ಫಿಟ್ನೆಸ್ನಲ್ಲಿ ಕಿಂಗ್ ಕೊಹ್ಲಿ-ಪಾಂಡ್ಯರನ್ನೇ ಮೀರಿಸಿದ ಗಿಲ್; ಯೋ-ಯೋ ಪರೀಕ್ಷೆಯಲ್ಲಿ ಶುಭ್ಮನ್ ಟಾಪರ್
Aug 26, 2023 02:44 PM IST
ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ.
- Virat Kohli Shubman Gill: ಭಾರತೀಯ ಆಟಗಾರರಿಗೆ ನಡೆಸಿದ ಯೋ-ಯೋ ಟೆಸ್ಟ್ನಲ್ಲಿ ಗಳಿಸಿರುವ ಅಂಕಗಳು ಬಹಿರಂಗಗೊಂಡಿವೆ. ಫಿಟ್ನೆಸ್ ಕಿಂಗ್ ವಿರಾಟ್ ಕೊಹ್ಲಿ, ಟಾಪರ್ ಅಲ್ಲ ಎಂಬುದು ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ.
ಆಗಸ್ಟ್ 30ರಿಂದ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಗೆ (Asia Cup 2023) ಅದ್ಧೂರಿ ಚಾಲನೆ ಸಿಗಲಿದೆ. ಅದಕ್ಕಾಗಿ ಭಾರತ ತಂಡ (Team India) ಭರ್ಜರಿ ಸಿದ್ಧತೆ ನಡೆಸುತ್ತಿದೆ. ಬೆಂಗಳೂರಿನ ಕೆಎಸ್ಸಿಎ ಆಲೂರು ಮೈದಾನದಲ್ಲಿ ಟೂರ್ನಿಗೂ ಮುನ್ನ 1 ವಾರ ಪೂರ್ವ ಸಿದ್ಧತಾ ಶಿಬಿರದಲ್ಲಿ ಭಾಗಿಯಾಗಿದೆ. ಅದರಂತೆ ಏಷ್ಯಾಕಪ್ಗಾಗಿ ಶ್ರೀಲಂಕಾಗೆ ಪ್ರಯಾಣಿಸುವ ಮೊದಲು ಭಾರತ ಆಟಗಾರರು, ಯೋ-ಯೋ ಫಿಟ್ನೆಸ್ ಪರೀಕ್ಷೆಗೆ (Yo-Yo Fitness Test) ಒಳಗಾಗಿದ್ದಾರೆ. ಇದೀಗ ಆಟಗಾರರು ಗಳಿಸಿದ ಅಂಕಗಳು, ಬಹಿರಂಗಗೊಂಡಿವೆ.
ಅಚ್ಚರಿ ಅಂದರೆ ಫಿಟ್ನೆಸ್ ಕಿಂಗ್ ಎನಿಸಿರುವ ವಿರಾಟ್ ಕೊಹ್ಲಿಯನ್ನೇ (Virat Kohli) ಶುಭ್ಮನ್ ಗಿಲ್ (Shubman Gill) ಮೀರಿಸಿದ್ದಾರೆ. ಕೊಹ್ಲಿಗಿಂತಲೂ ಶುಭ್ಮನ್ ಗಿಲ್ ಯೋ-ಯೋ ಟೆಸ್ಟ್ನಲ್ಲಿ ಗರಿಷ್ಠ ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕೂಡ ಉತ್ತಮ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಆದರೆ, ಯಾರೂ ಗಿಲ್ ಪಡೆದಿರುವಷ್ಟು ಅಂಕ ಪಡೆಯಲು ಸಾಧ್ಯವಾಗಿಲ್ಲ.
ಆಟಗಾರರ ಅಂಕ ಹೀಗಿದೆ!
