ಅಂದು ಬೌಲರ್ಸ್​, ಇಂದು ಬ್ಯಾಟರ್ಸ್;​ ಟಿ20 ವಿಶ್ವಕಪ್ ಫೈನಲ್ ನೆನಪಿಸಿದ ಭಾರತ vs ಶ್ರೀಲಂಕಾ 3ನೇ ಟಿ20 ಪಂದ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂದು ಬೌಲರ್ಸ್​, ಇಂದು ಬ್ಯಾಟರ್ಸ್;​ ಟಿ20 ವಿಶ್ವಕಪ್ ಫೈನಲ್ ನೆನಪಿಸಿದ ಭಾರತ Vs ಶ್ರೀಲಂಕಾ 3ನೇ ಟಿ20 ಪಂದ್ಯ

ಅಂದು ಬೌಲರ್ಸ್​, ಇಂದು ಬ್ಯಾಟರ್ಸ್;​ ಟಿ20 ವಿಶ್ವಕಪ್ ಫೈನಲ್ ನೆನಪಿಸಿದ ಭಾರತ vs ಶ್ರೀಲಂಕಾ 3ನೇ ಟಿ20 ಪಂದ್ಯ

India vs Sri Lanka 3rd T20I: ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ಭಾರತ ತಂಡವು ಸೂಪರ್ ಓವರ್​​ನಲ್ಲಿ ರೋಚಕ ಗೆಲುವು ಸಾಧಿಸಿದೆ.

ಅಂದು ಬೌಲರ್ಸ್​, ಇಂದು ಬ್ಯಾಟರ್ಸ್;​ ಟಿ20 ವಿಶ್ವಕಪ್ ಫೈನಲ್ ನೆನಪಿಸಿದ ಭಾರತ  vs ಶ್ರೀಲಂಕಾ 3ನೇ ಟಿ20 ಪಂದ್ಯ
ಅಂದು ಬೌಲರ್ಸ್​, ಇಂದು ಬ್ಯಾಟರ್ಸ್;​ ಟಿ20 ವಿಶ್ವಕಪ್ ಫೈನಲ್ ನೆನಪಿಸಿದ ಭಾರತ vs ಶ್ರೀಲಂಕಾ 3ನೇ ಟಿ20 ಪಂದ್ಯ

ಕೊನೆಯ 30 ಎಸೆತಗಳಿಗೆ 30 ರನ್​, ಕೈಯಲ್ಲಿ 9 ವಿಕೆಟ್, ತವರಿನ ಮೈದಾನ, ಕ್ರೀಸ್​ನಲ್ಲಿ ಪ್ರಮುಖ ಆಟಗಾರರು. ಆದರೆ ಗೆದ್ದಿದ್ದು ಸೋಲುವುದು ಕಾಯಂ ಎಂದೆಂದುಕೊಂಡಿದ್ದ ಭಾರತ ತಂಡ. ಹೌದು, ಅತಿ ಹೆಚ್ಚು ರೋಚಕತೆ ಸೃಷ್ಟಿಸಿದ್ದ ಶ್ರೀಲಂಕಾ ವಿರುದ್ಧದ 3ನೇ ಟಿ20ಐ ಪಂದ್ಯದಲ್ಲೂ ಭಾರತ ತಂಡ ಗೆದ್ದು ಬೀಗಿದೆ. ಆತಿಥೇಯರು ಗೆಲ್ಲುವ ಪಂದ್ಯ ಕೈಚೆಲ್ಲಿದರು. ಅದು ಕೂಡ ಡೆತ್​ ಓವರ್ಸ್​​ನಲ್ಲಿ ಬೌಲಿಂಗ್ ಮಾಡಿದ ಬ್ಯಾಟರ್ಸ್​ನಿಂದ! ಇದು ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್​​ ಪಂದ್ಯವನ್ನು ನೆನಪಿಸಿತು.

