2024ರಲ್ಲಿ ಮೊದಲ ಶತಕ ಸಿಡಿಸಿದ ವಿರಾಟ್ ಕೊಹ್ಲಿ; 487 ರನ್‌ಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್, ಆಸೀಸ್‌ಗೆ ಬೃಹತ್ ಗುರಿ
Nov 24, 2024 03:11 PM IST
2024ರಲ್ಲಿ ಮೊದಲ ಶತಕ ಸಿಡಿಸಿದ ವಿರಾಟ್ ಕೊಹ್ಲಿ; 487 ರನ್‌ಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್
- ಪರ್ತ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ 30ನೇ ಟೆಸ್ಟ್ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಭಾರತ ತಂಡವು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಭಾರತವು 6 ವಿಕೆಟ್ ಕಳೆದುಕೊಂಡು 487 ರನ್ ಕಲೆ ಹಾಕಿದ್ದು, 533 ರನ್‌ಗಳ ಮುನ್ನಡೆ ಸಾಧಿಸಿದೆ. ಸದ್ಯ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 533 ರನ್‌ಗಳ ಬೃಹತ್ ಗುರಿ ನೀಡಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕದೊಂದಿಗೆ ಅಬ್ಬರಿಸಿದ ಕಿಂಗ್, ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 81ನೇ ಸೆಂಚುರಿ ಬಾರಿಸಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಈಗಾಗಲೇ ಮೂರನೇ ದಿನದಾಟದಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿದ್ದಾರೆ. ಅದರ ಬೆನ್ನಲ್ಲೇ ವಿರಾಟ್ ಕೂಡಾ ಮೂರಂಕಿ ಗಡಿ ದಾಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಒಂದಂಕಿ ಮೊತ್ತ ಮಾತ್ರ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಸಿಡಿದು, ಟೀಕಾಕಾರರ ಬಾಯಿ ಮುಚ್ಚಿಸುವುದು ಅನಿವಾರ್ಯವಾಗಿತ್ತು. ಶತಕದೊಂದಿಗೆ, ಟೆಸ್ಟ್‌ನಲ್ಲಿ 16 ಇನ್ನಿಂಗ್ಸ್‌ಗಳ ಬಳಿಕ ಕೊಹ್ಲಿ ಮೂರಂಕಿ ಮೊತ್ತ ಗಳಿಸಿದ್ದಾರೆ.
ಈ ಶತಕಕ್ಕೂ ಮುನ್ನ ವಿರಾಟ್ ಈ ವರ್ಷ ಮೂರು ಫಾರ್ಮೆಟ್‌ಗಳಲ್ಲಿ 20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ 26 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ನಾಲ್ಕು ಸಲ ಡಕೌಟ್ ಆಗಿದ್ದ ಕಿಂಗ್, ಒಂದೇ ಒಂದು ಶತಕ ಸಿಡಿಸಿರಲಿಲ್ಲ. ಎರಡು ಅರ್ಧಶತಕ ಸಿಡಿಸಿದ ಕಿಂಗ್ ಗರಿಷ್ಠ ಸ್ಕೋರ್ 76 ರನ್ ಆಗಿತ್ತು. ಈ ಶತಕವು 2024ರಲ್ಲಿ ಕೊಹ್ಲಿಯ ಶತಕದ ಬರ ನೀಗಿಸಿದೆ.
ಕೊಹ್ಲಿ ಶತಕದೊಂದಿಗೆ ಭಾರತ ತಂಡವು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಭಾರತವು 6 ವಿಕೆಟ್ ಕಳೆದುಕೊಂಡು 487 ರನ್ ಕಲೆ ಹಾಕಿದ್ದು, 533 ರನ್‌ಗಳ ಮುನ್ನಡೆ ಸಾಧಿಸಿದೆ. ಸದ್ಯ ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 533 ರನ್‌ಗಳ ಬೃಹತ್ ಗುರಿ ಇದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್ ಗಳಿಸಿದ್ದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 487 ರನ್ ಗಳಿಸಿ ಅಬ್ಬರಿಸಿರುವುದು ವಿಶೇಷ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದು ಭಾರತದ ಎರಡನೇ ಉತ್ತಮ ಕಮ್‌ಬ್ಯಾಕ್ ಆಗಿದೆ.
ಆಕರ್ಷಕ ಜೊತೆಯಾಟ
143 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದ ಕೊಹ್ಲಿ, ವಾಷಿಂಗ್ಟನ್ ಸುಂದರ್ (29) ಅವರೊಂದಿಗೆ ಆರನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟವಾಡಿದರು. ಇದೇ ವೇಳೆ ನಿತೇಶ್ ರೆಡ್ಡಿ (ಅಜೇಯ 38) ಅವರೊಂದಿಗೆ 54 ಎಸೆತಗಳಲ್ಲಿ 77 ರನ್‌ಗಳ ಅಜೇಯ ಜೊತೆಯಾಟವಾಡಿದರು.
ಜೈಸ್ವಾಲ್ ನಾಲ್ಕನೇ ಶತಕ
ಇದಕ್ಕೂ ಮೊದಲು ಆಕರ್ಷಕ ಶತಕ ಬಾರಿಸಿದ ಜೈಸ್ವಾಲ್ 161 ರನ್ ಸಿಡಿಸಿದರು. ತಮ್ಮ ನಾಲ್ಕನೇ ಟೆಸ್ಟ್ ಶತಕ ಪೂರ್ಣಗೊಳಿಸಿದ ಜೈಸ್ವಾಲ್, ತಮ್ಮ 297 ಎಸೆತಗಳ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು ಮೂರು ಸಿಕ್ಸರ ಬಾರಿಸಿದರು. ದೇವದತ್ ಪಡಿಕ್ಕಲ್ 25 ರನ್ ಗಳಿಸಿದರೆ, ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ತಲಾ 1 ರನ್ ಮಾತ್ರ ಗಳಿಸಿ ನಿರಾಶೆ ಮೂಡಿಸಿದರು.