ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ 11; ಸಂಜು ಸ್ಯಾಮ್ಸನ್, ಚಹಲ್ ಔಟ್
May 30, 2024 11:22 AM IST
ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ 11; ಸಂಜು ಸ್ಯಾಮ್ಸನ್, ಚಹಲ್ ಔಟ್
- India Likely Playing XI: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಜೂನ್ 5ರಿಂದ ಪ್ರಾರಂಭವಾಗುವ ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾರಿಗೆಲ್ಲಾ ಸಿಗಲಿದೆ ಅವಕಾಶ? ಇಲ್ಲಿದೆ ವಿವರ.
ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ಜೂನ್ 5ರಂದು ಐರ್ಲೆಂಡ್ ವಿರುದ್ಧ (Ireland) ತಮ್ಮ ಟಿ20 ವಿಶ್ವಕಪ್ 2024 ಅಭಿಯಾನ (T20 World Cup 2024) ಪ್ರಾರಂಭಿಸಲಿದೆ. ಮೆನ್ ಇನ್ ಬ್ಲೂ ತಂಡವು ಪಾಕಿಸ್ತಾನ, ಐರ್ಲೆಂಡ್, ಯುಎಸ್ಎ ಮತ್ತು ಕೆನಡಾ ತಂಡಗಳೊಂದಿಗೆ ಎ ಗುಂಪಿನಲ್ಲಿ ಸೇರಿದೆ. ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿ ನಿಂತಿದ್ದು, 2007ರ ನಂತರ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಜೂ 5ರಂದು ಐರ್ಲೆಂಡ್ ವಿರುದ್ಧ ಸೆಣಸಾಟಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ XI ಹೇಗಿರಲಿದೆ?
ಭಾರತ ತಂಡವನ್ನು ಮುನ್ನಡೆಸಲಿರುವ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ವಿರಾಟ್ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದು, ಐಪಿಎಲ್-2024ರಲ್ಲಿ 741 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಅವರು ಐಪಿಎಲ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದಾಗ್ಯೂ, ಐರ್ಲೆಂಡ್ ಎದುರಿನ ಪಂದ್ಯಕ್ಕೆ ವಿರಾಟ್, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಮತ್ತೊಬ್ಬ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್, ರೋಹಿತ್ ಜೊತೆ ಆಡಲಿದ್ದಾರೆ.
ಐಪಿಎಲ್ನಲ್ಲಿ ಕೊಹ್ಲಿ ಪವರ್ಪ್ಲೇನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆ ಕೆಲ ಕ್ರಿಕೆಟ್ ಪಂಡಿತರು, ಅವರನ್ನೇ ಓಪನಿಂಗ್ ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಆದಾಗ್ಯೂ, ಕೊಹ್ಲಿ ಆರಂಭಿಕರಾಗಿ ಬಡ್ತಿ ಪಡೆಯುವ ಸಾಧ್ಯತೆ ಕಡಿಮೆ. ಅನುಭವಿ ಆಟಗಾರ ತನ್ನ ಎಲ್ಲಾ ಕ್ರಿಕೆಟ್ನಲ್ಲೂ ನಂಬರ್ 3 ಆಡಿದ್ದಾರೆ. ಅವರು ಐಪಿಎಲ್ನಲ್ಲಿ ಮಾತ್ರ ಓಪನಿಂಗ್ ಮಾಡುತ್ತಿದ್ದಾರೆ. ರೋಹಿತ್ ಶರ್ಮಾಗೆ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಓಪನಿಂಗ್ ಮಾಡುವುದು ಬಹುತೇಕ ಖಚಿತ.
ಸಂಜು ಸ್ಯಾಮ್ಸನ್ vs ರಿಷಭ್ ಪಂತ್
ರೋಹಿತ್ ಶರ್ಮಾ ಅವರ ಮತ್ತೊಂದು ಕಠಿಣ ನಿರ್ಧಾರವೆಂದರೆ ವಿಕೆಟ್ ಕೀಪರ್ ಆಯ್ಕೆ. ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ಇಬ್ಬರು ಆಟಗಾರರು ಸ್ಥಾನಕ್ಕೆ ಕಠಿಣ ಪೈಪೋಟಿ ನಡೆಸುತ್ತಿದ್ದಾರೆ. ಇಬ್ಬರೂ ಸಹ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಸಂಜು ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಗಾಯದ ಕಾರಣದಿಂದ ಕ್ರಿಕೆಟ್ಗೆ ಮರಳಿದ ಪಂತ್ ಅದ್ಭುತ ಪ್ರದರ್ಶನ ನೀಡಿದರು.
ಆದರೆ, ಸಂಜು 500+ ರನ್ ಬಾರಿಸಿದ್ದರೂ ರಿಷಭ್ ಪಂತ್ ಮೊದಲ ಆದ್ಯತೆಯಾಗಿದ್ದಾರೆ. ಏಕೆಂದರೆ ರಿಷಭ್ ಈಗಾಗಲೇ ಟೀಮ್ ಇಂಡಿಯಾ ಪರ ಹಲವು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್ ಸಂಯೋಜನೆಗೆ ಸಂಬಂಧಿಸಿದಂತೆ ಭಾರತವು ಮೂವರು ಸ್ಪಿನ್ನರ್ಗಳು ಮತ್ತು ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುತ್ತದೆಯೇ ಅಥವಾ ಇಬ್ಬರು ಸ್ಪಿನ್ನರ್ಗಳು ಮೂವರು ವೇಗಿಗಳೊಂದಿಗೆ ಆಡುತ್ತದೆಯೇ ಎಂಬ ಗೊಂದಲ ಕಾಡುತ್ತಿದೆ.
ಸೂರ್ಯಕುಮಾರ್ ಯಾದವ್ 4ಕ್ಕೆ ಬ್ಯಾಟ್ ಮಾಡಿದರೆ ರಿಷಭ್, 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಆಲ್ರೌಂಡರ್ ಆಗಿರಲಿದ್ದು, ಆಡುವ XIನಲ್ಲಿ ಸ್ಥಾನಕ್ಕಾಗಿ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ನಡುವೆ ಸ್ಪರ್ಧೆ ನಡೆಯಲಿದೆ. ಪಿಚ್ ಸ್ಪಿನ್ ಸ್ನೇಹಿಯಾಗಿದ್ದರೆ ಅಕ್ಷರ್ ಪಟೇಲ್ಗಿಂತ ದುಬೆಗಿಂತ ಸ್ಥಾನ ಪಡೆಯಲು ಮುಂಚೂಣಿಯಲ್ಲಿದ್ದಾರೆ.
ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಸ್ಪೆಷಲಿಸ್ಟ್ ಸ್ಪಿನ್ನರ್ಗಳಾಗಿರುತ್ತಾರೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಮೂವರು ವೇಗಿಗಳನ್ನು ಕಣಕ್ಕಿಳಿಸುವುದಾದರೆ ಅಕ್ಷರ್ ಪಟೇಲ್ ಬದಲಿಗೆ ಆರ್ಷದೀಪ್ ಸಿಂಗ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
ಭಾರತದ ಸಂಭಾವ್ಯ ಆಡುವ XI vs ಐರ್ಲೆಂಡ್
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ/ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.