ಮಧ್ಯಪ್ರದೇಶ ಮಣಿಸಿ ಮೂರನೇ ಬಾರಿ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ವಿದರ್ಭ; ಪ್ರಶಸ್ತಿ ಸುತ್ತಿನಲ್ಲಿ ಮುಂಬೈ ಎದುರಾಳಿ
Mar 06, 2024 01:02 PM IST
ಮಧ್ಯಪ್ರದೇಶ ಮಣಿಸಿ ಮೂರನೇ ಬಾರಿ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ವಿದರ್ಭ
- ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶವನ್ನು 62 ರನ್ ಗಳಿಂದ ಮಣಿಸಿದ ವಿದರ್ಭ ತಂಡವು ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ. ರಣಜಿ ಟ್ರೋಫಿ 2024ರ ಫೈನಲ್ ಪಂದ್ಯವು ಮಾರ್ಚ್ 10ರ ಭಾನುವಾರದಿಂದ ಮಾರ್ಚ್ 14ರವರೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಮಧ್ಯಪ್ರದೇಶ ತಂಡವನ್ನು ರೋಚಕವಾಗಿ ಮಣಿಸಿದ ವಿದರ್ಭ ತಂಡವು (Vidarbha vs Madhya Pradesh), ಮೂರನೇ ಬಾರಿಗೆ ರಣಜಿ ಟ್ರೋಫಿ (Ranji Trophy 2023-24) ಫೈನಲ್ ಪ್ರವೇಶಿಸಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ, ಮಧ್ಯಪ್ರದೇಶದ ಗೆಲುವಿಗೆ ಕೇವಲ 93 ರನ್‌ಗಳ ಅವಶ್ಯಕತೆಯಿತ್ತು. 228/6 ರನ್‌ಗಳಿಗೆ ದಿನದಾಟ ಅಂತ್ಯಗೊಳಿಸಿದ್ದ ತಂಡವು, ಐದನೇ ದಿನದ ಆರಂಭದಲ್ಲೇ 258 ರನ್‌ಗಳಿಗೆ ಆಲೌಟ್ ಆಯ್ತು. ಆ ಮೂಲಕ ಸ್ಮರಣೀಯ ಗೆಲುವು ಸಾಧಿಸಿದ ವಿದರ್ಭ ಫೈನಲ್‌ಗೆ ಲಗ್ಗೆ ಇಟ್ಟಿತು.
ರಣಜಿ ಟ್ರೋಫಿ ಇತಿಹಾಸದಲ್ಲಿ ವಿದರ್ಭ ತಂಡವು ಮೂರನೇ ಬಾರಿಗೆ ಫೈನಲ್ ಆಡಲು ಸಜ್ಜಾಗಿದೆ. ಈ ಹಿಂದೆ ಫೈನಲ್‌ಗೆ ಲಗ್ಗೆ ಇಟ್ಟ ಎರಡೂ ಸಂದರ್ಭಗಳಲ್ಲಿ ತಂಡವು ಟ್ರೋಫಿ ಜಯಿಸಿದ್ದು ವಿಶೇಷ. 2017-18ರಲ್ಲಿ ದೆಹಲಿಯನ್ನು ಮಣಿಸಿದ್ದ ತಂಡವು, 2018-19ರಲ್ಲಿ ಸೌರಾಷ್ಟ್ರ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ಪ್ರಶಸ್ತಿ ಜಯಿಸಿತ್ತು.
ಗೆಲುವಿಗೆ 321 ರನ್‌ಗಳ ಗುರಿ ಬೆನ್ನಟ್ಟಿದ 2021-22ರ ರಣಜಿ ಚಾಂಪಿಯನ್ ಮಧ್ಯಪ್ರದೇಶ, ನಾಲ್ಕನೇ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡಿದ್ದರೂ ಸುಸ್ಥಿತಿಯಲ್ಲಿತ್ತು. ಅಂತಿಮ ದಿನದಾಟದಂದು ತಂಡದ ಆಟ ನಡೆಯಲಿಲ್ಲ. ಹೀಗಾಗಿ ತಂಡವು ಮೂರನೇ ಬಾರಿಗೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್ ಬಳಿಕ ಮುನ್ನಡೆಯಲ್ಲಿದ್ದ ತಂಡವು, ಎರಡನೇ ಇನ್ನಿಂಗ್ಸ್‌ನಲ್ಲಿ 81.3 ಓವರ್‌ಗಳಲ್ಲಿ ಆಲೌಟ್ ಆಯಿತು.
