IND vs SL: ಬೇಕಂತಲೇ ಸೂಪರ್ ಓವರ್ ಮಾಡಿಸಿದ್ರಾ ಸೂರ್ಯಕುಮಾರ್ ಯಾದವ್? ವೈರಲ್ ಆಗುತ್ತಿದೆ ಈ ವಿಡಿಯೋ
Jul 31, 2024 09:13 AM IST
ಬೇಕಂತಲೇ ಸೂಪರ್ ಓವರ್ ಮಾಡಿಸಿದ್ರಾ ಸೂರ್ಯಕುಮಾರ್ ಯಾದವ್? ವೈರಲ್ ಆಗುತ್ತಿದೆ ಈ ವಿಡಿಯೋ
- Suryakumar Yadav: ಭಾರತ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದ ಕೊನೆಯ ಓವರ್‌ನಲ್ಲಿ ಶ್ರೀಲಂಕಾಗೆ ಗೆಲ್ಲಲು ಕೇವಲ ಆರು ರನ್ಗಳು ಬೇಕಾಗಿದ್ದವು. ಆಗ ಬೌಲಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಮಾಡಿದ ಆ ಒಂದು ತಪ್ಪಿನಿಂದ ಪಂದ್ಯ ಸೂಪರ್ ಓವರ್ ಕಡೆಗೆ ಸಾಗಿತು.
ಶ್ರೀಲಂಕಾ ವಿರುದ್ಧದ 3ನೇ ಟಿ20ಐ ಪಂದ್ಯದಲ್ಲೂ ಗೆಲ್ಲುವ ಮೂಲಕ ಭಾರತ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್-ಸ್ವೀಪ್ ಮಾಡಿದೆ. ಟೀಮ್ ಇಂಡಿಯಾ ನೀಡಿದ್ದ 138 ರನ್‌ಗಳ ಸಾಧಾರಣ ಬೆನ್ನಟ್ಟಿದ ಶ್ರೀಲಂಕಾ 16ನೇ ಓವರ್‌ನಲ್ಲಿ 110 ರನ್ಗೆ 1 ವಿಕೆಟ್ ಕಳೆದುಕೊಂಡು ಗೆಲುವಿನತ್ತ ಸಾಗುತ್ತಿತ್ತು. ಆದರೆ, ದಿಢೀರ್ ಕುಸಿತ ಕಂಡ ಪರಿಣಾಮ ಪಂದ್ಯ ಟೈ ಆಯಿತು. ನಂತರ ಸೂಪರ್ ಓವರ್‌ನಲ್ಲಿ ಭಾರತ ಗೆದ್ದಿತು. ಪಿಚ್ ಸ್ಪಿನ್ನರ್ಗಳಿಗೆ ಸಹಾಯ ಮಾಡುತ್ತಿದ್ದ ಕಾರಣ ಅಂತಿಮ ಹಂತದಲ್ಲಿ ಅಚ್ಚರಿ ಎನ್ನುವಂತೆ ರಿಂಕು ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಬೌಲಿಂಗ್ ಮಾಡಿದರು. ಆದರೆ, 20ನೇ ಓವರ್ ಅನ್ನು ಬೌಲ್ ಮಾಡುವಾಗ ಸೂರ್ಯ ಬಹುದೊಡ್ಡ ತಪ್ಪು ಮಾಡಿದರು.
ಕೊನೆಯ ಓವರ್‌ನಲ್ಲಿ ಶ್ರೀಲಂಕಾಗೆ ಗೆಲ್ಲಲು ಕೇವಲ 6 ರನ್ಗಳು ಬೇಕಾಗಿದ್ದವು. ಮೊದಲ ಎಸೆತ ಡಾಟ್ ಆಯಿತು. ನಂತರದ ಎರಡು ಎಸೆತಗಳಲ್ಲಿ ಕಮಿಂದು ಮೆಂಡಿಸ್ ಮತ್ತು ಮಹೇಶ್ ತೀಕ್ಷಣ ಅವರ ವಿಕೆಟ್‌ಗಳನ್ನು ಸೂರ್ಯ ಕಬಳಿಸಿದರು. ಅಸಿತ ಫೆರ್ನಾಂಡೋ ನಾಲ್ಕನೇ ಎಸೆತದಲ್ಲಿ ಸಿಂಗಲ್ ಗಳಿಸಿದರು, 5ನೇ ಎಸೆತದಲ್ಲಿ 2 ರನ್ ಬಂದವು. ಹೀಗಾಗಿ ಲಂಕಾ ಗೆಲುವಿಗೆ ಕೊನೆಯ ಎಸೆತದಲ್ಲಿ 3 ರನ್ಗಳು ಬೇಕಾದವು. 6ನೇ ಎಸೆತದಲ್ಲಿ ವಿಕ್ರಮಸಿಂಘೆ ಎರಡು ರನ್ ಗಳಿಸಿ ಪಂದ್ಯವನ್ನು ಸೂಪರ್ ಓವರ್‌ಗೆ ತಳ್ಳಿದರು. ಇಲ್ಲಿ ಸೂರ್ಯ ಮಾಡಿದ ತಪ್ಪು ಕೂಡ ಸೂಪರ್ ಓವರ್‌ಗೆ ಕಾರಣವಾಯಿತು.
