logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ರಿವಿವ್ಯೂ; 2016ರ ವಿರಾಟ್ ಕೊಹ್ಲಿ ಘಟನೆ ನೆನಪಿಸಿದ ಬಾಂಗ್ಲಾದೇಶ ನಾಯಕನ ನಿರ್ಧಾರ, ವಿಡಿಯೋ

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ರಿವಿವ್ಯೂ; 2016ರ ವಿರಾಟ್ ಕೊಹ್ಲಿ ಘಟನೆ ನೆನಪಿಸಿದ ಬಾಂಗ್ಲಾದೇಶ ನಾಯಕನ ನಿರ್ಧಾರ, ವಿಡಿಯೋ

Prasanna Kumar P N HT Kannada

Mar 30, 2024 10:16 PM IST

google News

2016ರ ವಿರಾಟ್ ಕೊಹ್ಲಿ ಘಟನೆ ನೆನಪಿಸಿದ ಬಾಂಗ್ಲಾದೇಶ ನಾಯಕನ ಡಿಆರ್​ಎಸ್ ನಿರ್ಧಾರ

    • BAN vs SL 2nd Test: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಬಾಂಗ್ಲಾದೇಶ ತಂಡವು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವಿಚಿತ್ರ ಡಿಆರ್​ಎಸ್​ ತೆಗೆದುಕೊಂಡು ಟ್ರೋಲ್ ಆಗುತ್ತಿದೆ.
2016ರ ವಿರಾಟ್ ಕೊಹ್ಲಿ ಘಟನೆ ನೆನಪಿಸಿದ ಬಾಂಗ್ಲಾದೇಶ ನಾಯಕನ ಡಿಆರ್​ಎಸ್ ನಿರ್ಧಾರ
2016ರ ವಿರಾಟ್ ಕೊಹ್ಲಿ ಘಟನೆ ನೆನಪಿಸಿದ ಬಾಂಗ್ಲಾದೇಶ ನಾಯಕನ ಡಿಆರ್​ಎಸ್ ನಿರ್ಧಾರ

ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ವೇಳೆ ಒಂದು ತಮಾಷೆಯ ಘಟನೆ ನಡೆಯಿತು. ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರ ವಿಚಿತ್ರ ನಿರ್ಧಾರ ಪರಿಶೀಲನಾ ವ್ಯವಸ್ಥೆ (ಡಿಆರ್​​ಎಸ್) ಕರೆ ವೀಕ್ಷಕವಿವರಣೆಗಾರರು ಮತ್ತು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು. ಇದು ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಕೆಟ್ಟ ರಿವಿವ್ಯೂ ಎಂದರೂ ತಪ್ಪಾಗಲ್ಲ. ಅಲ್ಲದೆ, 2016ರಲ್ಲಿ ವಿರಾಟ್ ಕೊಹ್ಲಿ ತೆಗೆದುಕೊಂಡಿದ್ದ ಕೆಟ್ಟ ನಿರ್ಧಾರವನ್ನು ನೆನಪಿಸಿದೆ.

ಶ್ರೀಲಂಕಾದ ಕುಸಾಲ್ ಮೆಂಡಿಸ್ ಅವರು ಬಾಂಗ್ಲಾದೇಶದ ಬೌಲರ್ ತೈಜುಲ್ ಇಸ್ಲಾಂ ಅವರು ಎಸೆದ 44ನೇ ಓವರ್​​ನ 5ನೇ ಎಸೆತದ ವೇಳೆ ಈ ಹಾಸ್ಯಾಸ್ಪದ ಘಟನೆ ನಡೆದಿದೆ. ಇಸ್ಲಾಂ ಎಸೆದ ಎಸೆತವನ್ನು ಮೆಂಡಿಸ್ ಡಿಫೆನ್ಸ್​ ಆಡಿದರು. ಚೆಂಡು ಬ್ಯಾಟ್​ಗೆ ತಾಗಿತ್ತು. ನೆರೆದಿದ್ದ ಪ್ರೇಕ್ಷಕರಿಗೂ ಚೆಂಡು ತಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಇನ್ನೊಂದು ತುದಿಯಲ್ಲಿ ನಿಂತಿದ್ದ ನಜ್ಮುಲ್ ಹುಸೇನ್ ಶಾಂಟೊ ಅವರು ಪ್ಯಾಡ್​ಗೆ ಚೆಂಡು ತಗುಲಿರುವುದಾಗಿ ನಂಬಿ ಡಿಆರ್​​ಎಸ್ ಮೊರೆ ಹೋದರು.

