ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಯಾವ ಸರಣಿಯನ್ನೂ ಗೆಲ್ಲಲ್ಲ; ಆಕಾಶ್ ಚೋಪ್ರಾ ಭವಿಷ್ಯ
Dec 08, 2023 03:08 PM IST
ಆಕಾಶ್ ಚೋಪ್ರಾ.
- India vs South Africa: ಹರಿಣಗಳ ನಾಡಲ್ಲಿ ಭಾರತದ ಪ್ರದರ್ಶನದ ಬಗ್ಗೆ ಮುಕ್ತವಾಗಿ ಹೇಳಿರುವ ಚೋಪ್ರಾ, ದಕ್ಷಿಣ ಆಫ್ರಿಕಾ ತಂಡವೇ ನೆಚ್ಚಿನ ತಂಡವೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವೆ ಡಿಸೆಂಬರ್ 10ರಿಂದ ಎಲ್ಲಾ ಮಾದರಿಯ ಕ್ರಿಕೆಟ್ ಪ್ರಾರಂಭವಾಗಲಿದೆ. ಆದರೆ ಈ ಸರಣಿಗಳಲ್ಲಿ ಭಾರತ ತಂಡವು ಮೇಲುಗೈ ಸಾಧಿಸುವುದಿಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಭವಿಷ್ಯ ನುಡಿದಿದ್ದಾರೆ. ಹರಿಣಗಳ ನಾಡಲ್ಲಿ ಭಾರತದ ಪ್ರದರ್ಶನದ ಬಗ್ಗೆ ಮುಕ್ತವಾಗಿ ಹೇಳಿರುವ ಚೋಪ್ರಾ, ದಕ್ಷಿಣ ಆಫ್ರಿಕಾ ತಂಡವೇ ನೆಚ್ಚಿನ ತಂಡವೆಂದು ಹೇಳಿದ್ದಾರೆ.
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಮೂರು ವಿಭಿನ್ನ ನಾಯಕರೊಂದಿಗೆ ಮೂರು ವಿಭಿನ್ನ ತಂಡಗಳನ್ನು ಪ್ರಕಟಿಸಿದೆ. ಡಿಸೆಂಬರ್ 10ರಿಂದ ಡರ್ಬನ್‌ನಲ್ಲಿ 3 ಟಿ20ಐ ಪಂದ್ಯಗಳನ್ನು ಆಡಲಿರುವ ಭಾರತ, ಡಿಸೆಂಬರ್ 17ರಿಂದ 3 ಏಕದಿನ, ಡಿಸೆಂಬರ್ 26ರಿಂದ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಹಿರಿಯ ಆಟಗಾರರು ಟೆಸ್ಟ್‌ಗೆ ಮರಳಲಿದ್ದಾರೆ.
ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಟಿ20ಐ ಮತ್ತು ಏಕದಿನ ಪಂದ್ಯಗಳಿಂದ ಹೊರಗುಳಿಯಲಿದ್ದರೆ, ಹಾರ್ದಿಕ್ ಪಾಂಡ್ಯ (Hardik Pandya) ಪಾದದ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಟಿ20ಐಗೆ ಸೂರ್ಯಕುಮಾರ್ ಯಾದವ್ (Suryakumar Yadav), ಏಕದಿನಕ್ಕೆ ಕೆಎಲ್ ರಾಹುಲ್ (KL Rahul)ರನ್ನು ನಾಯಕರನ್ನಾಗಿ ಘೋಷಿಸಲಾಗಿದೆ. ರೋಹಿತ್ ಶರ್ಮಾ ಟೆಸ್ಟ್ಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ಸರಣಿ ಆರಂಭಕ್ಕೂ ಮೊದಲೇ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
‘ಭಾರತ ಗೆಲ್ಲುವುದು ಅನುಮಾನ’
ದಕ್ಷಿಣ ಆಫ್ರಿಕಾ ವಿರುದ್ದ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುವ ನಂಬಿಕೆ ನನಗಿಲ್ಲ. ಟಿ20, ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧಿಸುವುದಿಲ್ಲ. ಏಕೆಂದರೆ ಎರಡೂ ಸಿರೀಸ್ಗಳಿಗೂ ಭಾರತದ ಉತ್ತಮ ತಂಡ ಕಣಕ್ಕಿಳಿಯುತ್ತಿಲ್ಲ. ಹಾಗಾಗಿ ಸರಣಿ ಕ್ಲೀನ್ ಸ್ವೀಪ್ ಮಾಡುವುದು ಅಸಂಭವ. ಮತ್ತೊಂದೆಡೆ ಸೌತ್ ಆಫ್ರಿಕಾ ತಂಡದಲ್ಲೂ ಬಲಿಷ್ಠ ಆಟಗಾರರು ಇಲ್ಲ. ಆದರೆ ಅಲ್ಲಿನ ಪರಿಸ್ಥಿತಿಗಳು ಅವರಿಗೆ ಅನುಕೂಲವಾಗಲಿವೆ ಎಂದು ತಿಳಿಸಿದ್ದಾರೆ.
