logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ; ಮೊದಲ 2 ದಿನ ಆಟ ನಡೆಯುವುದೇ ಅನುಮಾನ

ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ; ಮೊದಲ 2 ದಿನ ಆಟ ನಡೆಯುವುದೇ ಅನುಮಾನ

Prasanna Kumar P N HT Kannada

Dec 24, 2023 02:57 PM IST

google News

ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ.

    • South Africa vs India 1st Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಎರಡು ದಿನಗಳಿಗೆ ಮಳೆ ಕಾಡುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ.
ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ.

ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ (South Africa vs India 1st Test) ಡಿಸೆಂಬರ್ 26ರಂದು ಸೆಂಚುರಿಯನ್​ನ ಸೂಪರ್​ಸ್ಪೋರ್ಟ್ಸ್​​ನಲ್ಲಿ ನಡೆಯಲಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸೌತ್ ಆಫ್ರಿಕಾದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲುವಿನ ಮೇಲೆ ಭಾರತ ಕಣ್ಣಿಟ್ಟಿದೆ. 2021-22ರಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಗೆದ್ದು ಐತಿಹಾಸಿಕ ದಾಖಲೆ ಬರೆಯುವ ವಿಶ್ವಾಸದಲ್ಲಿತ್ತು. ಆದರೆ ಉಳಿದ ಎರಡೂ ಪಂದ್ಯಗಳಲ್ಲಿ ಸೋತು ಭರವಸೆ ಛಿದ್ರಗೊಳಿಸಿತ್ತು.

ಟೆಸ್ಟ್ ಸರಣಿ ಮೇಲೆ ಕಣ್ಣು

ಆದರೆ ಈ ಪ್ರವಾಸದಲ್ಲಿ ಅಂತಹ ತಪ್ಪು ನಡೆಯಬಾರದು ಎಂಬ ಕಾರಣಕ್ಕೆ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ಸರಣಿಯನ್ನು 1-1 ರಿಂದ ಸಲಬಲಗೊಳಿಸಿರುವ ಭಾರತ, ಏಕದಿನ ಸರಣಿಯನ್ನು 2-1ರಲ್ಲಿ ಗೆದ್ದುಕೊಂಡಿದೆ. ಇದೀಗ ರೋಹಿತ್ ಶರ್ಮಾ ನೇತೃತ್ವದ ತಂಡವು ರೈನ್​ಬೋ ರಾಷ್ಟ್ರದಲ್ಲಿ ಗೆಲುವಿನ ಸರಣಿಯನ್ನು ಮುಂದುವರಿಸಲು ನೋಡುತ್ತಿದೆ. ಹಾಗಾದರೆ ಹವಾಮಾನ ವರದಿ, ಮುಖಾಮುಖಿ ದಾಖಲೆಯನ್ನು ಈ ಮುಂದಿನಂತೆ ನೋಡೋಣ.

ಹವಾಮಾನ ವರದಿ

ಭಾರತ ಇತಿಹಾಸವನ್ನು ಸೃಷ್ಟಿಸಲು ಕಾಯುತ್ತಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವಿನ ಅನ್ವೇಷಣೆಗೆ ಹವಾಮಾನ ಅಡ್ಡಿ ಉಂಟು ಮಾಡಬಹುದು. ಅಕ್ಯೂವೆದರ್ ಪ್ರಕಾರ, ಟೆಸ್ಟ್‌ನ ಮೊದಲನೇ ದಿನದಂದು 75 ಪ್ರತಿಶತದಷ್ಟು, 2ನೇ ದಿನದಲ್ಲಿ ಶೇ 65ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ. ಮಳೆಯಿಂದ ಮೊದಲೆರಡು ದಿನ ಆಟ ನಡೆಯುವುದೇ ಅನುಮಾನ. 20 ಡಿಗ್ರಿ ಸೆಲ್ಸಿಯಸ್​ಗಿಂತಲೂ ಕಡಿಮೆ ತಾಪಮಾನಕ್ಕೆ ಕುಸಿಯಲಿದೆ. ಆದರೆ 3ನೇ ದಿನದಂದು ಮೋಡ ಕವಿದ ವಾತಾವರಣ ಇರಲಿದ್ದು, ಮಳೆ ಆತಂಕ ಇರುವುದಿಲ್ಲ.

