ಕನ್ನಡ ಸುದ್ದಿ  /  ಕ್ರಿಕೆಟ್  /  ಸೂರ್ಯಕುಮಾರ್​​-ಜಸ್ಪ್ರೀತ್​ ಬುಮ್ರಾ ಮಿಂಚು; ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾಗೆ 47 ರನ್​ಗಳ ಗೆಲುವು

ಸೂರ್ಯಕುಮಾರ್​​-ಜಸ್ಪ್ರೀತ್​ ಬುಮ್ರಾ ಮಿಂಚು; ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾಗೆ 47 ರನ್​ಗಳ ಗೆಲುವು

India vs Afghanistan Super 8 : ಟಿ20 ವಿಶ್ವಕಪ್ 2024 ಸೂಪರ್​-8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ 47 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಸೂರ್ಯಕುಮಾರ್​​-ಜಸ್ಪ್ರೀತ್​ ಬುಮ್ರಾ ಮಿಂಚು; ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾಗೆ 47 ರನ್​ಗಳ ಗೆಲುವು
ಸೂರ್ಯಕುಮಾರ್​​-ಜಸ್ಪ್ರೀತ್​ ಬುಮ್ರಾ ಮಿಂಚು; ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾಗೆ 47 ರನ್​ಗಳ ಗೆಲುವು (AP)

ಟಿ20 ವಿಶ್ವಕಪ್ 2024 ಸೂಪರ್-8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ 47 ರನ್​ಗಳಿಂದ ಗೆದ್ದು ಬೀಗಿದೆ. ಸೂಪರ್​​-8 ಸುತ್ತಿನ 1ನೇ ಗುಂಪಿನಲ್ಲಿರುವ ಭಾರತ, ಮೊದಲ ಜಯ ದಾಖಲಿಸಿತು. ಬ್ಯಾಟಿಂಗ್​ನಲ್ಲಿ ಸೂರ್ಯಕುಮಾರ್​ ಅರ್ಧಶತಕ (53) ಮತ್ತು ಬೌಲಿಂಗ್​​ನಲ್ಲಿ ಜಸ್ಪ್ರೀತ್ ಬುಮ್ರಾ (7ಕ್ಕೆ 3) ದಾಳಿಗೆ ನಡುಗಿದ ಎದುರಾಳಿ ಬ್ಯಾಟರ್​​ಗಳು, ರನ್ ಗಳಿಸಲು ಪರದಾಡಿದರು. ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿದ ರೋಹಿತ್​ ಪಡೆ ಆಫ್ಘನ್ ಎದುರು ಅಜೇಯ 8ನೇ ಜಯದ ನಗೆ ಬೀರಿತು.

ಬಾರ್ಬಡೋಸ್​ನ ಕೆನ್ಸಿಂಗ್ಟನ್​ ಓವಲ್​​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ಉತ್ತಮ ಮೊತ್ತ ಕಲೆ ಹಾಕಿತು. ಸೂರ್ಯಕುಮಾರ್ ಯಾದವ್​ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ತನ್ನ ಪಾಲಿನ 20 ಓವರ್​​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ, ಭಾರತೀಯ ಬೌಲರ್​​​ಗಳ ದಾಳಿಗೆ ತತ್ತರಿಸಿತು. ಲೀಗ್​ನಲ್ಲಿ ಅಬ್ಬರಿಸಿದ್ದ ಬ್ಯಾಟರ್​​ಗಳು ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. 20 ಓವರ್​ಗಳಲ್ಲಿ 134ಕ್ಕೆ ಆಲೌಟ್ ಆಯಿತು.

ಜಸ್ಪ್ರೀತ್ ಬುಮ್ರಾ ಬೆಂಕಿ ಬೌಲಿಂಗ್​

182 ರನ್​ಗಳ ಗುರಿ ಹಿಂಬಾಲಿಸಿದ ಅಫ್ಘಾನಿಸ್ತಾನ, ಪವರ್​ಪ್ಲೇನಲ್ಲೇ 3 ವಿಕೆಟ್ ಕಳೆದುಕೊಂಡಿತು. ರೆಹಮಾನುಲ್ಲಾ ಗುರ್ಬಾಜ್ (11), ಹಜರುತ್ತುಲ್ಲಾ ಜಜೈ (2) ಮತ್ತು ಇಬ್ರಾಹಿಂ ಜದ್ರಾನ್ (8) ಬೇಗನೇ ಔಟಾದರು. ಬುಮ್ರಾ ಈ ವೇಳೆ 2 ವಿಕೆಟ್ ಪಡೆದು ಮಿಂಚಿದರು. ಬಳಿಕ ಅಜ್ಮತುಲ್ಲಾ ಒಮರ್ಜಾಯ್ (17) ಮತ್ತು ಗುಲ್ಬದೀನ್ ನೈಬ್ (26) ಚೇತರಿಕೆ ನೀಡಲು ಯತ್ನಿಸಿದರು. ಕುಲ್ದೀಪ್ ಮತ್ತು ಜಡೇಜಾ ಈ ಇಬ್ಬರನ್ನೂ ಹೊರದಬ್ಬಿದರು.

