IND vs NZ: 7 ವಿಕೆಟ್ ಕಬಳಿಸಿ ವಾಷಿಂಗ್ಟನ್ ಸುಂದರ್ ಜೀವನಶ್ರೇಷ್ಠ ಸಾಧನೆ; 259 ರನ್‌ಗೆ ನ್ಯೂಜಿಲೆಂಡ್ ಆಲೌಟ್
Oct 24, 2024 04:26 PM IST
7 ವಿಕೆಟ್ ಕಬಳಿಸಿದ ವಾಷಿಂಗ್ಟನ್ ಸುಂದರ್; 259 ರನ್‌ಗೆ ನ್ಯೂಜಿಲೆಂಡ್ ಆಲೌಟ್
- Washington Sundar: ಕಿವೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ 7 ವಿಕೆಟ್ ಕಬಳಿಸಿದರು. ಇದೇ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಅವರು, ಪುಣೆ ಸ್ಟೇಡಿಯಂನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವು ಆಡುವ ಬಳಗವನ್ನು ಘೋಷಿಸಿದಾಗ ಅಭಿಮಾನಿಗಳಿಗೆ ಅಚ್ಚರಿಯಾಗಿತ್ತು. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ ಹೊರಗಿಟ್ಟು ವಾಷಿಂಗ್ಟನ್ ಸುಂದರ್ ಅವರಿಗೆ ಮಣೆ ಹಾಕಲಾಯ್ತು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಆಡುವ ಬಳಗಕ್ಕೆ ಆಯ್ಕೆಯಾಗಿದ್ದನ್ನು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಸಮರ್ಥಿಸಿಕೊಂಡಿದ್ದಾರೆ. ಕಿವೀಸ್ ಬಳಗದ 7 ಪ್ರಮುಖ ವಿಕೆಟ್ ಕಿತ್ತು, ಮೊದಲ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡ 259 ರನ್‌ಗಳಿಗೆ ಆಲೌಟ್ ಆಗುವಂತೆ ಮಾಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಬಳಗದ ಎಲ್ಲ 10 ಬ್ಯಾಟರ್‌ಗಳು ಭಾರತದ ಸ್ಪಿನ್ ದಾಳಿಗೆ ವಿಕೆಟ್ ಒಪ್ಪಿಸಿದರು. ಇವರಲ್ಲಿ ಸುಂದರ್ 7 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್ ಉಳಿದ 3 ವಿಕೆಟ್ ಪಡೆದರು. ಆರಂಭಿಕ ಮೂರು ವಿಕೆಟ್ ಅಶ್ವಿನ್ ಕಬಳಿಸಿದರೆ, ನಂತರದ ಏಳು ವಿಕೆಟ್‌ಗಳು ಸುಂದರ್ ಪಾಲಾದವು. ಇದರೊಂದಿಗೆ ವಾಷಿಂಗ್ಟನ್ ಸುಂದರ್ ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನ ಅತ್ಯುತ್ತಮ ಅಂಕ-ಅಂಶಗಳನ್ನು ದಾಖಲಿಸಿದರು. ಇದೇ ಮೊದಲ ಬಾರಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದರು. ಇದರೊಂದಿಗೆ ಕಿವೀಸ್ ಸರಣಿಗೆ ಆಡುವ ಬಳಗಕ್ಕೆ ತಮ್ಮ ಆಯ್ಕೆಯನ್ನು ತಮಿಳುನಾಡು ಆಟಗಾರ ಸಮರ್ಥಿಸಿಕೊಂಡರು.
