logo
ಕನ್ನಡ ಸುದ್ದಿ  /  ಕ್ರಿಕೆಟ್  /  Video: ಕೊನೆಗೂ 24 ಕೋಟಿ ಬೆಲೆ ಸಮರ್ಥಿಸಿದ ಸ್ಟಾರ್ಕ್; ಮ್ಯಾಜಿಕಲ್ ಎಸೆತದಲ್ಲಿ ಅಭಿಷೇಕ್‌ ವಿಕೆಟ್‌ ಹಾರಿಸಿದ ಆಸೀಸ್‌ ವೇಗಿ

Video: ಕೊನೆಗೂ 24 ಕೋಟಿ ಬೆಲೆ ಸಮರ್ಥಿಸಿದ ಸ್ಟಾರ್ಕ್; ಮ್ಯಾಜಿಕಲ್ ಎಸೆತದಲ್ಲಿ ಅಭಿಷೇಕ್‌ ವಿಕೆಟ್‌ ಹಾರಿಸಿದ ಆಸೀಸ್‌ ವೇಗಿ

Jayaraj HT Kannada

May 26, 2024 09:39 PM IST

google News

ಅಭಿಷೇಕ್‌ ವಿಕೆಟ್‌ ಹಾರಿಸಿದ ಆಸೀಸ್‌ ವೇಗಿ ಸ್ಟಾರ್ಕ್

    • ಐಪಿಎಲ್ 2024ರ ಫೈನಲ್ ಪಂದ್ಯದ ಮೊದಲ ಓವರ್‌ನಲ್ಲಿಯೇ ಮಿಚೆಲ್ ಸ್ಟಾರ್ಕ್ ಅವರು ಅಭಿಷೇಕ್ ಶರ್ಮಾ ವಿಕೆಟ್‌ ಪಡೆದಿದ್ದಾರೆ. ಇದು ಬಾಲ್‌ ಆಫ್‌ ದಿ ಟೂರ್ನಮೆಂಟ್‌ ಎಂದು ಕಾಮೆಂಟರಿ ಬಾಕ್ಸ್‌ನಲ್ಲಿದ್ದ ದಿಗ್ಗಜರು ಉದ್ಘರಿಸಿದ್ದಾರೆ.
ಅಭಿಷೇಕ್‌ ವಿಕೆಟ್‌ ಹಾರಿಸಿದ ಆಸೀಸ್‌ ವೇಗಿ ಸ್ಟಾರ್ಕ್
ಅಭಿಷೇಕ್‌ ವಿಕೆಟ್‌ ಹಾರಿಸಿದ ಆಸೀಸ್‌ ವೇಗಿ ಸ್ಟಾರ್ಕ್

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (KKR vs SRH) ತಂಡಗಳ ನಡುವಿನ ಐಪಿಎಲ್ 2024ರ ಫೈನಲ್‌ ಪಂದ್ಯದಲ್ಲಿ ಕೆಕೆಆರ್‌ ಆಕ್ರಮಣಕಾರಿ ಆರಂಭ ಪಡೆಯಿತು. ಪಂದ್ಯದ ಮೊದಲ ಓವರ್‌ನಲ್ಲಿಯೇ ಅಭಿಷೇಕ್ ಶರ್ಮಾ ಔಟಾದರು. ಪ್ರಸಕ್ತ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್‌ ಸಿಡಿಸಿದ ಅಪಾಯಕಾರಿ ಆಟಗಾರನನ್ನು, ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ ಕ್ಲೀನ್ ಬೌಲ್ಡ್ ಮಾಡಿದರು. ತಮ್ಮ ಅಮೋಘ ಎಸೆತದ ಮೂಲಕ ಪಂದ್ಯದ ಆರಂಭದಲ್ಲೇ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅಲ್ಲದೆ ಎಸ್‌ಆರ್‌ಎಚ್‌ ಕುಸಿತಕ್ಕೆ ಮುನ್ನುಡಿ ಬರೆದರು.

