RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?
May 20, 2024 10:14 AM IST
ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್
- ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಐಪಿಎಲ್ 2024ರ ಅಭಿಯಾನವು ಸಂಪೂರ್ಣ ಭಿನ್ನವಾಗಿದೆ. ಒಂದು ತಂಡ ಸತತ ಸೋಲು ಕಂಡಾಗ, ಮತ್ತೊಂದು ತಂಡ ಗೆದ್ದು ಬೀಗುತ್ತಿತ್ತು. ಆದರೆ ದ್ವಿತಿಯಾರ್ಧದಲ್ಲಿ ಇದು ತದ್ವಿರುದ್ಧವಾಯ್ತು. ಅದು ಹೇಗೆ? ನೋಡೋಣ ಬನ್ನಿ.
ಐಪಿಎಲ್ 2024ರ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಲೀಗ್ ಹಂತದ ಪಂದ್ಯಗಳಿಗೆ ಮೇ 19ರಂದು ತೆರೆಬಿದ್ದಿದ್ದು, ಪ್ಲೇಆಫ್ ಕದನಗಳಿಗೆ ಅಖಾಡ ಸಜ್ಜಾಗಿದೆ. ಟೂರ್ನಿಯಲ್ಲಿ ಇದೀಗ 4 ತಂಡಗಳು ಮಾತ್ರವೇ ಉಳಿದಿದ್ದು, ಒಂದು ಕಪ್‌ಗಾಗಿ ಫೈಟ್ ಮಾಡಲಿವೆ. ಪ್ಲೇಆಫ್ ಹಂತದಲ್ಲಿ ಫೈನಲ್ ಸೇರಿದಂತೆ ನಾಲ್ಕು ಪಂದ್ಯಗಳು ನಡೆಯುತ್ತಿವೆ. ಇದರಲ್ಲಿ ಆರ್‌ಸಿಬಿ ತಂಡ ಕೂಡಾ ಇದೆ. ಮೇ 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯ ರೋಚಕತೆ ಹೆಚ್ಚಿಸಿದೆ. ಇದಕ್ಕೆ ಹಲವು ಕಾರಣಗಳೂ ಇವೆ.
ಟೂರ್ನಿಯಲ್ಲಿ ರಾಜಸ್ಥಾನ ಮತ್ತು ಬೆಂಗಳೂರು ತಂಡಗಳು ಭಿನ್ನ ರೀತಿಯ ಅಭಿಯಾನ ಹೊಂದಿದ್ದವು. ಆರ್‌ಸಿಬಿ ತಂಡವು ಮೊದಲಾರ್ಧದಲ್ಲಿ ಸತತ ಸೋಲುಗಳೊಂದಿಗೆ ಕಂಗೆಟ್ಟು, ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಅತ್ತ ರಾಜಸ್ಥಾನವು ಮೇಲಿಂದ ಮೇಲೆ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಸತತ ನಾಲ್ಕು ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ಆರ್‌ಆರ್, ಆರಂಭದಲ್ಲಿ ಆಡಿದ 9 ಪಂದ್ಯಗಳಲ್ಲಿ ಭರ್ಜರಿ 8ರಲ್ಲಿ ಗೆಲುವು ಸಾಧಿಸಿತು. ಆರ್‌ಸಿಬಿ ತಂಡವು ಸೋಲಿನೊಂದಿಗೆ ಅಭಿಯಾನ ಆರಂಭಿಸಿತು. ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯ್ತು. ಆದರೆ, ಆ ಬಳಿಕ ಆಗಿದ್ದೇ ಬೇರೆ.
ರಾಜಸ್ಥಾನ ಹಾಗೂ ಆರ್‌ಸಿಬಿಯ ಆಟದ ವೈಖರಿಯೇ ಬದಲಾಯ್ತು. ಆರ್‌ಸಿಬಿಯು ಗೆಲುವಿನ ಲಯಕ್ಕೆ ಮರಳಿದರೆ, ರಾಜಸ್ಥಾನ ಸೋಲಿನ ಸುಳಿಗೆ ಸಿಲುಕಿತು. ಏಪ್ರಿಲ್ 25ರಂದು ಎಸ್‌ಆರ್‌ಎಚ್ ವಿರುದ್ಧ ಆಡಿದ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿತು. ಅದು ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಲ್ಲಿ ತಂಡಕ್ಕೆ ಒಲಿದ ಕೇವಲ 2ನೇ ಗೆಲುವು. ಆ ಬಳಿಕ ಆರ್‌ಸಿಬಿ ಹಿಂದೆ ತಿರುಗಿ ನೋಡಿಲ್ಲ. ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್ ಲಗ್ಗೆ ಇಟ್ಟಿತು.