ಇದನ್ನೂ ಓದಿ | ಒಂದೆರಡಲ್ಲ, ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ಯಶಸ್ವಿ ಜೈಸ್ವಾಲ್; ಹತ್ತಿರದಲ್ಲಿವೆ ವಿರಾಟ್ ಕೊಹ್ಲಿ, ಗವಾಸ್ಕರ್ ರೆಕಾರ್ಡ್ಸ್
ವಿದರ್ಭ ತಂಡವು 41 ಬಾರಿಯ ರಣಜಿ ಚಾಂಪಿಯನ್ ಮುಂಬೈ ತಂಡವನ್ನು ಎದುರಿಸಲಿದೆ. ಅತ್ತ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡವು ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮುಂಬೈ ಮತ್ತು ವಿದರ್ಭ ತಂಡಗಳ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯವು ಮಾರ್ಚ್ 10ರ ಭಾನುವಾರದಿಂದ ಮಾರ್ಚ್ 14ರ ಗುರುವಾರದವರೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ವಿದರ್ಭ ತಂಡ: ಮೊದಲ ಇನ್ನಿಂಗ್ಸ್‌ನಲ್ಲಿ 101.3 ಓವರ್ ಗಳಲ್ಲಿ 170 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 402 (ಅಮನ್ ಮೊಖಡೆ 59, ಯಶ್ ರಾಥೋಡ್ 141, ಅಕ್ಷಯ್ ವಾಡ್ಕರ್ 77; ಅನುಭವ್ ಅಗರ್ವಾಲ್ (5/92). ಮಧ್ಯಪ್ರದೇಶ 81.3 ಓವರ್ಗಳಲ್ಲಿ 252 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 258 ರನ್ (ಯಶ್ ದುಬೆ 94, ಹರ್ಷ್ ಗವಾಲಿ 67. ಆದಿತ್ಯ ಸರ್ವಾಟೆ 56ಕ್ಕೆ 2, ಆದಿತ್ಯ ಠಾಕರೆ 45ಕ್ಕೆ 2, ಯಶ್ ಠಾಕೂರ್ 60ಕ್ಕೆ 3, ಅಕ್ಷಯ್ ವಾಖರೆ 342ಕ್ಕೆ 3). ವಿದರ್ಭ ತಂಡಕ್ಕೆ 62 ರನ್‌ಗಳ ಗೆಲುವು.
ರಣಜಿ ಟ್ರೋಫಿ ಫೈನಲ್ ತಂಡಗಳು
ವಿದರ್ಭ ತಂಡ: ಅಕ್ಷಯ್ ವಾಡ್ಕರ್ (ನಾಯಕ/ವಿಕೆಟ್ ಕೀಪರ್), ಫೈಜ್ ಫಜಲ್, ಕರುಣ್ ನಾಯರ್, ಅಥರ್ವ ಟೈಡೆ, ಧ್ರುವ ಶೋರೆ, ಯಶ್ ರಾಥೋಡ್, ಸಂಜಯ್ ರಘುನಾಥ್, ಮೋಹಿತ್ ಕಾಳೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ದುಬೆ, ಆದಿತ್ಯ ಸರ್ವತೆ, ಯಶ್ ಠಾಕೂರ್, ದರ್ಶನ್ ನಲ್ಕಂಡೆ, ಉಮೇಶ್ ಯಾದವ್, ಹರ್ಷ್ ದುಬೆ, ಅಖ್ಸೇ ವಾಖರೆ, ಲಲಿತ್ ಎಂ ಯಾದವ್, ಆದಿತ್ಯ ಠಾಕರೆ, ರಜನೀಶ್ ಗುರ್ಬಾನಿ.
ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಬೂಪೇಶ್ ಲಾಲ್ವಾನಿ, ಸೂರ್ಯಾಂಶ್ ಶೆಗ್ಡೆ, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಿವಂ ದುಬೆ, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಮೋಹಿತ್ ಅವಸ್ತಿ, ತುಷಾರ್ ದೇಶಸ್ಪಾಂಡೆ, ತುಷಾರ್ ದೇಶಸ್ಪಾನ್, ಎ, ಧವಳ್ ಕುಲಕರ್ಣಿ, ಜಯ್ ಗೋಕುಲ್ ಬಿಸ್ತಾ, ಅಥರ್ವ ಅಂಕೋಲೆಕರ್, ಪ್ರಸಾದ್ ಪವಾರ್ (ವಿಕೆಟ್ ಕೀಪರ್), ಸುವೇದ್ ಪರ್ಕರ್, ಸಿಲ್ವೆಸ್ಟರ್ ಡಿಸೋಜಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)