ಗೌತಮ್ ಗಂಭೀರ್ ಅಲ್ಲ, ಜಿಂಬಾಬ್ವೆ ಪ್ರವಾಸಕ್ಕೆ ಭಾರತದ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ ಸಾಧ್ಯತೆ
Jun 21, 2024 03:08 PM IST
ಜಿಂಬಾಬ್ವೆ ಪ್ರವಾಸಕ್ಕೆ ಭಾರತದ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ
- ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಮುಂದಿನ ಮುಖ್ಯ ಕೋಚ್ ಆಗುವ ಅಂತಿಮ ಹಂತದಲ್ಲಿದ್ದಾರೆ. ಆದರೆ, ಆದರೆ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್ ಇಂಡಿಯಾದೊಂದಿಗೆ ಪ್ರಯಾಣಿಸುವ ಸಾಧ್ಯತೆಯಿದೆ. ಇದಕ್ಕೆ ಕಾರಣ ಹೀಗಿದೆ.
ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ ಆಗಿ ವಿಶ್ವಕಪ್ ವಿಜೇತ ಆಟಗಾರ ಗೌತಮ್ ಗಂಭೀರ್ (Gautam Gambhir) ಆಯ್ಕೆಯಾಗುವುದು ಬಹುತೇಕ ಖಚಿತ. ಒಂದು ವೇಳೆ ಭಾರತ ಪುರುಷರ ಕ್ರಿಕೆಟ್ ತಂಡದ ಮುಂದಿನ ಮುಖ್ಯ ಕೋಚ್ ಆಗಿ ಗಂಭೀರ್ ನೇಮಕವಾದರೂ, ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡದೊಂದಿಗೆ ಪ್ರಯಾಣಿಸುವುದಿಲ್ಲ ಎಂದು ತಿಳಿದುಬಂದಿದೆ. ಈಗಾಗಲೇ ಗಂಭೀರ್ ಅವರನ್ನು ಬಿಸಿಸಿಐ ಸಂದರ್ಶನ ಮಾಡಿದೆ. ಪ್ರಸ್ತುತ ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುತ್ತಿದೆ. ಟೂರ್ನಿ ಬಳಿಕ ಟೀಮ್ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಸ್ಥಾನಕ್ಕೆ ಗಂಭೀರ್ ಅವರನ್ನು ನೇಮಿಸುವ ಸಾಧ್ಯತೆ ದಟ್ಟವಾಗಿದೆ.
ಹಾಲಿ ಮುಖ್ಯ ಕೋಚ್ ದ್ರಾವಿಡ್ ಅವರು, ಮತ್ತೊಂದು ಬಾರಿ ಉನ್ನತ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಸಿಸಿ ಟೂರ್ನಿಯು ಅವರ ಪಾಲಿನ ಕೊನೆಯ ಕರ್ತವ್ಯವಾಗಿದೆ. ಟಿ20 ವಿಶ್ವಕಪ್ ನಂತರ, ಭಾರತವು ಜುಲೈ ತಿಂಗಳಲ್ಲಿ ಐದು ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಕ್ಕೆ ಭಾರತ ತಂಡದ ಅನುಭವಿ ಆಟಗಾರರಿಗೆ ವಿಶ್ರಾಂತಿ ಸಿಗುವ ನಿರೀಕ್ಷೆಯಿದೆ.
ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ನೂತನ ಕೋಚ್ ಆಗಿ ನೇಮಕಗೊಂಡರೂ ಗಂಭೀರ್ ಭಾರತ ತಂಡದೊಂದಿಗೆ ಜಿಂಬಾಬ್ವೆಗೆ ಪ್ರಯಾಣಿಸುವುದಿಲ್ಲ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಹೀಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಜಿಂಬಾಬ್ವೆ ಸರಣಿಗೆ ಭಾರತ ತಂಡದೊಂದಿಗೆ ಕೋಚ್ ಆಗಿ ಪ್ರಯಾಣಿಸಲಿದ್ದಾರೆ. ಲಕ್ಷ್ಮಣ್ ಹಾಗೂ ಅವರೊಂದಿಗಿರುವ ಎನ್‌ಸಿಎ ಸಹಾಯಕ ಸಿಬ್ಬಂದಿ ಮುಂದಿನ ತಿಂಗಳು ಟಿ20 ಸರಣಿಗಾಗಿ ಭಾರತೀಯ ತಂಡದೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ.
ಜಿಂಬಾಬ್ವೆ ಸರಣಿಗೆ ಸೂರ್ಯಕುಮಾರ್ ಅಥವಾ ಹಾರ್ದಿಕ್ ನಾಯಕ
ಬಿಸಿಸಿಐ ಈ ವಾರದ ಕೊನೆಯಲ್ಲಿ ಟಿ20 ಪಂದ್ಯಗಳಿಗೆ ಭಾರತದ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಸರಣಿಗೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇತ್ತೀಚೆಗೆ ಪೂರ್ಣಗೊಂಡ ಐಪಿಎಲ್ 2024ರ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದು ಬಹುತೇಕ ಖಚಿತ. ಯುವ ಆಟಗಾರರ ತಂಡವನ್ನು ಸೂರ್ಯಕುಮಾರ್ ಯಾದವ್ ಅಥವಾ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ತಂಡಕ್ಕೆ ರಿಯಾನ್ ಪರಾಗ್, ನಿತೀಶ್ ರೆಡ್ಡಿ, ಮಯಾಂಕ್ ಯಾದವ್ ಅವರಂಥ ಆಟಗಾರರು ಆಯ್ಕೆಯಾಗುವ ಸಾಧ್ಯತೆ ಇದೆ.
ವಿವಿಎಸ್ ಲಕ್ಷ್ಮಣ್ ಭಾರತ ಯುವ ತಂಡದೊಂದಿಗೆ ಜಿಂಬಾಬ್ವೆಗೆ ಪ್ರಯಾಣಿಸುವ ಸಾಧ್ಯತೆಯಿದೆ. ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ತಂಡದ ಅಧಿಕಾರಾವಧಿಯಲ್ಲಿ ವಿರಾಮ ತೆಗೆದುಕೊಂಡಾಗಲೆಲ್ಲಾ, ಲಕ್ಷ್ಮಣ್ ಮತ್ತು ಎನ್‌ಸಿಎ ಸಿಬ್ಬಂದಿ ತಂಡವು ಭಾರತ ತಂಡಕ್ಕೆ ಕೋಚಿಂಗ್ ನೀಡಿದೆ, ಈ ಸಂಪ್ರದಾಯ ಮತ್ತೆ ಮುಂದುವರೆಯಲಿದೆ ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.
ಶ್ರೀಲಂಕಾ ಪ್ರವಾಸಕ್ಕೆ ಗೌತಮ್ ಗಂಭೀರ್ ಕೋಚ್
ಗೌತಮ್ ಗಂಭೀರ್ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ತಮ್ಮ ಕೋಚಿಂಗ್ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ಭಾರತ ತಂಡ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ತಲಾ 3 ಟಿ20 ಹಾಗೂ ಏಕದಿನ ಪಂದ್ಯಗಳನ್ನಾಡಲಿದೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾಟ್ ಕಮಿನ್ಸ್ ಹ್ಯಾಟ್ರಿಕ್, ವಾರ್ನರ್ ಅರ್ಧಶತಕ; ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾಗೆ 28 ರನ್ ಗೆಲುವು