ವೀರೇಂದ್ರ ಸೆಹ್ವಾಗ್ ಯಾರೋ ಗೊತ್ತಿಲ್ಲ; ವೀರೂಗೆ ಕೌಂಟರ್ ಕೊಡಲು ಯತ್ನಿಸಿ ಟೀಕೆಗೆ ಗುರಿಯಾದ ಶಕೀಬ್ ಅಲ್ ಹಸನ್
Jun 14, 2024 09:23 PM IST
ವೀರೇಂದ್ರ ಸೆಹ್ವಾಗ್ ಯಾರೋ ಗೊತ್ತಿಲ್ಲ; ವೀರೂಗೆ ಕೌಂಟರ್ ಕೊಡಲು ಯತ್ನಿಸಿ ಟೀಕೆಗೆ ಗುರಿಯಾದ ಶಕೀಬ್ ಅಲ್ ಹಸನ್
- Shakib Al Hasan on Virender Sehwag : ವೀರೇಂದ್ರ ಸೆಹ್ವಾಗ್ ಅವರಿಗೆ ಕೌಂಟರ್ ಕೊಡಲು ಯತ್ನಿಸಿದ ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರು ಟೀಕೆಗೆ ಗುರಿಯಾಗಿದ್ದಾರೆ.
ನಿಮ್ಮ ಆಟ ನೋಡಿ ನಿಮಗೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದ ಟೀಮ್ ಇಂಡಿಯಾ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ (Virender Sehwag) ಅವರಿಗೆ ತಿರುಗೇಟು ನೀಡುವ ಭರದಲ್ಲಿ ಬಾಂಗ್ಲಾದೇಶ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸಲ್ (Shakib Al Hasan) ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸದಾ ವಿವಾದಗಳಿಂದಲೇ ಸುದ್ದಿಯಾಗಿರುವ ಶಕೀಬ್, ವಿಶ್ವಶ್ರೇಷ್ಠ ಆರಂಭಿಕರ ಪೈಕಿ ಒಬ್ಬರಾದ ಸೆಹ್ವಾಗ್ ಅವರನ್ನು ಯಾರು ಎಂದು ಪ್ರಶ್ನಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡದ ಭಾಗವಾಗಿರುವ ಶಕೀಬ್, ಹಲವು ಬಾರಿ ತಮ್ಮ ಹೇಳಿಕೆಗಳಿಂದಲೇ ಸದಾ ಚರ್ಚೆಯಲ್ಲಿರುತ್ತಾರೆ. ಅವರ ಸುತ್ತಲೂ ಒಂದಿಲ್ಲೊಂದು ವಿವಾದ ತಳುಕು ಹಾಕಿಕೊಳ್ಳುತ್ತಲೇ ಇರುತ್ತದೆ. ಅಂಪೈರ್ ವಿರುದ್ಧ ರೇಗಾಡಿದ್ದು, ವಿಕೆಟ್ಗೆ ಒದ್ದದ್ದು, ಫ್ಯಾನ್ಸ್ಗೆ ಹೊಡೆದಿರುವುದು ಸೇರಿದಂತೆ ಹಲವು ವಿವಾದಗಳು ಅವರ ಹೆಸರಿಗೆ ಸೇರಿವೆ. ಅವರ ನಡೆಗೆ ಅಭಿಮಾನಿಗಳಿಂದ ಆಕ್ರೋಶಕ್ಕೆ ವ್ಯಕ್ತವಾಗಿವೆ.
