ಏಷ್ಯಾಕಪ್​ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಸೋಲು; ಶುಭ್ಮನ್ ಗಿಲ್ ಶತಕ ವ್ಯರ್ಥ
ಕನ್ನಡ ಸುದ್ದಿ  /  ಕ್ರಿಕೆಟ್  /  ಏಷ್ಯಾಕಪ್​ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಸೋಲು; ಶುಭ್ಮನ್ ಗಿಲ್ ಶತಕ ವ್ಯರ್ಥ

ಏಷ್ಯಾಕಪ್​ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಸೋಲು; ಶುಭ್ಮನ್ ಗಿಲ್ ಶತಕ ವ್ಯರ್ಥ

India vs Bangladesh: ಏಷ್ಯಾಕಪ್​ ಸೂಪರ್​ 4ನ ಅಂತಿಮ ಪಂದ್ಯದಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ ಗೆದ್ದಿದೆ. ಭಾರತವು ಫೈನಲ್‌ ಪಂದ್ಯಕ್ಕೂ ಮುನ್ನ ಸೋಲಿನ ಕಹಿ ಅನುಭವಿಸಿದರೆ, ಬಾಂಗ್ಲಾ ತಂಡವು ಗೆಲುವಿನೊಂದಿಗೆ ತವರಿಗೆ ಮರಳುತ್ತಿದೆ.

ಭಾರತ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು
ಭಾರತ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು (AFP)

ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್‌ ಸೂಪರ್‌ ಫೋರ್‌ ಪಂದ್ಯದಲ್ಲಿ ಭಾರತ ತಂಡ (India vs Bangladesh) ಸೋಲೊಪ್ಪಿದೆ. ಈಗಾಗಲೇ ಏಷ್ಯಾಕಪ್ ಫೈನಲ್ ಪ್ರವೇಶಿಸಿರುವ ರೋಹಿತ್ ಪಡೆ, ತನ್ನ ಔಪಚಾರಿಕ ಪಂದ್ಯದಲ್ಲಿ‌ ಮುಗ್ಗರಿಸಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಹೊಸಬರಿಗೆ ಮಣೆ ಹಾಕಿದ್ದ ರೋಹಿತ್‌ ಪಡೆಗೆ, ಶಕೀಬ್‌ ಪಡೆ ಸೋಲಿನ ರುಚಿ ತೋರಿಸಿದೆ.

ಕೊಲಂಬೊದ ಆರ್​ ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ, 266 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿತು. ಗುರಿ ಬೆನ್ನಟ್ಟಿದ ಭಾರತ, ಅಂತಿಮವಾಗಿ 49.5 ಓವರ್‌ಗಳಲ್ಲಿ 259 ರನ್‌ ಗಳಿಸಿ ಸೋಲೊಪ್ಪಿದೆ. ಆ ಮೂಲಕ ಬಾಂಗ್ಲಾದೇಶವು 6 ರನ್‌ಗಳಿಂದ ರೋಚಕವಾಗಿ ಗೆದ್ದು ಏಷ್ಯಾಕಪ್‌ ಅಭಿಯಾನ ಮುಗಿಸಿದೆ. ಏಷ್ಯಾಕಪ್‌ ಇತಿಹಾಸದಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶಕ್ಕೆ ಇದು ಎರಡನೇ ಜಯವಾಗಿದೆ. ಈ ಹಿಂದೆ 2012ರಲ್ಲಿ ಕೊನೆಯ ಬಾರಿ ಭಾರತದ ವಿರುದ್ಧ ಗೆದ್ದಿತ್ತು.

ವಿರಾಟ್ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್‌ ಶಮಿ ಮತ್ತು ಕುಲ್ದೀಪ್‌ ಯಾದವ್‌ಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌, ಮೊಹಮ್ಮದ್‌ ಶಮಿ, ಪ್ರಸಿದ್ಧ್ ಕೃಷ್ಣ ಆಡುವ ಅವಕಾಶ ಪಡೆದರು. ತಂಡದ ಗೆಲುವಿಗೆ ಈ ಬದಲಾವಣೆಯಿಂದ ಯಾವುದೇ ಅನುಕೂಲವಾಗಲಿಲ್ಲ.

