ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ, ನಾನು ಇದ್ದಿದ್ದರೆ..: ವರದಿಗಾರರ ವಿರುದ್ಧ ವೀರೇಂದ್ರ ಸೆಹ್ವಾಗ್ ಕೆಂಡ
Jun 27, 2024 08:50 PM IST
ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಇದ್ದಿದ್ದರೆ..: ವರದಿಗಾರರ ವಿರುದ್ಧ ವೀರೇಂದ್ರ ಸೆಹ್ವಾಗ್ ಕೆಂಡ
- Virender Sehwag: ಅರ್ಷದೀಪ್ ಸಿಂಗ್ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಇಂಜಮಾಮ್-ಉಲ್-ಹಕ್ ಆರೋಪಿಸಿದ್ದರು. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಸಂಬಂಧಿಸಿ ವೀರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಭಾರತ ತಂಡದ ಬೌಲರ್ ಅರ್ಷದೀಪ್ ಸಿಂಗ್ ಚೆಂಡು ವಿರೂಪಗೊಳಿಸಿದ್ದಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಮಾಡಿದ್ದ ಆರೋಪಗಳನ್ನು ನಾಯಕ ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಆಸೀಸ್ ವಿರುದ್ಧದ ಪಂದ್ಯದಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ನಿರ್ಣಾಯಕ 3 ವಿಕೆಟ್ ಪಡೆದಿದ್ದರು. ಆ ಮೂಲಕ 205 ರನ್ಗಳ ಗುರಿಯನ್ನು ರಕ್ಷಿಸಿಕೊಳ್ಳಲು ನೆರವಾಗಿದ್ದರು.
ಪಾಕಿಸ್ತಾನದ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಇಂಜಮಾಮ್, ಅರ್ಷದೀಪ್ ಬಾಲ್ ಟ್ಯಾಂಪರಿಂಗ್ ನಡೆಸಿದ್ದಾರೆ. ಅರ್ಷದೀಪ್ ಬೌಲಿಂಗ್ ಮಾಡುವಾಗ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿತ್ತು. ಚೆಂಡು ವಿರೂಪಗೊಳಿಸುವ ಮೂಲಕ ಭಾರತ ಮೋಸದಾಟವಾಡಿದೆ. ವೇಗಿಗೆ ಸಹಾಯ ಮಾಡಲು ಭಾರತ ಚೆಂಡಿನ ಮೇಲೆ ಕಾನೂನುಬಾಹಿರವಾಗಿ ಕೆಲಸ ಮಾಡಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಇಂಜಮಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಷದೀಪ್ 15ನೇ ಓವರ್ ಎಸೆಯುತ್ತಿದ್ದಾಗ ರಿವರ್ಸ್ ಸ್ವಿಂಗ್ ಆಗಿತ್ತು. ಆದರೆ ಅಂಪೈರ್ಗಳು ಇದನ್ನು ಗಮನಿಸಲೇ ಇಲ್ಲ. 15ನೇ ಓವರ್ ಎಸೆದಾಗ ಚೆಂಡು ಸ್ವಿಂಗ್ ಆಗುತ್ತದೆ ಎಂದರೆ ಗಮನಿಸಲೇಬೇಕು. 12 ಮತ್ತು 13 ಓವರ್ಗಳಲ್ಲಿ ಚೆಂಡು ಹೇಗೆ ಸ್ವಿಂಗ್ ಆಗಲು ಸಾಧ್ಯ. ಪಾಕಿಸ್ತಾನದ ಬೌಲರ್ಗಳು ಈ ರೀತಿ ಸ್ವಿಂಗ್ ಮಾಡಿದ್ದರೆ, ಕೋಲಾಹಲ ಉಂಟಾಗುತ್ತಿತ್ತು. ಆದರೆ ಅರ್ಷದೀಪ್ ಹೀಗೆ ಸ್ವಿಂಗ್ ಮಾಡಿದ್ದಾರೆ ಅಂದರೆ ನಂಬಲು ಸಾಧ್ಯವಿಲ್ಲ. ಬಾಲ್ ಟ್ಯಾಂಪರಿಂಗ್ ನಡೆಸಿದರೆ ಮಾತ್ರ ಹೀಗೆ ಸ್ವಿಂಗ್ ಆಗಲು ಸಾಧ್ಯ ಎಂದು ಇಂಜಮಾಮ್ ಗಂಭೀರವಾಗಿ ಆರೋಪಿಸಿದ್ದರು.
