logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಲೆಜೆಂಡ್ಸ್ ಲೀಗ್ ಆಡಲು ಧೋನಿಗೆ ಅನುಮತಿ ಇಲ್ಲ, ಏಕೆ?

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಲೆಜೆಂಡ್ಸ್ ಲೀಗ್ ಆಡಲು ಧೋನಿಗೆ ಅನುಮತಿ ಇಲ್ಲ, ಏಕೆ?

Prasanna Kumar P N HT Kannada

Nov 25, 2023 09:16 AM IST

google News

ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ.

    • MS Dhoni - Legends League Cricket 2023: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಘೋಷಿಸಿ ಮೂರು ವರ್ಷ ಕಳೆದರೂ ಲೆಜೆಂಡ್ಸ್ ಲೀಗ್​​​ ಕ್ರಿಕೆಟ್​ ಆಡಲು ಅವಕಾಶ ಇಲ್ಲ ಏಕೆ? ಇಲ್ಲಿದೆ ಉತ್ತರ
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ.
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯು (Legends League Cricket 2023) ಅತ್ಯಂತ ಯಶಸ್ವಿಯಾಗಿ ಸಾಗುತ್ತಿದೆ. ನವೆಂಬರ್ 18ರಿಂದ ಟೂರ್ನಿ ಆರಂಭಗೊಂಡಿದೆ. ಆರು ತಂಡಗಳಲ್ಲಿ ವಿಶ್ವ ಕ್ರಿಕೆಟ್‌ನ ಮಾಜಿ ಆಟಗಾರರು ದರ್ಬಾರ್ ನಡೆಸುತ್ತಿದ್ದಾರೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ನಾಯಕ‌ ಎಂಎಸ್ ಧೋನಿ (MS Dhoni) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ‌ ನಿವೃತ್ತಿ ಘೋಷಿಸಿದರೂ ಏಕೆ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಆಡುತ್ತಿಲ್ಲ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಎಂಎಸ್ ಧೋನಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಮತ್ತು ಲೆಜೆಂಡರಿ ಕ್ರಿಕೆಟರ್. ತಮ್ಮ‌ ಬ್ಯಾಟಿಂಗ್, ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಕೌಶಲದಿಂದ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಳ್ಳುವ ಧೋನಿ, ಭಾರತ ತಂಡವನ್ನು ಉನ್ನತಮಟ್ಟಕ್ಕೇರಿಸಿದರು. ವಿಶ್ವ ಕ್ರಿಕೆಟ್‌ನಲ್ಲಿ ಮೂರು ಐಸಿಸಿ ಟ್ರೋಫಿ (ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ) ಗೆದ್ದ ವಿಶ್ವದ ಏಕೈಕ‌ ನಾಯಕ.

ಧೋನಿ ಏಕೆ ಆಡ್ತಿಲ್ಲ?

2009ರಲ್ಲಿ ಮೊದಲ ಬಾರಿಗೆ ತಂಡ ಟೆಸ್ಟ್ ರ್ಯಾಂಕಿಂಗ್‌ ನಲ್ಲಿ ಭಾರತ ಅಗ್ರಸ್ಥಾನಕ್ಕೇರಿತ್ತು. ಅದು ಧೋನಿ ನಾಯಕತ್ವದಲ್ಲಿ ಎಂಬುದು ವಿಶೇಷ. ಆ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ‌ ಹೊಸ ಮೈಲಿಗಲ್ಲು ನಿರ್ಮಿಸಿದರು. ನಾಯಕನಾಗಿ, ಆಟಗಾರನಾಗಿ, ವಿಕೆಟ್ ಕೀಪರ್ ಆಗಿ, ಭಾರತದ ಪರ ಮಾಹಿ ಹಲವು ದಾಖಲೆ ನಿರ್ಮಿಸಿದ್ದಾರೆ. 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ನಿವೃತ್ತಿ ಘೋಷಿಸಿ ಮೂರು ವರ್ಷವಾದರೂ ಲೆಜೆಂಡ್ಸ್ ಲೀಗ್ ಆಡಲು ಅವರಿಗೆ ಅವಕಾಶ ಇಲ್ಲ. ಏಕೆ? ಇಲ್ಲಿದೆ ಉತ್ತರ.

ಲೆಜೆಂಡ್ಸ್ ಲೀಗ್ ಎರಡನೇ ಆವೃತ್ತಿಯೂ ಈಗಾಗಲೇ ಆರಂಭಗೊಂಡಿದೆ. ಗೌತಮ್ ಗಂಭೀರ್, ಮೊಹಮ್ಮದ್ ಕೈಫ್, ಇರ್ಫಾನ್ ‌ಪಠಾಣ್ ಸೇರಿದಂತೆ ಭಾರತದ ದಿಗ್ಗಜ ಆಟಗಾರರು ಮಿಂಚಿನ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳನ್ನು ಮತ್ತೊಮ್ಮೆ ರಂಜಿಸುತ್ತಿದ್ದಾರೆ. ಆದರೆ ನಿವೃತ್ತಿ ಘೋಷಿಸಿದರೂ ಧೋನಿಗೆ ಆಡಲು ಅವಕಾಶ ಇಲ್ಲ. ಏಕೆಂದರೆ ಈ ಲೀಗ್ ಆಡಲು ಕೆಲವೊಂದು ನಿಮಯಗಳಿವೆ. ಧೋನಿ ಈ ಮಾತ್ರವಲ್ಲ, ಬೇರೆ ಯಾವ ಲೀಗ್‌ನಲ್ಲೂ ಆಡಲು ಸಾಧ್ಯವಿಲ್ಲ. ವಿದಾಯ ಹೇಳಿದ್ದರೂ ಧೋನಿ ಯಾಕೆ ಆಡಲು ಅವಕಾಶ ಇಲ್ಲ ಎನ್ನುವುದರ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ಐಪಿಎಲ್​​ಗೂ ನಿವೃತ್ತಿ ಘೋಷಿಸಿದರೆ ಮಾತ್ರ ಅವಕಾಶ