ಭಾರತದ ಕಳಪೆ ಆರಂಭ

ಸರಳ ಮೊತ್ತ ಬೆನ್ನಟ್ಟಲು ಮುಂದಾದ ಭಾರತ ಮೊದಲ ಓವರ್‌ನಲ್ಲೇ ನಾಯಕ ರೋಹಿತ್‌ ಶರ್ಮಾ ವಿಕೆಟ್‌ ಕಳೆದುಕೊಂಡಿತು. ಬಾಂಗ್ಲಾ ಪರ ಏಕದಿನ ಪದಾರ್ಪಣೆ ಮಾಡಿದ ತಂಜಿಮ್‌ ಹಸನ್‌ ಮೇಲಿಂದ ಮೇಲೆ ರೋಹಿತ್‌ ಶರ್ಮಾ (0) ಹಾಗೂ ತಿಲಕ್‌ ವರ್ಮಾ (5) ವಿಕೆಟ್‌ ಪಡೆದು ಮಿಂಚಿದರು. ಒಂದು ಹಂತದಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಕೆಎಲ್ ರಾಹುಲ್ ಮಾತ್ತು ಗಿಲ್‌ ಆಸರೆಯಾದರು. ಈ ಜೋಡಿ ಮೂರನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟವಾಡಿದರು. ರಾಹುಲ್ 19 ರನ್‌ ಗಳಿಸಿ ಮೆಹೆದಿ ಹಸನ್‌ಗೆ ವಿಕೆಟ್‌ ಒಪ್ಪಿಸಿದರೆ, ಸೂರ್ಯಕುಮಾರ್ ಯಾದವ್ (26) ಮತ್ತು ರವೀಂದ್ರ ಜಡೇಜಾ (7) ಕೂಡಾ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಶುಭ್ಮನ್‌ ಗಿಲ್‌ ಶತಕ

ಒಂದು ಕಡೆಯಿಂದ ವಿಕೆಟ್‌ಗಳು ಪತನವಾಗುತ್ತಿದ್ದರೂ, ಜವಾಬ್ದಾರಿಯುತವಾಗಿ ನಿರಾತಂಕದಿಂದ ಬ್ಯಾಟ್‌ ಬೀಸಿದ ಆರಂಭಿಕ ಆಟಗಾರ ಶುಭ್ಮನ್‌ ಗಿಲ್‌ ಐದನೇ ಏಕದಿನ ಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಅವರು ಈ ವರ್ಷ ಏಕದಿನ ಸ್ವರೂಪದಲ್ಲಿ 1000 ರನ್‌ ಗಳಿಸಿದ ಸಾಧನೆ ಮಾಡಿದರು. 5 ಸಿಕ್ಸರ್‌ ಸಹಿತ 121 ರನ್‌ ಗಳಿಸಿ ಗಿಲ್‌ ಔಟಾದ ಬಳಿಕ ಭಾರತದ ಗೆಲುವಿನ ಭರವಸೆ ಬಹುತೇಕ ಕಮರಿತು. ಕೊನೆಯ ಹಂತದಲ್ಲಿ ಅಕ್ಷರ್‌ ಪಟೇಲ್‌ ಮತ್ತು ಶಾರ್ದುಲ್‌ ಠಾಕೂರ್‌ ತುಸು ಭರವಸೆ ಮೂಡಿಸಿದರು. 42 ರನ್‌ ಗಳಿಸಿ ಅಕ್ಷರ್‌ ಪಟೇಲ್‌ ಔಟಾಗುವುದರೊಂದಿಗೆ ಭಾರತವು ಸೋಲಿನ ಸಮೀಪ ಬಂತು. ಅಂತಿಮವಾಗಿ ಇನ್ನೂ ಒಂದು ಎಸೆತ ಬಾಕಿ ಉಳಿದಿರುವಾಗ ಮೊಹಮ್ಮದ್‌ ಶಮಿ ರನೌಟ್ ಆಗುವುದರೊಂದಿಗೆ ಭಾರತ ತಂಡವು 6 ರನ್‌ಗಳಿಂದ ಸೋತಿತು.

