Aattam OTT: ಮೂರು ರಾಷ್ಟ್ರಪ್ರಶಸ್ತಿ ಗೆದ್ದ ಈ ಮಲಯಾಳಂ ಚಿತ್ರವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು?
Aug 17, 2024 02:36 PM IST
ಮೂರು ರಾಷ್ಟ್ರಪ್ರಶಸ್ತಿ ಗೆದ್ದಿರುವ ಈ ಮಲಯಾಳಂ ಸಿನಿಮಾವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು?
- Aattam OTT: ಮೂರು ರಾಷ್ಟ್ರಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಮಲಯಾಳಂನ ಆಟಂ ಸಿನಿಮಾವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು? ಇಲ್ಲಿದೆ ವಿವರ.
Aattam OTT: ಆಗಸ್ಟ್ 16ರ ಶುಕ್ರವಾರ ನಡೆದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮಲಯಾಳಂನಲ್ಲಿ ಅತ್ಯುತ್ತಮ ಪ್ರದರ್ಶನ ಕಂಡ 'ಆಟಂ' ಚಿತ್ರವು ಅತ್ಯುತ್ತಮ ಚಲನಚಿತ್ರದ ಜೊತೆಗೆ ಇತರೆ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆಟಂ ಚಿತ್ರವು ಇದೇ ವರ್ಷ ಜನವರಿ 5 ರಂದು ಬಿಡುಗಡೆಯಾಗಿತ್ತು. 2022ರಲ್ಲೇ ಸೆನ್ಸಾರ್ ಪೂರ್ಣಗೊಳಿಸಿದ್ದ ಕಾರಣ ಈ ಸಿನಿಮಾವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಈ ಚಿತ್ರ ಅನೇಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿತ್ತು. ಥಿಯೇಟರ್‌ಗಳಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
ಆಟಂ ಓಟಿಟಿ ಸ್ಟ್ರೀಮಿಂಗ್ ವಿವರ
ಆಟಂ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋ ಓಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವು ಮಾರ್ಚ್‌ನಲ್ಲೇ ಓಟಿಟಿಗೆ ಬಿಡುಗಡೆಯಾಗಿತ್ತು. ಮಲಯಾಳಂ ಭಾಷೆಯಲ್ಲಿರುವ ಈ ಸಿನಿಮಾಗೆ ತೆಲುಗು ಮತ್ತು ಇಂಗ್ಲಿಷ್ ಸಬ್ಟೈಟಲ್ಸ್ ಕೂಡ ಇದೆ. ಅಚ್ಚರಿ ಏನೆಂದರೆ ಓಟಿಟಿಯಲ್ಲಿ ಬಿಡುಗಡೆಯಾದ ನಂತರ ಆಟಂಗೆ ಬೇಡಿಕೆ ಹೆಚ್ಚಾಯಿತು. ಓಟಿಟಿಯಲ್ಲಿ ಕಣ್ತುಂಬಿಕೊಂಡ ಬಹುತೇಕ ಮಂದಿ, ತುಂಬಾ ಚೆನ್ನಾಗಿದೆ. ನೋಡಲೇಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ಗಳನ್ನು ಹಾಕಿದ್ದರು.
ಆಟಂ ತಾರಾಗಣ
ಆನಂದ್ ಏಕರ್ಷಿ ನಿರ್ದೇಶಿಸಿದ್ದರೆ, ಅಜಿತ್ ಜಾಯ್ ಬಂಡವಾಳ ಹಾಕಿದ್ದಾರೆ. ಜರೀನ್ ಶಿಹಾಬ್, ವಿನಯ್ ಫೋರ್ಟ್, ಕಲಾಭವನ್ ಶರೋಜನ್, ಜಾಲಿ ಅಂತೋನಿ, ಅಜಿ ತಿರುವಂಕುಳಂ, ಮದನ್ ಬಾಬು, ನಂದನ್ ಉನ್ನಿ ಮತ್ತು ಪ್ರಶಾಂತ್ ಮಾಧವನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಟಕ ತಂಡದಲ್ಲಿ ಒಂಟಿ ಹುಡುಗಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೊಳಗಾದ ಕಥೆಯ ಸುತ್ತ ಸುತ್ತುವುದು ಮತ್ತು ಅಪರಾಧ ಎಸೆಗಿದವರನ್ನು ಕಂಡುಹಿಡಿಯುವುದು ಈ ಚಿತ್ರದ ಕಥೆಯಾಗಿದೆ.