ವಾಷಿಂಗ್ಟನ್ ಸುಂದರ್ ರಚಿನ್ ರವೀಂದ್ರ ವಿಕೆಟ್ ಕಬಳಿಸುವುದರೊಂದಿಗೆ ಆರಂಭದಲ್ಲೇ ಮಿಂಚು ಹರಿಸಿದರು. ಆ ನಂತರ ಟಾಮ್ ಬ್ಲಂಡೆಲ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್ ಅವರಂತಹ ಸಮರ್ಥ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಟಿಮ್ ಸೌಥಿಯನ್ನು ಬೌಲ್ಡ್ ಮಾಡಿದ ತಕ್ಷಣ, ಆಫ್ ಸ್ಪಿನ್ನರ್ ಟೆಸ್ಟ್‌ನಲ್ಲಿ ತನ್ನ ಮೊದಲ ಐದು ವಿಕೆಟ್ ಸಾಧನೆ ಪೂರ್ಣಗೊಳಿಸಿದರು. ಸುಂದರ್ ಪಡೆದ ಏಳು ವಿಕೆಟ್‌ಗಳ ಪೈಕಿ ಐವರು ಕ್ಲೀನ್ ಬೋಲ್ಡ್ ಆಗಿದ್ದು ವಿಶೇಷ.
ಐದು ವಿಕೆಟ್ ಸಾಧನೆಯೊಂದಿಗೆ ಸುಂದರ್ ಹಲವು ದಾಖಲೆಗಳನ್ನು ಮಾಡಿದ್ದಾರೆ. ಪುಣೆ ಸ್ಟೇಡಿಯಂನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನ್ಯೂಜಿಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಡಿವೋನ್ ಕಾನ್ವೆ 76 ರನ್ ಗಳಿಸಿದರು. ಕಿವೀಸ್ ಬಳಗದ ಗರಿಷ್ಠ ಮೊತ್ತ ಇದು. ಉಳಿದಂತೆ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಚಿನ್ ರವೀಂದ್ರ 65 ರನ್ ಗಳಿಸಿದರು. ಕೊನೆಯ ಹಂತದಲ್ಲಿ ಸಿಡಿದ ಮಿಚೆಲ್ ಸ್ಯಾಂಟ್ನರ್ 33 ರನ್ ಗಳಿಸಿದರು. ಮಿಚೆಲ್ ಹಾಗೂ ಯಂಗ್ ತಲಾ 18 ರನ್ ಪೇರಿಸಿದರು.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಭಾರತ ಪರ ಅತ್ಯುತ್ತಮ ಅಂಕಿಅಂಶಗಳು
- 8/72 - ಎಸ್ ವೆಂಕಟರಾಘವನ್, ದೆಹಲಿ 1965
- 8/76 - ಪ್ರಸನ್ನ, ಆಕ್ಲೆಂಡ್ 1975
- 7/59 - ಆರ್ ಅಶ್ವಿನ್, ಇಂದೋರ್ 2017
- 7/59 - ವಾಷಿಂಗ್ಟನ್ ಸುಂದರ್, ಪುಣೆ 2024
ಭಾರತದಲ್ಲಿ ನಡೆದ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಮೊದಲ ದಿನದಂದು ಎಲ್ಲಾ ಹತ್ತು ವಿಕೆಟ್ ಸ್ಪಿನ್ನರ್‌ಗಳು ಪಡೆದ ನಿದರ್ಶನ
- ಭಾರತ vs ನ್ಯೂಜಿಲೆಂಡ್, ಪುಣೆ 2024
- ಭಾರತ vs ಇಂಗ್ಲೆಂಡ್, ಧರ್ಮಶಾಲಾ 2024
- ಭಾರತ vs ಇಂಗ್ಲೆಂಡ್, ಚೆನ್ನೈ 1973
- ಭಾರತ vs ಆಸ್ಟ್ರೇಲಿಯಾ, ಚೆನ್ನೈ 1964
- ಭಾರತ vs ಆಸ್ಟ್ರೇಲಿಯಾ, ಕೋಲ್ಕತ್ತಾ 1956
- ಇಂಗ್ಲೆಂಡ್ vs ಭಾರತ, ಕಾನ್ಪುರ್ 1952
ಇದನ್ನೂ ಓದಿ | Explainer: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಆಡುವ ಬಳಗದಿಂದ ಕೆಎಲ್ ರಾಹುಲ್ ಹೊರಗಿಟ್ಟಿದ್ದೇಕೆ?