ಬಾಂಗ್ಲಾ ಸ್ಪರ್ಧಾತ್ಮಕ ಮೊತ್ತ

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಭಾರತೀಯ ವೇಗಿಗಳ ಮಾರಕ ದಾಳಿಗೆ, ಬಾಂಗ್ಲಾ ಆರಂಭಿಕರು ಪೆಲಿವಿಯನ್ ಪರೇಡ್ ನಡೆಸಿದರು. ತಂಜಿದ್ ಹಸನ್ 13 ರನ್‌ ಗಳಿಸಿ ಔಟಾದರೆ, ಅನಾಮುಲ್ ಹಕ್​​ 4 ಋನ್‌ ಗಳಿಸಿದ್ದಾಗ ಶಾರ್ದೂಲ್​ ಠಾಕೂರ್​ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಲಿಟ್ಟನ್ ದಾಸ್​ ಖಾತೆ ತೆರೆಯದೆ ನಿರ್ಗಮಿಸಿದರು. ಮೆಹಿದಿ ಹಸನ್ ಮಿರಾಜ್ 13 ರನ್‌ ಗಳಿಸಿ ಅಕ್ಷರ್​​ ಪಟೇಲ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು.

59 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾಗೆ ನಾಯಕ ಶಕೀಬ್ ಅಲ್ ಹಸನ್ ಮತ್ತು ತೌಹಿದ್ ಹೃದೋಯ್​ ಆಸರೆಯಾದರು. ಇವರಿಬ್ಬರೂ ತಲಾ ಅರ್ಧಶತಕ ಸಿಡಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಭಾರತೀಯ ಬೌಲರ್​​ಗಳಿಗೆ ಕಾಡಿದ ಶಕೀಬ್​, ವೃತ್ತಿಜೀವನದ 55ನೇ ಅರ್ಧಶತಕ ಸಿಡಿಸಿದರು. ಅರ್ಧಶತಕದ ಬಳಿಕವೂ ಅಬ್ಬರಿಸಿದ ಶಕೀಬ್​, 85 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್​​ಗಳ ನೆರವಿನಿಂದ 80 ರನ್​ ಗಳಿಸಿ ಶಾರ್ದೂಲ್​ಗೆ ವಿಕೆಟ್​ ಒಪ್ಪಿಸಿದರು. ಶಕೀಬ್​ಗೆ ಉತ್ತಮ ಸಾಥ್ ನೀಡಿದ ತೌಹಿದ್ ಹೃದೋಯ್ ಕೂಡ ಅರ್ಧಶತಕ ಸಿಡಿಸಿದರು. ವೃತ್ತಿಜೀವನದ ಐದನೇ ಅರ್ಧಶತಕ ಸಿಡಿಸಿದ ತೌಹಿದ್, 81 ಎಸೆತಗಳಲ್ಲಿ 54 ರನ್​ ಗಳಿಸಿ ಶಮಿ ಬೌಲಿಂಗ್​ನಲ್ಲಿ ಔಟಾದರು. ಶಕೀಬ್​​ ಮತ್ತು ತೌಹಿದ್ ಸೇರಿ​ 5ನೇ ವಿಕೆಟ್​ಗೆ 115 ಎಸೆತಗಳಲ್ಲಿ 101 ರನ್ ಪಾಲುದಾರಿ ನೀಡಿರುವುದು ವಿಶೇಷ.

ಭಾರತದ ಪರ ಶಾರ್ದೂಲ್​ ಠಾಕೂರ್ 3 ವಿಕೆಟ್‌ ಪಡೆದರೆ, ಮೊಹಮ್ಮದ್ ಶಮಿ 2 ವಿಕೆಟ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.

Whats_app_banner