ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ; ಇಬ್ಬರು ಕನ್ನಡಿಗರಿಗೆ ಮಣೆ
Aug 21, 2023 09:30 PM IST
ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ.
- Asia Cup 2023 Team India: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದೆ. 17 ಸದಸ್ಯರ ತಂಡದಲ್ಲಿ ಅಚ್ಚರಿಯಾಗಿ ತಿಲಕ್ ವರ್ಮಾ ಆಯ್ಕೆಯಾಗಿದ್ದಾರೆ.
ಆಗಸ್ಟ್ 30 ರಿಂದ ಶುರುವಾಗಲಿರುವ ಏಕದಿನ ಏಷ್ಯಾಕಪ್ ಟೂರ್ನಿಗೆ (Asia Cup 2023) 17 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ದೆಹಲಿಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಈ ತಂಡವನ್ನು ಘೋಷಿಸಲಾಗಿದೆ. ನಿರೀಕ್ಷೆಯಂತೆ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದರೆ, ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಮುಂದುವರೆದಿದ್ದಾರೆ.
ಗಾಯದ ಸಮಸ್ಯೆಗೆ ಒಳಗಾಗಿದ್ದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಏಷ್ಯಾಕಪ್ ಮೂಲಕ ಭಾರತಕ್ಕೆ ಮರಳಿದ್ದಾರೆ. ಆದರೆ ಆಯ್ಕೆಯ ನಿರೀಕ್ಷೆಯಲ್ಲಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮತ್ತು ಯುಜ್ವೇಂದ್ರ ಚಹಲ್ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ಆದರೆ ಅಚ್ಚರಿ ಎಂಬಂತೆ ಇತ್ತೀಚೆಗಷ್ಟೇ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ತಿಲಕ್ ವರ್ಮಾ ಅವರಿಗೆ ಅವಕಾಶ ನೀಡಲಾಗಿದೆ. ಕೇವಲ 7 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ತಿಲಕ್ ವರ್ಮಾ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೆ, ಹಿರಿಯ ಆಟಗಾರರಾದ ಶಿಖರ್ ಧವನ್, ಭುವನೇಶ್ವರ್ ಕುಮಾರ್ ಅವರನ್ನು ಕೈಬಿಡಲಾಗಿದೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ) ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.
ಸಂಜು ಸ್ಯಾಮ್ಸನ್ ಮೀಸಲು ಆಟಗಾರನಾಗಿ ಅವಕಾಶ ಪಡೆದಿದ್ದಾರೆ.
ಸದ್ಯ ಪ್ರಕಟಗೊಂಡ ತಂಡದಲ್ಲಿ 8 ಬ್ಯಾಟರ್ಸ್, ಇಬ್ಬರು ವೇಗದ ಬೌಲಿಂಗ್ ಆಲ್ರೌಂಡರ್ ಹಾಗೂ ಇಬ್ಬರು ಸ್ಪಿನ್ ಆಲ್ರೌಂಡರ್ ಸೇರಿದ್ದಾರೆ. ಉಳಿದಂತೆ ನಾಲ್ವರು ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಮಾತ್ರ ಆಯ್ಕೆಯಾಗಿದ್ದಾರೆ. ಕನ್ನಡಿಗರಾದ ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.
ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ನಡೆಯುತ್ತಿರುವ ಕಾರಣ ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿಗೆ ಆತಿಥ್ಯ ನೀಡುತ್ತಿವೆ. ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ತಂಡಗಳು ಪ್ರಕಟವಾಗಿದ್ದವು. ಆಗಸ್ಟ್ 30ರಿಂದ ಈ ಟೂರ್ನಿ ಆರಂಭವಾಗಲಿದ್ದು, ಸೆಪ್ಟೆಂಬರ್ 17ಕ್ಕೆ ಟೂರ್ನಿ ಮುಕ್ತಾಯಗೊಳ್ಳಲಿದೆ.
(ತಾಜಾ ಕ್ರಿಕೆಟ್ ಮಾಹಿತಿಗೆ kannada.hindustantimes.com/cricket ಜಾಲತಾಣ ನೋಡಿ. ಏಷ್ಯಾಕಪ್ ಮತ್ತು ವಿಶ್ವಕಪ್ ಕ್ರಿಕೆಟ್‌ನ ಸಮಗ್ರ ಮಾಹಿತಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ)