2003ರ ಬಳಿಕ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ಫೈನಲ್ ಫೈಟ್; 20 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳುವುದೇ ಭಾರತ?
Nov 17, 2023 06:30 AM IST
2003ರ ಬಳಿಕ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ಫೈನಲ್ ಫೈಟ್.
- India vs Australia CWC Final: ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ. 2003ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ಏಕದಿನ ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಗೆದ್ದ ಆಸ್ಟ್ರೇಲಿಯಾ 8ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. 1975, 1987, 1996, 1999, 2003, 2007, 2015 ಮತ್ತು 2023ರಲ್ಲಿ ಪ್ರಶಸ್ತಿ ಸುತ್ತಿಗೇರಿದೆ. ಈ ಹಿಂದೆ 7 ಬಾರಿ ಆಡಿದ್ದ ಫೈನಲ್ನಲ್ಲಿ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆಸ್ಟ್ರೇಲಿಯಾ, ಇದೀಗ 6ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ನವೆಂಬರ್ 19ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೆಣಸಾಟ ನಡೆಸಲಿದೆ.
2003ರ ನಂತರ ಭಾರತ-ಆಸ್ಟ್ರೇಲಿಯಾ ಮುಖಾಮುಖಿ
ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಈ ಹಿಂದೆ 2003ರ ಅಂದರೆ 20 ವರ್ಷಗಳ ನಂತರ ವಿಶ್ವಕಪ್ನಲ್ಲಿ ಮತ್ತೊಮ್ಮೆ ಎದುರಾಗುತ್ತಿವೆ. ಆದರೆ ಅಂದು ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸೀಸ್ ವಿಶ್ವ ಕಿರೀಟಕ್ಕೆ ಮುತ್ತಿಕ್ಕಿತು.
125 ರನ್ಗಳ ಸೋಲನುಭವಿಸಿದ್ದ ಭಾರತ
ಸೌತ್ ಆಫ್ರಿಕಾದ ಜೋಹಾನ್ಸ್ಬರ್ಗ್ನ ವಾಂಡರರ್ಸ್ ಮೈದಾನದಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ಬೃಹತ್ ಮೊತ್ತ ಕಲೆ ಹಾಕಿತ್ತು. ರಿಕಿ ಪಾಂಟಿಂಗ್ ಭರ್ಜರಿ 140 ರನ್ ಸಿಡಿಸಿ ಭಾರತೀಯ ಬೌಲರ್ಗಳಿಗೆ ಮುಳುವಾಗಿದ್ದರು. 50 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 359 ರನ್ ಕಲೆ ಹಾಕಿತ್ತು. ಆದರೆ ಈ ಗುರಿ ಬೆನ್ನಟ್ಟಿದ್ದ ಭಾರತ 234 ರನ್ಗಳಿಗೆ ಆಲೌಟ್ ಆಗಿತ್ತು. 125 ರನ್ಗಳ ಜಯ ಸಾಧಿಸಿ ಅಂದು 3ನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿತ್ತು.
ಅಂದು ಆಸೀಸ್, ಇಂದು ಭಾರತ?
2003ರಲ್ಲಿ ಆಸ್ಟ್ರೇಲಿಯಾ ಒಂದೂ ಪಂದ್ಯವನ್ನು ಸೋಲದೆ, ಕಪ್ ಗೆದ್ದಿತ್ತು. ಲೀಗ್ನಿಂದ ಫೈನಲ್ವರೆಗೂ ಆಡಿದ್ದ 11 ಪಂದ್ಯಗಳಲ್ಲೂ ಜಯಿಸಿ ಚಾಂಪಿಯನ್ ಆಗಿತ್ತು. ಮತ್ತೊಂದು ಸಂಗತಿ ಅಂದು ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿತ್ತು. ಪ್ರಸ್ತುತ ವಿಶ್ವಕಪ್ನ ಲೀಗ್ನಲ್ಲಿ ಭಾರತ ಸೆಮಿಫೈನಲ್ವರೆಗೂ ಅಜೇಯ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಆಸೀಸ್ ತಂಡವನ್ನು ಸೋಲಿಸಿರುವ ಭಾರತ 2003ರ ಸೇಡು ತೀರಿಸಿಕೊಂಡು ಲೆಕ್ಕಾ ಚುಪ್ತಾ ಮಾಡಲು ಸಜ್ಜಾಗಿದೆ.
