ಕನ್ನಡ ಸುದ್ದಿ  /  Cricket  /  Five Massive Feats Yashasvi Jaiswal Can Accomplish In Ind Vs Eng 5th Test In Dharamshala Virat Kohli Sunil Gavaskar Prs

ಒಂದೆರಡಲ್ಲ, ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ಯಶಸ್ವಿ ಜೈಸ್ವಾಲ್; ಹತ್ತಿರದಲ್ಲಿವೆ ವಿರಾಟ್ ಕೊಹ್ಲಿ, ಗವಾಸ್ಕರ್ ರೆಕಾರ್ಡ್ಸ್

Yashasvi Jaiswal : ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರು ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಮುರಿಯಲು ಸಜ್ಜಾಗಿದ್ದಾರೆ.

ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ಯಶಸ್ವಿ ಜೈಸ್ವಾಲ್
ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ಯಶಸ್ವಿ ಜೈಸ್ವಾಲ್

ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್​​​ ಸರಣಿಯಲ್ಲಿ ಅಬ್ಬರಿಸುತ್ತಿರುವ ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್, ಐದನೇ ಟೆಸ್ಟ್​ ಪಂದ್ಯದಲ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಆಂಗ್ಲರ ಎದುರು ಕಣಕ್ಕಿಳಿದ ನಾಲ್ಕು ಟೆಸ್ಟ್​​ ಪಂದ್ಯಗಳಲ್ಲಿ ಆರಂಭಿಕ ಆಟಗಾರ 93.57ರ ಬ್ಯಾಟಿಂಗ್​ ಸರಾಸರಿಯಲ್ಲಿ 655 ರನ್ ಕಲೆ ಹಾಕುವ ಮೂಲಕ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಡೆಬ್ಯು ಮಾಡಿದ ಈ ಯಂಗ್​ಸ್ಟರ್​, ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು. ಸದ್ಯ ಇಂಗ್ಲೆಂಡ್ ಸರಣಿಯು ಯುವ ಆಟಗಾರನ ಪಾಲಿಗೆ ಇದು 3ನೇ ಟೆಸ್ಟ್​ ಸಿರೀಸ್​ ಆಗಿದೆ. ಸದ್ಯ ಕಣಕ್ಕಿಳಿದ 4 ಟೆಸ್ಟ್​ ಪಂದ್ಯಗಳಲ್ಲಿ ಅನೇಕ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿರುವ ಜೈಸ್ವಾಲ್, ಈಗ 5ನೇ ಟೆಸ್ಟ್​ನಲ್ಲೂ ಮತ್ತಷ್ಟು ರೆಕಾರ್ಡ್ಸ್​​​ ಧೂಳೀಪಟಗೊಳಿಸಲು ಸಜ್ಜಾಗಿದ್ದಾರೆ. ಯಶಸ್ವಿ ಮುರಿಯಬಹುದಾದ ದಾಖಲೆ ಪಟ್ಟಿ ಇಲ್ಲಿದೆ.

ವೇಗದ 1000 ರನ್​ ಗಳಿಸಲು ಬೇಕು 29ರನ್

ವಿಶ್ವ ಟೆಸ್ಟ್ ಕ್ರಿಕೆಟ್​​ನಲ್ಲಿ ಅತಿವೇಗದ ಸಾವಿರ ರನ್​ಗಳನ್ನು ಪೂರೈಸಲು ಇನ್ನೂ 29 ರನ್​ಗಳ ಅಗತ್ಯ ಇದೆ. ಮಾರ್ಚ್ 7ರಿಂದ ಆರಂಭವಾಗುವ ಕೊನೆಯ ಟೆಸ್ಟ್​​ ಪಂದ್ಯದಲ್ಲಿ 29 ರನ್ ಕಲೆ ಹಾಕಿದರೆ ಟೆಸ್ಟ್​ ಇತಿಹಾಸದಲ್ಲಿ 1000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್​ ಆಗಲಿದ್ದಾರೆ. ಸದ್ಯ ಚೇತೇಶ್ವರ್ ಪೂಜಾರ ಹೆಸರಿನಲ್ಲಿ ಈ ದಾಖಲೆ ಇದ್ದು, ಕೇವಲ 11 ಟೆಸ್ಟ್​​ಗಳಲ್ಲಿ ಈ ಮೈಲಿಗಲ್ಲಿ ತಲುಪಿದ್ದರು. ಪ್ರಸ್ತುತ ಜೈಸ್ವಾಲ್ 8 ಪಂದ್ಯಗಳಲ್ಲಿ 69.3ರ ಸರಾಸರಿಯಲ್ಲಿ 971 ರನ್ ಗಳಿಸಿದ್ದಾರೆ.

ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್

ಪ್ರಸ್ತುತ ಸರಣಿಯಲ್ಲಿ 655 ರನ್ ಗಳಿಸಿರುವ ಜೈಸ್ವಾಲ್ ಇನ್ನೂ 45 ರನ್​ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡರೆ, ಇಂಗ್ಲೆಂಡ್​​-ಭಾರತ ನಡುವಿನ ಟೆಸ್ಟ್​ ಸರಣಿಯಲ್ಲಿ 700 ಅಥವಾ ಅದಕ್ಕಿಂತ ಅಧಿಕ ರನ್ ಕಲೆ ಹಾಕಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಹಾಗೂ ಮೂರನೇ ಆಟಗಾರನಾಗಿ ಈ ಸಾಧನೆ ಮಾಡಲಿದ್ದಾರೆ. ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಗ್ರಹಾಂ ಕೂಚ್ ಅವರ ಹೆಸರಿನಲ್ಲಿದ್ದು, ಅವರು 752 ರನ್ ಗಳಿಸಿದ್ದರು. ಇದು 1990ರಲ್ಲಿ ನಿರ್ಮಾಣದ ದಾಖಲೆಯಾಗಿತ್ತು.

