ಚೊಚ್ಚಲ ವಿಶ್ವಕಪ್ ಫೈನಲ್ ಪ್ರವೇಶಿಸಿ ಹಲವು ವಿಶ್ವದಾಖಲೆ ನಿರ್ಮಿಸಿದ ಸೌತ್ ಆಫ್ರಿಕಾ; ಇಲ್ಲಿದೆ ಅವುಗಳ ಪಟ್ಟಿ
South Africa World Records: ಟಿ20 ವಿಶ್ವಕಪ್ 2024 ಮೊದಲ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೌತ್ ಆಫ್ರಿಕಾ 9 ವಿಕೆಟ್ಗಳ ಗೆಲುವು ಸಾಧಿಸಿ ಚೊಚ್ಚಲ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಹಲವು ವಿಶ್ವದಾಖಲೆ ನಿರ್ಮಿಸಿದೆ.
ಕ್ರಿಕೆಟ್ ಇತಿಹಾಸದಲ್ಲಿ ಸೌತ್ ಆಫ್ರಿಕಾ ಕ್ರಿಕೆಟ್ ತಂಡ (South Africa Cricket Team) ಹೊಸ ಚರಿತ್ರೆ ಸೃಷ್ಟಿಸಿತು. ಐಸಿಸಿ ವಿಶ್ವಕಪ್ಗಳಲ್ಲಿ (ICC World Cup) ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಿದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ 9 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದ ಆಫ್ರಿಕಾ, ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಿತು. ಸೆಮೀಸ್ನಲ್ಲಿ ವಿಜಯೋತ್ಸವ ಆಚರಿಸಿದ್ದಲ್ಲದೆ, ವಿಶ್ವದಾಖಲೆಗಳನ್ನು ನಿರ್ಮಿಸಿದೆ.
ಲೀಗ್ ಮತ್ತು ಸೂಪರ್-8 ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಫ್ಘನ್ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಅಲ್ಲದೆ, ಇಲ್ಲೂ ಉತ್ತಮ ಪ್ರದರ್ಶನ ತೋರಿ ಫೈನಲ್ಗೇರುವ ಕನಸು ಕಂಡಿತ್ತು. ಆದರೆ, ರಶೀದ್ ಪಡೆಯ ಕನಸನ್ನು ಸೌತ್ ಆಫ್ರಿಕಾ ಭಗ್ನಗೊಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘನ್, 11.5 ಓವರ್ಗಳಲ್ಲಿ ಕೇವಲ 56 ರನ್ ಗಳಿಸಿ ಆಲೌಟ್ ಆಯಿತು. ಈ ಸುಲಭ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ 8.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತು.
ಐಸಿಸಿ ವಿಶ್ವಕಪ್ ಸೆಮಿಫೈನಲ್ಗಳಲ್ಲಿ ಸೌತ್ ಆಫ್ರಿಕಾ
ಐಸಿಸಿ ವಿಶ್ವಕಪ್ಗಳಲ್ಲಿ (ಟಿ20 ಹಾಗೂ ಏಕದಿನ ವಿಶ್ವಕಪ್) ಒಟ್ಟು 8 ಸೆಮಿಫೈನಲ್ ಪಂದ್ಯಗಳನ್ನು ಆಡಿದೆ. ಈ ಪೈಕಿ 6 ಸೋಲುಗಳನ್ನು ಕಂಡಿದೆ. ಇನ್ನೊಂದು ಪಂದ್ಯದಲ್ಲಿ 1999ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೈ ಆಗಿತ್ತು. ಆದರೆ ಡಿಎಲ್ಎಸ್ ಅನ್ವಯದಡಿ ಆಸೀಸ್ ಗೆದ್ದು ಬೀಗಿತ್ತು. ಸತತ 7 ಸೋಲುಗಳ ಬಳಿಕ 8ನೇ ಸೆಮಿಫೈನಲ್ನಲ್ಲಿ ಸೌತ್ ಆಫ್ರಿಕಾ ಗೆದ್ದು ಫೈನಲ್ ಪ್ರವೇಶಿಸಿದೆ.
