ಕಿಚ್ಚನ ಏಪಿಸೋಡ್‌ಗೆ ವೀಕ್ಷಕನ ಬಹುಪರಾಕ್! ಟಿಆರ್‌ಪಿಯಲ್ಲಿ ಎರಡಂಕಿ ದಾಟಿದ ಬಿಗ್ ಬಾಸ್, ಸೀರಿಯಲ್‌ಗಳ ಲೆಕ್ಕಾಚಾರ ಹೇಗಿದೆ?
Kannada Serial TRP: ಬಿಗ್ ಬಾಸ್ ಏಪಿಸೋಡ್‌ಗೆ ಭರ್ಜರಿ ಟಿಆರ್‌ಪಿ ಸಿಗುತ್ತಿದೆ. ವಾರದ ಐದು ದಿನಗಳ ಬದಲು, ಕಿಚ್ಚನ ವಾರಾಂತ್ಯದ ಎರಡು ದಿನಕ್ಕೆ ಹೆಚ್ಚಿನ ಬೇಡಿಕೆ ಇದೆ. ಅದರಂತೆ ಟಿಆರ್‌ಪಿಯಲ್ಲೂ ಒಳ್ಳೆಯ ರೇಟಿಂಗ್ ಪಡೆದುಕೊಳ್ಳುತ್ತಿದೆ.
Kannada Serial TRP: ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕನ್ನಡ 11 ಶೋ ಸದ್ಯ 55 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ವಾರದ ಐದು ದಿನಗಳ ಏಪಿಸೋಡ್‌ಗಳದ್ದೇ ಒಂದು ಲೆಕ್ಕವಾದರೆಮ ವಾರಾಂತ್ಯದ ಏಪಿಸೋಡ್‌ನ ತೂಕವೇ ಬೇರೆ. ಅದಕ್ಕೆ ಕಾರಣ; ಕಿಚ್ಚ ಸುದೀಪ್! ಹೌದು ಬಿಗ್ ಬಾಸ್ ರಿಯಾಲಿಟಿ ಶೋ ಅತೀ ಹೆಚ್ಚು ವೀಕ್ಷಕರನ್ನು ಹೊಂದಿರುವ ಶೋ. ಈಗ ಇದೇ ಕಾರ್ಯಕ್ರಮದ ಈ ಹಿಂದಿನ ವಾರದ ಟಿಆರ್‌ಪಿ ಲೆಕ್ಕಾಚಾರ ಹೊರಬಿದ್ದಿದೆ. ಜತೆಗೆ 47ನೇ ವಾರದ ಡೇಟಾ ಮಾಹಿತಿ ಲಭ್ಯವಾಗಿದ್ದು, ಸೀರಿಯಲ್‌ಗಳು ಯಾವ ಸ್ಥಾನದಲ್ಲಿವೆ ಎಂಬುದೂ ರಿವೀಲ್ ಆಗಿದೆ.
ಟಿಆರ್‌ಪಿ ಲೆಕ್ಕಾಚಾರ ಯಾವಾಗಲೂ ಗುರುವಾರದಿಂದ ಗುರುವಾರಕ್ಕೆ ಕೌಂಟ್ ಆಗುವಂಥದ್ದು. ಅದರಂತೆ, ನವೆಂಬರ್ 14ರಿಂದ ನವೆಂಬರ್ 21ರ ಅವಧಿಯಲ್ಲಿನ ಸೀರಿಯಲ್ ಮತ್ತು ರಿಯಾಲಿಟಿ ಶೋಗಳ ಅಂಕಿ ಅಂಶದ ಲೆಕ್ಕಾಚಾರ ಇಲ್ಲಿದೆ. ಮೊದಲಿಗೆ ಬಿಗ್ ಬಾಸ್ ಬಗ್ಗೆಯೇ ನೋಡೋಣ. ಆ ವಾರದಲ್ಲಿ ಕಿಚ್ಚ ಸುದೀಪ್ ಅವರ ವಾರಾಂತ್ಯದ ಎರಡು ದಿನಗಳ ಏಪಿಸೋಡ್‌ಗೆ ದಾಖಲೆಯ ಟಿಆರ್‌ಪಿ ಸಂದಾಯವಾಗಿದೆ. ಅದೇ ವಾರವೇ ಪ್ರಜ್ಞೆ ತಪ್ಪಿ ಬಿದ್ದು, ಚಿಕಿತ್ಸೆ ಬಳಿಕ ಮರಳಿ ಬಿಗ್ ಮನೆಗೆ ಬಂದಿದ್ದ ಚೈತ್ರಾ ಕುಂದಾಪುರ ಅವರನ್ನು ಶನಿವಾರ ಹುರಿದು ಮುಕ್ಕಿದ್ದರು ಸುದೀಪ್.
ಚೈತ್ರಾ ಏಪಿಸೋಡ್‌ಗೆ ಪುಟಿದೆದ್ದ ಟಿಆರ್‌ಪಿ
ಚಿಕಿತ್ಸೆ ಪಡೆದು ಬಂದ ಬಳಿಕ ಸುಮ್ಮನಿರದೆ, ಹೊರಗಿನ ವಿಚಾರಗಳನ್ನೇಲ್ಲ, ಮನೆ ಮಂದಿಗೆ ಸನ್ನೆ ಮೂಲಕ ಹೇಳಿ ಪೇಚಿಗೆ ಸಿಲುಕಿದ್ದರು. ಆವತ್ತೇ ಕಿಚ್ಚ ಚೈತ್ರಾ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಆ ಏಪಿಸೋಡ್‌ಅನ್ನು ದೊಡ್ಡ ವೀಕ್ಷಕ ಬಳಗ ವೀಕ್ಷಿಸಿದೆ. ಹಾಗಾಗಿ ಶನಿವಾರ 9.2 ಟಿವಿಆರ್ ಸಿಕ್ಕಿದೆ. ಅದೇ ರೀತಿ ಭಾನುವಾರದ ಏಪಿಸೋಡ್ ಎರಡಂಕಿ ದಾಟಿದೆ. ಅಂದರೆ, 10.0 ಟಿಆರ್‌ಪಿ ಪಡೆದಿದೆ. ಹಾಗಾದರೆ, ವಾರದ ಐದು ದಿನಗಳ ಟಿಆರ್‌ಪಿ ಎಷ್ಟು? ಅದು ಕೇವಲ 6.9 ಮಾತ್ರವಿದೆ. ಒಟ್ಟಿನಲ್ಲಿ ವಾರದ ದಿನಗಳಿಗಿಂದ ವಾರಾಂತ್ಯದ ಕಿಚ್ಚನ ಏಪಿಸೋಡ್‌ಗೆ ಬೇಡಿಕೆ ಹೆಚ್ಚು.
ಸೀರಿಯಲ್‌ಗಳ ಟಿಆರ್‌ಪಿ ಹೇಗಿದೆ?
ಎಂದಿನಂತೆ ಕಿರುತೆರೆಯಲ್ಲಿ ಸೀರಿಯಲ್‌ಗಳು ಒಂದಕ್ಕಿಂತ ಒಂದು ಟ್ವಿಸ್ಟ್ ಕೊಡುತ್ತ ವೀಕ್ಷಕನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಆ ಪೈಕಿ ಕೆಲವು ಸೀರಿಯಲ್‌ಗಳು ಯಶಸ್ವಿಯಾದರೆ, ಇನ್ನು ಕೆಲವು ಹಿನ್ನೆಡೆ ಅನುಭವಿಸಿವೆ. ಹಾಗಾದರೆ, ಈ ಹಿಂದಿನ ಸೀರಿಯಲ್ ಟಿಆರ್‌ಪಿ ಲೆಕ್ಕಾಚಾರ ನೋಡುವುದಾದರೆ, 8.9 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿ ಈ ವಾರ ಲಕ್ಷ್ಮೀ ನಿವಾಸ ನಿಂತಿದ್ದರೆ, 8.4 ಟಿಆರ್‌ಪಿಯೊಂದಿಗೆ ಪುಟ್ಟಕ್ಕನ ಮಕ್ಕಳು ಎರಡನೇ ಸ್ಥಾನದಲ್ಲಿದೆ. ಈ ಎರಡು ಧಾರಾವಾಹಿಗಳಲ್ಲಿಯೇ ಮೊದಲ ಸ್ಥಾನಕ್ಕೆ ಹೆಚ್ಚು ಪೈಪೋಟಿ ನಡೆಯುತ್ತಿದೆ.
ಇನ್ನು ಜೀ ಕನ್ನಡದ ಅಮೃತಧಾರೆ ಸೀರಿಯಲ್ ಈ ವಾರ 8.3 ಪಡೆದುಕೊಂಡಿದೆ. ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಈ ಸೀರಿಯಲ್ ಇದೀಗ ಮೂರರಲ್ಲಿ ಬಂದು ನಿಂತಿದೆ. ಇದರ ಕೆಳಗೆ ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್ ನಾಲ್ಕನೇ ಇದೆ. ಈ ಸೀರಿಯಲ್ 7.7 ಟಿಆರ್‌ಪಿ ಪಡೆದುಕೊಂಡಿದೆ. ಅದೇ ರೀತಿ ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ ಮೇಲ್ಪಂಕ್ತಿಯಲ್ಲಿಯೇ ಕಾಣಿಸಿಕೊಳ್ಳುತ್ತಿತ್ತು. ಇದೀಗ ಈ ಸೀರಿಯಲ್ 7.6 ರೇಟಿಂಗ್ ಪಡೆದು ಐದನೇ ಸ್ಥಾನದಲ್ಲಿದೆ.
ಸೀತಾ ರಾಮ- ಶ್ರಾವಣಿ ಸುಬ್ರಮಣ್ಯ ಮಹಾಸಂಗಮಕ್ಕೆ ಸಿಕ್ಕಿದ್ದೆಷ್ಟು?
ಇನ್ನು ಕಳೆದ ವಾರ ಜೀ ಕನ್ನಡ ವಾಹಿನಿಯಲ್ಲಿ ಸೀತಾ ರಾಮ ಮತ್ತು ಶ್ರಾವಣಿ ಸುಬ್ರಮಣ್ಯ ಧಾರಾವಾಹಿಗಳ ಮಹಾಸಂಗಮ ಏಪಿಸೋಡ್‌ಗಳು ಪ್ರಸಾರ ಕಂಡಿದ್ದವು. ಅದರಂತೆ, ಈ ಎರಡೂ ಸೀರಿಯಲ್‌ಗಳ ಮಹಾಸಂಗಮಕ್ಕೆ ಒಳ್ಳೆಯ ನಂಬರ್ ಸಿಕ್ಕಿದೆ. ಶ್ರಾವಣಿ ಸುಬ್ರಮಣ್ಯ - ಸೀತಾ ರಾಮ ಸೀರಿಯಲ್ ಜಂಟಿಯಾಗಿ 7.1 ಟಿಆರ್‌ಪಿ ಪಡೆದು ಆರನೇ ಸ್ಥಾನಕ್ಕೆ ಬಂದು ಕೂತಿವೆ.
ಏಳನೇ ಸ್ಥಾನದಲ್ಲಿ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿ ಇದೆ. ಈ ಸೀರಿಯಲ್ 6.5 ಟಿಆರ್‌ಪಿ ಪಡೆದುಕೊಂಡಿದೆ. ಅದಾದ ಬಳಿಕ ಕಲರ್ಸ್ ಕನ್ನಡದ ಸೀರಿಯಲ್‌ಗಳಾದ ನಿನಗಾಗಿ 6.2 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದ್ದರೆ, ರಾಮಾಚಾರಿ 6.1 ಟಿಆರ್‌ಪಿ ಪಡೆದುಕೊಂಡು ಒಂಭತ್ತನೇ ಸ್ಥಾನದಲ್ಲಿದೆ. ಶ್ರೀಗೌರಿ ಸೀರಿಯಲ್ 5.2 ಟಿಆರ್‌ಪಿ ಪಡೆದು ಹತ್ತನೇ ಸ್ಥಾನದಲ್ಲಿದೆ.
ವಿಭಾಗ