logo
ಕನ್ನಡ ಸುದ್ದಿ  /  ಕ್ರಿಕೆಟ್  /  ನೀನೊಬ್ಬ ಜೋಕರ್, ಯಾವತ್ತಿಗೂ ಜೋಕರ್; ಸಿಎಸ್‌ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಕಾಲೆಳೆದ ಕೆವಿನ್ ಪೀಟರ್ಸನ್

ನೀನೊಬ್ಬ ಜೋಕರ್, ಯಾವತ್ತಿಗೂ ಜೋಕರ್; ಸಿಎಸ್‌ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಕಾಲೆಳೆದ ಕೆವಿನ್ ಪೀಟರ್ಸನ್

Jayaraj HT Kannada

May 28, 2024 10:50 AM IST

google News

ಸಿಎಸ್‌ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಕಾಲೆಳೆದ ಕೆವಿನ್ ಪೀಟರ್ಸನ್

    • ಐಪಿಎಲ್ 2024ರ ಫೈನಲ್‌ ಪಂದ್ಯದಲ್ಲಿ ಕೆಕೆಆರ್ ತಂಡ ಪ್ರಶಸ್ತಿ ಗೆದ್ದ ನಂತರ ಅಂಬಾಟಿ ರಾಯುಡು ತಮ್ಮ ಬೆಂಬಲವನ್ನು ನೇರಳೆ ಪಡೆಗೆ ವರ್ಗಾಯಿಸಿದ್ದಾರೆ. ಇದನ್ನು ಕಟುವಾಗಿ ಟೀಕಿಸಿದ ಕೆವಿನ್ ಪೀಟರ್ಸನ್ ನೀನೊಬ್ಬ ಜೋಕರ್‌ ಎಂದು ಚಾಣಿಸಿದ್ದಾರೆ.
ಸಿಎಸ್‌ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಕಾಲೆಳೆದ ಕೆವಿನ್ ಪೀಟರ್ಸನ್
ಸಿಎಸ್‌ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಕಾಲೆಳೆದ ಕೆವಿನ್ ಪೀಟರ್ಸನ್ (X Image)

ಐಪಿಎಲ್‌ 2024ರ ಫೈನಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್ ಮಾಜಿ ನಾಯಕ ಹಾಗೂ ಆರ್‌ಸಿಬಿ ಮಾಜಿ ಆಟಗಾರ ಕೆವಿನ್ ಪೀಟರ್ಸನ್, ಸಿಎಸ್‌ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಅದು ಕೂಡಾ ನೇರಪ್ರಸಾರದ ಸಮಯದಲ್ಲಿ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ ತಂಡ 8 ವಿಕೆಟ್‌ಗಳಿಂದ ಗೆದ್ದಿತು. ಆ ಮೂಲಕ ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು. ಆ ಬಳಿಕ ಬೆಂಬಲಿಸುವ ತಂಡ ಬದಲಿಸಿದ ರಾಯುಡುಗೆ ಇಂಗ್ಲೆಂಡ್‌ ಆಟಗಾರ ಸರಿಯಾಗಿ ಟಾಂಗ್‌ ಕೊಟ್ಟಿದ್ದಾರೆ.

ಟೂರ್ನಿ ಮುಗಿದರೂ, ಸಿಎಸ್‌ಕೆ ಮಾಜಿ ಆಟಗಾರ ರಾಯುಡು ವ್ಯಾಪಕ ಟೀಕೆಗಳಿಗೆ ಗುರಿ ಆಗಿದ್ದಾರೆ. ಆರ್‌ಸಿಬಿ ತಂಡವು ಸಿಎಸ್‌ಕೆ ತಂಡವನ್ನು ಲೀಗ್‌ ಹಂತದಲ್ಲಿ ಸೋಲಿಸಿ ಟೂರ್ನಿಯಿಂದ ಹೊರಹಾಕಿದ ಬಳಿಕ ಮೇಲಿಂದ ಮೇಲೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ಆರ್‌ಸಿಬಿ ತಂಡವನ್ನು ಟೀಕಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ನಡುವೆ ಗೋಸುಂಬೆಯಂತೆ ಬಣ್ಣ ಬದಲಿಸಿದ ರಾಯುಡುಗೆ, ಇಂಗ್ಲೆಂಡ್‌ ಮಾಜಿ ಆಟಗಾರ ಲೈವ್‌ ಕಾರ್ಯಕ್ರಮದಲ್ಲೇ ಕಾಲೆಳೆದ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಐಪಿಎಲ್‌ ಫೈನಲ್ ಪಂದ್ಯಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ಪೀಟರ್ಸನ್‌ ಬೆಂಬಲ ವ್ಯಕ್ತಪಡಿಸಿದ್ದರು. ಅತ್ತ ರಾಯುಡು ಸನ್‌ರೈಸರ್ಸ್ ಪರ ನಿಂತಿದ್ದರು. ಆದರೆ, ಪಂದ್ಯದಲ್ಲಿ ಕೆಕೆಆರ್‌ ಗೆಲುವಿನ ನಂತರ ರಾಯುಡು ತಮ್ಮ ಬಣ್ಣ ಬದಲಿಸಿದರು. ಹೀಗಾಗಿ ಸಹ ವೀಕ್ಷಕ ವಿವರಣೆಕಾರರಾದ ಪೀಟರ್ಸನ್ ಮತ್ತು ಮ್ಯಾಥ್ಯೂ ಹೇಡನ್‌, ರಾಯುಡು ಕಾಲೆಳೆದರು.

“ಅವರು ಕಿತ್ತಳೆ ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಕ್ಕೆ ಧನ್ಯವಾದ” ಎಂದು ನಿರೂಪಕಿ ಮಾಯಂತಿ ಲ್ಯಾಂಗರ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆವಿನ್‌ ಪೀಟರ್ಸನ್ “ನಾನು ಕನಿಷ್ಠ‌ ದೃಢವಾಗಿ ನಿಂತಿದ್ದೇನೆ. ನಾನು ಮೊದಲೇ ನೀಲಿ ಬಣ್ಣ ಧರಿಸಿದ್ದೆ,” ಎಂದು ಪೀಟರ್ಸನ್ ತಮ್ಮ ನೇರಳೆ ಉಡುಪನ್ನು ತೋರಿಸುತ್ತಾ ಹೇಳಿದರು. ಅಷ್ಟೇ ಅಲ್ಲದೆ, ಬಣ್ಣ ಬದಲಿಸಿದ ರಾಯುಡುಗೆ “ನೀನೊಬ್ಬ ಜೋಕರ್, ಯಾವತ್ತಿಗೂ ಜೋಕರ್” ಎಂದು ಖಾರವಾಗಿ ಹೇಳಿದರು.

ಇದಕ್ಕೆ ತಮ್ಮ ನಿಲುವು ಸಮರ್ಥಿಸಿದ ಸಿಎಸ್‌ಕೆ ಮಾಜಿ ಬ್ಯಾಟರ್‌, ತಾನು ಉತ್ತಮ ಕ್ರಿಕೆಟ್ ಅನ್ನು ಮಾತ್ರ ಬೆಂಬಲಿಸುವುದಾಗಿ ಹೇಳಿದರು. “ನಾನು ಎರಡೂ ತಂಡಗಳನ್ನು ಬೆಂಬಲಿಸುತ್ತಿದ್ದೇನೆ. ಉತ್ತಮ ಕ್ರಿಕೆಟ್ ಅನ್ನು ಬೆಂಬಲಿಸುತ್ತಿದ್ದೇನೆ,” ಎಂದು ರಾಯುಡು ಪ್ರತಿಕ್ರಿಯಿಸಿದರು.

ಇತ್ತೀಚೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇಆಫ್‌ ಕನಸಿಗೆ ಆರ್‌ಸಿಬಿ ತಂಡವು ಎಳ್ಳು ನೀರು ಬಿಟ್ಟಿತ್ತು. ಆ ಮೂಲಕ ಚೆನ್ನೈ ತಂಡವನ್ನು ಆರ್‌ಸಿಬಿ ಟೂರ್ನಿಯಿಂದಲೇ ಹೊರದಬ್ಬಿತ್ತು. ಅಂದಿನಿಂದ ಅಂಬಾಟಿ ರಾಯುಡು ಆರ್‌ಸಿಬಿ ಆಟಗಾರರು ಹಾಗೂ ತಂಡದ ಕುರಿತು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಸಿಎಸ್‌ಕೆ ಸೋಲನ್ನು ಅರಗಿಸಲಾಗದ ಅವರು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಕೆಕೆಆರ್‌ ತಂಡ ಗೆದ್ದ ಬಳಿಕ, ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ತಂಡವನ್ನು ರಾಯುಡು ಅಭಿನಂದಿಸಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಉದ್ದೇಶಪೂರಕವಾಗಿ ವ್ಯಂಗ್ಯವಾಡಿದ್ದಾರೆ. ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಮಾತನಾಡಿದ ಅವರು, ತಂಡದ ಗೆಲುವಿನಲ್ಲಿ ಸಾಮೂಹಿಕ ಕೊಡುಗೆ ತುಂಬಾ ಮುಖ್ಯ ಎಂದು ತೋರಿಸಿದರು. ಕಪ್‌ ಗೆಲ್ಲಲು ಆರೆಂಜ್ ಕ್ಯಾಪ್‌ನಂಥ ವೈಯಕ್ತಿಕ ಮೈಲಿಗಲ್ಲುಗಳು ಮುಖ್ಯವಲ್ಲ ಎಂದು ವಿರಾಟ್‌ ಕೊಹ್ಲಿಯನ್ನು ಗುರಿಯಾಗಿಸಿ ಟೀಕಿಸಿದರು. ಆ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ರಾಯುಡು ಮೇಲೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ನೆಟ್ಟಿಗರು ಸಿಎಸ್‌ಕೆ ಮಾಜಿ ಆಟಗಾರನನ್ನು ಹುರಿದು ತಿಂದಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