ವಿರಾಟ್ ಕೊಹ್ಲಿ ಸತತ ವೈಫಲ್ಯ; ಸ್ಟ್ರೈಕ್ರೇಟ್ ಟೀಕಿಸಿದ್ದ ಬೆನ್ನಲ್ಲೇ ಈಗ ಮಾಜಿ ನಾಯಕನ ಬೆಂಬಲಕ್ಕೆ ನಿಂತ ಸುನಿಲ್ ಗವಾಸ್ಕರ್
Jun 13, 2024 02:52 PM IST
ವಿರಾಟ್ ಕೊಹ್ಲಿ ಸತತ ವೈಫಲ್ಯ; ಸ್ಟ್ರೈಕ್ರೇಟ್ ಟೀಕಿಸಿ ಈಗ ಮಾಜಿ ನಾಯಕನ ಬೆಂಬಲಕ್ಕೆ ನಿಂತ ಸುನಿಲ್ ಗವಾಸ್ಕರ್
- Sunil Gavaskar on Virat Kohli: ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲೂ ಸತತ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ ಅವರನ್ನು ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಬೆಂಬಲಿಸಿದ್ದಾರೆ.
ಮೂರು ಪಂದ್ಯಗಳಲ್ಲಿ ಮೂರು ಸಿಂಗಲ್ ಡಿಜಿಟ್ ಸ್ಕೋರ್ಗಳನ್ನು ಗಳಿಸಿರುವ ವಿರಾಟ್ ಕೊಹ್ಲಿ (Virat Kohli) ಭಾರಿ ವೈಫಲ್ಯ ಅನುಭವಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್ನ ಡೆಡ್ ಪಿಚ್ನಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಕ್ರಮವಾಗಿ ಮೂರು ಪಂದ್ಯಗಳಲ್ಲಿ 1, 4, 0 ರನ್ ಗಳಿಸಿದ್ದು, ಟೀಕೆಗೆ ಗುರಿಯಾಗಿದ್ದಾರೆ. ಮಾಜಿ ಕ್ರಿಕೆಟರ್ಗಳು ಟೀಕಿಸುತ್ತಿದ್ದಾರೆ. ಐಪಿಎಲ್ನಲ್ಲಿ ಆರಂಭಿಕನಾಗಿ ಮಿಂಚಿದ್ದ ವಿರಾಟ್, ಟಿ20 ವಿಶ್ವಕಪ್ನಲ್ಲೂ ಓಪನರ್ ಆಗಿಯೇ ಕಣಕ್ಕಿಳಿದು ವೈಫಲ್ಯ ಅನುಭವಿಸಿದ್ದಾರೆ. ಹಾಗಾಗಿ ಮೂರನೇ ಕ್ರಮಾಂಕದಲ್ಲೇ ಬ್ಯಾಟ್ ಬೀಸಬೇಕು ಎಂದು ಕ್ರಿಕೆಟ್ ಪಂಡಿತರು, ತಜ್ಞರು ಬಯಸಿದ್ದಾರೆ.
2021ರ ಟಿ20 ವಿಶ್ವಕಪ್ಗೂ ಮುನ್ನ ಕೊಹ್ಲಿ ಕೊನೆಯ ಬಾರಿಗೆ ಟಿ20 ಕ್ರಿಕೆಟ್ನಲ್ಲಿ ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಯುಎಸ್ಎ ಪಿಚ್ಗಳು ಐಪಿಎಲ್ನಲ್ಲಿ ಬಳಸುವ ಪಿಚ್ಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿವೆ. ಪ್ರಸ್ತುತ ನ್ಯೂಯಾರ್ಕ್ನಲ್ಲಿ ಭಾರತ ತಂಡದ ಪಂದ್ಯಗಳು ಮುಕ್ತಾಯಗೊಂಡಿದ್ದು, ಉಳಿದು ಬೇರೆ ಬೇರೆ ಪಿಚ್ಗಳಲ್ಲಿ ಜರುಗಲಿವೆ. ಈ ಪಿಚ್ಗಳಲ್ಲಿ ವಿರಾಟ್ ಫಾರ್ಮ್ಗೆ ಬಂದರೂ ಅಚ್ಚರಿ ಇಲ್ಲ. ಆದರೆ, ಕೊಹ್ಲಿ ಸ್ಟ್ರೈಕ್ರೇಟ್ ಟೀಕಿಸಿದ್ದ ಸುನಿಲ್ ಗವಾಸ್ಕರ್ (Sunil Gavaskar), ಇದೀಗ ಶೀಘ್ರವೇ ಫಾರ್ಮ್ಗೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿ ಬೆಂಬಲಕ್ಕೆ ನಿಂತಿದ್ದಾರೆ.