ಯೋ-ಯೋ ಫಿಟ್ನೆಸ್ ಟೆಸ್ಟ್ನಲ್ಲಿ ಅತಿ ಹೆಚ್ಚು ಅಂಕ ಪಡೆದ ಆಟಗಾರ ಶುಭ್ಮನ್ ಎನಿಸಿದ್ದು, ಪರೀಕ್ಷೆಯಲ್ಲಿ 18.7 ಅಂಕ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 17.2 ಪಡೆದಿದ್ದಾರೆ. ರೋಹಿತ್ ಶರ್ಮಾ 16.5 ಅಂಕ ಪಡೆದಿದ್ದಾರೆ. ಉಳಿದ ಆಟಗಾರರು 16.5 ಮತ್ತು 18ರ ನಡುವೆ ಅಂಕ ಗಳಿಸಿದ್ದಾರೆ. ಯೋ-ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ ಸ್ಕೋರ್ 16.5 ಆಗಿದೆ. ಸದ್ಯ ಇನ್ನೂ ಕೆಲವು ಆಟಗಾರರು ಈ ಟೆಸ್ಟ್ನಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಐರ್ಲೆಂಡ್ ಪ್ರವಾಸ ಮುಗಿಸಿ ತಂಡವನ್ನು ಕೂಡಿಕೊಂಡಿರುವ ಜಸ್ಪ್ರಿತ್ ಬುಮ್ರಾ, ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವರು ಇನ್ನೂ ಶೀಘ್ರದಲ್ಲೇ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಕೆಎಲ್ ರಾಹುಲ್, ಈ ಟೆಸ್ಟ್ನಲ್ಲಿ ಪಾಲ್ಗೊಳ್ಳಲಿಲ್ಲ. ಮತ್ತೊಮ್ಮೆ ಸಣ್ಣ ಗಾಯದ ಸಮಸ್ಯೆಗೆ ಸಿಲುಕಿರುವ ರಾಹುಲ್, ಶೀಘ್ರದಲ್ಲೇ ಚೇತರಿಕೆ ಆಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕೊಹ್ಲಿ ವಿರುದ್ಧ ಬಿಸಿಸಿಐ ಗರಂ
ತಮ್ಮ ಯೋ-ಯೋ ಫಿಟ್‌ನೆಸ್ ಟೆಸ್ಟ್ ಸ್ಕೋರ್ ಅನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬಹಿರಂಗಪಡಿಸಿದ ವಿರಾಟ್ ಕೊಹ್ಲಿಗೆ (Virat Kohli) ಬಿಸಿಸಿಐ ಖಡಕ್ ಎಚ್ಚರಿಕೆ ನೀಡಿತ್ತು. ಈ ಟೆಸ್ಟ್ನಲ್ಲಿ ಉತ್ತೀರ್ಣರಾದ ವಿರಾಟ್, ತಾನು ಪಡೆದಿರುವ ಅಂಕಗಳನ್ನು ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಬಹಿರಂಗಪಡಿಸಿದ್ದರು. ಕೊಹ್ಲಿಗೆ ಅಲ್ಲದೆ, ಗೌಪ್ಯ ಮಾಹಿತಿಯ ಅಡಿಯಲ್ಲಿ ಬರುವ ತಮ್ಮ ಯೋ-ಯೋ ಟೆಸ್ಟ್ ಸ್ಕೋರ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡದಂತೆ ಆಟಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಯೋ-ಯೋ ಟೆಸ್ಟ್ ಎಂದರೇನು?
ಇದು ತಂತ್ರಾಂಶ ಆಧಾರಿತ ಪ್ರಕ್ರಿಯೆ. 20 ಮೀಟರ್ ಗುರಿ ಓಡುವ ಗುರಿ ಇರಲಿದೆ. ಆರಂಭ ಹಾಗೂ ಕೊನೆಯ ಗುರಿಯನ್ನು ನಿಗದಿತ ಅವಧಿಯಲ್ಲಿ ಓಡುವ ಮೂಲಕ ಪೂರ್ಣಗೊಳಿಸಬೇಕಿದೆ. ಬೀಪ್ ಆರಂಭದೊಡನೆ ಓಟದ ಆರಂಭ ಹಾಗೂ ಅಂತ್ಯಕ್ಕೆ ಸಮಯ ನಿಗದಿಯಾಗಿರುತ್ತದೆ. ಹಾಗೆಯೇ ಅಂಕಗಳೂ ಇರುತ್ತವೆ. ಈ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದರೆ, 16.1 ರಷ್ಟಿದ್ದ ಉತ್ತೀರ್ಣ ಅಂಕ ಈಗ 16.5ಕ್ಕೆ ಹೆಚ್ಚಿಸಲಾಗಿದೆ.