ಬಿಸಿಸಿಐ ನಿಮಯದ ಪ್ರಕಾರ ಮಂಡಳಿಯ ಅಡಿಯಲ್ಲಿ ಆಡುತ್ತಿರುವಾಗ ಯಾವುದೇ ಭಾರತೀಯ ಕ್ರಿಕೆಟಿಗ ಸಾಗರೋತ್ತರ ಅಥವಾ ಫ್ರಾಂಚೈಸಿ ಲೀಗ್ ನಲ್ಲಿ (ಐಪಿಎಲ್ ಹೊರತುಪಡಿಸಿ) ಭಾಗವಹಿಸಲು ಅನುಮತಿ ನೀಡುವುದಿಲ್ಲ. ಇದರರ್ಥ ಭಾರತೀಯ ಕ್ರಿಕೆಟ್‌ನಲ್ಲಿ ಇನ್ನೂ ಸಕ್ರಿಯನಾಗಿರುವ ಭಾರತೀಯ ಆಟಗಾರ ಬಿಸಿಸಿಐನ ಭಾಗವಾಗಿರುವವರೆಗೂ ಸಾಗರೋತ್ತರ ಲೀಗ್ ಅಥವಾ ಫ್ರಾಂಚೈಸಿ ಲೀಗ್‌ನಲ್ಲಿ ಭಾಗವಹಿಸುವಂತಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್, ದೇಶೀಯ ಕ್ರಿಕೆಟ್, ಐಪಿಎಲ್ ಸೇರಿ ಎಲ್ಲದರಿಂದ ನಿವೃತ್ತಿಯಾದ ಬಳಿಕವೇ ಬೇರೆಡೆ ಆಡಲು ಸಾಧ್ಯವಾಗುತ್ತದೆ. ಬಿಸಿಸಿಐ ಜೊತೆಗಿನ ಸಂಬಂಧ ಕಡಿತಗೊಳಿಸಿಕೊಂಡ ಬೆನ್ನಲ್ಲೇ ವಿದೇಶಿ ಲೀಗ್ ಅಥವಾ ಫ್ರಾಂಚೈಸಿ ಲೀಗ್‌ನಲ್ಲಿ ಕಣಕ್ಕಿಳಿಯಬಹುದು. ಧೋನಿ ನಿವೃತ್ತಿ ಹೊಂದಿದ್ದಾರೆ ನಿಜ. 2017ರಿಂದ ದೇಶೀಯ ಕ್ರಿಕೆಟ್‌ನಲ್ಲೂ ಆಡಿಲ್ಲ. ಆದರೆ ಅವರು ಇನ್ನೂ ಐಪಿಎಲ್ ಆಡುತ್ತಿದ್ದಾರೆ. ಲೆಜೆಂಡರಿ ನಾಯಕ ಟಿ20 ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ಬಿಸಿಸಿಐ ಅಡಿಯಲ್ಲಿದ್ದಾರೆ.

ಈ‌ ಕಾರಣಕ್ಕೆ ಧೋನಿ‌ ಲೆಜೆಂಡ್ಸ್ ಲೀಗ್, ಟಿ10 ಲೀಗ್, ಬಿಬಿಎಲ್, ಹಂಡ್ರೆಡ್ ‌ಲೀಗ್ ಅಥವಾ ಇನ್ನಾವುದೇ ಲೀಗ್‌ನಲ್ಲಿ ಆಡುವಂತಿಲ್ಲ. ಆದರೆ ಐಪಿಎಲ್ ನಿಂದ ನಿವೃತ್ತಿಯಾದ ನಂತರ ಈ ಎಲ್ಲಾ ಲೀಗ್‌ಗಳಲ್ಲೂ ಆಡಬಹುದು. ಭಾರತದ ಮಾಜಿ ನಾಯಕನಿಗೆ ದೇಶದ ಹೊರಗೆ ಭಾರಿ ಬೇಡಿಕೆ ಇದೆ. ಆಸಕ್ತಿಕರ ವಿಷಯವೆಂದರೆ ಧೋನಿ ನಿವೃತ್ತಿತಾದರೆ ಯಾವುದೇ ಲೀಗ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿಲ್ಲ. ಐಪಿಎಲ್ 2024ರಲ್ಲಿ ಮತ್ತೆ ನಾಯಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