ಚೆಂಡು ಬ್ಯಾಟ್​ಗೆ​ ತಾಗಿದ್ದರೂ ಅವರು ಚರ್ಚೆ ಮಾಡುತ್ತಿರುವುದೇಕೆ? ಬಹುಶಃ ಇದಕ್ಕೆ ಡಿಆರ್​ಎಸ್​​ ತೆಗೆದುಕೊಳ್ತಾರಾ ಎಂದು ಕಾಮೆಂಟೇಟರ್​​ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಚೆಂಡು ಮೆಂಡಿಸ್ ಅವರ ಬ್ಯಾಟ್​​​ನ ಮಧ್ಯಕ್ಕೆ ಬಾಲ್ ಸ್ಪಷ್ಟವಾಗಿ ತಗುಲಿರುವು ಎಂದು ರಿಪ್ಲೆನಲ್ಲೂ ಬಹಿರಂಗವಾಯಿತು. ರಿಪ್ಲೆನಲ್ಲಿ ಚೆಂಡು ಬ್ಯಾಟ್​ಗೆ ತಾಗಿರುವುದು ನೋಡಿ ನಾಯಕ ಮುಖಭಂಗಕ್ಕೆ ಒಳಗಾದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಡಿಆರ್​ಎಸ್​​ಗಳಲ್ಲಿ ಒಂದಾಗಿದೆ. ಈ ಪ್ರಮಾದವು ಆಶ್ಚರ್ಯವನ್ನು ಉಂಟು ಮಾಡಿದೆ. ಅಭಿಮಾನಿಗಳು ಮತ್ತು ಪಂಡಿತರಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.

ಬಾಂಗ್ಲಾದೇಶವು ಇಂತಹ ವಿಮರ್ಶೆಯನ್ನು ತೆಗೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. 2016ರಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯದ ಸಮಯದಲ್ಲಿ, ಅವರು ಅಂದಿನ ನಾಯಕ ವಿರಾಟ್ ವಿರುದ್ಧ ಇದೇ ರೀತಿ ವಿಚಿತ್ರ ಡಿಆರ್​​ಎಸ್​ ನಿರ್ಧಾರ ತೆಗೆದುಕೊಂಡಿದ್ದರು. ತೈಜುಲ್ ಇಸ್ಲಾಂ ವಿರುದ್ಧ ಕೊಹ್ಲಿ ಡಿಫೆನ್ಸ್ ಆಡಿದ್ದರು. ಚೆಂಡು ಕೂಡ ಬ್ಯಾಟ್​ಗೆ ತಾಗಿದ್ದು ಕಣ್ಣಿಗೆ ಕಟ್ಟುವಂತಿತ್ತು. ಆದರೆ, ಬಾಂಗ್ಲಾದೇಶ ತಂಡವು ಸರ್ವಾನುಮತದಿಂದ ಮನವಿ ಮಾಡಿತ್ತು. ವೀಕ್ಷಕವಿವರಣೆಗಾರರು ಮತ್ತು ವೀಕ್ಷಕರನ್ನು ಆಶ್ಚರ್ಯಗೊಳಿಸಿತ್ತು. ಆದರೆ ರಿಪ್ಲೆನಲ್ಲಿ ಚೆಂಡು ಕೊಹ್ಲಿ ಬ್ಯಾಟ್​​ ಮಧ್ಯದಲ್ಲಿ ಸ್ಟಿಕ್ಕರ್ ಬಳಿ ಬಡಿದಿದ್ದನ್ನು ಸ್ಪಷ್ಟವಾಗಿ ತೋರಿಸಿತ್ತು. ಇದು ಕೂಡ ಕೆಟ್ಟ ನಿರ್ಧಾರವಾಗಿತ್ತು.

