ದತ್ತಾಜಿರಾವ್ ಗಾಯಕ್ವಾಡ್ಗೆ ಗೌರವ ಸಲ್ಲಿಸಲು ಮೂರು ದಿನ ಬೇಕಿತ್ತೇ; ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಸುನಿಲ್ ಗವಾಸ್ಕರ್ ಆಕ್ರೋಶ
Feb 17, 2024 02:54 PM IST
ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಸುನಿಲ್ ಗವಾಸ್ಕರ್ ಆಕ್ರೋಶ
- Sunil Gavaskar : ಫೆಬ್ರವರಿ 13ರಂದು ನಿಧನರಾದ ಮಾಜಿ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ಅವರಿಗೆ ಗೌರವ ಸಲ್ಲಿಸಲು ಮೂರು ದಿನಗಳು ಬೇಕಾಯಿತೇ ಎಂದು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಭಾರತದ ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ (Dattajirao Gaekwad) ಅವರು ಫೆಬ್ರವರಿ 13ರಂದು ತಮ್ಮ 95ನೇ ವಯಸ್ಸಿನಲ್ಲಿ ನಿಧನರಾದರು. ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ನ ಇಂಗ್ಲೆಂಡ್ ವಿರುದ್ಧದ ಮೂರನೇ ದಿನದಾಟದಂದು ದತ್ತಾಜಿರಾವ್ ಅವರಿಗೆ ಗೌರವ ಸಲ್ಲಿಸಲು ಭಾರತದ ಕ್ರಿಕೆಟಿಗರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದರು.
ಆದರೆ ಈ ವಿಚಾರವಾಗಿ ಭಾರತ ತಂಡದ ಮ್ಯಾನೇಜ್ಮೆಂಟ್ ನಡೆಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಕ್ವಾಡ್ ನಿಧನದ 2 ದಿನಗಳ ನಂತರ ಫೆಬ್ರವರಿ 15ರಂದು 3ನೇ ಟೆಸ್ಟ್ ಪ್ರಾರಂಭವಾಯಿತು. ಆದರೆ ಮೊದಲ ದಿನದಂದು ಭಾರತೀಯ ಕ್ರಿಕೆಟಿಗರು ಕಪ್ಪು ಪಟ್ಯಾಟಿ ಧರಿಸಿರಲಿಲ್ಲ. ಎರಡನೇ ದಿನವೂ ಸಹ ಕಪ್ಪುಪಟ್ಟಿ ಧರಿಸಿರಲಿಲ್ಲ.
ಶನಿವಾರವಷ್ಟೇ ರೋಹಿತ್ ಪಡೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿಯಲಿದೆ ಎಂದು ಬಿಸಿಸಿಐ ಘೋಷಿಸಿತ್ತು. ಇತ್ತೀಚೆಗೆ ನಿಧನರಾದ ಭಾರತದ ಮಾಜಿ ನಾಯಕ ಮತ್ತು ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ಅವರ ಸ್ಮರಣಾರ್ಥ ಟೀಮ್ ಇಂಡಿಯಾ ಕಪ್ಪು ಪಟ್ಟಿ ಧರಿಸಲಿದೆ ಎಂದು ಟೆಸ್ಟ್ ಪಂದ್ಯದ 3ನೇ ದಿನದ ಆಟ ಪ್ರಾರಂಭವಾಗುವ ಮೊದಲು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಗೌರವ ಸಲ್ಲಿಸಲು ಮೂರು ದಿನ ಬೇಕಿತ್ತೇ ಎಂದ ಗವಾಸ್ಕರ್
ಆದರೆ, ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ ನಡೆಗೆ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ದಿನವೇ ಈ ಕೆಲಸ ಮಾಡಬೇಕಿತ್ತು ಎಂದು ಕಾಮೆಂಟರಿ ಮಾಡುತ್ತಿದ್ದ ವೇಳೆ ಅವರು ಹೇಳಿದರು. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗಾಯಕ್ವಾಡ್ ಅವರು ಭಾರತ ತಂಡದ ನಾಯಕರಾಗಿದ್ದರು. ಆದರೆ ಆ ಸರಣಿಯಲ್ಲಿ 4 ಪಂದ್ಯಗಳನ್ನು ಗಾಯಕ್ವಾಡ್ ಮುನ್ನಡೆಸಿದರೆ, ಉಳಿದ ಪಂದ್ಯವನ್ನು ಪಂಕಜ್ ರಾಯ್ ಮುನ್ನಡೆಸಿದ್ದರು. ಅವರಿಗೆ ಗೌರವ ಸಲ್ಲಿಸಲು 3 ದಿನ ಬೇಕಿತ್ತೇ ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.
ಗಾಯಕ್ವಾಡ್ ನಿಧನರಾದ ಕೆಲವೇ ಗಂಟೆಗಳ ನಂತರ ಬಿಸಿಸಿಐ ಸಂತಾಪ ವ್ಯಕ್ತಪಡಿಸಿತ್ತು. ದತ್ತಾಜಿರಾವ್ 11 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, 1959ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ತಂಡ ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲೇ 1957-58ರ ಋತುವಿನ ಫೈನಲ್ನಲ್ಲಿ ಸರ್ವೀಸಸ್ ಅನ್ನು ಸೋಲಿಸಿ ಬರೋಡಾ ರಣಜಿ ಟ್ರೋಫಿ ಗೆದ್ದಿತು. ರಣಜಿ ಟ್ರೋಫಿಯಲ್ಲಿ, ಗಾಯಕ್ವಾಡ್ 1947 ರಿಂದ 1961 ರವರೆಗೆ ಬರೋಡಾವನ್ನು ಪ್ರತಿನಿಧಿಸಿದ್ದರು.
ಗಾಯಕ್ವಾಡ್ ಅವರು 110 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳ 172 ಇನ್ನಿಂಗ್ಸ್ಗಳಲ್ಲಿ 5788 ರನ್ ಕಲೆ ಹಾಕಿದ್ದಾರೆ. 17 ಶತಕ, 23 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 249 ರನ್ ಆಗಿದೆ. ಇನ್ನು 25 ವಿಕೆಟ್ ಕೂಡ ಪಡೆದಿರುವುದು ವಿಶೇಷ. ಭಾರತದ ತಂಡದ 11 ಟೆಸ್ಟ್ಗಳಲ್ಲಿ ಕಣಕ್ಕಿಳಿದಿದ್ದ ಗಾಯಕ್ವಾಡ್, 1 ಅರ್ಧಶತಕ ಸೇರಿ 350 ರನ್ ಕಲೆ ಹಾಕಿದ್ದಾರೆ.