ಟಿ20 ವಿಶ್ವಕಪ್ನಲ್ಲಿ ಸತತ ಪಂದ್ಯಗಳನ್ನು ಗೆದ್ದ ತಂಡಗಳು
8* - ಸೌತ್ ಆಫ್ರಿಕಾ (2024) - ಫೈನಲ್ ಪಂದ್ಯ ಗೆದ್ದರೆ ಹೊಸ ಇತಿಹಾಸ
8 - ಆಸ್ಟ್ರೇಲಿಯಾ (2022-2024)
7 - ಇಂಗ್ಲೆಂಡ್ (2010-2012)
7 - ಟೀಮ್ ಇಂಡಿಯಾ (2012-2014)
ಟಿ20ಐಗಳಲ್ಲಿ ದಕ್ಷಿಣ ಆಫ್ರಿಕಾದ ಸುದೀರ್ಘ ಗೆಲುವುಗಳು
2024ರ ಟಿ20 ವಿಶ್ವಕಪ್ನಲ್ಲಿ ಸತತ 8 ಗೆಲುವು ಸಾಧಿಸುವ ಮೂಲಕ ಸೌತ್ ಆಫ್ರಿಕಾ ಹೊಸ ಇತಿಹಾಸ ನಿರ್ಮಿಸಿದೆ. ಟಿ20ಐ ಕ್ರಿಕೆಟ್ನಲ್ಲಿ 2009 ಮತ್ತು 2021ರಲ್ಲಿ ತಲಾ 7 ಬಾರಿ ಸುದೀರ್ಘ ಗೆಲುವು ದಾಖಲಿಸಿದ್ದ ಸೌತ್ ಆಫ್ರಿಕಾ ಈಗ ಸತತ 8 ಜಯ ಸಾಧಿಸಿದೆ.
ಟಿ20 ವಿಶ್ವಕಪ್ನಲ್ಲಿ ದ.ಆಫ್ರಿಕಾಗೆ ದೊಡ್ಡ ಗೆಲುವು (ವಿಕೆಟ್ಗಳಿಂದ)
2012ರಲ್ಲಿ ಹಂಬಂತೋಟಾದಲ್ಲಿ ನಡೆದಿದ್ದ ಜಿಂಜಾಬ್ವೆ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾ 10 ವಿಕೆಟ್ಗಳಿಂದ ಗೆದ್ದಿತ್ತು. ಇದೀಗ ಟ್ರಿನಿಡಾಡ್ನಲ್ಲಿ ಆಫ್ಘನ್ ಎದುರು 9 ವಿಕೆಟ್ಗಳಿಂದ ಗೆದ್ದು ಬೀಗಿದೆ.
ಅತ್ಯಧಿಕ ಎಸೆತಗಳ ಅಂತರದಿಂದ ಗೆಲುವು
ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೌತ್ ಆಫ್ರಿಕಾ 2ನೇ ಬಾರಿಗೆ 50+ ಎಸೆತಗಳ ಅಂತರದಿಂದ ಗೆದ್ದಿದೆ. 2007ರ ಟಿ20 ವಿಶ್ವಕಪ್ನಲ್ಲಿ ಜೋಹಾನ್ಸ್ಬರ್ಗ್ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳ ಅಂತರದಿಂದ ಗೆದ್ದಿತ್ತು. ಹಾಲಿ ವಿಶ್ವಕಪ್ನಲ್ಲಿ ಆಫ್ಘನ್ ಎದುರು 67 ಎಸೆತಗಳ ಅಂತರದಿಂದ ಗೆದ್ದು ಬೀಗಿತು. ಇದು ಸೌತ್ ಆಫ್ರಿಕಾದ ಅತಿದೊಡ್ಡ ಗೆಲುವಿನ ಅಂತರವಾಗಿದೆ.
ಟಿ20 ವಿಶ್ವಕಪ್ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್
13 - ಆನ್ರಿಚ್ ನೋಕಿಯಾ (2024)*
12 - ಇಮ್ರಾನ್ ತಾಹೀರ್ (2014)
12 - ಕಗಿಸೊ ರಬಾಡ (2024)*
11 - ಚಾರ್ಲ್ ಲ್ಯಾಂಗೆವೆಲ್ಡ್ಟ್ (2010)
11 - ಆನ್ರಿಚ್ ನೋಕಿಯಾ (2022)
11 - ತಬ್ರೈಜ್ ಶಮ್ಸಿ (2024)