ಏಷ್ಯಾಕಪ್ ಫೈನಲ್‌ಗೂ ಮುನ್ನ ಸ್ಟಾರ್ ಆಲ್‌ರೌಂಡರ್‌ಗೆ ಗಾಯ; ಕೊಲಂಬೊಗೆ ಹಾರಿದ ವಾಷಿಂಗ್ಟನ್ ಸುಂದರ್
Sep 16, 2023 02:42 PM IST
ಭಾರತದ ಸ್ಟಾರ್ ಆಲ್‌ರೌಂಡರ್‌ಗೆ ಗಾಯ
- Asia Cup 2023 final: ಗಾಯಗೊಂಡಿರುವ ಭಾರತದ ಆಲ್‌ರೌಂಡರ್ ಬದಲಿಗೆ ಬ್ಯಾಕ್‌ಅಪ್ ಆಟಗಾರನಾಗಿ ಮತ್ತೋರ್ವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೊಲಂಬೊಗೆ ಹಾರಿದ್ದಾರೆ ಎಂದು ವರದಿಯಾಗಿದೆ.
ಏಷ್ಯಾಕಪ್ 2023ರ (Asia Cup 2023) ಆವೃತ್ತಿಯ ಮಹತ್ವದ ಫೈನಲ್ ಪಂದ್ಯದಿಂದ ಭಾರತದ ಸ್ಟಾರ್ ಆಲ್‌ರೌಂಡರ್ ಬಹುತೇಕ ಹೊರಬಿದ್ದಿದ್ದಾರೆ. ಅವರ ಬದಲಿಗೆ ಬ್ಯಾಕ್‌ಅಪ್ ಆಟಗಾರನಾಗಿ ಮತ್ತೋರ್ವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಕೊಲಂಬೊಗೆ ಹಾರಿದ್ದಾರೆ ಎಂದು ವರದಿಯಾಗಿದೆ.
ಸುದ್ದಿಸಂಸ್ಥೆ ಪಿಟಿಐ ಮತ್ತು ಕ್ರಿಕ್‌ಬಜ್ ವರದಿಯ ಪ್ರಕಾರ, ಆಲ್‌ರೌಂಡರ್ ಅಕ್ಷರ್ ಪಟೇಲ್ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಫಿಟ್ ಆಗುವ ಸಾಧ್ಯತೆ ಕಡಿಮೆ. ಶುಕ್ರವಾರ ನಡೆದ ಏಷ್ಯಾಕಪ್ ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಬ್ಯಾಟಿಂಗ್ ಮಾಡುವಾಗ, ಅಕ್ಷರ್ ಅವರ ಮಣಿಕಟ್ಟು ಮತ್ತು ಮುಂದೋಳಿನ ಭಾಗಕ್ಕೆ ಗಾಯವಾಗಿತ್ತು. ಡೆತ್ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದಾಗ, ಒಂದೆರಡು ಬಾರಿ ಅದೇ ಜಾಗಕ್ಕೆ ಚೆಂಡು ಬಡಿದು ಪೆಟ್ಟಾಗಿತ್ತು. ಹೀಗಾಗಿ ಲಂಕಾ ವಿರುದ್ಧದ ಪಂದ್ಯಕ್ಕೆ ಅಕ್ಷರ್ ಪಟೇಲ್ ಕಣಕ್ಕಿಳಿಯುವುದು ಅನುಮಾನ. ಇದೇ ಕಾರಣಕ್ಕೆ ಏಷ್ಯಾಕಪ್ ಫೈನಲ್‌ಗೆ ಮುಂಚಿತವಾಗಿ ಕೊನೆಯ ಹಂತದಲ್ಲಿ ಅಕ್ಷರ್ ಸ್ಥಾನವನ್ನು ತುಂಬಬೇಕಾಗಿದೆ. ಈ ಕಾರಣಕ್ಕೆ ವಾಷಿಂಗ್ಟನ್ ಸುಂದರ್ ಕೊಲಂಬೊಗೆ ಹಾರಿದ್ದಾರೆ ಎಂದು ವರದಿ ಹೇಳಿದೆ.
ಮುಂಜಾಗ್ರತಾ ಕ್ರಮ
ಅಕ್ಷರ್ ಅವರ ಗಾಯದ ತೀವ್ರತೆಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಸುಂದರ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.
