logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೂರ್ಯ ಅನಭಿಷಿಕ್ತ ದೊರೆ, ರಿಂಕು ಇನ್ನೂ ಬೇಕು; ದಕ್ಷಿಣ ಆಫ್ರಿಕಾ ಟಿ20 ಸರಣಿಯ ಪ್ರಮುಖಾಂಶಗಳಿವು

ಸೂರ್ಯ ಅನಭಿಷಿಕ್ತ ದೊರೆ, ರಿಂಕು ಇನ್ನೂ ಬೇಕು; ದಕ್ಷಿಣ ಆಫ್ರಿಕಾ ಟಿ20 ಸರಣಿಯ ಪ್ರಮುಖಾಂಶಗಳಿವು

Jayaraj HT Kannada

Dec 15, 2023 08:50 PM IST

google News

ಸೂರ್ಯಕುಮಾರ್‌ ಯಾದವ್‌ ಮತ್ತು ಐಡೆನ್‌ ಮರ್ಕ್ರಾಮ್

    • India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕಲಿತ ಪಾಠಗಳು ಮತ್ತು ಸಾಧಿಸಿದ ಅಂಶಗಳು ಹೀಗಿವೆ.
ಸೂರ್ಯಕುಮಾರ್‌ ಯಾದವ್‌ ಮತ್ತು ಐಡೆನ್‌ ಮರ್ಕ್ರಾಮ್
ಸೂರ್ಯಕುಮಾರ್‌ ಯಾದವ್‌ ಮತ್ತು ಐಡೆನ್‌ ಮರ್ಕ್ರಾಮ್ (AFP)

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತವು 106 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಉಭಯ ದೇಶಗಳು ಸರಣಿಯನ್ನು ಹಂಚಿಕೊಂಡವು.

ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ದೃಷ್ಟಿಯಿಂದ ಈ ಸರಣಿಯು ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ವಿಶ್ವಕಪ್‌ಗೂ ಮುನ್ನ ಭಾರತ ಆಡುತ್ತಿರುವ ಮೂರು ಸರಣಿಗಳಲ್ಲಿ ಇದು ಕೂಡಾ ಒಂದು. ಹೀಗಾಗಿ ಮಹತ್ವದ ವಿಶ್ವಕಪ್‌ಗೆ ತಂಡವನ್ನು ಅಳೆದು ತೂಗಲು ಈ ಎಲ್ಲಾ ಸರಣಿಗಳು ಬಿಸಿಸಿಐ ಮತ್ತು ಆಟಗಾರರ ಪಾಲಿಗೆ ನಿರ್ಣಾಯಕವಾಗಿವೆ.

ಇದನ್ನೂ ಓದಿ | ನಡೆಯಲು ಆಗ್ತಿದೆ; ಪಾದದ ಗಾಯದ ಕುರಿತು ಅಪ್ಡೇಟ್ ನೀಡಿದ ಸೂರ್ಯಕುಮಾರ್ ಯಾದವ್

ಈ ಸರಣಿಯ ನಂತರ ಮತ್ತು ಐಪಿಎಲ್‌ಗೆ ಮುಂಚಿತವಾಗಿ ಭಾರತವು ಏಕೈಕ ದ್ವಿಪಕ್ಷೀಯ ಟಿ20 ಸರಣಿ ಆಡಲಿದೆ. ಜನವರಿ 11ರಂದು ಅಫ್ಘಾನಿಸ್ತಾನ ವಿರುದ್ಧದ ಚುಟುಕು ಸರಣಿ ಆರಂಭವಾಗಲಿದೆ. ಸದ್ಯ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಭಾರತದ ಪಾಲಿಗೆ ಕಲಿಕೆಗೆ ಕೆಲವೊಂದು ಪಾಠಗಳು ದೊರೆತಿವೆ. ಇದರೊಂದಿಗೆ ಟೀಮ್‌ ಇಂಡಿಯಾ ಕಂಡುಕೊಂಡ ಕೆಲವು ನಿರ್ಣಾಯಕ ಅಂಶಗಳು ಯಾವುವು ಎಂಬುದನ್ನು ನೋಡೋಣ.

ಟಿ20 ಕ್ರಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹೆಸರೇ ಅನ್ವರ್ಥ

ಭಾರತ ಏಕದಿನ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಅವರ ಸ್ಥಾನವನ್ನು ಆರಂಭದಿಂದಲೂ ಪ್ರಶ್ನಿಸಲಾಗುತ್ತಿದೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಹಾಗಿಲ್ಲ. ಚುಟುಕು ಕ್ರಿಕೆಟ್‌ನಲ್ಲಿ ನಂಬರ್‌ ವನ್‌ ಶ್ರೇಯಾಂಕ ಪಡೆದಿರುವ ಭಾರತದ ಸ್ಟ್ಯಾಂಡ್ ಇನ್ ನಾಯಕ, ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ. ತವರಿನಲ್ಲಿ ಮಾತ್ರವಲ್ಲದೆ ಭಾರತದಿಂದ ಹೊರಕ್ಕೂ ಅವರ ಬ್ಯಾಟ್‌ ಸದ್ದು ಮಾಡುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯ ಆಡಿದ ಸೂರ್ಯ, ಸತತ ಎರಡು ಪಂದ್ಯಗಳಲ್ಲೂ ಅಬ್ಬರಿಸಿದರು. ಅದು ಕೂಡಾ ನಾಯಕನಾಗಿ. ಈ ಹಿಂದೆ ಹರಿಣಗಳ ನಾಡಿನಲ್ಲಿ ಕೇವಲ ಒಂದು ಏಕದಿನ ಪಂದ್ಯ ಆಡಿದ್ದ ಅವರು, ಇದೀಗ ಎರಡು ಪಂದ್ಯಗಳ ಚುಟುಕು ಸರಣಿಯಲ್ಲಿ ಅತ್ಯಧಿಕ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. 169.56 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ ಬರೋಬ್ಬರಿ 156 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ನಾಲ್ಕನೇ ಟಿ20 ಶತಕ ಕೂಡಾ ಸೇರಿದೆ. ಹೀಗಾಗಿ ಮುಂದಿನ ವಿಶ್ವಕಪ್‌ಗೆ ಸೂರ್ಯ ಮೊದಲ ಆಯ್ಕೆ ಎನ್ನುವುದರಲ್ಲಿ ಅನುಮಾನವಿಲ್ಲ.

ರಿಂಕು ಸಿಂಗ್ = ಬೆಸ್ಟ್‌ ಫಿನಿಶರ್

ಸರಣಿಯ ಎರಡನೇ ಪಂದ್ಯದಲ್ಲಿ, ಭಾರತದ ಆರಂಭಿಕರು ರನ್‌ ಕಲೆಹಾಕಲು ವಿಫಲರಾದಾಗ, ತಂಡಕ್ಕೆ ಆಪದ್ಬಾಂಧವನಾಗಿ ಬಂದವರು ರಿಂಕು ಸಿಂಗ್. ತಿಲಕ್ ವರ್ಮಾ ಔಟಾದ ಬಳಿಕ ನಾಯಕ ಸೂರ್ಯಕುಮಾರ್‌ ಜೊತೆ ಸೇರಿ ಅವರು ಇನ್ನಿಂಗ್ಸ್ ಕಟ್ಟಿದ ಪರಿ ಬಲು ಸೊಗಸು. ಪಂದ್ಯದಲ್ಲಿ ಮೊದಲ ಟಿ20 ಅರ್ಧಶತಕ ಗಳಿಸಿದ ಅವರು, ಅಂತಿಮವಾಗಿ 39 ಎಸೆತಗಳಲ್ಲಿ ಅಮೂಲ್ಯ 68 ರನ್ ಗಳಿಸಿ ಅಜೇಯರಾಗಿ ಉಳಿದರು. ಆ ಬಳಿಕ ಮೂರನೆ ಪಂದ್ಯದಲ್ಲಿ ಸ್ಕೈ ಮತ್ತು ಯಶಸ್ವಿ ಜೈಸ್ವಾಲ್ ನಡುವಿನ 112 ರನ್ ಜೊತೆಯಾಟದ ಬಳಿಕ ಬಂದ ರಿಂಕು, ಸ್ಕೈ ಜೊತೆಗೆ 47 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ, 10 ಎಸೆತಗಳಲ್ಲಿ 14 ರನ್ ಮಾತ್ರ ಗಳಿಸಿದರು. ಹೀಗಂತ ಅವರ ಸಾಮರ್ಥ್ಯವನ್ನು ಅಲ್ಲಗಳೆಯಲು ಆದೀತೇ? ಖಂಡಿತಾ ಇಲ್ಲ.

