Yuzvendra Chahal: ಮೋಡದ ಮರೆಯಲ್ಲಿರೋ ಸೂರ್ಯ ಮತ್ತೆ ಉದಯಿಸಲೇಬೇಕು; ಏಷ್ಯಾಕಪ್‌ಗೆ ಅವಕಾಶ ಸಿಗದ ಕುರಿತು ಮೌನ ಮುರಿದ ಯುಜ್ವೇಂದ್ರ ಚಹಲ್
Aug 22, 2023 06:00 AM IST
ಏಷ್ಯಾಕಪ್‌ಗೆ ಅವಕಾಶ ಸಿಗದ ಕುರಿತು ಮೌನ ಮುರಿದ ಯುಜ್ವೇಂದ್ರ ಚಹಲ್.
- Yuzvendra Chahal: ಆಗಸ್ಟ್ 30ರಿಂದ ಶುರುವಾಗಲಿರುವ ಏಷ್ಯಾಕಪ್ ಟೂರ್ನಿಗೆ ಅವಕಾಶ ಸಿಗದ ಕುರಿತು ಮೌನ ಮುರಿದಿರುವ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಲ್, 2018ರ ರೋಹಿತ್ ಶರ್ಮಾ ಟ್ವೀಟ್ಗೆ ಹೋಲಿಸಿದಂತೆ ಪೋಸ್ಟ್ ಮಾಡಿದ್ದಾರೆ.
ಏಕದಿನ ಮಾದರಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ (Asia Cup 2023) 17 ಸದಸ್ಯರ ಟೀಮ್ ಇಂಡಿಯಾ (Team India) ಪ್ರಕಟವಾಗಿದೆ. ಶ್ರೇಯಸ್ ಅಯ್ಯರ್ (Shreyas Iyer), ಕೆಎಲ್ ರಾಹುಲ್ (KL Rahul) ಭಾರತ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಅಚ್ಚರಿ ಎಂಬಂತೆ ತಿಲಕ್ ವರ್ಮಾ (Tilak Varma) ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಮಹತ್ವದ ಟೂರ್ನಿಗೆ ಪರಿಗಣನೆಗೆ ತೆಗೆದುಕೊಳ್ಳದ ಬೆನ್ನಲ್ಲೇ ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ತಮ್ಮ ಬೇಸರದ ಜೊತೆಗೆ ಆಕ್ರೋಶವನ್ನೂ ಹೊರ ಹಾಕಿದ್ದಾರೆ. ತಂಡದ ಪ್ರಕಟಣೆಯ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಸ್ಟಾರ್ ಸ್ಪಿನ್ನರ್ ಎಕ್ಸ್ನಲ್ಲಿ (ಟ್ವಿಟರ್ನಲ್ಲಿ) ಗಮನಾರ್ಹ ಪೋಸ್ಟ್ವೊಂದನ್ನು ಮಾಡಿದ್ದಾರೆ. ಈ ಪೋಸ್ಟ್ ಬಿಸಿಸಿಐ, ಸೆಲೆಕ್ಟರ್ಸ್ಗೆ ತಿರುಗೇಟು ನೀಡಿದಂತಿದೆ.