ಅಂತಿಮ ಓವರ್‌ನ ಕೊನೆಯ ಎಸೆತವನ್ನು, ವಿಕ್ರಮಸಿಂಘೆ ಅವರು ಲಾಂಗ್ ಆಫ್ ಕಡೆಗೆ ಹೊಡೆದರು ಮತ್ತು ಎರಡು ರನ್‌ಗೆಂದು ಓಡಿದರು. ಗಿಲ್ ಅವರು ನಾನ್-ಸ್ಟ್ರೈಕರ್ ಕಡೆಗೆ ಥ್ರೋ ಮಾಡಿದರು. ಆಗ ಬ್ಯಾಟರ್ ಅಸಿತಾ ಫೆರ್ನಾಂಡೋ ಕ್ರೀಸ್‌ನಿಂದ ದೂರವಿದ್ದರು. ಆಗ ಚೆಂಡು ಕೈ ಸೇರಿದ್ದರೂ ಸೂರ್ಯ ರನೌಟ್ ಮಾಡುವ ಅವಕಾಶ ಇದ್ದರೂ ವಿಕೆಟ್ ಕೀಪರ್ ಕಡೆಗೆ ಚೆಂಡನ್ನು ಎಸೆದರು. ಆ ಹೊತ್ತಿಗೆ ಲಂಕಾ ಬ್ಯಾಟರ್ಗಳು ಎರಡು ರನ್ ಪೂರೈಸಿದ್ದರು. ಒಂದ್ವೇಳೆ ಸೂರ್ಯ ನಾನ್-ಸ್ಟ್ರೈಕರ್ನಲ್ಲಿ ರನೌಟ್ ಮಾಡಿದ್ದರೆ ಒಂದು ರನ್ ಉಳಿಸಬಹುದಿತ್ತು ಮತ್ತು ಭಾರತ ಜಯ ಸಾಧಿಸುತ್ತಿತ್ತು. ಆದಾಗ್ಯೂ, ಹೆಚ್ಚುವರಿ ಒಂದು ರನ್ ಬಂದ ಪರಿಣಾಮ ಆಟ ಸೂಪರ್ ಓವರ್‌ಗೆ ಸಾಗಿತು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸೂರ್ಯ ಏಕೆ ಹೀಗೆ ಮಾಡಿದ್ರು?, ಬೇಕಂತಲೇ ಮಾಡಿದ್ರಾ? ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಸೂರ್ಯಕುಮಾರ್ ಕೊನೆಯ ಓವರ್ ಬೌಲಿಂಗ್ ಮಾಡಿದ ವಿಡಿಯೋ
ಏತನ್ಮಧ್ಯೆ, ಶ್ರೀಲಂಕಾ ಸೂಪರ್ ಓವರ್‌ನಲ್ಲಿ ಭಾರತಕ್ಕೆ ಕಠಿಣ ಸವಾಲನ್ನು ನೀಡಲಿಲ್ಲ. ಆತಿಥೇಯರನ್ನು ಕೇವಲ ಎರಡು ರನ್‌ಗಳಿಗೆ ಆಲೌಟ್ ಮಾಡಲಾಯಿತು. ಭಾರತವು ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸುವ ಮೂಲಕ ಈ ಗುರಿಯನ್ನು ಬೆನ್ನಟ್ಟಿತು.
ಬ್ಯಾಟರ್ಗಳಿಗೆ ಕಷ್ಟಕರವಾದ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಶುಭ್ಮನ್ ಗಿಲ್ 39, ರಿಯಾನ್ ಪರಾಗ್ 26 ಮತ್ತು ವಾಷಿಂಗ್ಟನ್ ಸುಂದರ್ 25 ರನ್ ಗಳಿಸಿದರು. ಲಂಕಾ ಪರ ಮಹೀಶ್ ತೀಕ್ಷಣ 3 ವಿಕೆಟ್ ಕಿತ್ತರು. ಲಂಕಾ ಕೂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಕುಸಲ್ ಪೆರೆರಾ 46, ಕುಸಲ್ ಮೆಂಡಿಸ್ 43 ಮತ್ತು ನಿಸ್ಸಂಕಾ 26 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳ ಸ್ಕೋರ್ ಎರಡಂಕಿ ದಾಟಲಿಲ್ಲ. ಭಾರತ ಪರ ಸುಂದರ್, ಬಿಷ್ಣೋಯ್, ರಿಂಕು ಮತ್ತು ನಾಯಕ ಸೂರ್ಯ ತಲಾ 2 ವಿಕೆಟ್ ಪಡೆದರು.
(ವರದಿ: ವಿನಯ್ ಭಟ್)
ಇದನ್ನೂ ಓದಿ: ಅಂದು ಬೌಲರ್ಸ್, ಇಂದು ಬ್ಯಾಟರ್ಸ್; ಟಿ20 ವಿಶ್ವಕಪ್ ಫೈನಲ್ ನೆನಪಿಸಿದ ಭಾರತ vs ಶ್ರೀಲಂಕಾ 3ನೇ ಟಿ20 ಪಂದ್ಯ