ಇದನ್ನೂ ಓದಿ | ಸೌತ್ ಆಫ್ರಿಕಾ ಟೆಸ್ಟ್​ ಸರಣಿಗೆ ಭಾರತ ತಂಡದಲ್ಲಿ ಸಿಗದ ಅವಕಾಶ; ಮತ್ತೆ ಕೌಂಟಿಯತ್ತ ಮುಖ ಮಾಡಿದ ಪೂಜಾರ

ಕುಲ್ದೀಪ್ ಯಾದವ್ ಸ್ಥಾನ ಆಬಾಧಿತ

ಆಸೀಸ್‌ ವಿರುದ್ಧದ ಸರಣಿ ಬಳಿಕ ಟಿ20 ಬೌಲಿಂಗ್‌ ಶ್ರೇಯಾಂಕದಲ್ಲಿ ನಂಬರ್‌ 1 ಸ್ಥಾನಕ್ಕೆ ಏರಿದ್ದ ರವಿ ಬಿಷ್ಣೋಯ್ ಅವರನ್ನು ಬದಿಗಿಟ್ಟು ಕುಲ್ದೀಪ್ ಯಾದವ್‌ಗೆ‌ ತಂಡದಲ್ಲಿ ಸ್ಥಾನ ನೀಡಲಾಯ್ತು. ರವಿಗಿಂತ ಹೆಚ್ಚು ಅನುಭವಿಯಾದ ಕುಲ್ದೀಪ್‌ ಅವರೇ ಹರಿಣಗಳನ್ನು ಕಟ್ಟಿಹಾಕಲು ಸೂಕ್ತ ವ್ಯಕ್ತಿ ಎಂದು ಮ್ಯಾನೇಜ್‌ಮೆಂಟ್‌ ನಿರ್ಧರಿಸಿತು. ಅದಕ್ಕೆ ತಕ್ಕನಾಗಿ ಅವರು ಬೌಲಿಂಗ್‌ ಮಾಡಿದರು. ಎರಡನೇ ಟಿ20 ಪಂದ್ಯದಲ್ಲಿ ಮೂರು ಓವರ್‌ಗಳಲ್ಲಿ 26 ರನ್‌ ಬಿಟ್ಟುಕೊಟ್ಟರು. ಅಲ್ಲದೆ ರೀಜಾ ಹೆಂಡ್ರಿಕ್ಸ್‌ ವಿಕೆಟ್‌ ಪಡೆದರು. ಮೂರನೇ ಟಿ20ಯಲ್ಲಿ ಜೊಹಾನ್ಸ್‌ಬರ್ಗ್‌ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡಿತು. ಕೇವಲ 17 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದು ಎಡಗೈ ಸ್ಪಿನ್ನರ್‌ ಅಬ್ಬರಿಸಿದರು.

ಕಾಡಿದ ಬುಮ್ರಾ, ಶಮಿ ಅನುಪಸ್ಥಿತಿ

ಭಾರತದ ವೇಗದ ಬೌಲಿಂಗ್‌ ನೀರಸವಾಯ್ತು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್‌ ಶಮಿ ಉಪಸ್ಥಿತಿ ತಂಡಕ್ಕೆ ಅಗತ್ಯವಿತ್ತು. ಎರಡನೇ ಟಿ20 ಪಂದ್ಯದಲ್ಲಿ ಮುಖೇಶ್ ಕುಮಾರ್ 11.33ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿದರು. ಅರ್ಷ‌ದೀಪ್ ಸಿಂಗ್ 2 ಓವರ್‌ಗಳಲ್ಲಿ 15.50ರ ಎಕಾನಮಿ ದಾಖಲಿಸಿದರು. ಮೊಹಮ್ಮದ್ ಸಿರಾಜ್ ಕೂಡಾ ದುಬಾರಿಯಾದರು. ಟಿ20 ವಿಶ್ವಕಪ್‌ನಲ್ಲಿ ಪ್ರಮುಖ ವೇಗಿ ಬುಮ್ರಾ ತಂಡದ ಪ್ರಮುಖ ಬೌಲರ್‌ ಆಗಲಿದ್ದಾರೆ. ಸದ್ಯದ ಸರಣಿಯಲ್ಲಿರುವ ಮೂವರು ವೇಗಿಗಳಲ್ಲಿ ಕನಿಷ್ಠ ಒಬ್ಬರು ಹೊರಗುಳಿಯಲಿದ್ದಾರೆ. ಮತ್ತೊಂದೆಡೆ ಶಮಿ ಕೂಡಾ ಪ್ರಮುಖರಾಗಿ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