ಎರಡನೇ ಟೆಸ್ಟ್​​ನ ಮೊದಲ ದಿನದಾಟದ ಸ್ಕೋರ್​

ಚಟ್ಟೋಗ್ರಾಮ್​​ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ನ ಮೊದಲ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 4 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿದೆ. ಸದ್ಯ ಮೂವರು ಆಟಗಾರರು ಅರ್ಧಶತಕ ಸಿಡಿಸಿದ್ದು, ಶ್ರೀಲಂಕಾದ ಹಿರಿಯ ಆರಂಭಿಕ ಆಟಗಾರ ದಿಮುತ್ ಕರುಣರತ್ನೆ 129 ಎಸೆತಗಳಲ್ಲಿ 86 ರನ್ ಗಳಿಸಿ ಮತ್ತು ಕುಸಾಲ್ ಮೆಂಡೀಸ್ 150 ಎಸೆತಗಳಲ್ಲಿ 93 ರನ್ ಗಳಿಸಿ ಶತಕ ವಂಚಿತರಾದರು. ನಿಶಾನ್ ಮದುಷ್ಕಾ 57 ರನ್ ಗಳಿಸಿದರು. ದಿನೇಶ್ ಚಂಡಿಮಾಲ್ (34*) ಮತ್ತು ನಾಯಕ ಧನಂಜಯ ಡಿ ಸಿಲ್ವಾ (15) ಔಟಾಗದೆ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮೊದಲ ಟೆಸ್ಟ್​​​ ಪಂದ್ಯದ ವಿವರ

ಮೊದಲ ಟೆಸ್ಟ್​​​ನಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಎರಡೂ ಇನ್ನಿಂಗ್ಸ್​​ಗಳಲ್ಲಿ 200 ರನ್​ ದಾಟಲು ವಿಫಲರಾದರು. ಶ್ರೀಲಂಕಾ ಪರ ನಾಯಕ ಡಿ ಸಿಲ್ವಾ ಮತ್ತು ಕಮಿಂಡು ಮೆಂಡಿಸ್ ಮೊದಲ ಇನ್ನಿಂಗ್ಸ್​​ನಲ್ಲಿ ಶತಕ ಸಿಡಿಸಿದ್ದರು. ಪರಿಣಾಮ 280 ರನ್ ಗಳಿಸಿತ್ತು. ಆದರೆ ಬಾಂಗ್ಲಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 188 ರನ್​ಗಳಿಸಿ ಔಟಾಗಿತ್ತು. 92 ರನ್​ಗಳ ಮುನ್ನಡ ಪಡೆದ ಲಂಕಾ ಪರ, 2ನೇ ಇನ್ನಿಂಗ್ಸ್​​​ನಲ್ಲೂ ಸಿಲ್ವಾ, ಕಮಿಂಡ್ ಮತ್ತೆ ಶತಕ ಸಿಡಿಸಿದ ನೆರವಿನಿಂದ 418 ರನ್ ಗಳಿಸಿತ್ತು. ಹಾಗಾಗಿ ಬಾಂಗ್ಲಾಗೆ 511 ರನ್​ಗಳ ಕಠಿಣ ಗುರಿ ನೀಡಿತ್ತು. ಅದರೆ ಆತಿಥೇಯರು 182 ರನ್​​ಗಳಿಗೆ ಆಲೌಟ್ ಆದರು. ಇದರೊಂದಿಗೆ ಲಂಕಾ 328 ರನ್​​ಗಳ ಭರ್ಜರಿ ಜಯ ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನು ಪ್ರವಾಸಿ ತಂಡ 2-1ರಿಂದ ಗೆದ್ದುಕೊಂಡಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