ಸೌತ್ ಆಫ್ರಿಕಾ ಟೆಸ್ಟ್ ಸರಣಿಯಿಂದ ಹೊರಬಿದ್ದ ಋತುರಾಜ್; ಬದಲಿ ಸ್ಥಾನಕ್ಕೆ 28 ವರ್ಷದ ಆಟಗಾರ ಆಯ್ಕೆ
Dec 23, 2023 07:35 PM IST
ಋತುರಾಜ್ ಗಾಯಕ್ವಾಡ್.
- Ruturaj Gaikwad Ruled Out: ಸೌತ್ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಿಂದ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅಧಿಕೃತವಾಗಿ ಹೊರಬಿದ್ದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ (Ruturaj Gaikwad Ruled Out), ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಗಾಯಕ್ವಾಡ್ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಲಾಗಿದೆ ಎಂದು ಡಿಸೆಂಬರ್ 23ರ ಶನಿವಾರ ಬಿಡುಗಡೆಯಾದ ಅಧಿಕೃತ ಹೇಳಿಕೆಯಲ್ಲಿ ಬಿಸಿಸಿಐ ಬಹಿರಂಗಪಡಿಸಿದೆ.
ಬಿಸಿಸಿಐ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಗಾಯದ ಹೆಚ್ಚಿನ ನಿರ್ವಹಣೆಗಾಗಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ತರಬೇತಿ ಪಡೆಯಲಿದ್ದಾರೆ. 26 ವರ್ಷದ ಗಾಯಕ್ವಾಡ್, ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. 2 ಪಂದ್ಯಗಳಲ್ಲಿ 9 ರನ್ ಗಳಿಸಿದರು.
ಅಭಿಮನ್ಯು ಈಶ್ವರನ್ ಕಣಕ್ಕೆ
ಗಾಯಕ್ವಾಡ್ಗೆ ಬದಲೀ ಆಟಗಾರನನ್ನು ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡದ ಪಶ್ಚಿಮ ಬಂಗಾಳ ಯುವ ಬ್ಯಾಟರ್ ಅಭಿಮನ್ಯು ಈಶ್ವರನ್, ಋತುರಾಜ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. 10 ವರ್ಷಗಳ ವೃತ್ತಿಜೀವನದಲ್ಲಿ ಈಶ್ವರನ್, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 22 ಶತಕ, 26 ಅರ್ಧಶತಕ ಬಾರಿಸಿದ್ದಾರೆ. 52ಕ್ಕೂ ಹೆಚ್ಚು ರನ್ ಸರಾಸರಿಯಲ್ಲಿ 6567 ರನ್ ಗಳಿಸಿದ್ದಾರೆ. ಡಿಸೆಂಬರ್ 26ರಿಂದ 2 ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗುತ್ತದೆ. ಎರಡನೇ ಟೆಸ್ಟ್ 2024ರ ಜನವರಿ 3 ಮತ್ತು 7ರ ನಡುವೆ ಕೇಪ್ಟೌನ್ನಲ್ಲಿ ನಡೆಯಲಿದೆ.
ಭಾರತ ಪರಿಷ್ಕೃತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್ ಕೀಪರ್).
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ
ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಕೀಗನ್ ಪೀಟರ್‌ಸನ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ.
ಭಾರತ ಎ ತಂಡಕ್ಕೆ ಮೂವರು ಆಯ್ಕೆ
ಮತ್ತೊಂದು ಬೆಳವಣಿಗೆಯಲ್ಲಿ ವೇಗದ ಬೌಲರ್ ಹರ್ಷಿತ್ ರಾಣಾ ಅವರು ಮಂಡಿರಜ್ಜು ಗಾಯದಿಂದಾಗಿ ಡಿಸೆಂಬರ್ 26 ರಂದು ಬೆನೋನಿಯ ವಿಲೋಮೂರ್ ಪಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧದ ನಾಲ್ಕು ದಿನಗಳ ಪಂದ್ಯದಿಂದ ಹೊರಗುಳಿದಿದ್ದಾರೆ. ಭಾರತ ಎ ತಂಡಕ್ಕೆ ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಅವೇಶ್ ಖಾನ್ ಮತ್ತು ರಿಂಕು ಸಿಂಗ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಕುಲ್ದೀಪ್ ಯಾದವ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.
ಸೌತ್ ಆಫ್ರಿಕಾ ಎ ವಿರುದ್ಧದ 4 ದಿನಗಳ ಪಂದ್ಯಕ್ಕೆ ಭಾರತ ಎ ತಂಡ
ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್, ನವದೀಪ್ ಸೈನಿ, ಆಕಾಶ್ ದೀಪ್, ವಿಧ್ವತ್ ಕಾವೇರಪ್ಪ, ಮಾನವ್ ಸುತಾರ್, ರಿಂಕು ಸಿಂಗ್.