ಕೊಹ್ಲಿ ದಾಖಲೆ ಮುರಿಯಲು ಬೇಕು 1 ರನ್

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್​ನಲ್ಲಿ ಕೇವಲ 1 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ ವಿರಾಟ್​ ಕೊಹ್ಲಿ ದಾಖಲೆ ಮುರಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಸದ್ಯ 655 ರನ್ ಗಳಿಸಿ ಕೊಹ್ಲಿಯನ್ನು ಸರಿಗಟ್ಟಿರುವ ಜೈಸ್ವಾಲ್ 1 ರನ್ ತನ್ನ ಖಾತೆಗೆ ಸೇರಿಸಿಕೊಂಡರೆ ಇಂಗ್ಲೆಂಡ್ ಎದುರಿನ ಟೆಸ್ಟ್​ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಒಳಗಾಗಲಿದ್ದಾರೆ.

ಅತಿ ಹೆಚ್ಚು ಶತಕಗಳು

ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆಯನ್ನು ಮುರಿಯಲು ಜೈಸ್ವಾಲ್ ಸಿದ್ಧರಾಗಿದ್ದಾರೆ. ಇನ್ನೊಂದು ಶತಕ ಸಿಡಿಸಿದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅತಿ ಹೆಚ್ಚು ಸೆಂಚುರಿ ಬಾರಿಸಿದ ಭಾರತದ ಮೂರನೇ ಆಟಗಾರ ಎನಿಸಲಿದ್ದಾರೆ. ಸದ್ಯ ಕೊಹ್ಲಿ ಮತ್ತು ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ತಲಾ 2 ಶತಕ ಗಳಿಸಿದ್ದಾರೆ. ಐದನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದರೆ, ಅವರು ಕೊಹ್ಲಿಯನ್ನು ಮೀರಿಸುತ್ತಾರೆ. ರಾಹುಲ್ ದ್ರಾವಿಡ್ ಮತ್ತು ಮೊಹಮ್ಮದ್ ಅಜರುದ್ದೀನ್ ಜೊತೆ ಜಂಟಿ ದಾಖಲೆಯನ್ನು ಬರೆಯಲಿದ್ದಾರೆ.

ಗವಾಸ್ಕರ್ ದಾಖಲೆ ಮುರಿಯಲು ಬೇಕು 120 ರನ್

ಯಶಸ್ವಿ ಜೈಸ್ವಾಲ್ ಅವರು ಈ ಟೆಸ್ಟ್​​ನಲ್ಲಿ 120 ರನ್​ಗಳಿಸಿದ್ದೇ ಆದರೆ ಭಾರತದ ದಿಗ್ಗಜ ಸುನಿಲ್ ಗವಾಸ್ಕರ್​ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಗವಾಸ್ಕರ್ ಅವರ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್​ ವಿರುದ್ಧದ ಟೆಸ್ಟ್ ಸಿರೀಸ್​​ನಲ್ಲಿ ಬರೋಬ್ಬರಿ 774 ರನ್​ಗಳನ್ನು ಗಳಿಸಿದ್ದರು. ಈಗ ಈ ದಾಖಲೆಯನ್ನೂ ಧೂಳಿಪಟಗೊಳಿಸುವ ಅವಕಾಶ ಜೈಸ್ವಾಲ್ ಮುಂದಿದೆ.

ಬ್ರಾಡ್ಮನ್ ದಾಖಲೆ ಮೇಲೂ ಕಣ್ಣು

ಬ್ರಿಟಿಷರ ಎದುರಿನ ಅಂತಿಮ ಹಾಗೂ ಐದನೇ ಟೆಸ್ಟ್​​ನಲ್ಲಿ ದ್ವಿಶತಕ ಸಿಡಿಸಿಲು ಸಾಧ್ಯವಾದರೆ ಡೊನಾಲ್ಡ್ ಬ್ರಾಡ್ಮನ್ ಅವರ ದಾಖಲೆ ಸರಿಗಟ್ಟಲು ಅವಕಾಶ ಪಡೆದಿದ್ದಾರೆ. ದ್ವಿಶತಕ ಸಿಡಿಸಿದ್ದೇ ಆದರೆ ಒಂದೇ ಸರಣಿಯಲ್ಲಿ ಮೂರು ಡಬಲ್ ಸೆಂಚುರಿ ಬಾರಿಸಿದ ವಿಶ್ವದ 2ನೇ ಹಾಗೂ ಭಾರತದ ಮೊದಲ ಬ್ಯಾಟರ್​ ಎಂಬ ಖ್ಯಾತಿಗೆ ಒಳಗಾಗಲಿದ್ದಾರೆ. ಸದ್ಯ ಜೈಸ್ವಾಲ್ ಫಾರ್ಮ್​ ನೋಡಿದರೆ, ಇಷ್ಟು ದಾಖಲೆಗಳ ಪೈಕಿ ಹಲವನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ.