ಆಸ್ಟ್ರೇಲಿಯಾ 7ನೇ ವಿಶ್ವಕಪ್ ಟ್ರೋಫಿ ಕನಸು ನುಚ್ಚು ನೂರು; ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸೌತ್ ಆಫ್ರಿಕಾ
Oct 17, 2024 11:14 PM IST
ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ತಮ್ಮ ತಂಡವನ್ನು ಫೈನಲ್ಗೇರಿಸಿ ಸಂಭ್ರಮಿಸಿದ ಸೌತ್ ಆಫ್ರಿಕಾ ಆಟಗಾರ್ತಿಯರು.
- SA-W vs AUS-W 1st Semi Final: ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ನಲ್ಲಿ ಸೌತ್ ಆಫ್ರಿಕಾ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಫೈನಲ್ಗೆ ಪ್ರವೇಶಿಸಿದೆ.
ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಸತತ 2ನೇ ಫೈನಲ್ಗೆ ಪ್ರವೇಶಿಸಿದೆ. ಆಡಿದ ಒಂಬತ್ತು ವಿಶ್ವಕಪ್ಟೂರ್ನಿಗಳಲ್ಲೂ ನಾಲ್ಕರ ಘಟ್ಟಕ್ಕೇರಿರುವ ಆಸೀಸ್ ತಂಡದ ಏಳನೇ ಟ್ರೋಫಿ ಕನಸು ನುಚ್ಚು ನೂರಾಯಿತು. 2023ರಲ್ಲಿ ನಡೆದ ವರ್ಲ್ಡ್ಕಪ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ನರ ವಿರುದ್ಧ ಸೋತು ರನ್ನರ್ಅಪ್ ಆಗಿದ್ದ ಹರಿಣಗಳು ಸೇಡು ತೀರಿಸಿಕೊಂಡು ಚೊಚ್ಚಲ ಟ್ರೋಫಿಯ ಕನಸಿನಲ್ಲಿದೆ.
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಸೆಮೀಸ್ನಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ತನ್ನ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 134ರನ್ ಗಳಿಸಲು ಶಕ್ತವಾಯಿತು. ಬೆತ್ ಮೂನಿ 44 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ 17.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಅನ್ನೆಕೆ ಬಾಷ್ 74 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಆಸ್ಟ್ರೇಲಿಯಾ ನೀರಸ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ಕಳಪೆ ಪ್ರದರ್ಶನ ನೀಡಿತು. ಗ್ರೇಸ್ ಹ್ಯಾರಿಸ್ 3 ಮತ್ತು ಜಾರ್ಜಿಯಾ ವೇರ್ಹ್ಯಾಮ್ 5 ರನ್ ಗಳಿಸಿ ಔಟಾದರು. 18 ರನ್ಗಳಿಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಬೆತ್ ಮೂನಿ ಮತ್ತು ತಹಿಲಾ ಮೆಗ್ರಾತ್ ಚೇತರಿಕೆ ನೀಡಿದರು. ಮೂನಿ 42 ಎಸೆತಗಳಲ್ಲಿ 2 ಬೌಂಡರಿ ಸಹಿತ 44 ರನ್ ಸಿಡಿಸಿದರೆ, ಮೆಗ್ರಾತ್ 33 ಎಸೆತಗಳಲ್ಲಿ 3 ಬೌಂಡರಿ ಸಹಿತ 27 ರನ್ ಗಳಿಸಿದರು. ಆದರೆ ಇವರಿಬ್ಬರು ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಬಳಿಕ ಎಲಿಸ್ ಪೆರ್ರಿ 23 ಎಸೆತಗಳಲ್ಲಿ 31 ರನ್ ಗಳಿಸಿದರು. ಫೋಭಿ ಲಿಚ್ಫೀಲ್ಡ್ 9 ಎಸೆತಗಳಲ್ಲಿ 16 ರನ್ ಗಳಿಸಿದರು. ಸೌತ್ ಆಫ್ರಿಕಾ ಪರ ಆಯಬೊಂಗ ಖಾಕಾ 2, ಮಾರಿಜಾನ್ನೆ ಕಪ್ ಮತ್ತು ಮ್ಲಾಬಾ ತಲಾ 1 ವಿಕೆಟ್ ಪಡೆದರು.
135 ರನ್ಗಳ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ, ಉತ್ತಮ ಆರಂಭ ಪಡೆಯಿತು. ತಜ್ಮಿನ್ ಬ್ರಿಟ್ಸ್ ಅವರು 15 ರನ್ ಗಳಿಸಿದರೂ ಲಾರಾ ವೊಲ್ವಾರ್ಡ್ಟ್ 42 ರನ್ ಗಳಿಸಿ ಮಹತ್ವದ ಇನ್ನಿಂಗ್ಸ್ ಕಟ್ಟಿದರು. ಅನ್ನೆಕೆ ಬಾಷ್ 48 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 74 ರನ್ ಬಾರಿಸಿದರು. ಈ ಜೋಡಿ 2ನೇ ವಿಕೆಟ್ಗೆ 96 ರನ್ಗಳ ಪಾಲುದಾರಿಕೆ ಒದಗಿಸಿತು. ಈ ಮಹತ್ವದ ಜೊತೆಯಾಟದಿಂದ ಸೌತ್ ಆಫ್ರಿಕಾ ಎರಡನೇ ಸೆಮಿಫೈನಲ್ ಪ್ರವೇಶಿಸಲು ನೆರವಾಯಿತು. ವಿಶೇಷ ಅಂದರೆ ಬಲಿಷ್ಠ ಆಸ್ಟ್ರೇಲಿಯಾ ತಂಡದ ಬೌಲಿಂಗ್ ವಿಭಾಗ ಧೂಳೀಪಟಗೊಳಿಸಿತು.
ಆಸ್ಟ್ರೇಲಿಯಾ ಚಾಂಪಿಯನ್ ಆದ ವರ್ಷಗಳು: (2010, 2012, 2014, 2018, 2020, 2023)