ಮಂಡಿರಜ್ಜು ಸಮಸ್ಯೆ
ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ, ಮುಂದೋಳಿನ ಊತವನ್ನು ಹೊರತುಪಡಿಸಿ, ಅಕ್ಷರ್ ಅವರಿಗೆ ಮಂಡಿರಜ್ಜು ಸಮಸ್ಯೆಯೂ ಇದೆ. ಹೀಗಾಗಿ ಹೆಚ್ಚಿನ ಮುಂಜಾಗ್ರತೆ ವಹಿಸಲಾಗುತ್ತಿದೆ. ಮಹತ್ವದ ವಿಶ್ವಕಪ್‌ಗೆ ಇನ್ನು ಕೇವಲ ಮೂರು ವಾರಗಳು ಮಾತ್ರ ಉಳಿದಿವೆ. ಪ್ರಮುಖ ಆಲ್‌ರೌಂಡರ್ ಭಾರತ ವಿಶ್ವಕಪ್ ತಂಡಕ್ಕೆ ಆಲ್‌ರೌಂಡರ್ ಆಗಿ ಆಯ್ಕೆಯಾಗಿದ್ದಾರೆ. ಗಾಯದಿಂದಾಗಿ ಅವರು ಹೊರಗುಳಿಯುವಂತಾದರೆ, ತಂಡದ ಮ್ಯಾನೇಜ್‌ಮೆಂಟ್‌ಗೆ ಚಿಂತೆಯಾಗಲಿದೆ. ಅಲ್ಲದೆ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಾಗುತ್ತದೆ.
ವಾಷಿಂಗ್ಟನ್ ಸುಂದರ್ ಕೊಲಂಬೊಗೆ ಹಾರಿರುವ ಕುರಿತಾಗಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡಾ ಸುಳಿವು ನೀಡಿದ್ದಾರೆ. “ವಾಷಿಂಗ್ಟನ್ ಸುಂದರ್ ವಿಮಾನ ನಿಲ್ದಾಣದಲ್ಲಿ ನನ್ನ ಕಣ್ಣಿಗೆ ಬಿದ್ದಿದ್ದಾರೆ. ಅವರು ಎಲ್ಲಿಗೆ ಹೊರಟಿದ್ದಾರೆ ಎಂಬುದನ್ನು ಊಹಿಸಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಕ್ಷರ್ ಉತ್ತಮ ಪ್ರದರ್ಶನ ನೀಡಿದ್ದರು. ಶತಕ ಸಿಡಿಸಿ ಶುಭ್ಮನ್ ಗಿಲ್ ಔಟಾದ ಬಳಿಕ ಅಕ್ಷರ್ ಪಟೇಲ್ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರು. ಕೊನೆಯ ಹಂತದಲ್ಲಿ ಅಕ್ಷರ್ ಪಟೇಲ್ ಮತ್ತು ಶಾರ್ದುಲ್ ಠಾಕೂರ್ ತಂಡಕ್ಕೆ ಗೆಲುವಿನ ಭರವಸೆ ನೀಡಿದರು. ಸಂಕಷ್ಟದ ಸನ್ನಿವೇಶದಲ್ಲಿ 34 ಎಸೆತಗಳಲ್ಲಿ ಅಮೂಲ್ಯ 42 ರನ್ ಕೊಡುಗೆ ನೀಡಿ ಅಂತಿಮವಾಗಿ ಔಟಾದರು. ಅಂತಿಮವಾಗಿ ಇನ್ನೂ ಒಂದು ಎಸೆತ ಬಾಕಿ ಉಳಿದಿರುವಾಗ ಮೊಹಮ್ಮದ್ ಶಮಿ ರನೌಟ್ ಆಗುವುದರೊಂದಿಗೆ ಭಾರತ ತಂಡವು 6 ರನ್‌ಗಳಿಂದ ಸೋತಿತು.
ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಸೋಲು
ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ತಂಡ ಸೋಲೊಪ್ಪಿದೆ.ಕೊಲಂಬೊದ ಆರ್ ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, 266 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತು. ಗುರಿ ಬೆನ್ನಟ್ಟಿದ ಭಾರತ, ಅಂತಿಮವಾಗಿ 49.5 ಓವರ್‌ಗಳಲ್ಲಿ 259 ರನ್ ಗಳಿಸಿ ಸೋಲೊಪ್ಪಿದೆ. ಆ ಮೂಲಕ ಬಾಂಗ್ಲಾದೇಶವು 6 ರನ್‌ಗಳಿಂದ ರೋಚಕವಾಗಿ ಗೆದ್ದು ಏಷ್ಯಾಕಪ್ ಅಭಿಯಾನ ಮುಗಿಸಿದೆ.