ಶಿವಂ ದುಬೆ ಸ್ಫೋಟಕ ಅರ್ಧಶತಕ; ಮೊದಲ ಟಿ20ಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಶಿವಂ ದುಬೆ ಸ್ಫೋಟಕ ಅರ್ಧಶತಕ; ಮೊದಲ ಟಿ20ಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ

ಶಿವಂ ದುಬೆ ಸ್ಫೋಟಕ ಅರ್ಧಶತಕ; ಮೊದಲ ಟಿ20ಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ

India vs Afghanistan 1st T20I: ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯದಲ್ಲಿ ರೋಹಿತ್‌ ಪಡೆ ರೋಚಕ ಜಯ ಸಾಧಿಸಿದೆ.

ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್
ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ (AFP)

ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 (India vs Afghanistan) ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಮೊಹಾಲಿಯ ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಷನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶಿವಂ ದುಬೆ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ರೋಹಿತ್‌ ಬಳಗವು 6 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ ತವರಿನಲ್ಲಿ ನಡೆಯುತ್ತಿರುವ ಚುಟುಕು ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ತಾನ ಉತ್ತಮ ಬ್ಯಾಟಿಂಗ್‌ ನಡೆಸಿತು. ಅನುಭವಿ ಬ್ಯಾಟರ್‌ ಮೊಹಮ್ಮದ್‌ ನಬಿ 42 ರನ್‌ ನೆರವಿನಿಂದ 5 ವಿಕೆಟ್‌ ಕಳೆದುಕೊಂಡು 158 ರನ್ ಗಳಿಸಿತು. ಚುಟುಕು ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅಫ್ಘನ್‌ ಕಲೆ ಹಾಕಿದ ಅಧಿಕ ಮೊತ್ತವಿದು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತವು, ನಾಯಕ ರೋಹಿತ್‌ ಶರ್ಮಾರನ್ನು ಅಗ್ಗಕ್ಕೆ ಕಳೆದುಕೊಂಡರೂ, ಸುಲಭವಾಗಿ ಗುರಿ ತಲುಪಿತು. ಸಾಂಘಿಕ ಆಟದ ಬಲದಿಂದ ಕೇವಲ 17.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 159 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ರೋಹಿತ್‌ ರನೌಟ್‌, ಆಕ್ರೋಶ

ಚೇಸಿಂಗ್‌ ಆರಂಭದಲ್ಲೇ ರೋಹಿತ್‌ ರನೌಟ್‌ ಆದರು. ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಮಿಡ್‌ ಆಫ್‌ ಕಡೆಗೆ ರನ್‌ ಹೊಡೆದ ರೋಹಿತ್‌ ನೇರವಾಗಿ ಸಿಂಗಲ್‌ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ನಾನ್‌ಸ್ಟ್ರೈಕ್‌ನಲ್ಲಿದ್ದ ಗಿಲ್‌, ರೋಹಿತ್‌ ರನ್‌ ಗಳಿಸಲು ಓಡಿದ್ದನ್ನು ಗಮನಿಸದೆ ಅಲ್ಲೇ ಉಳಿದರು. ಹೀಗಾಗಿ ರೋಹಿತ್‌ ಶರ್ಮಾ ವಿಕೆಟ್‌ ಒಪ್ಪಿಸಬೇಕಾಯ್ತು. ಇದು ರೋಹಿತ್‌ ಸಿಟ್ಟಿಗೆ ಕಾರಣವಾಯ್ತು. ಮೈದಾನದಲ್ಲೇ ಗಿಲ್‌ ಮೇಲೆ ರೇಗುತ್ತಾ ಡಗೌಟ್‌ನತ್ತ ಹೆಜ್ಜೆ ಹಾಕಿದರು.