ವೈಟ್ ವಾಶ್ ಮಾಡದಿದ್ದರೂ ಸೌತ್ ಆಫ್ರಿಕಾವೇ ಸರಣಿ ಗೆಲ್ಲಲಿದೆ. ಏಕೆಂದರೆ ಪಿಚ್ಗಳು ಅವರಿಗೆ ಹೆಚ್ಚು ಲಾಭದಾಯಕವಾಗಲಿವೆ. ವಿಶ್ವಕಪ್ನಲ್ಲೂ ಸೌತ್ ಆಫ್ರಿಕಾ ತಂಡವು ಉತ್ತಮ ಗುಣಮಟ್ಟದ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದೆ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸರಣಿಗೂ ಮುನ್ನ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
‘ಸೌತ್ ಆಫ್ರಿಕಾ 5-3ರಲ್ಲಿ ಸರಣಿ ಗೆಲ್ಲುತ್ತೆ’
ಈ ಸಂಪೂರ್ಣ ಸರಣಿಗಳಲ್ಲಿ ನಾನು ದಕ್ಷಿಣ ಆಫ್ರಿಕಾ ತನ್ನ ಫೇವರಿಟ್ ತಂಡವಾಗಿ ನೋಡುತ್ತೇನೆ. ಆದರೆ ಸರಣಿ ಮುಂದುವರೆದಂತೆ ನನ್ನ ಅಭಿಪ್ರಾಯ ತಪ್ಪಾಗಬಹುದು. ನಾನು ಸಹ ನಿಮಗೆ (ಫ್ಯಾನ್ಸ್ಗೆ) ತಪ್ಪಾಗಿ ಕಾಣಬಹುದು. ಆದರೆ, ಹಲವು ಪಂದ್ಯಗಳು ದಕ್ಷಿಣ ಆಫ್ರಿಕಾ ಪರವಾಗಿ ಸಾಗುವುದನ್ನು ನೋಡುತ್ತೇನೆ. ಈ ಮೂರು ಸರಣಿಗಳಲ್ಲಿ 8 ಪಂದ್ಯಗಳು ನಡೆಯಲಿದ್ದು, 5-3 ಅಂತರದಲ್ಲಿ ಸರಣಿ ಗೆದ್ದುಕೊಳ್ಳಲಿದೆ ಆಫ್ರಿಕಾ ಎಂದು ಅಭಿಪ್ರಾಯಪಟ್ಟಿದ್ದಾರೆ.
2021-22ರಲ್ಲಿ ಕೈಗೊಂಡಿದ್ದ ಕೊನೆಯ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಭಾರತ ಅತ್ಯಂತ ಹೀನಾಯ ಪ್ರದರ್ಶನ ನೀಡಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಘೋರ ಪರಾಭವಗೊಂಡಿತ್ತು. ಇನ್ನು ಟೆಸ್ಟ್ ಸರಣಿಯು 1-2 ಅಂತರದಲ್ಲಿ ಕಳೆದುಕೊಂಡಿತು. ಮೊದಲ ಪಂದ್ಯ ಗೆದ್ದರೂ ಉಳಿದ ಪಂದ್ಯಗಳಲ್ಲಿ ಸೋಲು ಕಂಡಿತ್ತು.