ಪಲ್ಲೆಕೆಲ್ಲೆ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಸಾಧಾರಣ ಮೊತ್ತ ಕಲೆ ಹಾಕಿತು. ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಬ್ಯಾಟರ್ಸ್​ ನಿರಾಸೆ ಮೂಡಿಸಿದರು. ಹೀಗಾಗಿ, ತನ್ನ ಪಾಲಿನ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಗಳಿಸಿದ್ದು 139 ರನ್. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭದೊಂದಿಗೆ ಗೆಲುವಿನ ದಡ ಸೇರುವ ವಿಶ್ವಾಸ ಪಡೆಯಿತಾದರೂ ಕೊನೆಯಲ್ಲಿ ಆಘಾತಕಾರಿ ಕುಸಿತದ ಕಾರಣದಿಂದ ಟೈ ಸಾಧಿಸಿತು. ನಂತರ ಸೂಪರ್ ಓವರ್​​ನಲ್ಲಿ ಶರಣಾಯಿತು.

ಪಂದ್ಯವನ್ನು ಸೂಪರ್​​ಗೆ ತಂದಿದ್ದು ಸೂರ್ಯ-ರಿಂಕು

ಕೊನೆಯ 2 ಓವರ್​ಗಳಲ್ಲಿ ಲಂಕಾ ಗೆಲುವಿಗೆ ಕೇವಲ 9 ರನ್ ಬೇಕಿತ್ತು. ಈ ವೇಳೆ ಅಚ್ಚರಿಯಂತೆ ಬೌಲಿಂಗ್ ಮಾಡಿದ ರಿಂಕು ಸಿಂಗ್ ಮತ್ತು ಸೂರ್ಯಕುಮಾರ್ ಬಿಟ್ಟು ಕೊಟ್ಟಿದ್ದು 8 ರನ್ ಮಾತ್ರ. 19ನೇ ಓವರ್​​ನಲ್ಲಿ ರಿಂಕು 3 ರನ್ ನೀಡಿ 2 ವಿಕೆಟ್ ಪಡೆದರೆ, ಅಂತಿಮ ಓವರ್​​ನಲ್ಲಿ ಸೂರ್ಯ 5 ರನ್ ಕೊಟ್ಟು 2 ವಿಕೆಟ್ ಕಿತ್ತರು. ಹೀಗಾಗಿ, ಪಂದ್ಯ ಟೈ ಆಯಿತು. ನಂತರ ಸೂಪರ್​​ ಓವರ್​​ನಲ್ಲಿ ಲಂಕಾ, 2 ರನ್​ ಗಳಿಸಿ ಆಲೌಟ್ ಆಯಿತು. ನಂತರ ಭಾರತ ಬೌಂಡರಿ ಸಿಡಿಸಿ ಗೆದ್ದು ಸರಣಿಯನ್ನು ವೈಟ್ ವಾಶ್ ಮಾಡಿಕೊಂಡಿತು.

30 ಎಸೆತಗಳಿಗೆ 30 ರನ್ ಬೇಕಿತ್ತು

ಗುರಿ ಬೆನ್ನಟ್ಟಿದ ಲಂಕಾ ಉತ್ತಮ ಆರಂಭ ಪಡೆಯಿತು. 8.5 ಓವರ್​​ಗಳಲ್ಲಿ 58 ರನ್ ಗಳಿಸಿತು. ಪಾಥುಮ್ ನಿಸ್ಸಾಂಕ (26) ಔಟಾದ ಬೆನ್ನಲ್ಲೇ ಕುಸಾಲ್ ಮೆಂಡೀಸ್ ಮತ್ತು ಕುಸಾಲ್ ಪೆರೇರಾ ಉತ್ತಮ ಜೊತೆಯಾಟವಾಡಿದರು. ಒತ್ತಡ ಮುಕ್ತರಾಗಿ ಬ್ಯಾಟ್ ಬೀಸಿದರು. ಹೀಗಾಗಿ ಕೊನೆಯ 30 ಎಸೆತಗಳಲ್ಲಿ 30 ರನ್​ ಬೇಕಾಗುವಂತೆ ಮಾಡಿ, ತಂಡಕ್ಕೆ ಗೆಲುವಿನ ಕಾಣಿಕೆ ನೀಡಲು ಸಜ್ಜಾಗಿದ್ದರು. ಆದರೆ 16ನೇ ಓವರ್​​ನಲ್ಲಿ ದಾಳಿಗಿಳಿದ ರವಿ ಬಿಷ್ಣೋಯ್, 43 ರನ್ ಗಳಿಸಿದ್ದ ಮೆಂಡೀಸ್​ರನ್ನು ಹೊರ ದಬ್ಬಿದರು.

