ಕೊಹ್ಲಿಗೆ ಅಸಾಧ್ಯ ಯಾವುದೂ ಇಲ್ಲ, ಆತ ಏನಾದರೂ ಸಾಧಿಸಬಲ್ಲ; ಶತಕಗಳ ಶತಕದ ಬಗ್ಗೆ ವಿಂಡೀಸ್ ದಿಗ್ಗಜ ವಿಶ್ವಾಸ
Jan 12, 2024 03:04 PM IST
ವಿರಾಟ್ ಕೊಹ್ಲಿಯಿಂದ ಎಲ್ಲವೂ ಸಾಧ್ಯ ಎಂದ ವಿಂಡೀಸ್ ದಿಗ್ಗಜ ಕ್ಲೈವ್ ಲಾಯ್ಡ್
- Clive Lloyd on Virat Kohli: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯುತ್ತಾರೆ ಎಂದು ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಕ್ಲೈವ್ ಲಾಯ್ಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ, ಟೀಮ್ ಇಂಡಿಯಾ ವಿಶ್ವಕಪ್ ಎತ್ತಿ ಹಿಡಿಯಲು ವಿಫಲವಾಯ್ತು. ಆದರೆ ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ (Virat Kohli) ಮಾಡಿದ ಐತಿಹಾಸಿಕ ದಾಖಲೆಯು ಜಾಗತಿಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿತು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆ ಮುರಿದು, ಬರೋಬ್ಬರಿ 50 ಶತಕ ಸಿಡಿಸುವ ಮೂಲಕ ಕ್ರಿಕೆಟ್ ಲೋಕದಲ್ಲಿ ಕಿಂಗ್ ಕೊಹ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಈಗ ಮುಂದಿನ ರೆಕಾರ್ಡ್ ಬ್ರೇಕ್ ಯಾವುದು ಎಂಬುದೇ ಅಭಿಮಾನಿಗಳ ಪ್ರಶ್ನೆ.
ಈಗಾಗಲೇ 50 ಏಕದಿನ ಶತಕಗಳ ಮೈಲಿಗಲ್ಲು ತಲುಪಿರುವ ವಿರಾಟ್ ಕೊಹ್ಲಿ ಮುಂದಿರುವುದು ಒಂದೇ ಒಂದು ಸಂಖ್ಯೆ. ಅದುವೇ ನೂರರ 100. ಅಂದರೆ ಶತಕಗಳ ಶತಕ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಗಳಿಸಿರುವ ಶತಕಗಳ ಸಂಖ್ಯೆ. ಪ್ರಸ್ತುತ 80 ಶತಕ ಸಿಡಿಸಿರುವ ಕೊಹ್ಲಿಗೆ ಸದ್ಯ 35 ವರ್ಷ ವಯಸ್ಸು. ಏನಿಲ್ಲವಾದರೂ ಇನ್ನೂ ಕನಿಷ್ಠ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡುವ ಅದಮ್ಯ ಉತ್ಸಾಹ ಹಾಗೂ ಫಿಟ್‌ನೆಸ್ ಕೊಹ್ಲಿ ಬಳಿ ಇದೆ.
ವಿಶ್ವದ ಅತ್ಯಂತ ಫಿಟ್ ಅಥ್ಲೀಟ್‌ಗಳಲ್ಲಿ ಒಬ್ಬರಾಗಿರುವ ಕೊಹ್ಲಿಗೆ ಯಾವುದೇ ಪಂದ್ಯ ಅಥವಾ ಸರಣಿಗಳಲ್ಲಿ ಆಡುವ ಆಯ್ಕೆ ಮಾಡುವ ಅವಕಾಶವಂತೂ ಇದ್ದೇ ಇದೆ. ಮುಂದಿನ ಒಂದೆರಡು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರಲಿರುವ ಕೊಹ್ಲಿಗೆ ಈ ದಾಖಲೆ ಮುರಿಯೋದು ದೊಡ್ಡ ಕೆಲಸವೇ ಅಲ್ಲ.
ಇದನ್ನೂ ಓದಿ | ಶಿವಂ ದುಬೆ ಸ್ಫೋಟಕ ಅರ್ಧಶತಕ; ಮೊದಲ ಟಿ20ಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ
ಈ ವರ್ಷ ಭಾರತವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೇರಿದಂತೆ ಹಲವು ಪಂದ್ಯಗಳಲ್ಲಿ ಆಡಲಿದೆ. ಹೀಗಾಗಿ ಕೊಹ್ಲಿ ಈ ವರ್ಷ ಅಥವಾ ಮುಂದಿನ ವರ್ಷದಲ್ಲಿ ನೂರು ಶತಕಗಳ ಗಡಿ ದಾಟುವ ಸಾಧ್ಯತೆಯಂತೂ ಇದ್ದೇ ಇದೆ. ಈ ಬಗ್ಗೆ ಭಾರತೀಯರು ಮಾತ್ರವಲ್ಲ. ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ಲೈವ್ ಲಾಯ್ಡ್ ಕೂಡಾ ಅಪಾರ ಭರವಸೆ ಹೊಂದಿದ್ದಾರೆ.
1975ಮತ್ತು 1979ರಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಆಟಗಾರ ಲಾಯ್ಡ್, ಕೊಹ್ಲಿ ಕೈಯಿಂದ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂದು ಬಲವಾಗಿ ನಂಬಿದ್ದಾರೆ.
“ನನಗೆ ಅವಧಿ, ಸಮಯದ ಬಗ್ಗೆ ಗೊತ್ತಿಲ್ಲ. ಆದರೆ ಆತ ಇನ್ನೂ ಚಿಕ್ಕವನು. ಆಡುವ ಸಾಮರ್ಥ್ಯ ಇನ್ನೂ ಇದೆ. ಅವನು ಆಡುವ ರೀತಿ ನೋಡಿದರೆ, ತಾನು ಸಾಧಿಸಲು ಬಯಸುವ ಎಲ್ಲವನ್ನೂ ಸಾಧಿಸಬಹುದು ಎಂಬುದು ನನಗಂತೂ ಖಾತ್ರಿಯಿದೆ. ಆತ ಅದನ್ನು ಸಾಧಿಸಿದರೆ ತುಂಬಾ ಸಂತೋಷವಾಗುತ್ತದೆ” ಎಂದು ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲಾಯ್ಡ್ ಹೇಳಿದರು.
ಸದ್ಯ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಕೊಹ್ಲಿ, ವೈಯಕ್ತಿಕ ಕಾರಣಗಳಿಗಾಗಿ ಗುರುವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆಡಿಲ್ಲ. ಎರಡನೇ ಪಂದ್ಯದಿಂದ ಅವರು ತಂಡ ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ | ವಿರಾಟ್ ಕೊಹ್ಲಿ ಕಂಬ್ಯಾಕ್, ತಿಲಕ್ ವರ್ಮಾ ಔಟ್; ಅಫ್ಘನ್ ವಿರುದ್ಧದ 2ನೇ ಟಿ20ಗೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್/ ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್.