ಕೆಕೆಆರ್ ವಿರುದ್ಧ ಅಂಕಿ-ಅಂಶ ನೋಡ್ತಿದ್ರೆ, ಎಸ್ಆರ್ಹೆಚ್ ಕಪ್ ಗೆಲ್ಲೋದೇ ಡೌಟ್; ಫೈನಲ್ನಲ್ಲಿ 'ಸನ್'ರೈಸ್ ಆಗುತ್ತಾ?
May 25, 2024 07:59 PM IST
ಕೆಕೆಆರ್ ವಿರುದ್ಧ ಅಂಕಿ-ಅಂಶ ನೋಡ್ತಿದ್ರೆ, ಎಸ್ಆರ್ಹೆಚ್ ಕಪ್ ಗೆಲ್ಲೋದೇ ಡೌಟ್; ಫೈನಲ್ನಲ್ಲಿ 'ಸನ್'ರೈಸ್ ಆಗುತ್ತಾ?
- SRH records vs KKR: ಐಪಿಎಲ್ ಫೈನಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡುವುದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ರೆಕಾರ್ಡ್ಸ್ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
ರಂಗು ರಂಗಿನ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮೇ 26ರ ಭಾನುವಾರ ಅದ್ಧೂರಿ ತೆರೆ ಬೀಳಲಿದೆ. ಅಂತಿಮ ಹಣಾಹಣಿಯಲ್ಲಿ ಟೇಬಲ್ ಟಾಪರ್ಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು (Kolkata Knight Riders vs Sunrisers Hyderabad) ಮುಖಾಮುಖಿಯಾಗುತ್ತಿವೆ. ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲು ಉಭಯ ತಂಡಗಳು ಭಾರಿ ಕಸರತ್ತು ನಡೆಸುತ್ತಿವೆ. ಆದರೆ, ಐಪಿಎಲ್ನ ಈ ಅಂಕಿ-ಅಂಶ ನೋಡುತ್ತಿದ್ದರೆ, ಪ್ಯಾಟ್ ಕಮಿನ್ಸ್ ಪಡೆ ಕಪ್ ಎತ್ತೋದೇ ಡೌಟ್!
ಹೌದು, ಅಂಕಿ-ಅಂಶಗಳು ಹೇಳುತ್ತಿವೆ, ಶ್ರೇಯಸ್ ಅಯ್ಯರ್ ಪಡೆಯೇ ಚಾಂಪಿಯನ್ ಆಗುವ ಫೇವರಿಟ್ ತಂಡವಾಗಿದೆ. 17 ವರ್ಷಗಳ ನಗದು ಶ್ರೀಮಂತ ಲೀಗ್ ಇತಿಹಾಸದಲ್ಲಿ ಮತ್ತು ಪ್ರಸಕ್ತ ಟೂರ್ನಿಯಲ್ಲಿ ಆರೆಂಜ್ ಆರ್ಮಿಯ ವಿರುದ್ಧ ಪರ್ಪಲ್ ಆರ್ಮಿಯೇ ಮೇಲುಗೈ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುವ ಪಂದ್ಯದಲ್ಲೂ ಶಾರೂಖ್ ಖಾನ್ ಮಾಲೀಕತ್ವದ ಫ್ರಾಂಚೈಸಿ ಮೂರನೇ ಬಾರಿಗೆ ಟ್ರೋಫಿಯೊಂದಿಗೆ ಸಂಭ್ರಮಿಸಲಿದೆ ಎಂದು ಹೇಳಲಾಗ್ತಿದೆ.
ಕೆಕೆಆರ್ 18 ಗೆಲುವು, ಎಸ್ಆರ್ಹೆಚ್ ಬರಿ 9 ಗೆಲುವು
2008 ರಿಂದ 2024ರ ಮೊದಲ ಕ್ವಾಲಿಫೈಯರ್ ತನಕ ಕೋಲ್ಕತ್ತಾ ಮತ್ತು ಹೈದರಾಬಾದ್ ತಂಡಗಳು 27 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಆದರೆ ಸನ್‌ರೈಸರ್ಸ್ ಗೆದ್ದಿರೋದು ಕೇವಲ 9 ಬಾರಿ. ಮತ್ತೊಂದೆಡೆ ನೈಟ್ ರೈಡರ್ಸ್ 18 ಬಾರಿ ಗೆಲುವಿನ ನಗೆ ಬೀರಿದೆ. ಕಳೆದೈದು ಮುಖಾಮುಖಿ ಪಂದ್ಯಗಳಲ್ಲೂ ಕೆಕೆಆರ್ 4-1ರ ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟಾರೆ ಟೂರ್ನಿಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ.
