logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂದು ಭಾರತ Vs ದಕ್ಷಿಣ ಆಫ್ರಿಕಾ ಎರಡನೇ ಟಿ20; ಆದ್ರೆ ಪಂದ್ಯ 8:30ಕ್ಕೆ ಅಲ್ಲ, ಎಷ್ಟು ಗಂಟೆಗೆ ಆರಂಭ ನೋಡಿ

ಇಂದು ಭಾರತ vs ದಕ್ಷಿಣ ಆಫ್ರಿಕಾ ಎರಡನೇ ಟಿ20; ಆದ್ರೆ ಪಂದ್ಯ 8:30ಕ್ಕೆ ಅಲ್ಲ, ಎಷ್ಟು ಗಂಟೆಗೆ ಆರಂಭ ನೋಡಿ

Jayaraj HT Kannada

Nov 10, 2024 10:47 AM IST

google News

ಭಾರತ vs ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ 8:30ಕ್ಕೆ ಅಲ್ಲ, ಎಷ್ಟು ಗಂಟೆಗೆ ಆರಂಭ ನೋಡಿ

    • ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಲು ಭಾರತ ಕ್ರಿಕೆಟ್‌ ತಂಡ ಎದುರು ನೋಡುತ್ತಿದೆ. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸತತ ವೈಫಲ್ಯ ಅನುಭವಿಸುತ್ತಿರುವುದು‌ ತಂಡ ಆತಂಕಕ್ಕೆ ಕಾರಣವಾಗಿದೆ.
ಭಾರತ vs ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ 8:30ಕ್ಕೆ ಅಲ್ಲ, ಎಷ್ಟು ಗಂಟೆಗೆ ಆರಂಭ ನೋಡಿ
ಭಾರತ vs ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ 8:30ಕ್ಕೆ ಅಲ್ಲ, ಎಷ್ಟು ಗಂಟೆಗೆ ಆರಂಭ ನೋಡಿ (AFP)

ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ತಂಡದ (South Africa vs India) ನಡುವೆ 4 ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಮೊದಲ ಟಿ20 ಪಂದ್ಯವು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯವನ್ನು ಪ್ರವಾಸಿ ಭಾರತ ತಂಡ 61 ರನ್‌ಗಳಿಂದ ಗೆದ್ದಿತು. ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ ಸರಣಿಯಲ್ಲಿ 1-0‌ ಅಂತರದಿಂದ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಪಂದ್ಯ ನವೆಂಬರ್‌ 10ರ ಭಾನುವಾರ ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ದ್ವಿತೀಯ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಲು ಸೂರ್ಯ ಸೇನೆ ಎದುರು ನೋಡುತ್ತಿದೆ. ಈ ಪಂದ್ಯದಲ್ಲೂ ಬಹುತೇಕ ಅದೇ ತಂಡವನ್ನು ಕಣಕ್ಕಿಳಿಸಲಿದೆ. ಆದರೆ, ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸತತ ವೈಫಲ್ಯ ಅನುಭವಿಸುತ್ತಿರುವುದು‌ ತಂಡದ ಆತಂಕಕ್ಕೆ ಕಾರಣವಾಗಿದೆ. ಬದಲಿ ಆರಂಭಿಕ ಆಟಗಾರ ತಂಡದಲ್ಲಿ ಇಲ್ಲದ ಕಾರಣ ಅಭಿಷೇಕ್​ಗೆ ಮತ್ತೊಂದು ಅವಕಾಶ ಸಿಗುವುದರಲ್ಲಿ ಅನುಮಾನವಿಲ್ಲ.

ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಮತ್ತು ರಿಂಕು ಸಿಂಗ್ ಆರನೇ ಕ್ರಮಾಂಕದಲ್ಲಿ ಬರಲಿದ್ದಾರೆ. ಏಳನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಸ್ಪಿನ್ ಆಲ್ ರೌಂಡರ್ ಆಗಿ ಅವಕಾಶ ಪಡೆಯಲಿದ್ದಾರೆ. ತಂಡದಲ್ಲಿರುವ ಬೌಲರ್‌ಗಳು ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ಮತ್ತು ಆವೇಶ್ ಖಾನ್.

ಪಂದ್ಯದ ಸಮಯದಲ್ಲಿ ಬದಲಾವಣೆ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ಒಟ್ಟು 28 ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 16 ಪಂದ್ಯಗಳನ್ನು ಗೆದ್ದುಕೊಂಡಿದ್ದು, ದಕ್ಷಿಣ ಆಫ್ರಿಕಾ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಆಡಿದ 10 ಪಂದ್ಯಗಳಲ್ಲಿ ಭಾರತ 7 ಪಂದ್ಯಗಳನ್ನು ಗೆದ್ದರೆ, ದಕ್ಷಿಣ ಆಫ್ರಿಕಾ 3 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ರಾತ್ರಿ 8.30ಕ್ಕೆ ಆರಂಭವಾಯಿತು. ಆದರೆ ಎರಡನೇ ಪಂದ್ಯ ಒಂದು ಗಂಟೆ ಮುಂಚಿತವಾಗಿ ಸಂಜೆ 7.30 ಕ್ಕೆ ಶುರುವಾಗಲಿದೆ.

ಇನ್ನು ಆಕ್ಯುವೆದರ್ ಪ್ರಕಾರ, ಗ್ಕೆಬರ್ಹಾದಲ್ಲಿ ದಿನದ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಆಕಾಶದಲ್ಲಿ ಹೆಚ್ಚಾಗಿ ಮೋಡ ಕವಿದಿರುವ ಸಾಧ್ಯತೆ ಇದೆ. ಕ್ಲೌಡ್ ಕವರ್ 91 ಪ್ರತಿಶತದವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಸ್ವಿಂಗ್ ಬೌಲಿಂಗ್‌ಗಳಿಗೆ ಸೂಕ್ತವಾಗಿದೆ. ಇದರಿಂದ ಎರಡೂ ತಂಡಗಳ ವೇಗದ ಬೌಲರ್‌ಗಳಿಗೆ ಅನುಕೂಲವಾಗಲಿದೆ.

ಮಧ್ಯಾಹ್ನ ಮಳೆಯ ಸಾಧ್ಯತೆ 84 ಶೇಕಡಾ ಆಗಿದ್ದು, ಸುಮಾರು 4.2 ಮಿಮೀ ಮಳೆಯಾಗುವ ನಿರೀಕ್ಷೆಯಿದೆ. ದಿನದ ನಂತರದ ಭಾಗದಲ್ಲಿ ಕೂಡ ಸ್ವಲ್ಪ ಮಳೆಯಾಗುವ ನಿರೀಕ್ಷೆಯಿದೆ. ಮಳೆ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ಪಂದ್ಯ ಆರಂಭ ತಡವಾಗಬಹುದು.

ವರದಿ: ವಿನಯ್ ಭಟ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