ಪ್ರಸಕ್ತ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುಂಚಿತವಾಗಿ ಕೆಕೆಆರ್‌ ತಂಡವು ಸ್ಟಾರ್ಕ್‌ ಅವರನ್ನು ಬರೋಬ್ಬರಿ 24.75 ಕೋಟಿ ರೂಪಾಯಿ ಕೊಟ್ಟು ಖರೀದಿಸಿತ್ತು. ಮಿಲಿಯನ್‌ ಡಾಲರ್‌ ಟೂರ್ನಿ ಐತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಿಗೆ ದುಬಾರಿ ಬೆಲೆ ತೆತ್ತಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಐಪಿಎಲ್‌ ಲೀಗ್‌ ಹಂತದಲ್ಲಿ ಅಷ್ಟೇನೂ ಪರಿಣಾಮಕಾರಿ ಪ್ರದರ್ಶನ ನೀಡದ ಅವರು, ಇದೀಗ ನಿರ್ಣಾಯಕ ಪಂದ್ಯಗಳಲ್ಲಿ ತಂಡದ ಕೈ ಹಿಡಿಯುತ್ತಿದ್ದಾರೆ.

ನಿರಾಶಾದಾಯಕ ಆರಂಭದ ಬಳಿಕ ಅದ್ಭುತವಾಗಿ ಪುಟಿದೆದ್ದ ಸಾರ್ಕ್‌, ಪ್ಲೇಆಫ್‌ ಹಂತದಲ್ಲಿ ಅಬ್ಬರಿಸಿದ್ದಾರೆ. ಮೊದಲ ಓವರ್‌ನ ಐದನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ವಿಕೆಟ್‌ ಹಾರಿಸಿದ್ದಾರೆ. ಲೆಗ್ ಸ್ಟಂಪ್ ಲೈನ್‌ ಮೂಲಕ ಪಿಚ್‌ ಆದ ಎಸೆತವು ಖದ್ದು ಅಭಿಷೇಕ್‌ ಅವರಿಗೆ ಅಚ್ಚರಿಯಾಗುವಂತೆ ಸ್ಟಂಪ್‌ಗೆ ಅಪ್ಪಳಿಸಿದೆ. ಇದು ಪ್ರಸಕ್ತ ಆವೃತ್ತಿಯ ಅಮೋಘ ಎಸೆತದ (ಬಾಲ್‌ ಆಫ್‌ ದಿ ಟೂರ್ನಮೆಂಟ್‌) ಎಂದು ಕಾಮೆಂಟರಿ ಪ್ಯಾನೆಲ್‌ನಲ್ಲಿ ಕುಳಿತ ದಿಗ್ಗಜರು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ಇಲ್ಲಿದೆ

ಮಿಚೆಲ್‌ ಸ್ಟಾರ್ಕ್‌ ನಿರ್ಣಾಯಕ ಪಂದ್ಯಗಳಲ್ಲಿ ತಂಡದ ಕೈ ಹಿಡಿಯುತ್ತಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಸಮಯದಲ್ಲಿಯೂ, ನಾಕೌಟ್ ಹಂತದಲ್ಲಿ ಎರಡು ಪಂದ್ಯಗಳಲ್ಲಿ ಆರು ವಿಕೆಟ್‌ ಕಬಳಿಸಿದ್ದರು. ಇದೀಗ ಈ ಬಾರಿಯ ಐಪಿಎಲ್‌ನಲ್ಲಿ ಲೀಗ್‌ ಹಂತದಲ್ಲಿ ಆಡಿದ್ದ 12 ಪಂದ್ಯಗಳಲ್ಲಿ 12 ವಿಕೆಟ್‌ ಕಬಳಿಸಿದ್ದ ಅವರು, ಫೈನಲ್‌ ಸೇರಿದಂತೆ ಪ್ಲೇ ಆಫ್‌ ಹಂತದ ಒಟ್ಟು 2 ಪಂದ್ಯದಲ್ಲೇ ಪ್ರಮುಖ 5 ವಿಕೆಟ್‌ ಪಡೆದಿದ್ದಾರೆ.

ಐಪಿಎಲ್‌ ಮೆಗಾ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಎಸ್‌ಆರ್‌ಎಚ್‌ ನಾಯಕ ಪ್ಯಾಟ್‌ ಕಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಫೈನಲ್‌ ಪಂದ್ಯಕ್ಕೆ ಉಭಯ ತಂಡಗಳಲ್ಲಿಯೂ ಯಾವುದೇ ಬದಲಾವಣೆಗಳಾಗಿಲ್ಲ.

ಹೈದರಾಬಾದ್‌ ಆಡುವ ಬಳಗ

ಟ್ರಾವಿಸ್‌ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್‌ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.

ಕೋಲ್ಕತ್ತಾ ಆಡುವ ಬಳಗ

ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