ಮೇ ತಿಂಗಳಲ್ಲಿ ಗೆದ್ದೇ ಇಲ್ಲ ರಾಜಸ್ಥಾನ್
ಏಪ್ರಿಲ್ ತಿಂಗಳಲ್ಲಿ ಗೆಲುವಿನ ನಾಗಾಲೋಟದಲ್ಲಿದ್ದ ರಾಯಲ್ಸ್, ಮೇ ತಿಂಗಳಿಗೆ ಬರುತ್ತಿದ್ದಂತೆ ಗೆಲುವಿನ ಲಯ ಕಳೆದುಕೊಂಡಿದೆ. ಈ ತಿಂಗಳಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಂದರಲ್ಲೂ ಸಂಜು ಸ್ಯಾಮ್ಸನ್ ಪಡೆ ಗೆದ್ದಿಲ್ಲ. ನಾಲ್ಕು ಪಂದ್ಯಗಳಲ್ಲಿ ಸೋತರೆ, ಕೆಕೆಆರ್ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ.
ಏಪ್ರಿಲ್ 25ರ ನಂತರ ಸೋತೇ ಇಲ್ಲ ಆರ್‌ಸಿಬಿ
ಅಚ್ಚರಿಯೆಂದರೆ ಆರ್‌ಸಿಬಿ ತಂಡವು ಕೊನೆಯ ಬಾರಿಗೆ ಸೋತಿದ್ದು ಏಪ್ರಿಲ್ 21ರಲ್ಲಿ. ಆ ಬಳಿಕ ತಂಡ ಸೋತೇ ಇಲ್ಲ. ಅಂದರೆ ಹೆಚ್ಚು ಕಡಿಮೆ ಒಂದು ತಿಂಗಳಿಂದ ಆರ್‌ಸಿಬಿ ಗೆಲುವಿನ ನಾಗಾಲೋಟದಲ್ಲಿದೆ. ಇದೇ ಜೋಶ್‌ನಲ್ಲಿ ಆರ್‌ಆರ್ ವಿರುದ್ಧ ಆಡಿದರೆ ತಂಡಕ್ಕೆ ಗಲುವ ಖಚಿತವಾಗಲಿದೆ.
ಐಪಿಎಲ್ 2024ರಲ್ಲಿ ಉಭಯ ತಂಡಗಳ ಸೋಲು-ಗೆಲುವು
ರಾಜಸ್ಥಾನ್ ರಾಯಲ್ಸ್: 14 ಪಂದ್ಯ, 8 ಗೆಲುವು, 5 ಸೋಲು, 1 ಫಲಿತಾಂಶ ಇಲ್ಲ, 17 ಅಂಕ. ನೆಟ್ ರನ್ ರೇಟ್ +0.273.
ರಾಯಲ್ ಚಾಲೆಂಜರ್ಸ್ ಬೆಂಗಳೂರು: 14 ಪಂದ್ಯ, 7 ಗೆಲುವು, 7 ಸೋಲು, 14 ಅಂಕ. ನೆಟ್ ರನ್ ರೇಟ್ +0.459.
ಇದನ್ನೂ ಓದಿ | ಮೊದಲ ಎಸೆತದಲ್ಲಿ ಋತುರಾಜ್ ವಿಕೆಟ್ ಪಡೆದು ಪೀಟರ್ಸನ್ರ 15 ವರ್ಷಗಳ ದಾಖಲೆ ಪುಡಿಗಟ್ಟಿದ ಗ್ಲೆನ್ ಮ್ಯಾಕ್ಸ್ವೆಲ್
ಇದನ್ನೂ ಓದಿ | ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)