2011ರ ಕ್ವಾರ್ಟರ್ ಫೈನಲ್ನಲ್ಲಿ ಸೋಲಿಸಿದ್ದ ಭಾರತ
2011ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದ ಭಾರತ ಸೆಮಿಫೈನಲ್ಗೆ ಲಗ್ಗೆ ಇಟ್ಟಿತ್ತು. ಇನ್ನು 2015 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ತಂಡವನ್ನು ಆಸೀಸ್ ಸೋಲಿಸಿ ಫೈನಲ್ ಪ್ರವೇಶಿಸಿತ್ತು. 2019ರ ವಿಶ್ವಕಪ್ನ ಲೀಗ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿ ಭಾರತ ಜಯ ಸಾಧಿಸಿತ್ತು. ಪ್ರಸ್ತುತ ಟೂರ್ನಿಯ ಲೀಗ್ನಲ್ಲೂ ಕಾಂಗರೂ ಪಡೆ ಎದುರು ಮೆನ್ ಬ್ಲೂ ಜಯಭೇರಿ ಬಾರಿಸಿದೆ.
2011ರ ನಂತರ ಭಾರತ ಫೈನಲ್ಗೆ
ಟೀಮ್ ಇಂಡಿಯಾ 12 ವರ್ಷಗಳ ನಂತರ ಫೈನಲ್ಗೆ ಲಗ್ಗೆ ಇಟ್ಟಿದೆ. 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ವಿಶ್ವಕಿರೀಟಕ್ಕೆ ಮುತ್ತಿಕ್ಕಿದ್ದ ಭಾರತ, ಇದೀಗ ಮತ್ತೊಮ್ಮೆ 140 ಕೋಟಿ ಭಾರತೀಯ ಕನಸು ನನಸು ಮಾಡಲು ಹೊರಟಿದೆ. ಆ ಮೂಲಕ ಭಾರತಕ್ಕೆ 3ನೇ ಏಕದಿನ ವಿಶ್ವಕಪ್ ಗೆದ್ದುಕೊಡುವ ವಿಶ್ವಾಸದಲ್ಲಿದೆ. 1983ರಲ್ಲಿ ಮೊದಲ ಬಾರಿಗೆ ಭಾರತ ವಿಶ್ವಕಪ್ ಗೆದ್ದಿತ್ತು. 2019ರಲ್ಲಿ ಭಾರತ ಸೆಮಿಫೈನಲ್ನಲ್ಲಿ ಸೋತು ಹೊರ ನಡೆದಿತ್ತು.
2015ರ ಬಳಿಕ ಮತ್ತೊಮ್ಮೆ ಫೈನಲ್ಗೆ
ಕೊನೆಯ ಬಾರಿಗೆ ಆಸ್ಟ್ರೇಲಿಯಾ ಫೈನಲ್ ತಲುಪಿದ್ದು 2015ರ ವಿಶ್ವಕಪ್ನಲ್ಲಿ. ಅಂದು ಸೆಮಿಫೈನಲ್ನಲ್ಲಿ ಭಾರತವನ್ನು ಸೋಲಿಸಿದ್ದ ಕಾಂಗರೂ ಫೈನಲ್ ತಲುಪಿತ್ತು. ಫೈನಲ್ನಲ್ಲಿ ನ್ಯೂಜಿಲೆಂಡ್ಗೆ ಆಘಾತ ನೀಡಿದ್ದ ಯಲ್ಲೋ ಆರ್ಮಿ, 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ, 2019ರ ವಿಶ್ವಕಪ್ನಲ್ಲಿ ಆಸೀಸ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರು ಸೋತು ಹೊರ ಬಿದ್ದಿತ್ತು.
ಫೈನಲ್ನಲ್ಲಿ ಭಾರತವೇ ಗೆಲ್ಲುವ ಸಾಧ್ಯತೆ
ಈ ಬಾರಿ ಭಾರತವೇ ವಿಶ್ವಕಪ್ ಗೆಲ್ಲಲು ಹಲವು ಕಾರಣಗಳಿವೆ. ತಂಡದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂಲಕ ಆಲ್ರೌಂಡ್ ಪ್ರದರ್ಶನ ನೀಡುತ್ತಿರುವ ಭಾರತ ಪ್ರಶಸ್ತಿ ಗೆಲ್ಲಲು ಅರ್ಹವಾಗಿದೆ. ಅದರಲ್ಲೂ ತವರಿನ ಲಾಭ ಪಡೆಯಲಿರುವ ಮೆನ್ ಇನ್ ಬ್ಲೂ, ಆಸ್ಟ್ರೇಲಿಯಾ ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಲೀಗ್ನಲ್ಲಿ ಸೋಲಿಸಿರುವ ವಿಶ್ವಾಸದಲ್ಲಿರುವ ಭಾರತ, ಫೈನಲ್ನಲ್ಲೂ ಸೋಲಿಸಿ ಅಜೇಯದೊಂದಿಗೆ ವಿಶ್ವಕಿರೀಟಕ್ಕೆ ಮುತ್ತಿಕ್ಕುವ ವಿಶ್ವಾಸದಲ್ಲಿದೆ.