ರಾಜಕೀಯಕ್ಕೆ ಸೇರಿ ಸಂಸದನಾದ ನಂತರ ವಿವಾದ-ಹೇಳಿಕೆಗಳಿಂದ ದೂರವಿದ್ದ ಶಕೀಬ್, ಸೆಹ್ವಾಗ್ ಕುರಿತು ಅಚ್ಚರಿಯ ಹೇಳಿಕೆ ನೀಡುವ ಮೂಲಕ ಉದ್ಧಟತನ ತೋರಿದ್ದಾರೆ. ಜೂನ್ 13ರಂದು ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಕಟ್ಟಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಕೀಬ್, ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಸೆಹ್ವಾಗ್ ಬಗ್ಗೆ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 114 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ 4 ರನ್ಗಳಿಂದ ಸೋತಿದೆ. ಅನುಭವಕ್ಕೆ ತಕ್ಕಂತೆ ಶಕೀಬ್ ಅಲ್ ಹಸನ್ ಆಡದ ಕಾರಣ ವೀರು ಕೋಪಗೊಂಡು ಅವರನ್ನು ಟಿ20 ಸ್ವರೂಪಕ್ಕೆ ಆಯ್ಕೆ ಮಾಡಲ್ಲ ಎಂದು ಭಾವಿಸಿದ್ದೆ. ನಿಮ್ಮ ಇತ್ತೀಚಿನ ಪ್ರದರ್ಶನ ನೋಡಿ ನಿಮಗೆ ನಿಜಕ್ಕೂ ನಾಚಿಕೆಯಾಗಬೇಕು. ನೀವಾಗಿಯೇ ಮುಂದೆ ಬಂದು ಈ ಸ್ವರೂಪದಿಂದ ನಿವೃತ್ತಿ ಘೋಷಿಸಬೇಕು ಎಂದು ಸೆಹ್ವಾಗ್ ಕ್ರಿಕ್ಬಜ್ನಲ್ಲಿ ಹೇಳಿದ್ದರು.
ಹೀಗಾಗಿ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಬ್ಬರು ವೀರೂ ಟೀಕಿಸಿದ್ದ ಕುರಿತು ಪ್ರಶ್ನೆ ಕೇಳಿದ್ದಾರೆ. ಆದರೆ, ಇದಕ್ಕೆ ಉದ್ದಟತನದ ಉತ್ತರ ನೀಡಿದ ಶಕೀಬ್, ವೀರೇಂದ್ರ ಸೆಹ್ವಾಗ್ ಯಾರು? ಎಂದು ಉತ್ತರಿಸಿದ್ದಾರೆ. ಸೆಹ್ವಾಗ್ಗೆ ತಿರುಗೇಟು ನೀಡುವ ಭರದಲ್ಲಿ ಯಾರು ಎಂದು ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀರೂ ಅಭಿಮಾನಿಗಳು ಮನಬಂದಂತೆ ಟೀಕಿಸುತ್ತಿದ್ದಾರೆ.
ನೆದರ್ಲೆಂಡ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್
ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 25 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 5 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತು. ಮಾಜಿ ನಾಯಕ ಶಕೀಬ್ ಅಲ್ ಹಸನ್ ಅತ್ಯುತ್ತಮ ಪ್ರದರ್ಶನ ನೀಡಿದರು. 46 ಎಸೆತಗಳಲ್ಲಿ 9 ಫೋರ್ಗಳ ಸಹಿತ 159 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡಚ್ಚರು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು.
ಸೂಪರ್-8 ಸನಿಹಕ್ಕೆ ಬಂದ ಬಾಂಗ್ಲಾ
ಡಿ ಗುಂಪಿನಲ್ಲಿ ಅವಕಾಶ ಪಡೆದಿರುವ ಬಾಂಗ್ಲಾದೇಶ ಸೂಪರ್-8 ಸನಿಹಕ್ಕೆ ಬಂದಿದೆ. ಈಗಾಗಲೇ ಈ ಗುಂಪಿನಲ್ಲಿ ಸೌತ್ ಆಫ್ರಿಕಾ ತಂಡ ಸೂಪರ್-8 ಸುತ್ತಿಗೆ ಲಗ್ಗೆ ಇಟ್ಟಿದೆ. ಇದೀಗ ಎರಡನೇ ಸ್ಥಾನದಲ್ಲಿರುವ ಬಾಂಗ್ಲಾ, ಇನ್ನೊಂದು ಪಂದ್ಯ ಗೆದ್ದರೆ ಮುಂದಿನ ಹಂತಕ್ಕೆ ಎಂಟ್ರಿ ಕೊಡಲಿದೆ. ಬಾಂಗ್ಲಾ 4 ಅಂಕ ಪಡೆದಿದ್ದು, ಜೂನ್ 16ರಂದು ನೇಪಾಳ ವಿರುದ್ಧ ಸೆಣಸಾಟ ನಡೆಸಲಿದೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