ಐಪಿಎಲ್ನಲ್ಲಿ ಕೊಹ್ಲಿಯ ಅಭಿಮಾನಿಗಳ ದೃಷ್ಟಿಯಲ್ಲಿ ಮುಳ್ಳಾಗಿದ್ದ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ವಿರಾಟ್ ಶೀಘ್ರದಲ್ಲೇ ತನ್ನ ಖದರ್ ತೋರಲಿದ್ದಾರೆ ಎಂಬ ವಿಶ್ವಾಸ ಇದೆ. ಪ್ರತಿಯೊಬ್ಬ ಆಟಗಾರನಿಗೂ ಪಂದ್ಯಗಳನ್ನು ಗೆಲ್ಲಿಸಿಕೊಡುವುದು ದೊಡ್ಡ ಪ್ರೇರಣೆಯಾಗಿರುತ್ತದೆ. ವಿಶೇಷವಾಗಿ ದೇಶಕ್ಕಾಗಿ ಆಡುವಾಗ. ಪ್ರಮುಖ ಆಟಗಾರರು ಹಲ ವರ್ಷಗಳಿಂದ ಭಾರತ ತಂಡದ ಉತ್ತಮ ಪ್ರದರ್ಶನ ನೀಡಿದ್ದಾರೆ. ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಂಡಿದ್ದಾರೆ ಎಂದು ಕೊಹ್ಲಿ ಕುರಿತ ಪ್ರಶ್ನೆಗೆ ಗವಾಸ್ಕರ್ ಉತ್ತರಿಸಿದ್ದಾರೆ.
ನಾವಿನ್ನೂ ಟೂರ್ನಿ ಆರಂಭಿಕ ಹಂತದಲ್ಲಿದ್ದೇವೆ. ಇನ್ನೂ ಸೂಪರ್ 8, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿವೆ. ಕೊಹ್ಲಿ ಮಾಡಬೇಕಾಗಿರುವುದು ತಾಳ್ಮೆ ಮತ್ತು ತನ್ನ ಮೇಲೆ ನಂಬಿಕೆಯನ್ನು ತೋರಿಸುವುದು. ಅದು ಅವರಿಗೆ ಸಾಕಷ್ಟು ಇದೆ ಎಂದು ನಾನು ಭಾವಿಸುತ್ತೇನೆ ಎಂದು ಗವಾಸ್ಕರ್ ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ. ಐಪಿಎಲ್ ಮೊದಲಾರ್ಧದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದ ಕಾರಣ ಕೊಹ್ಲಿ ಅವರನ್ನು ಟೀಕಿಸಿದ್ದರು. ಕೊಹ್ಲಿ ಕೂಡ ತಿರುಗೇಟು ನೀಡಿದ್ದರು.
ವಿರಾಟ್ ಕೊಹ್ಲಿಯಲ್ಲಿ ಏನು ತಪ್ಪಿದೆ?
ಟಿ20 ಸ್ವರೂಪದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಅವರ ಕೊನೆಯ ವಿಶ್ವಕಪ್ ಆಗಿದ್ದು, ಕೊಹ್ಲಿ 3 ಇನ್ನಿಂಗ್ಸ್ಗಳಿಂದ 5 ರನ್ ಗಳಿಸಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಐರ್ಲೆಂಡ್ ವಿರುದ್ಧ 1 ರನ್ ಗಳಿಸಿದ್ದ ಕೊಹ್ಲಿ, ಪಾಕ್ ವಿರುದ್ಧ 4 ರನ್ ಗಳಿಸಿ ಔಟಾದರು. ಇನ್ನು ಜೂನ್ 12ರಂದು ನಡೆದ ಯುಎಸ್ಎ ವಿರುದ್ಧ ಗೋಲ್ಡನ್ ಡಕ್ ಆದರು. ಇದರೊಂದಿಗೆ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾದ ಬೆನ್ನಲ್ಲೇ ಸುನಿಲ್ ಗವಾಸ್ಕರ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ, ಕೊಹ್ಲಿ ಮಾಡುತ್ತಿರುವ ತಪ್ಪೇನು ಎಂಬುದನ್ನು ವಿವರಿಸಿದ್ದಾರೆ.
ಕೊಹ್ಲಿ ಔಟಾದ ಎಸೆತಗಳು ಯಾವುವು ಸಹ ಯಾವುದು ವಿಕೆಟ್ ಪಡೆಯುವ ಉತ್ತಮ ಎಸೆತಗಳಾಗಿರಲಿಲ್ಲ. ಆದರೂ ಕೊಹ್ಲಿ ಇವುಗಳಿಗೆ ಬಲಿಯಾದರು. ಇದು ಕೆಟ್ಟ ಸಮಯ ಅಷ್ಟೆ. ಕೊಹ್ಲಿ ಬ್ಯಾಟ್ನಿಂದ ಶೀಘ್ರದಲ್ಲೇ ರನ್ ಹರಿಯಲಿವೆ. ಅವರು ಮೂರು ಕಡಿಮೆ ಸ್ಕೋರ್ ಗಳಿಸಿದ್ದಾರೆ ಎಂದರೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ ಎಂದರ್ಥವಲ್ಲ. ಸದ್ಯಕ್ಕೆ ಚಿಂತಿಸುವುದಂತದ್ದೇನು ಆಗಿಲ್ಲ. ನಾವು ಆತನ ನಂಬಿಕೆಯನ್ನು ಮನವರಿಕೆ ಮಾಡಬೇಕು. ಶೀಘ್ರದಲ್ಲೇ ಕಂಬ್ಯಾಕ್ ಮಾಡಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ ಎಂದು ಭಾರತದ ದಿಗ್ಗಜ ಆಟಗಾರ ಹೇಳಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