ಪಿಚ್ ರಿಪೋರ್ಟ್

ಇನ್ನು ದಿನ 4 ಮತ್ತು 5ನೇ ದಿನಂದು ಶುಭ್ರ ಆಕಾಶ ಇರಲಿದೆ. ಮೊದಲ ಎರಡು ದಿನಗಳಿಗೆ ಮಳೆ ಅಡ್ಡಿಪಡಿಸಿ ನಿಂತು ಹೋದರೆ, ಮುಂದಿನ ದಿನಗಳಿಂದ ಫಲಿತಾಂಶ ಪಡೆಯುವುದು ತುಂಬಾ ಅಸಾಧ್ಯ. ಹಾಗಾಗಿ ಪಂದ್ಯವು ಡ್ರಾ ಆದರೂ ಅಚ್ಚರಿ ಇಲ್ಲ. ಪಿಚ್ ಮೇಲ್ಮೈಯಲ್ಲಿ ಹುಲ್ಲಿನ ಛಾಯೆಯಿದ್ದು, ವೇಗಿಗಳಿಗೆ ಹೆಚ್ಚು ಸಹಾಯ ಮಾಡುವ ಸಾಧ್ಯತೆಯಿದೆ. ಮೋಡ ಕವಿದ ವಾತಾವರಣವು ಬೌಲರ್‌ಗಳು ಮೇಲುಗೈ ಸಾಧಿಸಲು ಸಹಾಯ ಮಾಡುತ್ತದೆ.

ಉಭಯ ತಂಡಗಳ ಟೆಸ್ಟ್ ಮುಖಾಮುಖಿ

  • ಒಟ್ಟು ಪಂದ್ಯಗಳು - 42
  • ಭಾರತ ಗೆಲುವು - 15
  • ಸೌತ್ ಆಫ್ರಿಕಾ ಗೆಲುವು - 17
  • ಡ್ರಾ ಪಂದ್ಯಗಳು - 10
     

ಕೊಹ್ಲಿ ಮೇಲೆ ನಿರೀಕ್ಷೆ

ಮಳೆ ಇಲ್ಲದಿದ್ದರೆ, ಭಾರತದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಉತ್ತಮ ಸ್ಕೋರ್ ಗಳಿಸುವ ಅಗತ್ಯ ಇದೆ. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 50 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 719 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಮತ್ತೊಂದೆಡೆ ಭಾರತದ ನಾಯಕ ರೋಹಿತ್, ಇಲ್ಲಿ ತಮ್ಮ ಅಂಕಿ-ಅಂಶ ಸುಧಾರಿಸಲು ಎದುರು ನೋಡುತ್ತಿದ್ದಾರೆ. ಹಿಟ್​ಮ್ಯಾನ್ ದಕ್ಷಿಣ ಆಫ್ರಿಕಾದಲ್ಲಿ 4 ಟೆಸ್ಟ್‌ಗಳಲ್ಲಿ ಕೇವಲ 123 ರನ್ ಗಳಿಸಿದ್ದಾರೆ.

ತಂಡದಲ್ಲಿ ಬದಲಾವಣೆ

ಭಾರತ ಟೆಸ್ಟ್ ಸರಣಿಗೆ ತಮ್ಮ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಮೊಹಮ್ಮದ್ ಶಮಿ ಜೊತೆಗೆ ಸರಣಿಯಿಂದ ಹೊರಗುಳಿದ ಋತುರಾಜ್ ಗಾಯಕ್ವಾಡ್ ಬದಲಿಗೆ ಅಭಿಮನ್ಯು ಈಶ್ವರನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಲ್ಲದೆ ಮಾನಸಿಕ ಆಯಾಸದಿಂದ ಇಶಾನ್ ಕಿಶನ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ವಿಕೆಟ್ ಕೀಪರ್​ ಕೆಎಸ್ ಭರತ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ಟೆಸ್ಟ್ ತಂಡ

ರೋಹಿತ್ ಶರ್ಮಾ (ನಾಯಜ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್. ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್ ಕೀಪರ್).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