ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಹೊಸಬರ ಸಿನಿಮಾಗಳದ್ದೇ ಕಾರುಬಾರು; ಒಂದಲ್ಲ ಎರಡಲ್ಲ 8 ಸಿನಿಮಾಗಳ ಬಿಡುಗಡೆ
Nov 28, 2024 11:10 PM IST
ಈ ವಾರ ಒಂದಲ್ಲ ಎರಡಲ್ಲ 8 ಸಿನಿಮಾಗಳು ಬಿಡುಗಡೆ
- ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ನಟನೆಯ ಮೇಘ ಸಿನಿಮಾದ ಜತೆಗೆ ಪ್ರಮೋದ್ ಶೆಟ್ಟಿ ಅವರ ಜಲಂಧರ ಸಿನಿಮಾ ಈ ವಾರ ತೆರೆಗೆ ಬರುತ್ತಿವೆ. ಜತೆಗೆ ನಾ ನಿನ್ನ ಬಿಡಲಾರೆ, ಅನಾಥ, ತಮಟೆ, ಲಕ್ ಚಿತ್ರ ಸೇರಿ ಒಟ್ಟು ಕನ್ನಡದ 8 ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿವೆ.
Movies in Theatres this Week: ಈ ವಾರ (ನವೆಂಬರ್ 29) ಹೊಸ ಕಲಾವಿದರ, ಹೊಸ ನಿರ್ದೇಶಕರ ಸಿನಿಮಾಗಳು ಚಿತ್ರಮಂದಿರದ ಬಾಗಿಲು ತಟ್ಟುತ್ತಿವೆ. ಹೊಸಬರ ಜತೆಗೆ ಕೆಲ ಹಳಬರೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಹಾಗಾದರೆ, ಈ ಶುಕ್ರವಾರ ತೆರೆಕಾಣಲಿರುವ ಸಿನಿಮಾಗಳು ಯಾವವು? ಇಲ್ಲಿದೆ ಮಾಹಿತಿ.
ಅನಾಥ
ಗೋನೇಂದ್ರ ಫಿಲಂ ಸಂಸ್ಥೆಯಲ್ಲಿ ಇಂದ್ರ ನಾಯಕನಾಗಿ ಅಭಿನಯಿಸಿರುವ, ಜತೆಗೆ ನಿರ್ಮಾಪಕ, ಸಂಗೀತ ನಿರ್ದೇಶಕನಾಗಿಯೂ ಕೆಲಸ ಮಾಡಿರುವ ಚಿತ್ರ ಅನಾಥ. ಅನಾಥ ಚಿತ್ರಕ್ಕೆ ವಿಜಯಪುರದ ನಿರ್ದೇಶಕ ಅಣ್ಣಾ ಶೇಟ್ ಕೆ. ಎ. ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ. ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಈ ಶುಕ್ರವಾರ (ನ. 29) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವೀರೇಶ್ ಕುಮಾರ್ ಛಾಯಾಗ್ರಹಣ, ರಮೇಶ್ ರಂಜಿತ್ ಸಾಹಸ, ಬಾಲ ಮಾಸ್ಟರ್ ನೃತ್ಯ ನಿರ್ದೇಶನ , ಮಾರುತಿ ರಾವ್ ಸಂಕಲನ, ಎಲ್. ಎನ್ ಸೂರ್ಯ ಅವರ ಸಾಹಿತ್ಯ, ಶಿವಕುಮಾರ್ ಶೆಟ್ಟಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.
ಪ್ರಮೋದ್ ಶೆಟ್ಟಿಯ ಜಲಂಧರ
ನಟ ಪ್ರಮೋದ್ ಶೆಟ್ಟಿ ಅಭಿನಯದ ವಿಷ್ಣು ವಿ ಪ್ರಸನ್ನ ನಿರ್ದೇಶನದ ಜಲಂಧರ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸ್ಟೆಪ್ ಆಫ್ ಲೋಕಿ ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಜಲದ ಬಗೆಗಿನ ಕಥಾಹಂದರ ಹೊಂದಿದೆ. ಶ್ಯಾಮ್ ಸುಂದರ್ ಅವರ ಸಂಭಾಷಣೆ ಚಿತ್ರಕ್ಕಿದೆ. ಕೇರಳ ಮೂಲದ ಸರಿನ್ ರವೀಂದ್ರನ್ ಮತ್ತು ವಿದ್ಯಾ ಶಂಕರ್ ಪಿ ಎಸ್ ಛಾಯಾಗ್ರಹಣ, ಜಿ. ಜತಿನ್ ದರ್ಶನ್ ಸಂಗೀತ ನಿರ್ದೇಶನ ಹಾಗೂ ವೆಂಕಿ ಯು ಡಿ ವಿ ಸಂಕಲನ ಈ ಚಿತ್ರಕ್ಕಿದೆ.
ಮೇಘ
ಚರಣ್ ನಿರ್ದೇಶನದ, ಕಿರಣ್ ರಾಜ್ - ಕಾಜಲ್ ಕುಂದರ್ ನಾಯಕ - ನಾಯಕಿಯಾಗಿ ನಟಿಸಿರುವ ಸಿನಿಮಾ ಮೇಘ. ಕೃಷಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಯತೀಶ್ ಹೆಚ್ ಆರ್ ನಿರ್ಮಿಸಿದ್ದಾರೆ. ಈ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತದೆ. ಸಂಕಲನಕಾರ ಹಾಗೂ ಛಾಯಾಗ್ರಾಹಕರಾಗಿದ್ದಾರೆ ಗೌತಮ್ ನಾಯಕ್. ಬಾಲು ಅವರ ನೃತ್ಯ ನಿರ್ದೇಶನ, ಫ್ಲಾಂಕಿನ್ ರಾಕಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ವಿತರಕ ಮನೋಜ್ ಈ ಸಿನಿಮಾದ ವಿತರಣೆ ಮಾಡುತ್ತಿದ್ದಾರೆ.
ನಾ ನಿನ್ನ ಬಿಡಲಾರೆ
ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿ ನಿರ್ಮಿಸಿರೋ ಸಿನಿಮಾ ನಾ ನಿನ್ನ ಬಿಡಲಾರೆ. ಈ ಚಿತ್ರವನ್ನ ನವೀನ್ ಜಿ.ಎಸ್ ನಿರ್ದೇಶಿಸಿದ್ದಾರೆ. ವೀರೇಶ್ ಎಸ್. ಛಾಯಾಗ್ರಹಣ, ಎಮ್.ಎಸ್. ತ್ಯಾಗರಾಜು ಸಂಗೀತವಿರೋ ಈ ಚಿತ್ರಕ್ಕೆ ದೀಪಕ್ ಜಿ.ಎಸ್ ಸಂಕಲನವಿದೆ. ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ, ಸೀರುಂಡೆ ರಘು, ಕೆ.ಸ್. ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮಂಜುಳಾ ರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ.
ತಮಟೆ
ವಂದನ್ ಎಂ ನಿರ್ಮಾಣದ, ಮಯೂರ್ ಪಟೇಲ್ ಚೊಚ್ಚಲ ನಿರ್ದೇಶನದ ಹಾಗೂ ಮದನ್ ಪಟೇಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ತಮಟೆ. ಮದನ್ ಪಟೇಲ್ ಬರೆದ ತಮಟೆ ಕಾದಂಬರಿ ಇದೀಗ ಅದೇ ಹೆಸರಿನಲ್ಲಿ ಸಿನಿಮಾ ರೂಪ ಪಡೆದುಕೊಂಡಿದೆ.
ಪಾನಿ
ಜೋಜು ಜಾರ್ಜ್ ನಿರ್ದೇಶನದ, ಜೋಜು ಜಾರ್ಜ್, ಸಾಗರ್, ಜುನೈಜ್, ಅಭಯ್ ಹಿರಣ್ಮಯಿ, ಅಭಿನಯ ಮುಂತಾದವರು ನಟಿಸಿರುವ ಸಿನಿಮಾ ಪಾನಿ. ಮೂಲ ಮಲಯಾಳಂನ ಈ ಚಿತ್ರವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್ ಮೂಲಕ ಬಿಡುಗಡೆಯಾಗುತ್ತಿದೆ.
ಇದು ನಮ್ ಶಾಲೆ, ಲಕ್
ಅದೇ ರೀತಿ ಇದು ನಮ್ ಶಾಲೆ ಮತ್ತು ಲಕ್ ಹೆಸರಿನ ಸಿನಿಮಾಗಳೂ ಇದೇ ವಾರ ಬಿಡುಗಡೆ ಆಗುತ್ತಿವೆ. ಈ ಮೂಲಕ ಒಟ್ಟು 8 ಸಿನಿಮಾಗಳು ಬಿಡುಗಡೆ ಆಗಲಿವೆ.