Explainer: ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಆಡುವ ಬಳಗದಿಂದ ಕೆಎಲ್ ರಾಹುಲ್ ಹೊರಗಿಟ್ಟಿದ್ದೇಕೆ?
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಆಡುವ ಬಳಗದಿಂದ ಕೆಎಲ್ ರಾಹುಲ್ ಹೊರಗಿಟ್ಟಿದ್ದೇಕೆ?

Explainer: ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಆಡುವ ಬಳಗದಿಂದ ಕೆಎಲ್ ರಾಹುಲ್ ಹೊರಗಿಟ್ಟಿದ್ದೇಕೆ?

ನ್ಯೂಜಿಲೆಂಡ್‌ ವಿರುದ್ಧದ ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್‌ ರಾಹುಲ್‌, ಪುಣೆ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ಆಡುವ ಬಳಗದಲ್ಲಿ ಶುಭ್ಮನ್‌ ಗಿಲ್‌ ಹಾಗೂ ಸರ್ಫರಾಜ್‌ ಖಾನ್‌ಗೆ ಸ್ಥಾನ ಸಿಕ್ಕಿದ್ದು, ರಾಹುಲ್‌ ಸ್ಥಾನ ಕಳೆದುಕೊಂಡಿದ್ದಾರೆ.

ಕಿವೀಸ್‌ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ತಂಡದಿಂದ ಕೆಎಲ್ ರಾಹುಲ್ ಹೊರಗಿಟ್ಟಿದ್ದೇಕೆ?
ಕಿವೀಸ್‌ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ತಂಡದಿಂದ ಕೆಎಲ್ ರಾಹುಲ್ ಹೊರಗಿಟ್ಟಿದ್ದೇಕೆ? (PTI)

ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಿನ ಟೆಸ್ಟ್‌ ಸರಣಿಯ ಎರಡನೇ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ಭಾರತ ತಂಡವು, ಎರಡನೇ ಟೆಸ್ಟ್‌ನಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಸೋತರೆ, ಭಾರತವು 12 ವರ್ಷಗಳ ನಂತರ ತವರಿನಲ್ಲಿ ಮೊದಲ ಟೆಸ್ಟ್ ಸರಣಿಯನ್ನು ಸೋತಂತಾಗುತ್ತದೆ. ಅಲ್ಲದೆ ಡಬ್ಲ್ಯುಟಿಸಿ ಫೈನಲ್‌ಗೇರುವ ತುಡಿತದಲ್ಲಿರುವ ರೋಹಿತ್‌ ಶರ್ಮಾ ಪಡೆಗೆ, ಪ್ರತಿ ಗೆಲುವೂ ಅನಿವಾರ್ಯವಾಗಿದೆ. ಹೀಗಾಗಿ ಭಾರತ ತಂಡವು ಪುಣೆ ಟೆಸ್ಟ್‌ಗಾಗಿ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಸ್ಟಾರ್‌ ಆಟಗಾರರನ್ನು ತಂಡದಿಂದ ಹೊರಗಿಟ್ಟಿರುವ ಮ್ಯಾನೇಜ್‌ಮೆಂಟ್‌, ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕೂಡಾ ಹೊರಗಿಟ್ಟು ಅಚ್ಚರಿ ಮೂಡಿಸಿದೆ.

ಕೆಎಲ್ ರಾಹುಲ್ ಕೈಬಿಡಲು ಕಾರಣವೇನು?

ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಪ್ರದರ್ಶನ ಹೇಗಿತ್ತು ಎಂಬುದು ಗೊತ್ತೇ ಇದೆ. ತವರು ಮೈದಾನದಲ್ಲಿ ಕನ್ನಡಿಗರ ನೆಚ್ಚಿನ ಆಟಗಾರನಾಗಿ ಮೈದಾನಕ್ಕಿಳಿದ ಅವರು, ಅಭಿಮಾನಿಗಳಿಗೆ ಭಾರಿ ನಿರಾಶೆ ಮೂಡಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಡಕೌಟ್ ಆಗಿದ್ದಲ್ಲದೇ, ಎರಡನೇ ಇನ್ನಿಂಗ್ಸ್‌ನಲ್ಲಿಯೂ ವಿಫಲರಾದರು. ಎಲ್ಲರೂ ಅಬ್ಬರದ ಪ್ರದರ್ಶನ ನೀಡುತ್ತಿದ್ದಾಗ ರಾಹುಲ್‌ ಮಾತ್ರ 16 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಸತತ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲ ಪ್ರದರ್ಶನವು ರಾಹುಲ್‌ ಸ್ಥಾನಕ್ಕೆ ನಿರೀಕ್ಷಿತವಾಗಿ ಕುತ್ತು ತಂದಿದೆ.

ಮೊದಲ ಟೆಸ್ಟ್‌ನಲ್ಲಿ ಶುಭ್ಮನ್ ಗಿಲ್‌ ಆಡಿರಲಿಲ್ಲ. ಗಾಯಗೊಂಡಿದ್ದ ಅವರ ಬದಲಿಗೆ ಸರ್ಫರಾಜ್ ಖಾನ್ ಆಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಡಕೌಟ್‌ ಆಗಿದ್ದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿದರು. 150 ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿದರು. ಹೀಗಾಗಿ ಫಾರ್ಮ್‌ನಲ್ಲಿರುವಾಗ ಸರ್ಫರಾಜ್ ಅವರನ್ನು ತಂಡದಿಂದ ಹೊರಗಿಡುವುದು ನ್ಯಾಯೋಚಿತವಲ್ಲ. ಕುತ್ತಿಗೆಯ ಗಾಯದಿಂದ ಗುಣಮುಖರಾದ ಶುಭ್ಮನ್ ಗಿಲ್ ಎರಡನೇ ಟೆಸ್ಟ್‌ಗೆ ತಂಡಕ್ಕೆ ಮರಳಿದ್ದಾರೆ. ಇದು ರಾಹುಲ್‌ ಸ್ಥಾನಕ್ಕೆ ಅಡ್ಡಿಯಾಗಿದೆ. ಸರ್ಫರಾಜ್‌ ಅವರನ್ನು ತಂಡದಲ್ಲೇ ಉಳಿಸಿಕೊಂಡಿದ್ದು, ಕೆಎಲ್ ರಾಹುಲ್‌ ಅವರನ್ನು ಹೊರಗಿಡಲಾಗಿದೆ.

ತಂಡದಲ್ಲಿ ಮೂರು ಬದಲಾವಣೆ

ಎರಡನೇ ಟೆಸ್ಟ್‌ ಪಂದ್ಯಕ್ಕಾಗಿ ಟೀಮ್‌ ಇಂಡಿಯಾದಲ್ಲಿ ಮೂರು ಪ್ರಮುಖ ಬದಲಾವಣೆ ಮಾಡಲಾಗಿದೆ. ಕೆಎಲ್ ರಾಹುಲ್ ಜೊತೆಗೆ ಇನ್ನಿಬ್ಬರು ಸ್ಥಾನ ಕಳೆದುಕೊಂಡಿದ್ದಾರೆ. ಸ್ಪಿನ್ನರ್‌ ಕುಲದೀಪ್ ಯಾದವ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಹಾಗೂ ವೇಗಿ ಆಕಾಶ್ ದೀಪ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್‌ಗೆ ಭಾರತದ ಆಡುವ ಬಳಗ

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್‌ (ವಿಕೆಟ್‌ ಕೀಪರ್), ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ.

Whats_app_banner