ವಿರಾಟ್ ಕೊಹ್ಲಿ ಕಂಬ್ಯಾಕ್, ತಿಲಕ್ ವರ್ಮಾ ಔಟ್; ಅಫ್ಘನ್ ವಿರುದ್ಧದ 2ನೇ ಟಿ20ಗೆ ಭಾರತ ಸಂಭಾವ್ಯ ತಂಡ
Jan 12, 2024 07:21 AM IST
ಭಾರತ ತಂಡ.
- Predicted India Playing XI For 2nd T20I Vs Afghanistan: ಅಫ್ಘಾನಿಸ್ತಾನ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಗೆದ್ದಿರುವ ಭಾರತ ಎರಡನೇ ಟಿ20ಗೆ ತಂಡದಲ್ಲಿ ಕನಿಷ್ಠ ಒಂದು ಬದಲಾವಣೆ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೊಹಾಲಿಯ ಐಎಸ್ ಬಿಂದ್ರಾ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್ಗಳಿಂದ ಭಾರತ (India vs Afghanistan) ಗೆದ್ದಿದೆ. ಇದರೊಂದಿಗೆ ಮೆನ್ ಇನ್ ಬ್ಲೂ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಜನವರಿ 14 ರಂದು 2ನೇ ಟಿ20 ಪಂದ್ಯ ಇಂದೋರ್‌ನಲ್ಲಿ ನಡೆಯಲಿದ್ದು, ಸರಣಿ ಗೆಲುವಿನ ಮೇಲೆ ರೋಹಿತ್ ಪಡೆ ಕಣ್ಣಿಟ್ಟಿದೆ. ಆ ಮೂಲಕ ಟಿ20 ವಿಶ್ವಕಪ್ಗೂ ಮುನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ.
2022ರ ಟಿ20 ವಿಶ್ವಕಪ್ ಸೆಮಿಫೈನಲ್ ಇಂಗ್ಲೆಂಡ್ ವಿರುದ್ಧದ ನಂತರ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ಗೆ ಮರಳಿದ ರೋಹಿತ್ ಶರ್ಮಾ (Rohit Sharma) ಸರಣಿಯ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿದರು. ಇದೀಗ ವೈಯಕ್ತಿಕ ಕಾರಣಗಳಿಂದ ಮೊದಲ ಪಂದ್ಯದಲ್ಲಿ ಭಾಗವಹಿಸದ ವಿರಾಟ್ ಕೊಹ್ಲಿ (Virat Kohli), 2ನೇ ಟಿ20ಐ ಪಂದ್ಯಕ್ಕೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆ ಮೂಲಕ ಎರಡನೇ ಟಿ20ಗೆ ಪ್ಲೇಯಿಂಗ್ನಲ್ಲೂ ಸ್ಥಾನ ಪಡೆಯಲಿದ್ದಾರೆ. ಅವರು ಅಫ್ಘನ್ ವಿರುದ್ಧ ಆಡಿದ ಕೊನೆ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದರು.
ಕೊಹ್ಲಿ ಜಾಗ ಬಿಟ್ಟುಕೊಡುವವರು ಯಾರು?
ವಿರಾಟ್ ಕೊಹ್ಲಿ ತಕ್ಷಣವೇ ಲೈನ್‌ಅಪ್‌ಗೆ ಕಾಲಿಟ್ಟರೆ, ಸ್ಟಾರ್ ಬ್ಯಾಟರ್‌ಗೆ ಯಾರು ಜಾಗ ಖಾಲಿ ಮಾಡಬೇಕು ಎಂಬುದು ಪ್ರಶ್ನೆ. ಮೊದಲ ಟಿ20ಐ ಪಂದ್ಯದಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಶಿವಂ ದುಬೆ ಅವರ ಅದ್ಭುತ ಪ್ರದರ್ಶನದಿಂದ ಆಡುವ 11ರ ಬಳಗದಿಂದ ಕೈಬಿಡುವುದು ಅಸಾಧ್ಯ. ಆದರೆ ತಿಲಕ್ ವರ್ಮಾ, ಕೊಹ್ಲಿಗೆ ಆಡುವ 11ರ ಬಳಗದಲ್ಲಿ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದೆ. ಬಲ ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದ ಯಶಸ್ವಿ ಜೈಸ್ವಾಲ್, ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು.
ಯಶಸ್ವಿ ಜೈಸ್ವಾಲ್ ಚೇತರಿಸಿಕೊಂಡರೆ ಸ್ಥಾನ ಖಚಿತ
ಅಷ್ಟರೊಳಗೆ ಚೇತರಿಸಿಕೊಂಡು ಜೈಸ್ವಾಲ್ ತಂಡಕ್ಕೆ ಮರಳಿದರೆ, ಅವರು ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆಗ ವಿರಾಟ್ ಕೊಹ್ಲಿ 3ನೇ ಕ್ರಮಾಂಕ, ಶುಭ್ಮನ್ ಗಿಲ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಇದೆ. ಆ ಮೂಲಕ ಗಿಲ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. ಮೂರು ಸ್ಪಿನ್ನರ್‌ಗಳು ಮತ್ತು ಇಬ್ಬರು ವೇಗಿಗಳೊಂದಿಗೆ ಮತ್ತು ಆರನೇ ಬೌಲರ್ ಆಗಿ ಶಿವಂ ದುಬೆಯೊಂದಿಗೆ ಉಳಿದ ತಂಡವನ್ನು ಉಳಿಸಿಕೊಳ್ಳಲು ಟೀಮ್ ಮ್ಯಾನೇಜ್ಮೆಂಟ್ ಬಯಸಬಹುದು.
ಮೊದಲ ಟಿ20ಐ ಕ್ರಿಕೆಟ್ನಲ್ಲಿ 31 ರನ್ ಗಳಿಸಿದ ನಂತರ ಜಿತೇಶ್ ಶರ್ಮಾ, ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ಸು ಕಂಡಿದ್ದಾರೆ. ಹಾಗಾಗಿ ಸಂಜು ಸ್ಯಾಮ್ಸನ್ 2ನೇ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ಉಳಿದಂತೆ ಅಕ್ಷರ್ ಪಟೇಲ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ 2ನೇ ಟಿ20ಗೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್/ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್.