ಟ್ರೆಂಡಿಂಗ್​ ಸುದ್ದಿ

ನಂತರ ನಜೀಬುಲ್ಲಾ ಜದ್ರಾನ್ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಆಫ್ಘನ್ ಸೋಲಿನ ಸುಳಿಗೆ ಸಿಲುಕಿತು. ಇದರ ಬೆನ್ನಲ್ಲೇ ಕುಲ್ದೀಪ್ ಬೌಲಿಂಗ್​ನಲ್ಲಿ ಮೊಹಮ್ಮದ್ ನಬಿ (14) ಕೂಡ ಔಟಾದರು. ನಂತರ ರಶೀದ್ ಖಾನ್ (2) ಮತ್ತು ನವೀನ್ ಉಲ್ ಹಕ್ ಅವರನ್ನು ಆರ್ಷದೀಪ್ ಸಿಂಗ್ ಒಂದೇ ಓವರ್​​ನಲ್ಲಿ ಔಟ್ ಮಾಡಿದರು. ನಂತರ ಯಾವ ಹಂತದಲ್ಲೂ ಆಫ್ಘನ್ ಪುಟಿದೇಳಲು ಸಾಧ್ಯವಾಗಲಿಲ್ಲ. ಬೌಲರ್​​ಗಳ ದರ್ಬಾರ್ ಮುಂದೆ ಆಫ್ಘನ್ ಮಂಡಿಯೂರಿತು. ಬುಮ್ರಾ ಮತ್ತು ಅರ್ಷದೀಪ್ ತಲಾ 3 ವಿಕೆಟ್ ಪಡೆದರು.

ಸೂರ್ಯಕುಮಾರ್-ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್

ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಆರಂಭದಲ್ಲೇ ರೋಹಿತ್​ ಶರ್ಮಾ (8) ವಿಕೆಟ್ ಕಳೆದುಕೊಂಡಿತು. ಕಳೆದ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ, ಲಯಕ್ಕೆ ಮರಳುವ ವಿಶ್ವಾಸ ಮೂಡಿಸಿದರು. ಆದರೆ, 24ಕ್ಕೆ 24 ರನ್ ಗಳಿಸಿ ಔಟಾದರು. ರಿಷಭ್ ಪಂತ್ ಕೂಡ 20 ರನ್ ಗಳಿಸಲಷ್ಟೇ ಶಕ್ತರಾದರು. ಶಿವಂ ದುಬೆ (10) ಕೂಡ ನಿರಾಸೆ ಮೂಡಿಸಿದರು. ರಶೀದ್ ಮತ್ತು ಫಾರೂಕಿ ಆರಂಭಿಕ 4 ವಿಕೆಟ್ ಪಡೆದು ಮಿಂಚಿದರು.

ಆ ಬಳಿಕ ಸೂರ್ಯಕುಮಾರ್​ ಮತ್ತು ಹಾರ್ದಿಕ್ ಪಾಂಡ್ಯ ಸಂಕಷ್ಟಕ್ಕೆ ಸಿಲುಕಿದ ತಂಡವನ್ನು ಮೇಲೆತ್ತಿದರು. ಅದರಲ್ಲೂ ಸೂರ್ಯ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. 28 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಬಾರಿಸಿ ಔಟಾದರು. ಬಳಿಕ ಹಾರ್ದಿಕ್ ಬಿರುಸಿನ ಬ್ಯಾಟಿಂಗ್ ನಡೆಸಿ 180ರ ಗಡಿ ದಾಟಿಸಿದರು. 24 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 32 ರನ್ ಸಿಡಿಸಿದರು. ಫಜಲುಕ್ ಫಾರೂಕಿ ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಪಡೆದರು.

ಇನ್ನಷ್ಟು ಟಿ20 ವಿಶ್ವಕಪ್ 2024 ಪಂದ್ಯಗಳಿಗೆ ಇಲ್ಲಿ ಕ್ಲಿಕ್ ಮಾಡಿ