ಮಹಿಳೆಯರ ಬಗ್ಗೆ ಪುರುಷರು ಹೇಗೆ ಯೋಚಿಸುತ್ತಾರೆ? ಮಹಿಳೆಯರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ತೆರೆಯ ಮೇಲೆ ಆನಂದ್ ತೋರಿಸಿದ್ದಾರೆ. ಸಾಮಾಜಿಕ ಸ್ಥಿತಿಗತಿಗಳನ್ನು ಈ ಚಿತ್ರದಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಆನಂದ್ ಅವರ ನಿರ್ದೇಶನವು ಅದ್ಭುತವಾಗಿದ್ದು, ಅದಕ್ಕಾಗಿ ಭಾರೀ ಪ್ರಶಂಸೆ ಪಡೆದಿದ್ದಾರೆ. ಜಾಯ್ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಜಿತ್ ಜಾಯ್ ನಿರ್ಮಿಸಿದ್ದಾರೆ. ಬಾಸಿಲ್ ಸಿಜೆ ಸಂಗೀತ ಸಂಯೋಜಿಸಿದ್ದು, ಅನುರುದ್ ಅನೀಶ್ ಅವರ ಛಾಯಾಗ್ರಹಣ ಇದೆ.
3 ರಾಷ್ಟ್ರೀಯ ಪ್ರಶಸ್ತಿ
70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಆಟಂ 3 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕಾಗಿ ನಿರ್ದೇಶಕ ಆನಂದ್ ಏಕರ್ಶಿ ಅವರು ಅತ್ಯುತ್ತಮ ಚಿತ್ರಕಥೆಗಾಗಿ ಪ್ರಶಸ್ತಿ ಪಡೆದರು. ಮಹೇಶ್ ಭುವನೇಂದ್ ಅವರು ರಾಷ್ಟ್ರೀಯ ಅತ್ಯುತ್ತಮ ಸಂಕಲನ ಪ್ರಶಸ್ತಿ ಪಡೆದರು.
ಆಟಂ ಸ್ಟೋರಿ
ಕೇರಳದಲ್ಲಿ ನಾಟಕಗಳನ್ನು ಪ್ರದರ್ಶಿಸುವ 13 ಸದಸ್ಯರ ತಂಡವೊಂದು ಇರುತ್ತದೆ. ಈ ತಂಡದಲ್ಲಿ ಒಬ್ಬಳೇ ಹುಡುಗಿ ಇರುತ್ತಾಳೆ. ಉಳಿದವರು ಪುರುಷರು. ಆದರೆ ಒಂದು ದಿನ ಹುಡುಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಆದಾಗ್ಯೂ, ಆ 12 ಪುರುಷರಲ್ಲಿ ಯಾರು ಆಕೆಯ ಮೇಲೆ ಈ ಅಪರಾಧ ಮಾಡಿದ್ದಾರೆ ಎಂಬ ವಿಷಯದ ಸುತ್ತ ಚಲನಚಿತ್ರವು ಸುತ್ತುತ್ತದೆ. ಈ ಪ್ರಕ್ರಿಯೆಯಲ್ಲಿ ಜನರ ವ್ಯಕ್ತಿತ್ವ, ಸಮಯಕ್ಕೆ ಅನುಗುಣವಾಗಿ ಹಲವರು ವಿಭಿನ್ನವಾಗಿ ಮಾತನಾಡುವ ಮತ್ತು ವರ್ತಿಸುವ ಗುಣಗಳು ಹೊರಬರುತ್ತವೆ.