Virat Kohli: ವಿವಾದಾತ್ಮಕ ಭಾರತ ನಕ್ಷೆ ಹಂಚಿಕೊಂಡ ಸಿಂಗರ್; ಜಾಲತಾಣದಲ್ಲಿ ನೆಚ್ಚಿನ ಕಲಾವಿದನನ್ನ ಅನ್‌ಫಾಲೋ ಮಾಡಿದ ವಿರಾಟ್ ಕೊಹ್ಲಿ
Sep 19, 2023 11:53 AM IST
ವಿವಾದಾತ್ಮಕ ಭಾರತ ನಕ್ಷೆ ಹಂಚಿಕೊಂಡಿದ್ದ ನೆಚ್ಚಿನ ಸಿಂಗರ್‌ನನ್ನು ಅನ್‌ಫಾಲೋ ಮಾಡಿದ ವಿರಾಟ್ ಕೊಹ್ಲಿ
ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ಘೋಷಿಸಿ ಪೋಸ್ಟ್ ಮಾಡಿದ್ದ ಪಂಜಾಬ್ ಸಿಂಗರ್‌ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಅನ್‌ಫಾಲೋ ಮಾಡಿದ್ದಾರೆ.
ಮುಂಬೈ: ಟೀಂ ಇಂಡಿಯಾದ (Team India) ಐಕಾನ್, ಖ್ಯಾತ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಆಟದಲ್ಲಿ ಮಾತ್ರವಲ್ಲದೆ, ಆಟದ ಹೊರತಾದ ಇತರೆ ಚಟುವಟಿಕೆಗಳಲ್ಲೂ ತುಂಬಾ ಆ್ಯಕ್ಟಿವ್ ಆಗಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಂತೂ ತಮ್ಮದೇ ಆದ ವರ್ಚಸ್ಸು ವೃದ್ಧಿಸಿಕೊಂಡಿದ್ದು, ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರೀಡಾಪಟುಗಳ ಪೈಕಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಜಾಲತಾಣಗಳಲ್ಲಿ ಸಕ್ರಿಯವಾಗುವ ವಿರಾಟ್, ತನ್ನ ನೆಚ್ಚಿನ ಗಾಯಕನ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಭಾರತದ ಭೂಪಟ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿದ ಆರೋಪದಲ್ಲಿ ಖ್ಯಾತ ಪಂಜಾಬಿ ಗಾಯಕ ಶುಭ್ (Shubh) ಅವರನ್ನು ವಿರಾಟ್ ಕೊಹ್ಲಿ ಇನ್ಸ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ.
ದೇಶಾಭಿಮಾನ ಮೆರೆದ ವಿರಾಟ್ ಕೊಹ್ಲಿ
ದೇಶಕ್ಕೆ ಸಂಬಂಧಿಸಿದ ವಿಚಾರದಲ್ಲಿ ಖಲಿಸ್ತಾನ್ ಪ್ರತ್ಯೇಕವಾದಿಗಳನ್ನು ಬೆಂಬಲಿಸಿ ಗಾಯ ಶುಭ್ ಅವರು ವಿವಾದಾತ್ಮಕ ಭಾರತ ನಕ್ಷೆಯನ್ನು ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ನಂತರ ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಸಿಂಗರ್ ಆಗಿರುವ ಪಂಜಾಬಿಯ ಖ್ಯಾತ ಸಿಂಗರ್ ಶುಭ್ ಅವರನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಿಂದ ಅನ್‌ಫಾಲೋ ಮಾಡಿದ್ದಾರೆ.
ವಿವಾದಾತ್ಮಕ ಜನರ ಗುಂಪನ್ನು ಸಿಂಗರ್ ಶುಭ್ ಬೆಂಬಲಿಸಿರುವ ಆರೋಪವಿದೆ. ಇದು ಭಾರತೀಯರನ್ನು ಕೆರಳಿಸುವಂತೆ ಮಾಡಿದೆ. 26 ವರ್ಷದ ಗಾಯಕನ ಹಾಡುಗಳಿಗೆ ಮನಸೋತಿದ್ದ ವಿರಾಟ್ ಕೆಲ ದಿನಗಳ ಹಿಂದಷ್ಟೇ ಅದ್ಭುತ ಸಂಗೀತ ಪ್ರತಿಭೆಗಾಗಿ ಶುಭ್ ಅವರನ್ನು ಕೊಂಡಾಡಿದ್ದರು. ಅದನ್ನು ಎಕ್ಸ್ ಖಾತೆಯಲ್ಲಿ ( ಈ ಹಿಂದೆ ಟ್ವಿಟರ್) ಹಂಚಿಕೊಂಡಿದ್ದರು. ಇದಕ್ಕೆ ಶುಭ್ ಕೂಡ ಪ್ರತಿಕ್ರಿಯಿಸಿ, ತುಂಬಾ ಧನ್ಯವಾದಗಲು ಅಣ್ಣಾ ಎಂದಿದ್ದರು.
ಆದರೆ ದೇಶದ ವಿಚಾರದಲ್ಲಿ ಖಲಿಸ್ತಾನಿಗಳನ್ನು ಬೆಂಬಲಿಸಿರುವ ಆರೋಪದ ಹಿನ್ನೆಲೆಯಲ್ಲಿ ಗಾಯಕ ಶುಭ್ ಅವರನ್ನು ವಿರಾಟ್ ಅನ್‌ಫಾಲೋ ಮಾಡುವ ಮೂಲಕ ತಮ್ಮ ದೇಶಾಭಿಮಾನವನ್ನು ಮೆರೆದಿದ್ದಾರೆ.
ಏಷ್ಯಾಕಪ್‌ನಲ್ಲಿ ಕಿಂಗ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಸೂಪರ್ 4 ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಮಿಂಚಿದ್ದರು. ಇದರಿಂದಾಗಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಗುಂಪು ಹಂತದ ಪಾಕ್ ವಿರುದ್ಧ ಪಂದ್ಯದಲ್ಲಿ ವಿರಾಟ್ ನಿರಾಸೆ ಮೂಡಿಸಿದ್ದರು. ಆದರೆ ಸೆಪ್ಟೆಂಬರ್ 11 ರಂದು ನಡೆದಿದ್ದ ಮೀಸಲು ದಿನದಾಟದಲ್ಲಿ ಅಬ್ಬರದ ಶತಕ ಬಾರಿಸಿದ್ದರು.
ಈ ಪಂದ್ಯದಲ್ಲಿ ಕೊಹ್ಲಿ 84 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸೇರಿ 100 ರನ್ ಗಳಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಪೂರೈಸಿದ್ದರು. ಒಟ್ಟಾರೆಯಾಗಿ ಅಂದು 94 ಎಸೆತಗಳಿಂದ 9 ಬೌಂಡರಿ ಹಾಗೂ 3 ಅಮೋಘ ಸಿಕ್ಸರ್‌ಗಳೊಂದಿಗೆ 122 ರನ್ ಗಳಿಸಿದ್ದರು. ಅಲ್ಲದೆ, ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಪಾಕ್ ವಿರುದ್ಧ ಜಯಭೇರಿ ಬಾರಿಸಿದ್ದ ಟೀಂ ಇಂಡಿಯಾ ಮೊದಲ ತಂಡವಾಗಿ ಫೈನಲ್‌ಗೆ ತಲುಪಿ ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳ ಜಯದೊಂದಿಗೆ ಏಷ್ಯಾಕಪ್ (Asia Cup 2023) ಮುಡಿಗೇರಿಸಿಕೊಂಡಿತ್ತು.