ರಶೀದ್ ಖಾನ್ ಹಾಗೂ ನವೀನ್-ಉಲ್-ಹಕ್ ಮಾರಕ ಬೌಲಿಂಗ್ ದಾಳಿಯಿಂದಾಗಿ ಬಾಂಗ್ಲಾದೇಶ ಬಾಲ ಬಿಚ್ಚಲು ಹೆಣಗಾಡಿತು. ಕೊನೆಯದಾಗಿ 17.5 ಓವರ್‌ಗಳಲ್ಲಿ 105 ರನ್‌ಗಳಿಗೆ ತಂಡ ಆಲೌಟ್‌ ಆಯ್ತು.

ಆಸ್ಟ್ರೇಲಿಯಾ ಹೊರಕ್ಕೆ

ಬಾಂಗ್ಲಾದೇಶದ ಸೋಲಿಸುವುದರೊಂದಿಗೆ ಅಫ್ಘಾನಿಸ್ತಾನವು ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಕೂಡಾ ಟೂರ್ನಿಯಿಂದ ಹೊರಹಾಕಿದೆ. ಸೋಮವಾರವಷ್ಟೇ ಭಾರತ ವಿರುದ್ಧದ ಪಂದ್ಯದಲ್ಲಿ 24 ರನ್‌ಗಳಿಂದ ಸೋತಿದ್ದ ಆಸೀಸ್‌, ಸೂಪರ್‌ 8 ಹಂತದಲ್ಲಿ ಕೇವಲ 1 ಗೆಲುವು ಮಾತ್ರ ಸಾಧಿಸಿದೆ. ಇತ್ತ 2 ಗೆಲುವು ಕಂಡ ಅಫ್ಘನ್‌ ಸೆಮೀಸ್‌ ಪ್ರವೇಶಿಸಿದೆ. ತಂಡವು ಜೂನ್‌ 27ರ ಬೆಳಗ್ಗೆ ನಡೆಯಲಿರುವ ಮೊದಲ ಸೆಮಿಕದನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಲಿಟ್ಟನ್‌ ದಾಸ್‌ ಅಜೇಯ ಹೋರಾಟಕ್ಕೆ ದಕ್ಕದ ಜಯ

ಬಾಂಗ್ಲಾದೇಶ ಪರ ಲಿಟ್ಟನ್ ದಾಸ್ 49 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರು. ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಔಟಾಗದೆ ಉಳಿದರು. ಅಜೇಯ ಅರ್ಧಶತಕ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಂದಾಗಲಿಲ್ಲ. ಉಳಿದಂತೆ ಸೌಮ್ಯ ಸರ್ಕಾರ್ 10 ಎಸೆತಗಳಲ್ಲಿ 10 ರನ್ ಗಳಿಸಿದರೆ, ತೌಹಿದ್ ಹ್ರಿದೋಯ್ 9 ಎಸೆತಗಳಲ್ಲಿ 14 ರನ್ ಪೇರಿಸಿದರು. ದಾಸ್‌ ಹೊರತುಪಡಿಸಿದರೆ ಎರಡಂಕಿ ದಾಟಿದ್ದು ಇವರಿಬ್ಬರೇ. ಲಿಟನ್ ಅವರೊಂದಿಗೆ ಯಾರಿಗೂ ಜೊತೆಯಾಟ ಮುಂದುವರೆಸಲು ಸಾಧ್ಯವಾಗಲಿಲ್ಲ.

ಅಫ್ಘನ್‌ ಪರ ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ತಲಾ 4 ವಿಕೆಟ್ ಪಡೆದರು. ಫಜಲ್ಹಾಕ್ ಫಾರೂಕಿ ಮತ್ತು ಗುಲ್ಬದಿನ್ ನೈಬ್ ತಲಾ ಒಂದು ವಿಕೆಟ್ ಪಡೆದರು. 18ನೇ ಓವರ್‌ನ ಐದನೇ ಎಸೆತದಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ನವೀನ್ ಔಟ್ ಮಾಡಿ ತಂಡಕ್ಕೆ ಐತಿಹಾಸಕಿ ಗೆಲುವು ತಂದುಕೊಟ್ಟರು.

ಅಫ್ಘಾನಿಸ್ತಾನ ಕಳಪೆ ಬ್ಯಾಟಿಂಗ್

ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭವೇನೋ ಸಿಕ್ಕಿತು. ಆದರೆ, ಅದನ್ನು ಮುದುವರೆಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ರಹಮಾನುಲ್ಲಾ ಗುರ್ಬಾಜ್ 55 ಎಸೆತಗಳಲ್ಲಿ 43 ರನ್ ಗಳಿಸಿದರು. ಇಬ್ರಾಹಿಂ ಜದ್ರನ್ 29 ಎಸೆತಗಳಲ್ಲಿ 18 ರನ್ ಗಳಿಸಿದರು. ಮೊದಲ ವಿಕೆಟ್‌ಗೆ 59 ರನ್‌ಗಳ ಜೊತೆಯಾಟ ಬಂತು. 11ನೇ ಓವರ್‌ನಲ್ಲಿ ರಿಷದ್ ಹುಸೇನ್, ಜದ್ರನ್ ವಿಕೆಟ್‌ ಪಡೆದು ಮುನ್ನಡೆ ತಂದುಕೊಟ್ಟರು. ಆ ಬಳಿಕ ಅಜ್ಮತುಲ್ಲಾ ಒಮರ್ಜೈ 10 ರನ್ ಗಳಿಸಿದರು. ಗುಲ್ಬಾದಿನ್ ನೈಬ್ 4 ರನ್, ಮೊಹಮ್ಮದ್ ನಬಿ 1 ರನ್‌ಗೆ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ನಾಯಕ ರಶೀದ್ ಖಾನ್ ಅಜೇಯ 19 ರನ್ ಗಳಿಸಿದರು.

ಬಾಂಗ್ಲಾದೇಶ ಪರ ರಿಷದ್ ಹುಸೇನ್ 3 ವಿಕೆಟ್ ಪಡೆದು ಮಿಂಚಿದರು. ಮುಸ್ತಾಫಿಜುರ್ ರೆಹಮಾನ್ ಮತ್ತು ತಸ್ಕಿನ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

Whats_app_banner