ಪ್ರಸಕ್ತ ಐಪಿಎಲ್ನಲ್ಲೂ ಎರಡನ್ನೂ ಗೆದ್ದಿರುವ ಕೆಕೆಆರ್
ಪ್ರಸಕ್ತ ಆವೃತ್ತಿಯಲ್ಲಿ ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಆದರೆ, ಎರಡು ಬಾರಿಯೂ ಹೈದರಾಬಾದ್ ಸೋಲಿನ ಕಹಿ ಅನುಭವಿಸಿದೆ. ಲೀಗ್ ಪಂದ್ಯದಲ್ಲಿ ಮಾರ್ಚ್ 23ರಂದು ಕೋಲ್ಕತ್ತಾ 4 ರನ್ಗಳಿಂದ ಗೆದ್ದಿತ್ತು. ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಿದ್ದು ಸರಿಯಾಗಿ 2 ತಿಂಗಳ ನಂತರ. ಮೇ 21ರಂದು ನಡೆದ ಕ್ವಾಲಿಫೈಯರ್ನಲ್ಲಿ ಕೆಕೆಆರ್ 8 ವಿಕೆಟ್ಗಳಿಂದ ಗೆದ್ದಿತ್ತು. ಈಗ 3ನೇ ಬಾರಿಗೆ ಫೈನಲ್ನಲ್ಲಿ ಸೆಣಸಾಡಲಿವೆ.
ಚಿದಂಬರಂ ಪಿಚ್ನಲ್ಲೂ ಕೆಟ್ಟದಾಗಿದೆ ಎಸ್ಆರ್ಹೆಚ್ ದಾಖಲೆ
ಫೈನಲ್ ಪಂದ್ಯ ನಡೆಯುವ ಚೆಪಾಕ್ ಮೈದಾನದಲ್ಲೂ ಎಸ್ಆರ್ಹೆಚ್ ಗೆಲುವಿನ ದಾಖಲೆ ಅತ್ಯಂತ ಕೆಟ್ಟದಾಗಿದೆ. ಹಾಗಂತ ಕೆಕೆಆರ್ ದಾಖಲೆಯೂ ಅಷ್ಟೇನು ಚೆನ್ನಾಗಿಲ್ಲ. ಆದರೆ, ಹೈದರಾಬಾದ್ ತಂಡಕ್ಕೆ ಹೋಲಿಸಿದರೆ, ಪರವಾಗಿಲ್ಲ. ಚಿದಂಬರಂ ಮೈದಾನದಲ್ಲಿ ಆಡಿದ 10 ಪಂದ್ಯದಲ್ಲಿ ಆರೆಂಜ್ ಆರ್ಮಿ ಗೆದ್ದಿರೋದು ಒಂದೇ ಪಂದ್ಯ. 9 ಸೋಲು ಕಂಡಿದೆ. ಕೆಕೆಆರ್ ಇದೇ ಪಿಚ್ನಲ್ಲಿ 14 ಪಂದ್ಯ ಆಡಿದ್ದು ನಾಲ್ಕರಲ್ಲಿ ಗೆದ್ದು, 10ರಲ್ಲಿ ಸೋಲು ಕಂಡಿದೆ.
ಕೆಕೆಆರ್ vs ಎಸ್ಆರ್ಹೆಚ್ ಪ್ಲೇಆಫ್ ರೆಕಾರ್ಡ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಇದುವರೆಗೆ ಐಪಿಎಲ್ ಪ್ಲೇಆಫ್‌ಗಳು ಅಥವಾ ನಾಕ್‌ಔಟ್ ಹಂತಗಳಲ್ಲಿ 4 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಎರಡೂ ತಂಡಗಳು ತಲಾ 2ರಲ್ಲಿ (2-2) ಗೆದ್ದು ಸಮಬಲಗೊಂಡಿವೆ. ಕೆಕೆಆರ್ ಈ ಋತುವಿನ ಮೊದಲ ಕ್ವಾಲಿಫೈಯರ್ ಮತ್ತು 2017ರ ಎಲಿಮಿನೇಟರ್ನಲ್ಲಿ ಗೆದ್ದಿತ್ತು. ಎಸ್ಆರ್ಹೆಚ್ 2016ರ ಎಲಿಮಿನೇಟರ್ ಮತ್ತು 2018 ಕ್ವಾಲಿಫೈಯರ್ 2 ಗೆದ್ದುಕೊಂಡಿತ್ತು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)