ಮೌನ ಮುರಿದ ಚಹಲ್
ಅವಕಾಶ ಸಿಗದ ಕುರಿತು ಮೌನ ಮುರಿದ ಚಹಲ್, ರೋಹಿತ್ ಟ್ವೀಟ್ಗೆ ಹೋಲಿಸಿದಂತೆ ಪೋಸ್ಟ್ ಮಾಡಿದ್ದಾರೆ. 2018ರ ಜುಲೈ 18ರಂದು ರೋಹಿತ್ ಶರ್ಮಾ ಒಂದು ಟ್ವೀಟ್ ಮಾಡಿದರು. ಅಂದು ಇಂಗ್ಲೆಂಡ್ ಸರಣಿಗೆ ಅವಕಾಶ ಪಡೆಯಲು ವಿಫಲರಾಗಿದ್ದ ರೋಹಿತ್, ಬೇಸರದಲ್ಲಿ ನಾಳೆ ಮತ್ತೆ ಸೂರ್ಯ ಉದಯಿಸುತ್ತಾನೆ (Sun win rise again Tomorrow) ಎಂದು ಟ್ವೀಟ್, ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಚಹಲ್ ಕೂಡ ಅದೇ ರೀತಿ ಹೋಲುವ ಪೋಸ್ಟ್ ಮಾಡಿದ್ದಾರೆ. ಆದರೆ ಚಹಲ್ ವಿಶೇಷವಾಗಿ ಚಿಹ್ನೆಗಳ ಮೂಲಕ ಬಿಸಿಸಿಐಗೆ ಟಾಂಗ್ ನೀಡಿದ್ದಾರೆ. ಸೂರ್ಯ ಮತ್ತೆ ಉದಯಿಸುತ್ತಾನೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಅಭಿಮಾನಿಗಳು, ಬಿಸಿಸಿಐಗೆ ಆಕ್ರೋಶ ವ್ಯಕ್ತಪಡಿಸುತ್ತಲೇ ಚಹಲ್‌ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಚಿಂತಿಸಬೇಡಿ, ಯುಜಿ ಭಯ್ಯಾ, ಅತ್ಯುತ್ತಮವಾದದ್ದು ನಿಮ್ಮನ್ನು ಸೇರುತ್ತದೆ ಎಂದು ಅಭಿಮಾನಿಗಳು ಬೆಂಬಲಿಸಿದ್ದಾರೆ.
ಅಗರ್ಕರ್ ಹೇಳಿದ್ದೇನು?
ಏಷ್ಯಾಕಪ್‌ಗೆ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಆಯ್ಕೆಗಾರ ಅಗರ್ಕರ್, ಕೂಡ ಸ್ಟಾರ್ ಸ್ಪಿನ್ನರ್‌ನ ಕೈಬಿಟ್ಟಿರುವ ಬಗ್ಗೆ ತುಟಿಬಿಚ್ಚಿದರು. ಅಕ್ಷರ್ ಪಟೇಲ್ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಬ್ಯಾಟಿಂಗ್ ಕೂಡ ಮಾಡುತ್ತಾರೆ. ಕುಲದೀಪ್ ಯಾದವ್ ಈ ಹಂತದವರೆಗೆ ಅದ್ಭುತ ರನ್ ಗಳಿಸಿದ್ದು, ಬೌಲಿಂಗ್ನಲ್ಲೂ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಹಾಗಾಗಿ ಚಹಲ್ ಇಲ್ಲದ ತಂಡವನ್ನು ಪ್ರಕಟಿಸಿದ್ದೇವೆ ಎಂದು ಹೇಳಿದರು.
2 ಏಕದಿನ ಮಾತ್ರ ಆಡಿದ್ದಾರೆ!
ಚಹಲ್ ಈ ವರ್ಷದಲ್ಲಿ ಭಾರತದ ಪರ ಎರಡು ಏಕದಿನ ಪಂದ್ಯ ಆಡಿದ್ದಾರೆ. 3 ವಿಕೆಟ್ ಪಡೆದಿದ್ದಾರೆ. ಇತ್ತೀಚೆಗೆ ಮುಗಿದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಒಂದೇ ಒಂದು ಏಕದಿನ ಪಂದ್ಯವನ್ನೂ ಆಡಿಸಿರಲಿಲ್ಲ. ಈ ವರ್ಷ ಜನವರಿಯಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗಳಲ್ಲಿ ತಲಾ 1 ಪಂದ್ಯವನ್ನಾಡಿದ್ದರು. ಸದ್ಯ ಏಷ್ಯಾಕಪ್ ಟೂರ್ನಿ ಆಗಸ್ಟ್ 30 ರಿಂದ ಪ್ರಾರಂಭವಾಗಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಸೆಪ್ಟೆಂಬರ್ 2ರಂದು ಪಾಕಿಸ್ತಾನದ ವಿರುದ್ಧ ಸೆಣಸಾಟ ನಡೆಸುವ ಮೂಲಕ ಏಷ್ಯಾಕಪ್ ಅಭಿಯಾನ ಪ್ರಾರಂಭಿಸಲಿದೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ) ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಕುಲ್ದೀಪ್ ಯಾದವ್. ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).