2ನೇ ವಿಕೆಟ್​ಗೆ 52 ರನ್ ಪಾಲುದಾರಿಕೆ ಬಂದಿತ್ತು. ಆದರೆ ಅಲ್ಲಿಂದ ಪವಾಡ ಎಂಬಂತೆ ಕುಸಿತ ಆರಂಭವಾಯಿತು. ಮರು ಓವರ್​​ನಲ್ಲಿ ಸುಂದರ್​ ಸ್ಪಿನ್​ಗೆ ಒದ್ದಾಡಿದ ಚರಿತ್ ಅಸಲಂಕಾ, ವನಿಂದು ಹಸರಂಗ ಹೊರ ನಡೆದರು. ಇದು ಭಾರತದ ಡಗೌಟ್​ನಲ್ಲಿ ಗೆಲುವಿನ ಭರವಸೆ ಚಿಗುರಿಸಿತು. ಆದರೆ 18ನೇ ಓವರ್​​ನಲ್ಲಿ ಖಲೀಲ್ 12 ರನ್ ನೀಡಿ​ ತೀವ್ರ ದುಬಾರಿಯಾಯಿತು. 5 ವೈಡ್ ಸಮೇತ 12 ರನ್ ನೀಡಿದರು. ಆದರೆ ಕೊನೆಯ ಎರಡು ಓವರ್​​ಗಳಲ್ಲಿ ಸೂರ್ಯ, ರಿಂಕು ಪವಾಡವನ್ನೇ ಸೃಷ್ಟಿಸಿಬಿಟ್ಟರು.

ವಿಶ್ವಕಪ್ ಫೈನಲ್ ನೆನಪಿಸಿದ 3ನೇ ಟಿ20ಐ

ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಸೌತ್​ ಆಫ್ರಿಕಾ ತಂಡವು ಇದೇ ತಂಡವು ಇಂತಹದ್ದೇ ಸಂದರ್ಭ ಎದುರಿಸಿತ್ತು. 30 ಎಸೆತಗಳಲ್ಲಿ ಗೆಲುವಿಗೆ 30 ರನ್ ಬೇಕಿತ್ತು. ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್ ಅವರಂತಹ ಘಟಾನುಘಟಿ ಆಟಗಾರರೇ ಇದ್ದರು. ಆದರೆ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ದೀಪ್ ಅಂದು ಪವಾಡ ನಡೆಸಿ ರೋಚಕ 7 ರನ್​ಗಳ ಜಯ ತಂದಿದ್ದಲ್ಲೆ, 2ನೇ ವಿಶ್ವಕಪ್ ಗೆಲುವಿಗೂ ಕಾರಣರಾಗಿದ್ದರು.

ಅಂದು ಬೌಲರ್ಸ್​ ಇಂದು ಬ್ಯಾಟರ್ಸ್​

ಟಿ20 ವಿಶ್ವಕಪ್ ಫೈನಲ್​​ನಲ್ಲಿ ಟೀಮ್ ಇಂಡಿಯಾ ಪರ ಡೆತ್​ ಓವರ್ಸ್​​ನಲ್ಲಿ ಬೌಲಿಂಗ್ ಮಾಡಿದ್ದು ಸ್ಪೆಷಲಿಸ್ಟ್ ಬೌಲರ್​​ಗಳು. ಆದರೆ, ಲಂಕಾ ವಿರುದ್ಧದ 3ನೇ ಟಿ20ಐನ ಡೆತ್ ಓವರ್​​ಗಳಲ್ಲಿ ಬೌಲಿಂಗ್ ಮಾಡಿದ್ದು ಬ್ಯಾಟರ್​​ಗಳು ಎಂಬುದು ವಿಶೇಷ.

Whats_app_banner