ಇದನ್ನೂ ಓದಿ | ಕೆಎಲ್ ರಾಹುಲ್​ಗೆ ಕೀಪಿಂಗ್​ನಿಂದ ಮುಕ್ತಿ; ಹೊಸ ವಿಕೆಟ್ ಕೀಪರ್​ ಆಯ್ಕೆಗೆ ಆಯ್ಕೆ ಸಮಿತಿ ಚಿಂತನೆ

ವೇಗದ ಆಟವಾಡಿದ ಗಿಲ್‌ 23 ರನ್‌ ಗಳಿಸಿದರೆ, ತಿಲಕ್‌ ವರ್ಮಾ 26 ರನ್‌ ಗಳಿಸಿದರು. ಜಿತೇಶ್‌ ಶರ್ಮಾ 31 ರನ್‌ ಗಳಿಸಿ ಔಟಾದರೆ, ರಿಂಕು ಸಿಂಗ್‌ ಅಜೇಯ 16 ರನ್‌ ಗಳಿಸಿದರು. ಸ್ಫೋಟಕ ಇನ್ನಿಂಗ್ಸ್‌ ಆಡಿದ ಶಿವಂ ದುಬೆ 5 ಬೌಂಡರಿ ಮತ್ತು 2 ಸ್ಫೋಟಕ ಸಿಕ್ಸರ್‌ ಸಹಿತ 60 ರನ್‌ ಪೇರಿಸಿದರು. ಅಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘನ್‌ ಪರ ಗುರ್ಬಾಜ್‌ 23 ರನ್‌ ಗಳಿಸಿ ಅಕ್ಷರ್‌ಗೆ ವಿಕೆಟ್‌ ಒಪ್ಪಿಸಿದರು. ನಾಯಕ ಇಬ್ರಾಹಿಂ ಜದ್ರಾನ್‌ 25 ರನ್‌ ಪೇರಿಸಿದರೆ, ಅಜ್ಮತುಲ್ಲಾ ಆಟ 29 ರನ್‌ಗಳಿಗೆ ಅಂತ್ಯವಾಯ್ತು. ಅನುಭವಿ ನಬಿ 42 ರನ್‌ ಗಳಿಸಿ ತಂಡದ ಅಧಿಕ ಸ್ಕೋರರ್‌ ಆದರು. ನಜೀಬುಲ್ಲ ಅಜೇಯ 19 ರನ್‌ ಗಳಿಸಿದರು.

ಭಾರತದ ಪರ ಮುಖೇಶ್‌ ಕುಮಾರ್‌ ಮತ್ತು ಅಕ್ಷರ್‌ ಪಟೇಲ್‌ ತಲಾ ಎರಡು ವಿಕೆಟ್‌ ಕಬಳಿಸಿದರು.

ಇಂದು ಭಾರತ ತಂಡದಿಂದ ಪ್ರಮುಖ ಆಟಗಾರರಾದ ಸಂಜು ಸ್ಯಾಮ್ಸನ್‌, ಆವೇಶ್‌ ಖಾನ್‌, ಯಶಸ್ವಿ ಜೈಸ್ವಾಲ್ ಮತ್ತು ಕುಲ್ದೀಪ್‌ ಯಾದವ್‌ ಹೊರಗುಳಿದಿದ್ದರು. ಅತ್ತ ಅಫ್ಘನ್‌ ತಂಡದಿಂದಲೂ ನೂರ್ ಅಹಮದ್, ಶರಫುದ್ದೀನ್ ಮತ್ತು ಸಲೀಂ ಸೈಫಿ ಆಡಿಲ್ಲ.

ಭಾರತ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ‌ (ವಿಕೆಟ್‌ ಕೀಪರ್), ರಿಂಕು ಸಿಂಗ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.

ಅಫ್ಘಾನಿಸ್ತಾನ ಆಡುವ ಬಳಗ

ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್), ಇಬ್ರಾಹಿಂ ಜದ್ರಾನ್ (ನಾಯಕ), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಜದ್ರಾನ್, ಕರೀಂ ಜನತ್, ಗುಲ್ಬದಿನ್ ನೈಬ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್.

Whats_app_banner