ತಿರುಗೇಟು ನೀಡಿದ್ದ ರೋಹಿತ್ ಶರ್ಮಾ
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ರೋಹಿತ್ ಶರ್ಮಾ, ಆರೋಪಗಳನ್ನು ತಳ್ಳಿ ಹಾಕಿದ್ದಲ್ಲದೆ, ತಿರುಗೇಟು ನೀಡಿದ್ದಾರೆ. ಈ ಬಗ್ಗೆ ನಾನು ಈಗ ಏನು ಹೇಳಲಿ? ಇಲ್ಲಿ ಬಿಸಿ ಮತ್ತು ಒಣ ಪಿಚ್ಗಳಿವೆ. ಚೆಂಡು ಸ್ವಯಂಚಾಲಿತವಾಗಿ ಸ್ವಿಂಗ್ ಆಗುತ್ತದೆ. ಇದು ನಮ್ಮದು ಮಾತ್ರವಲ್ಲ, ಎಲ್ಲಾ ತಂಡಗಳಿಗೂ ಅನ್ವಯವಾಗುತ್ತಿದೆ. ಎಲ್ಲಾ ತಂಡಗಳ ಬೌಲರ್ಗಳು ರಿವರ್ಸ್ ಸ್ವಿಂಗ್ ಮಾಡುತ್ತಿದ್ದಾರೆ. ನಾವೇನು ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾದಲ್ಲಿ ಆಡುತ್ತಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಕ್ತ ಮನಸ್ಸು ತೆರೆದು ನೋಡಬೇಕು ಎಂದು ರೋಹಿತ್ ಹೇಳಿದ್ದಾರೆ.
ಈ ಕಠಿಣ ಪ್ರತಿಕ್ರಿಯೆಯ ಹೊರತಾಗಿಯೂ, ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಪತ್ರಿಕಾಗೋಷ್ಠಿಯಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಹ್ವಾಗ್ ಪ್ರತಿಕ್ರಿಯೆ ಪತ್ರಿಕಾಗೋಷ್ಠಿಯಲ್ಲಿ ಇಂಜಮಾಮ್-ಉಲ್-ಹಕ್ ಅವರನ್ನು ಮಾಧ್ಯಮ ಪ್ರತಿನಿಧಿಯೊಬ್ಬರು ಉಲ್ಲೇಖಿಸಿದ ಬಗ್ಗೆ ಸೆಹ್ವಾಗ್ ಕಿಡಿಕಾರಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರನ ಪ್ರಕಾರ, ಇದು ವಿವಾದವನ್ನು ಸೃಷ್ಟಿಸುವ ಪ್ರಯತ್ನವಾಗಿದೆ.
ನಾನಿದ್ದಿದ್ದರೆ…
ಯಾರನ್ನಾದರೂ ಉಲ್ಲೇಖಿಸುವುದು ಮತ್ತು ಇತರರ ಅಭಿಪ್ರಾಯ ಕೇಳುವುದು ವರದಿಗಾರನ ಕೆಲಸವಲ್ಲ. ಇದು ತಪ್ಪು. ನಿಮಗೆ ನಿಮ್ಮದೇ ಆದ ಪ್ರಶ್ನೆ ಇಲ್ಲವೇ? ಬೇರೊಬ್ಬರ ಹೇಳಿಕೆಗೆ ನೀವು ಉತ್ತರವನ್ನು ಬಯಸುತ್ತೀರಿ. ನೀವು ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ. ನಾನು ಇದ್ದಿದ್ದರೆ ಉತ್ತರಿಸುತ್ತಿರಲಿಲ್ಲ ಎಂದು ಸೆಹ್ವಾಗ್ ಕ್ರಿಕ್ಬಜ್ಗೆ ತಿಳಿಸಿದರು. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಫೈನಲ್ ಸ್ಥಾನಕ್ಕಾಗಿ ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ. ಅಫ್ಘಾನಿಸ್ತಾನವನ್ನು 9 ವಿಕೆಟ್ ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ ತಂಡ ಫೈನಲ್ ಪ್ರವೇಶಿಸಿದೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